More

    ಉಭಯಗಾನ ವಿದುಷಿ ಶ್ಯಾಮಲಾ ಜಿ. ಭಾವೆ ನಿಧನ

    ಬೆಂಗಳೂರು: ಹಿಂದೂಸ್ಥಾನಿ ಹಾಗೂ ಕರ್ನಾಟಕ ಸಂಗೀತ ಪದ್ಧತಿಗಳೆರಡರಲ್ಲೂ ನಿಷ್ಣಾತರಾಗಿದ್ದ ಉಭಯ ಗಾನ ವಿದುಷಿ ಶ್ಯಾಮಲಾ ಜಿ. ಭಾವೆ(79) ಅವರು ಶೇಷಾದ್ರಿಪುರದ ಸ್ವಗೃಹದಲ್ಲಿಂದು ಬೆಳಗ್ಗೆ 6:30ರರಲ್ಲಿ ವಿಧಿವಶರಾದರು.

    ಸಂಗೀತ ಮನೆತನದ ಕುಡಿ
    ಹಿಂದೂಸ್ಥಾನಿ ಹಾಗೂ ಕರ್ನಾಟಕ ಸಂಗೀತ ಪದ್ಧತಿಗಳೆರಡರಲ್ಲೂ ನಿಷ್ಣಾತರಾಗಿ, ಶಾಸ್ತ್ರೀಯ ಸಂಗೀತದ ಜೊತೆಗೆ ಸುಗಮ ಸಂಗೀತದಲ್ಲಿ ವಿಶೇಷ ಸಾಧನೆಗೈದವರು ಶ್ಯಾಮಲಾ ಜಿ. ಭಾವೆ. ಸಂಗೀತಕ್ಕಾಗಿ ತಮ್ಮ ಸಂಪೂರ್ಣ ಜೀವನವನ್ನು ಮೀಸಲಾಗಿರಿಸಿದ ಶ್ಯಾಮಲಾ ಅವರು ಕರ್ನಾಟಕ ಮಹಿಳಾ ಸಂಗೀತಗಾರರಲ್ಲಿ ಅಗ್ರಗಣ್ಯರು.

    ಶ್ಯಾಮಲಾ ಭಾವೆ ಅವರು ಬೆಂಗಳೂರಿನಲ್ಲಿ 1941ರ ಮಾರ್ಚ್ 14ರಂದು ಜನಿಸಿದರು. ಅವರ ಮುತ್ತಜ್ಜ ವಿಷ್ಣುದಾಸ ಭಾವೆ ಮರಾಠಿ ರಂಗಭೂಮಿಯ ಆದ್ಯ ಪ್ರವರ್ತಕರು. ತಂದೆ ಗೋವಿಂದ ವಿಠಲ ಭಾವೆ ಗಾಯನದ ಜತೆಗೆ 14 ವಾದ್ಯ ನುಡಿಸಬಲ್ಲವರಾಗಿದ್ದರು. ಸಂಗೀತೋದ್ಧಾರಕ ಪಂ. ವಿಷ್ಣು ದಿಗಂಬರ ಪಲುಸ್ಕರ ಅವರ ಶಿಷ್ಯರಾಗಿದ್ದರು. ತಾಯಿ ಲಕ್ಷ್ಮೀ ಭಾವೆಯವರೂ ಅತ್ಯುತ್ತಮ ಗಾಯಕಿ. ಸಂಗೀತಮಯ ವಾತಾವರಣದಲ್ಲಿ ಜನಿಸಿದ ಶ್ಯಾಮಲಾ ಅವರಿಗೆ 3ನೇ ವಯಸ್ಸಿನಲ್ಲಿ ಸಂಗೀತ ಕಲಿಕೆ ಆರಂಭವಾಯಿತು. 6ನೇ ವಯಸ್ಸಿನಲ್ಲಿ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದರು. 12ನೇ ವಯಸ್ಸಿಗೆ ಸಾರ್ವಜನಿಕ ಸಂಗೀತ ಕಛೇರಿ ನೀಡಿದರು. ತಂದೆ-ತಾಯಿಯರಿಂದ ಹಿಂದೂಸ್ಥಾನಿ ಸಂಗೀತ, ಬಿ. ದೊರೆಸ್ವಾಮಿ ಹಾಗೂ ಎ. ಸುಬ್ಬರಾಯ ಅವರಿಂದ ಕರ್ನಾಟಕ ಸಂಗೀತದ ಅಭ್ಯಾಸ ಮಾಡಿ ಉಭಯಗಾನ ವಿದುಷಿ ಎಂಬ ಖ್ಯಾತಿಗಳಿಸಿದರು.

    1930ರಲ್ಲಿ ಬೆಂಗಳೂರಿನಲ್ಲಿ ಶ್ಯಾಮಲಾ ಅವರ ತಂದೆ ಗೋವಿಂದ ವಿಠಲ ಭಾವೆಯವರು ಪ್ರಪ್ರಥಮ ಹಿಂದುಸ್ಥಾನಿ ಸಂಗೀತ ಶಾಲೆ ಸರಸ್ವತಿ ಸಂಗೀತ ವಿದ್ಯಾಲಯವನ್ನು ಸ್ಥಾಪಿಸಿದರು. ಆ ಶಾಲೆಯ ಮೂಲಕ ಸಾವಿರಾರು ಆಸಕ್ತರಿಗೆ ಸಂಗೀತ ಶಿಕ್ಷಣ ನೀಡುತ್ತಿದ್ದರು. ವಿವಿಧ ದೇಶಗಳಲ್ಲಿ ಸಂಗೀತ ಕಛೇರಿ ನೀಡಿ ಭಾರತೀಯ ಸಂಗೀತಕ್ಕೆ ರಾಷ್ಟ್ರೀಯ ಖ್ಯಾತಿ ತಂದುಕೊಟ್ಟಿದ್ದಾರೆ. ಪಂಡಿತ್ ಜಸರಾಜ್ ಅವರ ಮಾರ್ಗದರ್ಶನದಲ್ಲಿ ಸಂಗೀತ ತಾಲೀಮು ಪಡೆದು ಅನೇಕ ಚಲನಚಿತ್ರ, ಸಾಕ್ಷಚಿತ್ರ, ಗ್ರಾಮಫೋನ್ ಹಾಗೂ ಕ್ಯಾಸೆಟ್‌ಗಳಲ್ಲಿ ಧ್ವನಿ ನೀಡಿದ್ದಾರೆ. ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ. 9 ಭಾಷೆಗಳ 1500ಕ್ಕೂ ಹೆಚ್ಚಿನ ಗೀತೆಗಳಿಗೆ ರಾಗ ಸಂಯೋಜಿಸಿದ್ದಾರೆ.

    ಶ್ಯಾಮಲಾ ಭಾವೆ ಅವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ, ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಉಭಯಗಾನ ವಿಶಾರದೆ, ಉಭಯ ಗಾನ ವಿದುಷಿ ಎಂಬ ಬಿರುದುಗಳ ಜತೆಗೆ ಕರ್ನಾಟಕ ರಾಜ್ಯೋತ್ಸವ, ಗಾನ ಮಾಧುರಿ, ಸುರಮಣಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ತಿಲಕ, ಅಮೇರಿಕದ ಹ್ಯೂಸ್ಟನ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, 2007ರಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಭಾರತ ಗೌರವ್ ಮುಂತಾದ ಪುರಸ್ಕಾರಗಳು ಸಂದಿವೆ. 1997ರಲ್ಲಿ ಅವರ ಶಿಷ್ಯರು, ಅಭಿಮಾನಿಗಳು ಸ್ವರ ಸಾಧನಾ ಎಂಬ ಅಭಿನಂದನ ಗ್ರಂಥ ಅರ್ಪಿಸಿದ್ದಾರೆ.

    ರಾಮಜನ್ಮಭೂಮೀಲಿ ಶಿವಲಿಂಗ ಪ್ರಕಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts