More

    ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ, ಐಪಿಎಲ್‌ನಿಂದ ಶ್ರೇಯಸ್ ಅಯ್ಯರ್ ಔಟ್

    ಪುಣೆ: ಟೀಮ್ ಇಂಡಿಯಾ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಉಳಿದೆರಡು ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಮಂಗಳವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಬಿದ್ದು ಎಡಭುಜದ ಕೀಲು ತಪ್ಪಿರುವುದರಿಂದ ಶ್ರೇಯಸ್ ಅಯ್ಯರ್ ಮುಂಬರುವ ಐಪಿಎಲ್ 14ನೇ ಆವೃತ್ತಿಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸಂಪೂರ್ಣವಾಗಿ ಅಲಭ್ಯರಾಗಲಿದ್ದಾರೆ.

    ಇಂಗ್ಲೆಂಡ್ ಇನಿಂಗ್ಸ್‌ನ 8ನೇ ಓವರ್‌ನಲ್ಲಿ ಶಾರ್ದೂಲ್ ಠಾಕೂರ್ ಎಸೆತದಲ್ಲಿ ಜಾನಿ ಬೇರ್‌ಸ್ಟೋ ಬಾರಿಸಿದ ಚೆಂಡನ್ನು ತಡೆಯಲು ಡೈವ್ ಹೊಡೆದ ವೇಳೆ ಶ್ರೇಯಸ್ ಅಯ್ಯರ್ ಗಾಯಗೊಂಡಿದ್ದರು. ಆಗಲೇ ತೀವ್ರ ನೋವಿನಿಂದ ಬಳಲಿದ್ದ ಶ್ರೇಯಸ್ ಮೈದಾನದಿಂದ ಹೊರನಡೆದಿದ್ದರು. 26 ವರ್ಷದ ಶ್ರೇಯಸ್ ಶೀಘ್ರದಲ್ಲಿಯೇ ಭುಜದ ಶಸಚಿಕಿತ್ಸೆಗೆ ಒಳಗಾಗಲಿದ್ದಾರೆ. ಐಪಿಎಲ್ ಮೊದಲಾರ್ಧದ ಪಂದ್ಯಗಳು ಮಾತ್ರ ಸಂಪೂರ್ಣ ಟೂರ್ನಿಗೆ ಅವರು ಅಲಭ್ಯರಾಗಲಿದ್ದಾರೆ. ಅವರು ಅಭ್ಯಾಸಕ್ಕೆ ಮರಳಲು ಕನಿಷ್ಠ 4 ತಿಂಗಳು ಬೇಕಾಗಬಹುದು. ಸದ್ಯ ಶ್ರೇಯಸ್ ತೀವ್ರ ನೋವಿನಲ್ಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ‘ಕೂ’ ಆ್ಯಪ್‌ನಲ್ಲಿ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಬಂಡವಾಳ ಹೂಡಿಕೆ

    ಗಾಯದಿಂದಾಗಿ ಶ್ರೇಯಸ್ ಜುಲೈನಲ್ಲಿ ಇಂಗ್ಲಿಷ್ ಕೌಂಟಿ ತಂಡ ಲಂಕಾಶೈರ್ ಪರ ಆಡುವುದು ಕೂಡ ಅನುಮಾನವೆನಿಸಿದೆ. ಇತ್ತೀಚೆಗಷ್ಟೇ ಅವರು ಇಂಗ್ಲೆಂಡ್ ದೇಶೀಯ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಲಂಕಾಶೈರ್ ಪರ ಆಡಲು ಒಪ್ಪಂದ ಮಾಡಿಕೊಂಡಿದ್ದರು.

    ಡೆಲ್ಲಿಗೆ ಹೊಸ ನಾಯಕನ ನಿರೀಕ್ಷೆ
    ಏಪ್ರಿಲ್ 9ರಂದು ಆರಂಭವಾಗಲಿರುವ ಐಪಿಎಲ್‌ನಲ್ಲಿ ಶ್ರೇಯಸ್, ಡೆಲ್ಲಿ ತಂಡವನ್ನು ಮುನ್ನಡೆಸಬೇಕಾಗಿತ್ತು. ಕಳೆದ ಆವೃತ್ತಿಯಲ್ಲಿ ಡೆಲ್ಲಿ ತಂಡ ಅವರದೇ ಸಾರಥ್ಯದಲ್ಲಿ ಮೊದಲ ಬಾರಿಗೆ ಫೈನಲ್‌ಗೇರಿತ್ತು. ಇನ್ನು ಶ್ರೇಯಸ್ ಗೈರಿನಲ್ಲಿ ರಿಷಭ್ ಪಂತ್, ಅನುಭವಿ ಆರ್. ಅಶ್ವಿನ್ ಅಥವಾ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.

    ರೋಹಿತ್ ಫಿಟ್ ಆಗುವ ಸಾಧ್ಯತೆ
    ಮೊದಲ ಏಕದಿನ ಪಂದ್ಯದ ವೇಳೆ ಗಾಯಗೊಂಡ ಭಾರತ ತಂಡದ ಉಪನಾಯಕ ರೋಹಿತ್ ಶರ್ಮ 2ನೇ ಪಂದ್ಯಕ್ಕೆ ಫಿಟ್ ಆಗುವ ನಿರೀಕ್ಷೆ ಇದೆ. ರೋಹಿತ್ ಶರ್ಮ ಬ್ಯಾಟಿಂಗ್ ವೇಳೆ ವೇಗಿ ಮಾರ್ಕ್ ವುಡ್ ಎಸೆತದಲ್ಲಿ ಬಲ ಮೊಣಕೈಗೆ ಚೆಂಡೇಟು ತಿಂದಿದ್ದರು. ಬಳಿಕ ಅವರು ಫೀಲ್ಡಿಂಗ್‌ಗೆ ಇಳಿದಿರಲಿಲ್ಲ. ಆದರೆ ರೋಹಿತ್ ಮೊಣಕೈಯಲ್ಲಿ ಮೂಳೆಮುರಿತ ಆಗಿರದೆ ಇರುವುದರಿಂದ ಮರಳಿ ಕಣಕ್ಕಿಳಿಯಲು ಯಾವುದೇ ತೊಂದರೆ ಇಲ್ಲ ಎನ್ನಲಾಗಿದೆ.

    2ನೇ ಏಕದಿನಕ್ಕೆ ಮಾರ್ಗನ್, ಬಿಲ್ಲಿಂಗ್ಸ್ ಡೌಟ್
    ಭಾರತದೊಂದಿಗೆ ಪ್ರವಾಸಿ ಇಂಗ್ಲೆಂಡ್ ತಂಡ ಕೂಡ ಮೊದಲ ಏಕದಿನ ಪಂದ್ಯದ ಬಳಿಕ ಗಾಯದ ಕಳವಳ ಎದುರಿಸಿದೆ. ನಾಯಕ ಇವೊಯಿನ್ ಮಾರ್ಗನ್ ಮತ್ತು ಬ್ಯಾಟ್ಸ್‌ಮನ್ ಸ್ಯಾಮ್ ಬಿಲ್ಲಿಂಗ್ಸ್ ಕೂಡ ಮೊದಲ ಪಂದ್ಯದ ವೇಳೆ ಗಾಯಗೊಂಡಿದ್ದು, ಶುಕ್ರವಾರ ನಡೆಯಲಿರುವ 2ನೇ ಪಂದ್ಯದಲ್ಲಿ ಆಡುವುದು ಅನುಮಾನವೆನಿಸಿದೆ. ಪ್ರವಾಸದಲ್ಲಿ ಒಂದಾದರೂ ಸರಣಿ ಗೆಲುವು ಕಾಣಬೇಕಿದ್ದರೆ ಉಳಿದೆರಡೂ ಪಂದ್ಯಗಳಲ್ಲಿ ಜಯಿಸಬೇಕಾದ ಒತ್ತಡದಲ್ಲಿರುವ ಇಂಗ್ಲೆಂಡ್‌ಗೆ ಇದು ಮತ್ತಷ್ಟು ಹಿನ್ನಡೆ ತಂದಿದೆ. ಮಾರ್ಗನ್ ಫೀಲ್ಡಿಂಗ್ ವೇಳೆ ಬಲಗೈ ಹೆಬ್ಬೆರಳು ಮತ್ತು ತೋರು ಬೆರಳಿನ ನಡುವೆ ಗಾಯಗೊಂಡಿದ್ದು, 4 ಹೊಲಿಗೆಗಳನ್ನು ಹಾಕಿಸಿಕೊಂಡಿದ್ದಾರೆ. ಬಿಲ್ಲಿಂಗ್ಸ್ ಬೌಂಡರಿ ತಡೆಯಲು ಡೈವ್ ಹೊಡೆದ ವೇಳೆ ಕೊರಳಿನ ಗಾಯ ಎದುರಿಸಿದ್ದರು.

    VIDEO| ಚೆನ್ನೈ ಸೂಪರ್‌ಕಿಂಗ್ಸ್ ಹೊಸ ಜೆರ್ಸಿಯಲ್ಲಿ ಸೈನಿಕರಿಗೆ ವಿಶೇಷ ಗೌರವ

    PHOTO | ಪುಣೆಯಲ್ಲಿ ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸಲು ಬೆಟ್ಟ ಏರಿದ ಕ್ರಿಕೆಟ್ ಪ್ರೇಮಿ!

    ಟೆನಿಸ್ ತಾರೆ ಜೋಕೊವಿಕ್‌ರನ್ನು ಹನಿಟ್ರ್ಯಾಪ್ ಮಾಡಲು ರೂಪದರ್ಶಿಗೆ ಭಾರಿ ಮೊತ್ತದ ಆಮಿಷ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts