More

    ರಕ್ಷಣೆಗೆ ಆರಕ್ಷಕರೇ ಇಲ್ಲ ; ಠಾಣೆಗಳಲ್ಲಿ ಹಿರಿಯ ಅಧಿಕಾರಿಗಳ ಕೊರತೆ

    | ಸಿ.ಎ.ರಮೇಶ್ ಚಿಂತಾಮಣಿ

    ತಾಲೂಕಿನ ವಿವಿಧ ಠಾಣೆಗಳಲ್ಲಿ ಮೂವರು ಸರ್ಕಲ್ ಇನ್‌ಸ್ಪೆಕ್ಟರ್, ಮೂರು ಪಿಎಸ್‌ಐಗಳ ಹುದ್ದೆಗಳು ಖಾಲಿಯಾಗಿ ತಿಂಗಳು ಕಳೆದರೂ ನೇಮಕಕ್ಕೆ ಸರ್ಕಾರ ಮುಂದಾಗಿಲ್ಲ.

    ವಯೋನಿವೃತ್ತಿ, ವರ್ಗಾವಣೆ ಹಾಗೂ ತರಬೇತಿ ಕಾರಣದಿಂದ ಹುದ್ದೆಗಳು ಖಾಲಿಯಾಗಿವೆ. ಆದರೆ ಈ ಸ್ಥಾನಗಳಿಗೆ ಸಿಬ್ಬಂದಿ ನೇಮಕವಾಗಿಲ್ಲ. ಕೆಂಚಾರ‌್ಲಹಳ್ಳಿ ಮತ್ತು ಬಟ್ಲಹಳ್ಳಿ ಠಾಣೆಗಳಿಗೆ 2021 ಏಪ್ರಿಲ್‌ನಲ್ಲಿ ಒಂದು ಹೊಸ ಸರ್ಕಲ್ ಇನ್‌ಸ್ಪೆಕ್ಟರ್ ಹುದ್ದೆಯನ್ನೂ ಸೃಷ್ಟಿಸಲಾಗಿದೆಯಾದರೂ ಈ ಹುದ್ದೆಗಳಿಗೂ ಇದುವರೆಗೂ ಯಾರನ್ನೂ ನೇಮಕ ಮಾಡದೆ ೋಷಣೆಗಷ್ಟೇ ಸೀಮಿತ ಮಾಡಲಾಗಿದ್ದು, ಸ್ಥಾನಗಳ ಭರ್ತಿಗೆ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೂ ಗಮನಹರಿಸಿಲ್ಲ.

    ಚಿಂತಾಮಣಿ ನಗರ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಮುಖ ಹಾಗೂ ದೊಡ್ಡ ವಾಣಿಜ್ಯಕೇಂದ್ರ, ಅಷ್ಟೇ ಅಲ್ಲದೆ ನೆರೆಯ ಆಂಧ್ರದ ಗಡಿಗೆ ಹೊಂದಿಕೊಂಡಿದ್ದು ಅಪರಾಧ ಮತ್ತು ಅಪಘಾತಗಳು ಹೆಚ್ಚು ಸಂಭವಿಸುತ್ತಿವೆ. ಆದರೆ ಅಪರಾಧಗಳ ನಿಯಂತ್ರಣಕ್ಕೆ ಸಿಬ್ಬಂದಿ ಕೊರತೆ ಕಾಡುತ್ತಿದ್ದು ಜತೆಗೆ ಸುಸಜ್ಜಿತ ಸವಲತ್ತು ಒದಗಿಸುವುದು ಅಗತ್ಯವಾಗಿದೆ.

    ವರ್ಗಾವಣೆಯಾದವರು : ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಆಗಿದ್ದ ಕೆ.ಎನ್.ಶ್ರೀನಿವಾಸಪ್ಪ ಮೇ 31ಕ್ಕೆ ವಯೋ ನಿವೃತ್ತಿ ಹೊಂದಿದ್ದರಿಂದ ಹುದ್ದೆ ಖಾಲಿಯಾಗಿದೆ. ಪಿಎಸ್‌ಐಯಾಗಿದ್ದ ನರೇಶ್‌ನಾಯಕ್ ಸರ್ಕಲ್ ಇನ್‌ಸ್ಪೆಕ್ಟರ್ ಹುದ್ದೆಗೆ ಬಡ್ತಿ ಹೊಂದಿ, ಜು.1 ರಂದು ಕರ್ತವ್ಯದಿಂದ ಬಿಡುಗಡೆಯಾಗಿದ್ದಾರೆ. ಚಿಂತಾಮಣಿ ನಗರ ಠಾಣೆಯ ಇನ್‌ಸ್ಪೆಕ್ಟರ್ ಜೆ.ಎನ್.ಆನಂದ್‌ಕುಮಾರ್ ಕೋಲಾರ ಜಿಲ್ಲೆಯ ಕೆಜಿಎಫ್ ವೃತ್ತ ಕಾಮಸಮುದ್ರದ ಸರ್ಕಲ್ ಇನ್‌ಸ್ಪೆಕ್ಟರ್ ಹುದ್ದೆಗೆ, ಪಿಎಸ್‌ಐ ನಾರಾಯಣಸ್ವಾಮಿ ತಾಲೂಕಿನ ಬಟ್ಲಹಳ್ಳಿ ಠಾಣೆಗೆ ವರ್ಗಾವಣೆಯಾಗಿದ್ದಾರೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮೂವರು ಸರ್ಕಲ್ ಇನ್‌ಸ್ಪೆಕ್ಟರ್, 3 ಪಿಎಸ್‌ಐ, 9 ಪಿಸಿ ಮತ್ತು ಮುಖ್ಯಪೇದೆಗಳ ಹುದ್ದೆಗಳು ಖಾಲಿಯಿದೆ. ಇದರಲ್ಲಿ ಮೂವರು ಪಿಎಸ್‌ಐಗಳು ಮತ್ತು 7 ಪಿಸಿಗಳು ತರಬೇತಿಯಲ್ಲಿದ್ದಾರೆ.

    ಸಿಬ್ಬಂದಿ ಮೇಲೆ ಒತ್ತಡ: ಅಲ್ಪ ಸಿಬ್ಬಂದಿ ಪೈಕಿ ಕಂಪ್ಯೂಟರ್ ಆಪರೇಟರ್, ಕಚೇರಿಯಲ್ಲಿ ರೈಟರ್, ನ್ಯಾಯಾಲಯ, ಗುಮಾಸ್ತ ಕೆಲಸಗಳಿಗೆ ನಿಯೋಜಿಸಲಾಗುತ್ತದೆ. ಉಳಿದ ಸಿಬ್ಬಂದಿಯೇ ಇತರ ಕೆಲಸಗಳನ್ನು ಮಾಡಬೇಕಾಗಿದ್ದು, ಆಗಾಗ ತರಬೇತಿಗೆ ಮೇಲಧಿಕಾರಿಗಳ ಸೂಚಿಸಿದಂತೆ ನಿರ್ದಿಷ್ಟ ಸಂಖ್ಯೆಯ ಸಿಬ್ಬಂದಿ ಕಳುಹಿಸುವುದರಿಂದ 8 ಗಂಟೆ ಕೆಲಸ ಮಾಡಬೇಕಾದ ಒಬ್ಬ ಪೇದೆ 16 ಗಂಟೆ ಕರ್ತವ್ಯ ನಿರ್ವಹಿಸುವಂತಾಗಿದೆ. ನಿರಂತರ ಕೆಲಸದಿಂದ ಸಿಬ್ಬಂದಿ ಒತ್ತಡಕ್ಕೆ ಗುರಿಯಾಗುವಂತಾಗಿದೆ.

    ಮಂಜೂರಾತಿ, ಖಾಲಿ ಹುದ್ದೆ: 1. ಚಿಂತಾಮಣಿ ನಗರ ಠಾಣೆಗೆ ಮಂಜೂರಾದ ಪೊಲೀಸ್ ಇನ್‌ಸ್ಪೆಕ್ಟರ್ ಹುದ್ದೆ ಖಾಲಿ ಇದೆ. 4 ಪಿಎಸ್‌ಐಗಳ ಪೈಕಿ 3 ಮಂದಿ ಇದ್ದು ಇದರಲ್ಲಿ ಒಬ್ಬರು ತರಬೇತಿಯಲ್ಲಿದ್ದಾರೆ. 6 ಎಎಸ್‌ಐ ಹುದ್ದೆಗಳು ಭರ್ತಿಯಾಗಿವೆ. ಮಂಜೂರಾತಿಯಾದ 38 ಮಂದಿ ಪಿಸಿ ಮತ್ತು ಮುಖ್ಯಪೇದೆಗಳ ಪೈಕಿ 34 ಸ್ಥಾನಗಳು ಭರ್ತಿಯಾಗಿದ್ದು ಇದರಲ್ಲಿ ನಾಲ್ವರು ತರಬೇತಿಯಲ್ಲಿದ್ದಾರೆ. 2. ಗ್ರಾಮಾಂತರ ಠಾಣೆಗೆ ಮಂಜೂರಾದ ಸರ್ಕಲ್ ಇನ್‌ಸ್ಪೆಕ್ಟರ್ ಹುದ್ದೆ ಖಾಲಿ ಇದೆ. 4 ಪಿಎಸ್‌ಐಗಳು ಪೈಕಿ ಇಬ್ಬರು ಇದ್ದು ಇದರಲ್ಲಿ ಒಬ್ಬರು ತರಬೇತಿಗೆ ತೆರಳಿದ್ದಾರೆ. ಮಂಜೂರಾದ 6 ಎಎಸ್‌ಐಗಳು ಹುದ್ದೆಗಳು ಮತ್ತು 30 ಪಿಸಿ ಮತ್ತು ಮುಖ್ಯಪೇದೆಗಳ ಹುದ್ದೆ ಪೈಕಿ 29 ಭರ್ತಿಯಾಗಿದೆ. 3. ಕೆಂಚಾರ‌್ಲಹಳ್ಳಿ ಮತ್ತು ಬಟ್ಲಹಳ್ಳಿ ಠಾಣೆಗೆ ಮಂಜೂರಾದ ಸರ್ಕಲ್ ಇನ್‌ಸ್ಪೆಕ್ಟರ್ ಹುದ್ದೆ ಖಾಲಿ ಇದೆ. ಕೆಂಚಾರ‌್ಲಹಳ್ಳಿ ಠಾಣೆಗೆ ಮಂಜೂರಾದ ಎರಡು ಸಬ್‌ಇನ್‌ಸ್ಪೆಕ್ಟರ್ ಹುದ್ದೆ ಮತ್ತು 2 ಎಎಸ್‌ಐ ಹುದ್ದೆ ಭರ್ತಿಯಾಗಿದೆ. ಮಂಜೂರಾದ 17 ಪಿಸಿ ಮತ್ತು ಮುಖ್ಯಪೇದೆಗಳ ಹುದ್ದೆ ಪೈಕಿ 16 ಮಂದಿ ಕೆಲಸ ನಿರ್ವಹಿಸುತ್ತಿದ್ದು ಇದರಲ್ಲಿ ಇಬ್ಬರು ತರಬೇತಿಯಲ್ಲಿದ್ದಾರೆ. 4. ಬಟ್ಲಹಳ್ಳಿ ಠಾಣೆಗೆ ಮಂಜೂರಾದ ಎರಡು ಸಬ್ ಇನ್‌ಸ್ಪೆಕ್ಟರ್ ಹುದ್ದೆ ಮತ್ತು ಮೂರು ಎಎಸ್‌ಐ ಹುದ್ದೆ ಭರ್ತಿಯಾಗಿದೆ. ಮಂಜೂರಾದ 18 ಮಂದಿ ಪಿಸಿ ಮತ್ತು ಮುಖ್ಯಪೇದೆಗಳ ಹುದ್ದೆ ಪೈಕಿ 15 ಭರ್ತಿಯಾಗಿದ್ದು, ಒಬ್ಬ ಪಿಎಸ್‌ಐ ಮತ್ತು ಒಬ್ಬ ಪಿಸಿ ತರಬೇತಿಯಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts