More

    ಶಿಮುಲ್ ಅಧ್ಯಕ್ಷರಿಗಿದ್ದ ಅಡೆತಡೆಗಳು ನಿವಾರಣೆ

    ಶಿವಮೊಗ್ಗ: ಶಿಮುಲ್ (ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಉತ್ಪಾದಕರ ಒಕ್ಕೂಟ) ಅಧ್ಯಕ್ಷ ಸ್ಥಾನ ಸ್ಥಾನಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ದ್ವಿಸದಸ್ಯ ಪೀಠ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಇದರೊಂದಿಗೆ ಅಧ್ಯಕ್ಷರಾಗಿರುವ ಎನ್.ಎಚ್.ಶ್ರೀಪಾದ ರಾವ್ ಅವರಿಗಿದ್ದ ಅಡೆತಡೆಗಳು ನಿವಾರಣೆಯಾಗಿವೆ.
    ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದ ತಕರಾರು ಅರ್ಜಿಯನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಅನಿರುದ್ಧ ಘೋಷ್ ಮತ್ತು ಮತ್ತು ವಿಕ್ರಂನಾಥ್ ಅವರಿದ್ದ ದ್ವಿಸದಸ್ಯ ಪೀಠವು, ಹೈಕೋರ್ಟ್ ವಿಭಾಗೀಯಪೀಠದ ಆದೇಶವನ್ನು ಪುರಸ್ಕರಿಸಿದೆ. ಹೀಗಾಗಿ ಎಚ್.ಕೆ.ಬಸಪ್ಪ ಮತ್ತು ಟಿ.ಶಿವಶಂಕರಪ್ಪ ಅವರ ಕಾನೂನು ಹೋರಾಟ ಬಹುತೇಕ ಅಂತ್ಯಗೊಂಡಿದೆ.
    ಏನಿದು ಕಾನೂನು ಹೋರಾಟ?:
    ಶಿಮುಲ್ ಅಧ್ಯಕ್ಷರ ಆಯ್ಕೆಗೆ ಜ.1ರಂದು ನಡೆದಿದ್ದ ಚುನಾವಣೆ ಮುನ್ನಾ ದಿನ 2021ರ ಡಿ.31ರಂದು ಎಚ್.ಕೆ.ಬಸಪ್ಪ ಹಾಗೂ ಟಿ.ಶಿವಶಂಕರಪ್ಪ ಅವರನ್ನು ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು. ಆ ಸಂದರ್ಭದಲ್ಲಿ ಎಚ್.ಕೆ.ಬಸಪ್ಪ ಶಿಮುಲ್ ಉಪಾಧ್ಯಕ್ಷರಾಗಿ, ಪ್ರಭಾರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅನರ್ಹತೆ ಪ್ರಶ್ನಿಸಿ ಅವರಿಬ್ಬರೂ ಕೋರ್ಟ್‌ಗೆ ಮೊರೆ ಹೋಗಿದ್ದರು. ಅಂದು ನಡೆದ ಚುನಾವಣೆಯಲ್ಲಿ ಎನ್.ಎಚ್.ಶ್ರೀಪಾದರಾವ್ ಶಿಮುಲ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
    ಪ್ರಕರಣದ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠ ಜ.1ರಂದು ನಡೆದಿದ್ದ ಚುನಾವಣೆಯನ್ನು ರದ್ದುಪಡಿಸಿ ಎಚ್.ಕೆ.ಬಸಪ್ಪ ಹಾಗೂ ಟಿ.ಶಿವಶಂಕರಪ್ಪ ಅವರ ನಿರ್ದೇಶಕ ಸ್ಥಾನವನ್ನು ಸಿಂಧು ಎಂದು ತಿಳಿಸಿತ್ತು. ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಎನ್.ಎಚ್.ಶ್ರೀಪಾದರಾವ್ ಹೈಕೋರ್ಟ್ ಮೊರೆ ಹೋಗಿದ್ದರು.
    ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ದ್ವಿಸದಸ್ಯ ಪೀಠ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶವನ್ನು ರದ್ದುಗೊಳಿಸಿತ್ತು. ಹಾಗಾಗಿ ಮೂರು ತಿಂಗಳ ಬಳಿಕ ಶ್ರೀಪಾದರಾವ್ ಮತ್ತೆ ಅಧಿಕಾರ ಸ್ವೀಕರಿಸಿದ್ದರು. ಹೈಕೋರ್ಟ್‌ನ ಆದೇಶವನ್ನು ಬಸಪ್ಪ ಮತ್ತು ಶಿವಶಂಕರಪ್ಪ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈಗ ಅಲ್ಲಿಯೂ ಅವರಿಬ್ಬರಿಗೆ ಹಿನ್ನಡೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts