More

    ರಸ್ತೆ ಅಪಘಾತ ತಡೆ: ತುರ್ತು ವರದಿ ಸಲ್ಲಿಕೆಗೆ ಡಿಸಿ ಸೂಚನೆ

    ಶಿವಮೊಗ್ಗ: ರಸ್ತೆ ಅಪಘಾತ ತಪ್ಪಿಸಲು ನಗರ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಪೊಲೀಸ್ ಇಲಾಖೆಗೆ ಡಿಸಿ ಕೆ.ಬಿ.ಶಿವಕುಮಾರ್ ಸೂಚಿಸಿದರು.

    ಡಿಸಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಆದೇಶದಂತೆ ಪ್ರತಿ ವರ್ಷ ಅಪಘಾತ ಮತ್ತು ಮರಣ ಪ್ರಮಾಣ ಶೇ.10ರಷ್ಟು ಕಡಿಮೆಯಾಗುವಂತೆ ನೋಡಿಕೊಳ್ಳುವುದು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಜವಾಬ್ದಾರಿಯಾಗಿದೆ. ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಅಪಘಾತ ಸಂಭವಿಸಿದ ಸ್ಥಳಗಳ ಪರಿಶೀಲನೆ ನಡೆಸಿ, ಮುಂದೆ ಅಪಘಾತಗಳು ನಡೆಯದಂತೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದರು.

    ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿನ 42.75 ಕಿ.ಮೀ. ವ್ಯಾಪ್ತಿಯಲ್ಲಿ ಬಾಳೆಬರೆ ಘಾಟ್ ರಸ್ತೆಯಲ್ಲಿರುವ ಅಪಾಯಕಾರಿ ತಿರುವಿನಲ್ಲಿ ತುರ್ತಾಗಿ ತಡೆಗೋಡೆ ಕಾಮಗಾರಿ ಕೈಗೊಳ್ಳಬೇಕಾಗಿದೆ. ಕಾಮಗಾರಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಈ ರಸ್ತೆ ಭಾಗದ ಪ್ರದೇಶ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಿಂದಲೂ ಅಗತ್ಯ ಅನುಮೋದನೆ ಪಡೆದು ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸುವಂತೆ ಸೂಚಿಸಿದರು.

    ಮಾಹಿತಿ ಫಲಕ ಅಳವಡಿಕೆ: ಅಪಘಾತಗಳು ಸಂಭವಿಸಿದಾಗ ಮಾಹಿತಿಗೆ ಹತ್ತಿರದ ಆಸ್ಪತ್ತೆ, ಪೊಲೀಸ್ ಠಾಣೆ, ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ ಇತ್ಯಾದಿಗಳನ್ನು ಒಳಗೊಂಡ 87 ಮಾಹಿತಿ ಫಲಕ ಅಳವಡಿಸುವ ಕ್ರಿಯಾಯೋಜನೆಗೆ ಅನುಮೋದನೆ ನೀಡಿದ್ದು ಇದರ ಅನುಷ್ಠಾನಕ್ಕೆ ತಕ್ಷಣ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ರಸ್ತೆ ದುರಸ್ತಿಗೆ ಸ್ಮಾರ್ಟ್‌ಸಿಟಿ ಅನುದಾನ: ನಗರದಲ್ಲಿ ರಸ್ತೆ ಗುಂಡಿ ಮುಚ್ಚುವುದು, ರಸ್ತೆ ಉಬ್ಬುಗಳ ನಿರ್ಮಾಣ, ಸೂಚನಾ ಫಲಕಗಳ ಅಳವಡಿಕೆ ಸೇರಿ ಅಗತ್ಯ ಕೆಲಸ ಕಾರ್ಯ ಮಾಡಬೇಕಿದೆ. ಟ್ರಾಫಿಕ್ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಸ್ಮಾರ್ಟ್‌ಸಿಟಿ ಅನುದಾನವನ್ನು ಬಳಸಿಕೊಳ್ಳಲಾಗುವುದು ಎಂದರು.

    ತಗ್ಗಿದ ಅಪಘಾತ ಪ್ರಮಾಣ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಪಘಾತದಿಂದ ಆದ ಸಾವಿನ ಪ್ರಮಾಣದಲ್ಲಿ ಇಳಿಕೆಯಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ 328 ಅಪಘಾತಗಳು ಸಂಭವಿಸಿದ್ದು 365 ಮಂದಿ ಸಾವಿಗೀಡಾಗಿದ್ದರು. ಈ ವರ್ಷ ಇದುವರೆಗೆ 208 ಅಪಘಾತಗಳು ಸಂಭವಿಸಿದ್ದು, 222 ಮಂದಿ ಮೃತಪಟ್ಟಿದ್ದಾರೆ ಎಂದು ಎಎಸ್ಪಿ ಡಾ. ಎಚ್.ಟಿ.ಶೇಖರ್ ಸಭೆಗೆ ಮಾಹಿತಿ ನೀಡಿದರು.
    ಎಸ್ಪಿ ಕೆ.ಎಂ.ಶಾಂತರಾಜು, ಆರ್‌ಟಿಒ ಲಕ್ಷ್ಮೀಕಾಂತ ನಾಲವಾರ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

    ಐಪಿಎಲ್​ನಲ್ಲಿ ಹೀನಾಯ ಸೋಲು ಕಂಡ ಬೆನ್ನಲ್ಲೇ ಕೋಳಿ ಸಾಕಲು ಹೊರಟ ಧೋನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts