More

    ಕಾಲಕ್ಕೆ ತಕ್ಕಂತೆ ಕಲೆಯ ಪರಿವರ್ತನೆ ಅವಶ್ಯ

    ಶಿವಮೊಗ್ಗ: ಡಿಜಿಟಲ್ ಯುಗದಲ್ಲಿ ಎಲ್ಲವೂ ಮಾರುಕಟ್ಟೆಯನ್ನೇ ಅವಲಂಭಿಸಿದೆ. ಕಲೆಯೂ ಇದಕ್ಕೆ ಹೊರತಲ್ಲ. ಕಾಲಘಟ್ಟಕ್ಕೆ ಸರಿಯಾಗಿ ಕಲೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸೂಕ್ತ ಬದಲಾವಣೆ ಅವಶ್ಯ ಎಂದು ಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಅಭಿಪ್ರಾಯಪಟ್ಟರು.
    ಬಹುಮುಖಿ ಸಂಘಟನೆಯಿಂದ ಬುಧವಾರ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಲೋಕದ ವರ್ತಮಾನ ಸ್ಥಿತಿಯ ಕುರಿತು ಉಪನ್ಯಾಸ ನೀಡಿದ ಅವರು, ಕಲಾವಿದ ಸೃಜನಶೀಲತೆ ಉಳಿಸಿಕೊಳ್ಳಬೇಕು. ಸೂಕ್ತ ರೀತಿಯಲ್ಲಿ ಕಲೆಯನ್ನು ಜನರಿಗೆ ತಲುಪಿಸುವ ಚಾಕಚಕ್ಯತೆ ಬೆಳೆಸಿಕೊಳ್ಳಬೇಕೆಂದರು.
    ಪ್ರವೃತಿ ಹೊಂದಿರುವವರು ನಿವೃತ್ತಿ ಬಳಿಕವೂ ಸಂತಷ್ಟುರಾಗಿರುತ್ತಾರೆ. ಜತೆಗೆ ಅರಿವನ್ನೂ ವಿಸ್ತರಿಸಿಕೊಳ್ಳುತ್ತಾರೆ. ಸಮಾಜವನ್ನು ಆವರಿಸಿಕೊಂಡಿರುವ ಸಾಂಸ್ಕೃತಿಕ ಲೋಕ ಇಂತವರನ್ನು ತನ್ನತ್ತ ಸೆಳೆಯುತ್ತದೆ. ಸಂಸ್ಕೃತಿಯ ಮೂಲ ಸೆಲೆಯೇ ವಿಶಿಷ್ಟ. ಆದರೆ ಇಂದು ಸಾಂಸ್ಕೃತಿಕ ವಿಭಜನೆಯ ಸಂದರ್ಭ ಎದುರಾಗಿದೆ. ಕೈನಲ್ಲಿರುವ ಮೊಬೈಲ್ ನಮ್ಮನ್ನು ಸ್ವಾರ್ಥಿಗಳನ್ನಾಗಿಸಿದೆ ಎಂದು ಆತಂಕ ವ್ಯಕ್ತಪಡಿಸಿದರು.
    ಕಲಾವಿದರ ಜವಾಬ್ದಾರಿ ಹೆಚ್ಚು
    ಪ್ರಸ್ತುತ ಸನ್ನಿವೇಶದಲ್ಲಿ ತಂತ್ರಜ್ಞಾನಗಳ ಪರಿಣಾಮವಾಗಿ ವ್ಯಕ್ತಿ ಕೇಂದ್ರಿತ ವ್ಯವಸ್ಥೆ ಹೆಚ್ಚುತ್ತಿದೆ. ಕಲೆಯನ್ನು ಕಟ್ಟುವ ಹೊಣೆಗಾರಿಕೆ ಕಲಾವಿದರ ಮೇಲಿದೆ. ಆದರೆ ಕಲಾವಿದರೊಂದಿಗೆ ಸಮಾಜದ ಸಂಬಂಧ ಕುಂಠಿತವಾಗುತ್ತಿದೆ. ಮನಸ್ಸಿನ ಹೊರಗೆ ಕಲಾವಿದನ ಮೆರವಣಿಗೆ ಮಾಡುವ ಮಂದಿ ಮನಸ್ಸಿನೊಳಗೆ ಒಳ್ಳೆಯ ಸ್ಥಾನ ನೀಡುತ್ತಿಲ್ಲ ಎಂದು ಟಿ.ಎಸ್.ನಾಗಾಭರಣ ಬೇಸರ ವ್ಯಕ್ತಪಡಿಸಿದರು.
    ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರ ರಾಜ್ ಅಧ್ಯಕ್ಷತೆ ವಹಿಸಿದ್ದರು. ರಂಗಕರ್ಮಿ ಕಾಂತೇಶ್ ಕದರಮಂಡಲಗಿ, ಪ್ರಾಚಾರ್ಯ ಪ್ರೊ.ಎಚ್.ಎಸ್.ನಾಗಭೂಷಣ ಉಪಸ್ಥಿತರಿದ್ದರು. ಉಪನ್ಯಾಸದ ಬಳಿಕ ನಾಗಾಭರಣ ಕಲಾಸಕ್ತರೊಂದಿಗೆ ಸಂವಾದದಲ್ಲಿ ಪಾಲ್ಗೊಂಡರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts