More

    ಛಿದ್ರಗೊಂಡ ಚಮ್ಮಾರರ ಬದುಕು

    ಹುಕ್ಕೇರಿ: ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದಲ್ಲಿ ತಯಾರಿಯಾಗುವ ಪಾದರಕ್ಷೆಗಳು ಶತಮಾನಗಳಿಂದಲೂ ನಾಡಿನ ಜನರ ಕಾಲಿನ ರಕ್ಷೆ ಮಾಡುತ್ತಿವೆ. ಆದರೆ, ಸದ್ಯ ಕರೊನಾ ವೈರಸ್ ಭೀತಿ, ಲಾಕ್‌ಡೌನ್ ವಿಸ್ತರಣೆಯಿಂದ ಪಾದರಕ್ಷೆ ತಯಾರಿಸುವವರ ಬದುಕೇ ಅತಂತ್ರವಾಗಿದೆ.

    ಪ್ರತಿದಿನ ಶ್ರಮವಹಿಸಿ ತಯಾರಿಸಿದ ಪಾದರಕ್ಷೆಗಳನ್ನು ಹಳ್ಳಿಯಿಂದ ಹಳ್ಳಿಗೆ ಹಾಗೂ ಸಂತೆಯಿಂದ ಸಂತೆಗೆ ತೆರಳಿ ಮಾರಾಟ ಮಾಡಿದರೆ ಮಾತ್ರ ಚಮ್ಮಾರರಿಗೆ ತುತ್ತು ಅನ್ನ ಸಿಗುತ್ತದೆ. ಆದರೆ, ಇದೀಗ ಮಾಹಾಮಾರಿ ಕರೊನಾ ಸೋಂಕಿನಿಂದ ಪಾದರಕ್ಷೆ ತಯಾರಕರ ಬದುಕೇ ಛಿದ್ರಗೊಂಡಿವೆ.

    ಸಂತೆ ರದ್ದಾಗುವುದರ ಜತೆಗೆ ಗ್ರಾಮದಿಂದ ಗ್ರಾಮಕ್ಕೆ ತಿರುಗಿ ಮಾರಾಟ ಮಾಡಬೇಕೆಂದರೆ ವಾಹನ ಸೌಕರ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಿತ್ಯದ ಬದುಕಿಗೆ ಹರಸಾಹಸ ಪಡುತ್ತಿರುವ ಚಮ್ಮಾರಿಕೆ ಸಮುದಾಯಕ್ಕೆ ಸರ್ಕಾರ ವಿಶೇಷ ಅನುದಾನ ನೀಡಬೇಕಿದೆ. ಸ್ಥಿತಿವಂತರಲ್ಲದ ಚಮ್ಮಾರರು ದೂರದ ಕೊಲ್ಲಾಪುರ, ನಿಪ್ಪಾಣಿಯಿಂದ ಕಚ್ಚಾ ವಸ್ತು (ಚರ್ಮ) ಖರೀದಿಸಿ ಅದನ್ನು ಹದ ಮಾಡಿ ಪಾದರಕ್ಷೆ ತಯಾರಿಸುತ್ತಾರೆ. ಸರ್ಕಾರ ಲೈಸೆನ್ಸ್ ಪಡೆದು ಪಾದರಕ್ಷೆ ತಯಾರಿಸಿ ಮಾರಾಟ ಮಾಡುವವರಿಗೆ ಕೆಲವೊಂದು ಸೌಲಭ್ಯ ನೀಡಲು ಮುಂದಾಗಿದೆ. ಆದರೆ, ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದಲ್ಲಿನ ಚಮ್ಮಾರಿಕೆ ಕುಟುಂಬಗಳಲ್ಲಿ ಅರ್ಧದಷ್ಟು ಜನರಿಗೆ ಲೈಸೆನ್ಸ್ ಪಡೆಯಬೇಕೆಂಬ ಅರಿವೂ ಇಲ್ಲ.

    ನಮಗೂ ಪರಿಹಾರ ನೀಡಿ: ಮದಿಹಳ್ಳಿ ಗ್ರಾಮದ ಚಮ್ಮಾರರು ತಯಾರಿಸುವ ಪಾದರಕ್ಷೆಗಳಲ್ಲಿ ಕಾಫಸಿ, ಕೊಲ್ಲಾಪುರಿ, ಕುರಂದವಾಡಿ, ಎಂಎಲ್‌ಎ ಮತ್ತು ಮೋಚಿಶೇಪ್ ಪ್ರಸಿದ್ಧಿ ಪಡೆದಿವೆ. ಇವು 300 ರೂ.ಗಳಿಂದ 3 ಸಾವಿರ ರೂ.ವರೆಗೆ ಮಾರಾಟವಾಗುತ್ತವೆ. ಚರ್ಮದಿಂದ ತಯಾರಿಸಿದ ಪಾದರಕ್ಷೆಗಳು ಬೇಸಿಗೆಯಲ್ಲಿ ಕಾಲಿಗೆ ತಂಪು ನೀಡುತ್ತವೆ. ಹಾಗಾಗಿಯೇ ಜನವರಿಯಿಂದ ಮೇ ತಿಂಗಳ ವರೆಗೆ ಪಾದರಕ್ಷೆ ವ್ಯಾಪಾರ ಹೆಚ್ಚಾಗಿ ನಡೆಯುತ್ತದೆ. ಆದರೆ, ಈ ವರ್ಷ ಕರೊನಾ ವೈರಸ್ ಭೀತಿ ಹಾಗೂ ಲಾಕಡೌನ್‌ನಿಂದ ನಮ್ಮ ಬದುಕೇ ಮೂರಾಬಟ್ಟೆಯಾಗಿದೆ ಎಂದು ಪಾದರಕ್ಷೆ ತಯಾರಕ ಅರ್ಜುನ ಪಾಂಡರೆ ಅಲವತ್ತುಕೊಂಡಿದ್ದಾರೆ. ಇನ್ನಾದರೂ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಚಮ್ಮಾರರ ಸಂಕಷ್ಟಕ್ಕೆ ನೆರವಾಗಬೇಕು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿವಿಧ ಉಪಕಸುಬು ಮಾಡುತ್ತಿರುವವರಿಗೆ ಆರ್ಥಿಕ ನೆರವು ನೀಡಿದ್ದಾರೆ. ಅದೇ ಮಾದರಿಯಲ್ಲಿ ಚಮ್ಮಾರರಿಗೂ ಪರಿಹಾರ ಧನ ನೀಡಬೇಕು ಎಂದು ಮದಿಹಳ್ಳಿ ಗ್ರಾಮದ ಪಾದರಕ್ಷೆ ತಯಾರಕರು ಒತ್ತಾಯಿಸಿದ್ದಾರೆ.

    ಕುಟುಂಬ ಸರ್ವೇ ಮಾಡಲು ಸೂಚನೆ

    ಲಾಕ್‌ಡೌನ್‌ನಿಂದ ಮದಿಹಳ್ಳಿ ಗ್ರಾಮದ ಚಮ್ಮಾರಿಕೆ ಕುಟುಂಬಗಳು ತೀವ್ರ ಸಂಕಷ್ಟ ಅನುಭವಿಸುತ್ತಿವೆ. ಮದಿಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಅಲ್ಲಿನ ಕುಟುಂಬಗಳ ಸರ್ವೇ ಮಾಡಲು ಸೂಚಿಸಲಾಗಿದೆ. ವರದಿ ಬಂದ ಬಳಿಕ ಅವರಿಗೆ ಪರಿಹಾರ ದೊರಕಿಸಲು ಶಾಸಕ ಉಮೇಶ ಕತ್ತಿ ಅವರ ಮೂಲಕ ಪ್ರಯತ್ನಿಸುತ್ತೇನೆ. ಅಲ್ಲದೆ, ಚಮ್ಮಾರಿಕೆ ವೃತ್ತಿಗೆ ಸಹಕಾರಿ ಬ್ಯಾಂಕ್‌ನಿಂದ ಕಡಿಮೆ ಬಡ್ಡಿ ದರದಲ್ಲಿ ಆರ್ಥಿಕ ನೆರವು ನೀಡಲಾಗುವುದು ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಭರವಸೆ ನೀಡಿದ್ದಾರೆ.

    ಪಾದರಕ್ಷೆ ತಯಾರಿಕೆಯೇ ನಮ್ಮ ಮೂಲ ಕಸುಬು. ಆದರೆ, ಇದೀಗ ಕರೊನಾ ಸೋಂಕು ಹಾಗೂ ಸರ್ಕಾರದ ಲಾಕ್‌ಡೌನ್‌ನಿಂದ ಪಾದರಕ್ಷೆ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ರಾಜ್ಯ ಸರ್ಕಾರ ಚಮ್ಮಾರ ಸಮುದಾಯಕ್ಕೆ ಆರ್ಥಿಕ ನೆರವು ನೀಡಬೇಕು.
    | ಅರ್ಜುನ ಪಾಂಡರೆ ಪಾದರಕ್ಷೆ ತಯಾರಕ, ಮದಿಹಳ್ಳಿ ಗ್ರಾಮ

    | ಬಾಬು ಸುಂಕದ ಹುಕ್ಕೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts