More

    ಆರ್ಥಿಕತೆ ಮಹಾ ಕಂಪನ; ಜಗತ್ತಿನ ಮಾರುಕಟ್ಟೆ ಪತನ

    ಜಗತ್ತಿನ ಜಿಡಿಪಿಯಲ್ಲಿ ರಷ್ಯಾ ಮತ್ತು ಯೂಕ್ರೇನ್ ಒಟ್ಟು ಪಾಲು ಶೇಕಡ 2ಕ್ಕೂ ಕಡಿಮೆ. ಆದಾಗ್ಯೂ ಈ ಬಿಕ್ಕಟ್ಟಿನ ನೇರ ಮತ್ತು ವ್ಯತಿರಿಕ್ತ ಪರಿಣಾಮ ಭಾರತ ಸೇರಿದಂತೆ ಹಲವಾರು ದೇಶಗಳ ಆರ್ಥಿಕತೆ ಮೇಲೆ ಆಗಲಿದೆ. ಜಗತ್ತಿನ ಮೂರನೇ ಅತಿದೊಡ್ಡ ಪೆಟ್ರೋಲಿಯಂ ಉತ್ಪಾದಕ ರಾಷ್ಟ್ರ ಮತ್ತು ನೈಸರ್ಗಿಕ ಅನಿಲ ರಫ್ತುಗಾರ ದೇಶವಾದ ರಷ್ಯಾ ಮೇಲೆ ಅಮೆರಿಕ, ಜರ್ಮನಿ, ಬ್ರಿಟನ್​ಗಳು ಹೊಸ ನಿರ್ಬಂಧ ಹೇರಿವೆ. ರಷ್ಯಾ, ಯೂಕ್ರೇನ್, ಯುರೋಪ್ ಮತ್ತು ಪಾಶ್ಚಾತ್ಯ ರಾಷ್ಟ್ರಗಳ ಈ ಭೌಗೋಳಿಕ ರಾಜಕೀಯ ವಿದ್ಯಮಾನ ಮತ್ತು ಯುದ್ಧ ಸನ್ನಿವೇಶ ಜಗತ್ತನ್ನು ಸಂಕಷ್ಟಕ್ಕೆ ತಳ್ಳತೊಡಗಿದೆ.

    ಯುದ್ಧಕ್ಕೆ ಬೆಚ್ಚಿದ ಭಾರತ

    ಯುದ್ಧದ ಪರಿಣಾಮವಾಗಿ ಭಾರತದ ಷೇರುಪೇಟೆ ಕುಸಿದಿದ್ದು, ಗುರುವಾರ ಒಂದೇ ದಿನ ಹೂಡಿಕೆದಾರರು 13,44,488 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಬಿಎಸ್​ಇ ಸೆನ್ಸೆಕ್ಸ್ 2702.15 ಅಂಶ (4.72%)(54,529.91) ಕುಸಿತ ಕಂಡರೆ ಎನ್​ಎಸ್​ಇ ನಿಫ್ಟಿ 815.30 ಅಂಶ (4.78%)(16,247.95) ಕುಸಿತ ದಾಖಲಿಸಿದೆ. ಇನ್ನು ಬಿಎಸ್​ಇ ಮಾರುಕಟ್ಟೆ ಬಂಡವಾಳ ಮೌಲ್ಯ 2,42,24,179.79 ಕೋಟಿ ರೂ.ಗೆ ಇಳಿದರೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು 3,417.16 ಕೋಟಿ ರೂ. ಮೊತ್ತದ ಷೇರು ಮಾರಾಟ ಮಾಡಿದ್ದಾರೆ.

    ಜಾಗತಿಕ ಷೇರು ಹೊಡೆತ: ಯುದ್ಧದ ಪರಿಣಾಮ ಜಾಗತಿಕ ಮಾರುಕಟ್ಟೆ ಭಾರಿ ಪತನ ಕಂಡಿದ್ದು, ತೈಲ ಬೆಲೆ ಪ್ರತಿ ಬ್ಯಾರೆಲ್​ಗೆ 6 ಡಾಲರ್​ನಷ್ಟು ಏರಿಕೆಯಾಗಿದೆ. ಯುರೋಪ್, ಏಷ್ಯಾ ಮತ್ತು ಅಮೆರಿಕದ ಪೇಟೆಯಲ್ಲಿ ಸೂಚ್ಯಂಕಗಳು ಭಾರಿ ಕುಸಿತ ಕಂಡಿವೆ. ಕರೆನ್ಸಿ ಮಾರುಕಟ್ಟೆಯಲ್ಲಿ ಅಮೆರಿಕ ಡಾಲರ್ ಎದುರು ರುಬೆಲ್ ಮೌಲ್ಯ ಶೇಕಡ 7.5 ಕುಸಿದಿದೆ. ವಾಲ್ ಸ್ಟ್ರೀಟ್​ನ ಎಸ್​ಆಂಡ್ಪಿ 500 ಸೂಚ್ಯಂಕ 1.8% (ಎಂಟು ತಿಂಗಳ ಕನಿಷ್ಠ), ನಾಸ್ಡಾಕ್ ಫ್ಯೂಚರ್ಸ್ ಶೇಕಡ 2.8 ಕುಸಿದಿವೆ. ಅಮೆರಿಕದ ಬಾಂಡ್ ಫಂಡ್, ಡಾಲರ್, ಚಿನ್ನದ ಬೆಲೆ ಏರಿಕೆಯಾಗಿವೆ. ಜಪಾನ್​ನ ಟೋಕಿಯೋ ಷೇರುಪೇಟೆ ಸೂಚ್ಯಂಕ ನಿಕ್ಕೀ ಶೇಕಡ 2.4 ಕುಸಿದಿದೆ.

    ತೈಲಬೆಲೆ 7.92% ಹೆಚ್ಚಳ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್​ಗೆ ಶೇಕಡ 7.92 ಏರಿಕೆ ಆಗಿ 104.51 ಡಾಲರ್ ತಲುಪಿದೆ. ಜಾಗತಿಕ ವಿದ್ಯಮಾನಗಳ ಕಾರಣ 95-97 ಡಾಲರ್ ಆಸುಪಾಸಿನಲ್ಲಿದ್ದ ತೈಲ ಬೆಲೆ ಬಹುಬೇಗ 100 ಡಾಲರ್ ಗಡಿ ದಾಟಿದೆ.

    ಚಿನ್ನದ ಬೆಲೆ ಭಾರಿ ಏರಿಕೆ: ಮಲ್ಟಿ ಕಮಾಡಿಟಿ ಎಕ್ಸ್​ಚೇಂಜ್​ನಲ್ಲಿ ಏಪ್ರಿಲ್​ನಲ್ಲಿ ಪೂರೈಕೆಯಾಗುವ ಚಿನ್ನದ ಬೆಲೆ 10 ಗ್ರಾಮಿಗೆ ಭಾರಿ ಏರಿಕೆ ಕಂಡುಬಂದಿದೆ. ಗುರುವಾರದ ವಹಿವಾಟಿನಲ್ಲಿ 1,432 ರೂಪಾಯಿ (2.84%) ಏರಿ 51,811 ರೂಪಾಯಿ ಆಗಿದ್ದು, 11,933 ಲಾಟ್ ವಹಿವಾಟು ನಡೆಯಿತು. ನವದೆಹಲಿಯ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ ಗುರುವಾರ 10 ಗ್ರಾಮಿಗೆ 1,656 ರೂಪಾಯಿ ಏರಿದ್ದು 51,627 ರೂಪಾಯಿ ಆಗಿದೆ. ಬೆಳ್ಳಿಯ ಬೆಲೆ ಒಂದು ಕಿಲೋಗೆ 2,350 ರೂಪಾಯಿ ಹೆಚ್ಚಾಗಿ 66,267 ರೂಪಾಯಿ ಆಗಿದೆ.

    ರಷ್ಯಾ ಷೇರುಪೇಟೆ 50% ಕುಸಿತ: ಯುದ್ಧದ ಕಾರಣ ರಷ್ಯಾದ ಮಾಸ್ಕೋ ಎಕ್ಸ್​ಚೇಂಜ್​ನಲ್ಲಿ ಗುರುವಾರ ಬೆಳಗ್ಗೆ ಷೇರುಮೌಲ್ಯಗಳು ಶೇಕಡ 50ಕ್ಕೂ ಹೆಚ್ಚು ಕುಸಿತ ಕಂಡಿತು. ಆರ್​ಟಿಎಸ್ ಸೂಚ್ಯಂಕ 50.05 % ಕುಸಿದು 612.69ಕ್ಕೆ ತಲುಪಿತು. ಎಂಒಇಎಕ್ಸ್ ಬ್ರಾಡ್ ಮಾರ್ಕೆಟ್ ಕೂಡ 44.59% ಕುಸಿದು 1226.65 ಅಂಶಕ್ಕೆ ಇಳಿದಿದೆ. ಎರಡು ಗಂಟೆ ಕಾಲ ಪೇಟೆ ವಹಿವಾಟು ಸ್ಥಗಿತಗೊಳಿಸಲಾಗಿತ್ತು.

    ಜಾಗತಿಕ ಪರಿಣಾಮ

    • ಯುರೋಪ್ ಆಮದು ರಾಷ್ಟ್ರವಾಗಿದ್ದು, ಶೇಕಡ 40 ನೈಸರ್ಗಿಕ ಅನಿಲವನ್ನು ರಷ್ಯಾದಿಂದಲೇ ಆಮದು ಮಾಡಿಕೊಳ್ಳುತ್ತದೆ. ಈ ಯುದ್ಧದ ಕಾರಣ ಇಂಧನ ಕೊರತೆ ಅನುಭವಿಸುತ್ತಿರುವ ಯುರೋಪ್​ನ ಆರ್ಥಿಕತೆ ಚೇತರಿಸಿಕೊಳ್ಳುವುದು ವಿಳಂಬವಾಗಲಿದೆ. ಇಂಧನ ಕೊರತೆಯಿಂದ ಹಣದುಬ್ಬರ ಹೆಚ್ಚಾಗಲಿದ್ದು, ಜನರೂ ಸಂಕಷ್ಟಕ್ಕೆ ಒಳಗಾಗಲಿದ್ದಾರೆ.
    • ಯುರೋಪ್ ರಾಷ್ಟ್ರಗಳಾದ ಸ್ಪೇನ್, ಬೆಲ್ಜಿಯಂ, ಫ್ರಾನ್ಸ್, ಲಕ್ಸಂಬರ್ಗ್, ನೆದರ್ಲೆಂಡ್, ಗ್ರೀಸ್, ಟರ್ಕಿ, ರಷ್ಯಾವನ್ನು ನೈಸರ್ಗಿಕ ಅನಿಲಕ್ಕೆ ಸ್ವಲ್ಪ ಮಟ್ಟಿಗೆ ಮಾತ್ರ ಅವಲಂಬಿಸಿವೆ. ಆದರೆ, ಯುರೋಪ್ ಒಕ್ಕೂಟ -27 ಅಂದರೆ, ಲಿಥುವಾನಿಯಾ, ಇಟಲಿ, ಜರ್ಮನಿ, ಪೊಲೆಂಡ್, ಹಂಗರಿ, ಫಿನ್​ಲೆಂಡ್ ಬಹುತೇಕ ಶೇಕಡ 100, ಝೆಕ್ ರಿಪಬ್ಲಿಕ್ ಶೇಕಡ 100ರಷ್ಟು ಅನಿಲ ಇಂಧನಕ್ಕೆ ರಷ್ಯಾವನ್ನೇ ಅವಲಂಬಿಸಿವೆ. ಇವುಗಳ ಮೇಲೆ ಯುದ್ಧದ ನೇರ ಪರಿಣಾಮ ಆಗಲಿದೆ.
    • ಯೂಕ್ರೇನ್ ಜಗತ್ತಿನಾದ್ಯಂತ ಕೋಟ್ಯಂತರ ಜನರಿಗೆ ಆಹಾರ ಒದಗಿಸುತ್ತಿದ್ದು, ಯುದ್ಧದ ಹಾನಿಯ ಪರಿಣಾಮ ಇದರ ಮೇಲೆ ಆಗಲಿದೆ.
    • ಜಗತ್ತಿಗೆ ಅತಿ ಹೆಚ್ಚು ಪ್ರಮಾಣದ ಗೋಧಿ ಒದಗಿಸುವ ಐದನೇ ರಾಷ್ಟ್ರ ಯೂಕ್ರೇನ್. ಯೆಮೆನ್ ಶೇಕಡ 22 ಮತ್ತು ಲಿಬಿಯಾ ಶೇಕಡ 43 ಗೋಧಿಯನ್ನು ಯೂಕ್ರೇನ್​ನಿಂದ ಆಮದು ಮಾಡಿಕೊಳ್ಳುತ್ತಿವೆ. ಇದಕ್ಕೆ ಈಗ ಹೊಡೆತ ಬೀಳಲಿದೆ.
    • ಇಂಧನ ದರ ಮತ್ತು ಆಹಾರದ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಅಮೆರಿಕ ಈಗಾಗಲೇ ತೀವ್ರತರಹದ ಹಣದುಬ್ಬರ ಶೇಕಡ 7.5ರಷ್ಟು ಏರಿಕೆ ಎದುರಿಸಿದ್ದು, ಸಂಕಷ್ಟದಲ್ಲಿದೆ.
    • ಜಗತ್ತಿನ ಬಹುತೇಕ ರಾಷ್ಟ್ರಗಳು ಆದಾಯ ಕೊರತೆ ಅನುಭವಿಸುತ್ತಿದ್ದು, ತೆರಿಗೆ ಹೆಚ್ಚಳ ಮುಂತಾದ ಕ್ರಮಗಳನ್ನು ತೆಗೆದುಕೊಂಡಿವೆ. ಯುದ್ಧ ಸನ್ನಿವೇಶದ ಕಾರಣ ರಷ್ಯಾದ ಬ್ಯಾಂಕುಗಳ ಮೇಲೆ ನಿರ್ಬಂಧ ಹೇರಿದ್ದು, ಅದರ ಪರಿಣಾಮವೂ ಅರ್ಥವ್ಯವಸ್ಥೆಯ ಮೇಲಾಗುತ್ತಿದೆ.
    • ಚೀನಾದ ರಿಯಲ್ ಎಸ್ಟೇಟ್ ಡೆವಲಪರ್​ಗಳಿಗೆ ಸಂಕಷ್ಟ ಉಂಟಾಗಿದ್ದು, ಅವರ ಪ್ರಾಜೆಕ್ಟ್​ಗಳೆಲ್ಲವೂ ತೊಂದರೆಗೆ ಒಳಗಾಗಲಿವೆ.

    ನೇರ ಪರಿಣಾಮಗಳೇನು?

    • ಜಾಗತಿಕ ತೈಲ, ಅನಿಲ ದರದ ಮೇಲೆ ಪರಿಣಾಮ ಆಗಲಿದೆ. ಈಗಾಗಲೇ ತೈಲ ಮತ್ತು ಅನಿಲ ದರ ಏಳು ವರ್ಷಗಳ ಗರಿಷ್ಠ ಮಟ್ಟದಲ್ಲಿದೆ. ಇದು ಭಾರತದ ರೂಪಾಯಿ ಮೌಲ್ಯದ ಮೇಲೆ ಪರಿಣಾಮ ಬೀರುತ್ತದೆ.
    • ನಿತ್ಯೋಪಯೋಗಿ ವಸ್ತುಗಳು, ಮೊಬೈಲ್ ಫೋನ್, ಲ್ಯಾಪ್​ಟಾಪ್, ಟಿವಿ ಮತ್ತು ಪೂರಕ ವಸ್ತುಗಳ ಬೆಲೆ ಏರಿಕೆಯಾಗಲಿದೆ. ಜಗತ್ತಿನ ಅತಿದೊಡ್ಡ ಮೊಬೈಲ್ ಉತ್ಪಾದಕ ದೇಶ ಭಾರತವಾಗಿದ್ದು, ಬಿಡಿಭಾಗಗಳನ್ನು ಅನ್ಯ ರಾಷ್ಟ್ರಗಳಿಂದ ತರಿಸಬೇಕಾಗಿರುವ ಕಾರಣ ಇವು ದುಬಾರಿ ಆಗಲಿವೆ.
    • ಕರೆನ್ಸಿ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಯುವ ಕಾರಣ, ನಿತ್ಯ ಖರ್ಚು ವೆಚ್ಚ ಸರಿದೂಗಿಸುವುದು ಕಷ್ಟವಾಗಲಿದೆ. ವಿದೇಶ ಶಿಕ್ಷಣ ವೆಚ್ಚ ಏರಲಿದೆ.
    • ಗೋಧಿ ಮತ್ತು ಇತರೆ ಧಾನ್ಯಗಳು ಕಪ್ಪು ಸಮುದ್ರ ಪ್ರಾಂತ್ಯದ ಮೂಲಕವೇ ಪೂರೈಕೆ ಆಗುವ ಕಾರಣ ಈ ಬಿಕ್ಕಟ್ಟು ಹೆಚ್ಚಿನ ಸಂಕಷ್ಟವನ್ನು ಉಂಟುಮಾಡಿದೆ. ಯೂಕ್ರೇನ್ -ರಷ್ಯಾ ಬಿಕ್ಕಟ್ಟು ಕಪು್ಪ ಸಮುದ್ರ ಪ್ರಾಂತ್ಯದಲ್ಲೇ ಇವೆ. ಆಹಾರದ ಹಣದುಬ್ಬರ ನಿರೀಕ್ಷಿತ.
    • ರೂಪಾಯಿ ಮೌಲ್ಯ ಕುಸಿತದ ಪರಿಣಾಮ ರಫ್ತು ಮಾಡುವವರಿಗೆ ಪ್ರಯೋಜನ ಒದಗಿಸಿದರೆ, ಆಮದು ಮಾಡಿಕೊಳ್ಳುವವರಿಗೆ ಸಂಕಷ್ಟ ಉಂಟುಮಾಡಲಿದೆ. ವಿಶೇಷವಾಗಿ ಐಟಿ ಕಂಪನಿಗಳ ಆದಾಯ ವೃದ್ಧಿಯಾಗಲಿದೆ.

    ಹರ್ಷ ಸಾವಿನ ಮುನ್ಸೂಚನೆ ತಾಯಿಗೆ ಒಂದು ತಿಂಗಳ ಮೊದಲೇ ಸಿಕ್ಕಿತ್ತಾ?!

    ಒಬ್ಬನ ಕೊಲೆ ಹಿಂದೆ ಅದೆಷ್ಟು ಜನರೋ?!; ಇಂದು ಮತ್ತಿಬ್ಬರ ಬಂಧನ, ಬಂಧಿತರ ಸಂಖ್ಯೆ 10ಕ್ಕೆ ಏರಿಕೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts