ಕೂಡ್ಲಿಗಿ: ಬಕ್ರೀದ್ ನಿಮಿತ್ತ ಪಟ್ಟಣದ ಕೊಟ್ಟೂರು ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ಕೋರಿದರು.
ಮೌಲ್ವಿ ಅನ್ವರ್ ಇಮಾಮ್ ಸಾಹೇಬ್ ಮಾತನಾಡಿ, ಬಕ್ರೀದ್ ಎಲ್ಲರಿಗೂ ಸಂತೋಷ ಮತ್ತು ಸಮೃದ್ಧಿಯನ್ನು ನೀಡಲಿ. ಸಾಮರಸ್ಯ ಮತ್ತು ಒಗ್ಗಟ್ಟಿನ ಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಲಿ. ಎಲ್ಲರೂ ಸಂತೋಷದಿಂದ ಮತ್ತು ಆರೋಗ್ಯವಾಗಿ ಜೀವನ ನಡೆಸಲಿ ಎಂದು ಹಾರೈಸಿದ ಅವರು, ಈ ವರ್ಷ ಮುಂಗಾರು ಆರಂಭದಲ್ಲಿ ಉತ್ತಮ ಮಳೆಯಾಗಿ ಕೆರೆ,ಕಟ್ಟೆಗಳು ತುಂಬಿದ್ದು, ಜನ,ಜಾನುವಾರುಗಳಿಗೆ ಅನುಕೂಲವಾಗಿದೆ.
ರೈತರು ಸಹ ಬಿತ್ತನೆ ಮಾಡಿ, ಉತ್ತಮ ಬೆಳೆ ಬಂದು, ನಾಡು ಸುಭೀಕ್ಷೆಯಿಂದ ಇರಲಿ ಎಂದು ಪ್ರಾರ್ಥಿಸಿದರು. ಮಾಜಿ ಸಚಿವ ಎನ್.ಎಂ.ನಬಿ, ನೂರ್ ಅಹಮದ್, ಪೈಲ್ವಾನ್, ಹುಸೇನ್ ಸಾಬ್, ರಜಾಕ್ ಸಾಬ್, ಉಸ್ಮಾನ್ ಸಾಹೇಬ್, ಅಮ್ಜದ್ ಅಲಿ, ಎಸ್.ಎಂ.ರಿಯಾಜ್ ಪಾಷಾ, ಬಿ.ಅಬ್ದುಲ್ ರೆಹಮಾನ್, ಬಿ.ಖಾದರ್ ಬಾಷಾ ಇತರರಿದ್ದರು.