More

    ಓವಲ್‌ನಲ್ಲಿ ಭಾರತ ಸಾಧಾರಣ ಮೊತ್ತ, ಆಂಗ್ಲರಿಗೆ ಬೌಲರ್‌ಗಳಿಂದ ತಿರುಗೇಟು

    ಲಂಡನ್: ಆತಿಥೇಯ ಇಂಗ್ಲೆಂಡ್ ವೇಗಿಗಳ ಮಾರಕ ದಾಳಿ ಎದುರು ಭಾರತದ ಪ್ರಮುಖ ಬ್ಯಾಟ್ಸ್‌ಮನ್‌ಗಳು ಮತ್ತೊಮ್ಮೆ ಕೈಕೊಟ್ಟರು. ಇದರಿಂದ 4ನೇ ಟೆಸ್ಟ್ ಪಂದ್ಯದಲ್ಲೂ ಟೀಮ್ ಇಂಡಿಯಾ ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಾದಾಗ ನಾಯಕ ವಿರಾಟ್ ಕೊಹ್ಲಿ (50 ರನ್, 96 ಎಸೆತ, 8 ಬೌಂಡರಿ) ಮತ್ತು ಶಾರ್ದೂಲ್ ಠಾಕೂರ್ (57 ರನ್, 36 ಎಸೆತ, 7 ಬೌಂಡರಿ, 3 ಸಿಕ್ಸರ್) ಉಪಯುಕ್ತ ಅರ್ಧಶತಕ ಬಾರಿಸಿ ಸಾಧಾರಣ ಮೊತ್ತ ಪೇರಿಸಲು ನೆರವಾದರು. ಬಳಿಕ ಬೌಲರ್‌ಗಳು ಆಂಗ್ಲರಿಗೆ ತಿರುಗೇಟು ನೀಡುವುದರೊಂದಿಗೆ ಭಾರತ ಮೊದಲ ದಿನದಾಟದ ಗೌರವ ಹಂಚಿಕೊಂಡಿತು.

    ಓವಲ್ ಮೈದಾನದಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡ ಚಹಾ ವಿರಾಮದ ಬಳಿಕ 61.3 ಓವರ್‌ಗಳಲ್ಲಿ 191 ರನ್‌ಗೆ ಆಲೌಟ್ ಆಯಿತು. ಒಂದು ಹಂತದಲ್ಲಿ 150ರೊಳಗೆ ಆಲೌಟ್ ಆಗುವ ಭೀತಿ ಎದುರಿಸಿದ್ದ ಭಾರತ ತಂಡ ಶಾರ್ದೂಲ್ ಬಿರುಸಿನ ಬ್ಯಾಟಿಂಗ್‌ನಿಂದ 200ರ ಸನಿಹ ತಲುಪಿತು. ಪ್ರತಿಯಾಗಿ ಜಸ್‌ಪ್ರೀತ್ ಬುಮ್ರಾ (15ಕ್ಕೆ 2) ಇಂಗ್ಲೆಂಡ್ ಆರಂಭಿಕರನ್ನು ಬೇಗನೆ ಔಟ್ ಮಾಡಿದರು. ಹ್ಯಾಟ್ರಿಕ್ ಶತಕವೀರ ಜೋ ರೂಟ್ (21) ಅವರನ್ನು ಉಮೇಶ್ ಯಾದವ್ ಬೌಲ್ಡ್ ಮಾಡಿದರು. ಇದರಿಂದ ಇಂಗ್ಲೆಂಡ್ ದಿನದಂತ್ಯಕ್ಕೆ 3 ವಿಕೆಟ್‌ಗೆ 53 ರನ್ ಗಳಿಸಿ ಸಂಕಷ್ಟದಲ್ಲಿದೆ. ಭಾರತ ಸದ್ಯ 138 ರನ್ ಮುನ್ನಡೆಯಲ್ಲಿದೆ.

    ಚಹಾ ವಿರಾಮದ ವೇಳೆಗೆ ರಿಷಭ್ ಪಂತ್ ಜತೆಗೆ ಶಾರ್ದೂಲ್ ಕ್ರೀಸ್‌ನಲ್ಲಿದ್ದರು. ಆಗ ಪಂತ್ ತಂಡದ ಮೊತ್ತ ಏರಿಸುವ ನಿರೀಕ್ಷೆ ಇತ್ತು. ಆದರೆ ಚಹಾ ವಿರಾಮದ ಬಳಿಕ 2ನೇ ಓವರ್‌ನಲ್ಲೇ ಪಂತ್ (9) ಔಟಾದರು. ಇದರಿಂದ 127 ರನ್‌ಗೆ 7 ವಿಕೆಟ್ ಕಳೆದುಕೊಂಡ ಭಾರತ ತೀವ್ರ ಸಂಕಷ್ಟಕ್ಕೆ ಸಿಲುಕಿತು ಆಗ ಆಕ್ರಮಣಕಾರಿ ಆಟಕ್ಕಿಳಿದ ಶಾರ್ದೂಲ್, ಉಮೇಶ್ ಯಾದವ್ ಜತೆಗೆ 8ನೇ ವಿಕೆಟ್‌ಗೆ 48 ಎಸೆತಗಳಲ್ಲೇ 63 ರನ್ ಪೇರಿಸಿದರು. ಸಿಕ್ಸರ್ ಸಿಡಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 2ನೇ ಅರ್ಧಶತಕ ಪೂರೈಸಿದ ಶಾರ್ದೂಲ್, ಬಳಿಕ ವೋಕ್ಸ್ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಅದರ ಬೆನ್ನಲ್ಲೇ ಭಾರತ 4 ಎಸೆತಗಳ ಅಂತರದಲ್ಲಿ ಕೊನೇ 3 ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು.

    ಶಾರ್ದೂಲ್ ದಾಖಲೆ ಅರ್ಧಶತಕ
    ಶಾರ್ದೂಲ್ ಠಾಕೂರ್ (31 ಎಸೆತ) ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಪರ 2ನೇ ಅತಿವೇಗದ ಅರ್ಧಶತಕ ಸಿಡಿಸಿದರು. ಕಪಿಲ್ ದೇವ್ 1982ರಲ್ಲಿ ಪಾಕಿಸ್ತಾನ ವಿರುದ್ಧ 30 ಎಸೆತಗಳಲ್ಲಿ ಅತಿವೇಗದ ಸಾಧನೆ ಮಾಡಿದ್ದರು. ಶಾರ್ದೂಲ್ ಇಂಗ್ಲೆಂಡ್ ವಿರುದ್ಧ ಭಾರತದ ಅತಿವೇಗದ ಅರ್ಧಶತಕ ಸಾಧನೆ ಮಾಡಿದರು. ವೀರೇಂದ್ರ ಸೆಹ್ವಾಗ್ 2008ರಲ್ಲಿ 32 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ದಾಖಲೆ ಮುರಿದರು. ಶಾರ್ದೂಲ್ ಠಾಕೂರ್ ಇಂಗ್ಲೆಂಡ್‌ನಲ್ಲಿ ಅತಿವೇಗದ ಟೆಸ್ಟ್ ಅರ್ಧಶತಕದ ಸಾಧನೆ ಮಾಡಿದರು. ಇಯಾನ್ ಬಾಥಮ್ 1986ರಲ್ಲಿ ಕಿವೀಸ್ ವಿರುದ್ಧ 32 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದು ಹಿಂದಿನ ದಾಖಲೆ.

    ಕೊಹ್ಲಿ ಅರ್ಧಶತಕದಾಸರೆ
    ಭಾರತ 39ರನ್‌ಗೆ 3 ವಿಕೆಟ್ ಕಳೆದುಕೊಂಡಿದ್ದ ವೇಳೆ 5ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಆಡಿದ ರವೀಂದ್ರ ಜಡೇಜಾ ಜತೆಗೆ ವಿರಾಟ್ ಕೊಹ್ಲಿ ತಂಡಕ್ಕೆ ಚೇತರಿಕೆ ನೀಡುವ ಪ್ರಯತ್ನ ನಡೆಸಿದರು. ಜಡೇಜಾ ಜತೆ 30 ಮತ್ತು ಅಜಿಂಕ್ಯ ರಹಾನೆ ಜತೆಗೆ 36 ರನ್ ಸೇರಿಸಿದ ಕೊಹ್ಲಿ, ಸರಣಿಯಲ್ಲಿ ಸತತ 2ನೇ ಹಾಗೂ ಒಟ್ಟಾರೆ 27ನೇ ಅರ್ಧಶತಕ ಬಾರಿಸಿದರು. ಜಡೇಜಾ (10) ಮತ್ತು ರಹಾನೆ (14) ಕ್ರಮವಾಗಿ ವೋಕ್ಸ್ ಮತ್ತು ಓವರ್‌ಟನ್‌ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಕೊಹ್ಲಿ ಈ ಸಲವಾದರೂ, ಅರ್ಧಶತಕವನ್ನು ಶತಕವಾಗಿ ಪರಿವರ್ತಿಸುವ ನಿರೀಕ್ಷೆ ಮೂಡಿದಾಗ ರಾಬಿನ್‌ಸನ್ ಎಸೆತದಲ್ಲಿ ಕೀಪರ್ ಬೇರ್‌ಸ್ಟೋಗೆ ಕ್ಯಾಚ್ ನೀಡಿ ನಿರಾಸೆ ಮೂಡಿಸಿದರು. ವಿರಾಟ್ ಕೊಹ್ಲಿ ಇಂಗ್ಲೆಂಡ್‌ನಲ್ಲಿ ಅತ್ಯಧಿಕ 7 ಬಾರಿ 50 ಪ್ಲಸ್ ರನ್ ಇನಿಂಗ್ಸ್ ಆಡಿದ ಭಾರತೀಯ ನಾಯಕರೆನಿಸಿದರು. ಎಂಎಸ್ ಧೋನಿ (6) ಸಾಧನೆಯನ್ನು ಅವರು ಹಿಂದಿಕ್ಕಿದರು.

    ಕೈಕೊಟ್ಟ ಅಗ್ರ ಕ್ರಮಾಂಕ
    ಭಾರತ ತಂಡ ಓವಲ್‌ನಲ್ಲೂ ಉತ್ತಮ ಆರಂಭ ಪಡೆಯಲು ವಿಲವಾಯಿತು. ತಂಡದ ಮೊತ್ತ 28 ರನ್ ಆಗುವಷ್ಟರಲ್ಲೇ ಆರಂಭಿಕರಿಬ್ಬರೂ ಪೆವಿಲಿಯನ್ ಸೇರಿಕೊಂಡರು. ಕ್ರಿಸ್ ವೋಕ್ಸ್ ಎಸೆದ ಪಂದ್ಯದ 9ನೇ ಓವರ್‌ನ ಕೊನೇ ಎಸೆತದಲ್ಲಿ ರೋಹಿತ್ ಶರ್ಮ (11) ವಿಕೆಟ್ ಕೀಪರ್ ಬೇರ್‌ಸ್ಟೋಗೆ ಕ್ಯಾಚ್ ನೀಡಿದರೆ, ಕೆಎಲ್ ರಾಹುಲ್ (17) ಮರು ಓವರ್‌ನಲ್ಲಿ ಜೀವದಾನವೊಂದನ್ನು ಪಡೆದರು. ಆದರೆ 3 ಓವರ್ ಬಳಿಕ ಅವರೂ ರಾಬಿನ್‌ಸನ್ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಡಿಆರ್‌ಎಸ್ ಮೊರೆ ಹೋದರೂ, ‘ಅಂಪೈರ್ಸ್‌ ಕಾಲ್’ ಬಂದಿದ್ದರಿಂದ ಅವರು ಬಚಾವ್ ಆಗಲಿಲ್ಲ. ಬಳಿಕ ಚೇತೇಶ್ವರ ಪೂಜಾರ (4) ಕೂಡ ಹೆಚ್ಚು ಹೊತ್ತು ನಿಲ್ಲದೆ ವೃತ್ತಿಜೀವನದಲ್ಲಿ 11ನೇ ಬಾರಿ ಆಂಡರ್‌ಸನ್‌ಗೆ ವಿಕೆಟ್ ಒಪ್ಪಿಸಿದರು.

    ಅಶ್ವಿನ್‌ಗೆ ಮತ್ತೆ ನಿರಾಸೆ
    ಭಾರತ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ 400ಕ್ಕೂ ಅಧಿಕ ವಿಕೆಟ್ ಮತ್ತು 5 ಶತಕ ಸಿಡಿಸಿರುವ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ಸರಣಿಯ 4ನೇ ಪಂದ್ಯದಲ್ಲೂ ಅವಕಾಶ ಪಡೆಯದಿರುವುದು ಅಚ್ಚರಿ ಮತ್ತು ಟೀಕೆಗಳಿಗೆ ಕಾರಣವಾಯಿತು. ಸ್ಪಿನ್ ಸ್ನೇಹಿ ಓವಲ್ ಪಿಚ್‌ನಲ್ಲಾದರೂ ಅಶ್ವಿನ್‌ಗೆ ಸ್ಥಾನ ಲಭಿಸುವ ನಿರೀಕ್ಷೆ ಇತ್ತು. ಆದರೆ ಸರಣಿಯ ಮೊದಲ 3 ಪಂದ್ಯಗಳಲ್ಲಿ ಕೇವಲ 2 ವಿಕೆಟ್ ಗಳಿಸಿರುವ ಹೊರತಾಗಿಯೂ ಸ್ಪಿನ್ ಬೌಲಿಂಗ್ ಆಲ್ರೌಂಡರ್ ರವೀಂದ್ರ ಜಡೇಜಾ ಮತ್ತೊಂದು ಅವಕಾಶ ಪಡೆದರು. ಟಾಸ್ ವೇಳೆ ಜಡೇಜಾ ಆಯ್ಕೆಯನ್ನು ಸಮರ್ಥಿಸಿದ ಕೊಹ್ಲಿ, ಇಂಗ್ಲೆಂಡ್ ಎಡಗೈ ಬ್ಯಾಟ್ಸ್‌ಮನ್‌ಗಳ ವಿರುದ್ಧ ಮತ್ತು ಬ್ಯಾಟಿಂಗ್ ವಿಭಾಗದಲ್ಲಿ ಉಪಯುಕ್ತರು ಎಂದರು. ಅಶ್ವಿನ್ ಆಡಿಸದಿರುವುದು ಕೆಟ್ಟ ನಿರ್ಧಾರ ಎಂದು ಇಂಗ್ಲೆಂಡ್ ಮಾಜಿ ನಾಯಕ ಮೈಕೆಲ್ ವಾನ್ ಟೀಕಿಸಿದ್ದಾರೆ.

    ತಲಾ 2 ಬದಲಾವಣೆ
    ಉಭಯ ತಂಡಗಳು ತಲಾ 2 ಬದಲಾವಣೆಯೊಂದಿಗೆ ಕಣಕ್ಕಿಳಿದವು. ಭಾರತ ತಂಡ ವೇಗಿಗಳಾದ ಇಶಾಂತ್ ಶರ್ಮ ಮತ್ತು ಮೊಹಮದ್ ಶಮಿ ಬದಲಿಗೆ ಶಾರ್ದೂಲ್ ಠಾಕೂರ್ ಮತ್ತು ಉಮೇಶ್ ಯಾದವ್‌ಗೆ ಸ್ಥಾನ ಕಲ್ಪಿಸಿತು. ಇಂಗ್ಲೆಂಡ್ ತಂಡ ಜೋಸ್ ಬಟ್ಲರ್ ಮತ್ತು ಸ್ಯಾಮ್ ಕರ‌್ರನ್ ಬದಲಿಗೆ ಒಲಿ ಪೋಪ್ ಮತ್ತು ಕ್ರಿಸ್ ವೋಕ್ಸ್‌ರನ್ನು ಕಣಕ್ಕಿಳಿಸಿತು.

    ವಿರಾಟ್ ಕೊಹ್ಲಿ ಮತ್ತೊಂದು ಮೈಲಿಗಲ್ಲು, ಅತಿವೇಗದ 23 ಸಾವಿರ ರನ್ ಸಾಧನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts