More

    ಕಾಯಕದ ನಿಷ್ಠೆಯ ಮಹತ್ವ ಜಗತ್ತಿಗೆ ಸಾರಿದ ಶರಣರು

    ಶಿವಮೊಗ್ಗ: ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಮಾದಾರ ದೂಳಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿ ಇವರೆಲ್ಲ ವೈಚಾರಿಕ ನೆಲಗಟ್ಟಿಗೆ ಸಂಬಂಧಿಸಿದ ಕಾಯಕ ಶರಣರು. ಇವರು ತಮ್ಮ ಕಾಯಕನಿಷ್ಠೆಯಿಂದ ಸಮಾಜಕ್ಕೆ ಶಕ್ತಿ ತುಂಬಿ ಸಮಾನತೆ ಸಾರಿದ್ದಾರೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

    ಜಿಲ್ಲಾಡಳಿತದಿಂದ ಶನಿವಾರ ಏರ್ಪಡಿಸಿದ್ದ ಕಾಯಕ ಶರಣರ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಈ ಐದು ಜನರ ಒಂದೇ ಸಮಷ್ಟಿಯ ನಡವಳಿಕೆಯ ಪರಿಣಾಮ ಒಂದೇ ದಿನ ಜಯಂತಿಯನ್ನು ಆಚರಿಸಲಾಗುತ್ತಿದೆ. ಐದು ಜನರದ್ದು ಒಂದೇ ದಿನ ಜಯಂತಿ ಆಚರಣೆಯಾಗುತ್ತಿರುವುದು ಅತ್ಯಂತ ವಿಶೇಷ ಮತ್ತು ನಮ್ಮಲ್ಲಿ ಮಾತ್ರ ಸಾಧ್ಯವಿರಬಹುದು ಎಂದರು.
    ಇವರೆಲ್ಲ ಕಾಯಕದ ಮಹತ್ವ ಮತ್ತು ಒಳ್ಳೆಯ ವಿಚಾರಗಳನ್ನು ಜಗತ್ತಿಗೆ ಸಾರಲು ಪ್ರೇರಕ ಶಕ್ತಿಗಳು. ಪ್ರಸ್ತುತ ಹೊರದೇಶದವರು ನಮ್ಮನ್ನು ಅಧ್ಯಯನ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಇಂತಹ ಶ್ರೇಷ್ಠ ವಿಚಾರವಂತರು. ಇಡೀ ಜಗತ್ತಿಗೆ ಕಾಯಕದ ಮಹತ್ವ ಮತ್ತು ಸದ್ವಿಚಾರಗಳನ್ನು ಸಾರಿದ ಶಕ್ತಿಗಳು ನಮ್ಮ ಕಾಯಕ ಶರಣರು ಎಂದು ಅಭಿಪ್ರಾಯಪಟ್ಟರು.
    ವಿಶೇಷ ಉಪನ್ಯಾಸ ನೀಡಿದ ಸಹ್ಯಾದ್ರಿ ಕಾಲೇಜು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಕೆ.ಎನ್.ಮಹಾದೇವಸ್ವಾಮಿ, ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಮಾದಾರ ದೂಳಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿ ಅವರು ತಮ್ಮ ಕಾಯಕದ ಮೂಲಕ ಜಗದ್ವಿಖ್ಯಾತರಾದವರು. ಶಿಸ್ತು, ಬದ್ಧತೆಯಿಂದ ತಮ್ಮ ಕಾಯಕ ನಡೆಸಿಕೊಂಡು ಇತರರಿಗೆ ಮಾದರಿಯಾದವರು ಎಂದು ಬಣ್ಣಿಸಿದರು.
    ಬಹು ವಿಸ್ತೃತ ಭಾರತ ದೇಶದ ಹಿನ್ನೆಲೆಯಲ್ಲಿ ಕಾಯಕ ಶರಣರು ತಮ್ಮದೇ ಆದ ವೃತ್ತಿ, ವಚನ ಸಾಹಿತ್ಯದ ಮೂಲಕ ಸಮ ಸಮಾಜ ಕಟ್ಟಲು ಮುಂದಾದರು. ಡೋಹರ ಕಕ್ಕಯ್ಯ ಅವರು ಚರ್ಮ ಹದ ಮಾಡಿ ಹೊಳಪು ನೀಡುವ ಕಾರ್ಯದಲ್ಲಿ ತೊಡಗಿದ್ದು ನಾವೆಲ್ಲ ಒಂದೇ ಎಂಬ ಭಾವನೆಗಳನ್ನು ಒಡಮೂಡಿಸುವಲ್ಲಿ ಶ್ರಮಿಸಿದರು ಎಂದು ತಿಳಿಸಿದರು.
    ಉಪವಿಭಾಗಾಧಿಕಾರಿ ಸತ್ಯನಾರಾಯಣ ಮಾತನಾಡಿ, ನಮ್ಮ ನೆಲದ ಮಹಾನ್ ವ್ಯಕ್ತಿಗಳ ತತ್ವ, ಸಿದ್ಧಾಂತಗಳನ್ನು ನಾವು ತಿಳಿದು ಅದನ್ನು ಅಳವಡಿಸಿಕೊಂಡು ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕೆಂಬ ಕಳಕಳಿಯಿಂದ ಸರ್ಕಾರ ಜಯಂತಿಗಳನ್ನು ಆಚರಿಸಲಾಗುತ್ತಿದೆ. ನಾವು ಅವರ ತತ್ವಗಳನ್ನು ಅಳವಡಿಸಿಕೊಂಡು ಸಮಾಜದ ಏಳಿಗೆಗೆ ಶ್ರಮಿಸೋಣ ಎಂದು ಹೇಳಿದರು.
    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಜಿಲ್ಲಾ ಸಮಗಾರ ಹರಳಯ್ಯ ಸಮಾಜದ ಅಧ್ಯಕ್ಷ ಚಂದ್ರಶೇಖರ್ ಕಾನ್‌ಪೇಟ್, ಕಾರ್ಯದರ್ಶಿ ಪರಶುರಾಮ ಸಾಬೋಜಿ, ಪ್ರಮುಖರಾದ ನಾಗರಾಜ ಗಾಮನಗಟ್ಟಿ, ಮಂಜುನಾಥ ಮಾನೆ, ಶಂಕರ್, ಹಾಲೇಶಪ್ಪ, ಹರೀಶ್, ರಾಮಚಂದ್ರ ಕೊಪ್ಪಳ್, ಗಂಗಾಧರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts