More

    ಶಾರದಾ ದೇವಿ ಕಣ್ಣಿನ ಆಸ್ಪತ್ರೆ ಸಂಕೀರ್ಣ ಉದ್ಘಾಟನೆ ; ಗಡಿನಾಡಿನಲ್ಲಿ ಸ್ವಾಮಿ ಜಪಾನಂದಜೀ ಸೇವೆ ಸ್ಮರಣೀಯ ; ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಹೇಳಿಕೆ 

    ಪಾವಗಡ : ಸೇವೆ ಮಾಡುವುದು ಮನುಷ್ಯನ ಕರ್ತವ್ಯ, ಫಲಾಪೇಕ್ಷೆ ಇಲ್ಲದೆ ಸಮಾಜದ ಋಣ ತೀರಿಸಬೇಕು, ಗ್ರಾಮಾಂತರ ಪ್ರದೇಶದಲ್ಲಿ ಶಿಕ್ಷಣ, ಆರೋಗ್ಯ, ಅಭಿವೃದ್ಧಿ ಕಾರ್ಯಕ್ರಮಗಳಿಗೆ ನೆರವು ನೀಡಲು ಎಲ್ಲರೂ ಮುಂದಾಗಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ತಿಳಿಸಿದರು.

    ಪಟ್ಟಣದ ಶ್ರೀರಾಮಕೃಷ್ಣ ಸೇವಾಶ್ರಮದ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿ ಶನಿವಾರ ಶಾರದಾ ದೇವಿ ಕಣ್ಣಿನ ಆಸ್ಪತ್ರೆ ಸಂಕೀರ್ಣ ಉದ್ಘಾಟಿಸಿ ವೆಬಿನಾರ್ ಮೂಲಕ ಮಾತನಾಡಿದ ಅವರು, ಪಾವಗಡ ರಾಮಕೃಷ್ಣ ಸೇವಾಶ್ರಮ ವಿವೇಕಾನಂದರ ಆಶಯಗಳನ್ನು ಸಾಕಾರ ಮಾಡುವ ನಿಟ್ಟಿನಲ್ಲಿ ಮಹತ್ವದ ಕಾರ್ಯ ಮಾಡುತ್ತಿದೆ. ಸರ್ಕಾರ ಮತ್ತು ಸಂಘ-ಸಂಸ್ಥೆಗಳು, ಯಾವುದೇ ವ್ಯಕ್ತಿಯಾಗಲಿ ಸೇವೆ ಮಾಡಬಹುದು. ಸ್ವಾಮಿ ವಿವೇಕಾನಂದರು ಬೋಧಿಸಿದಂತೆ ಮಾನವ ಕಲ್ಯಾಣಕ್ಕೆ ಸೇವೆಯೊಂದೇ ದಾರಿ. ಪಾವಗಡದಲ್ಲಿ ಕುಷ್ಠ ಮತ್ತು ಕ್ಷಯರೋಗ, ಕಣ್ಣಿನ ಚಿಕಿತ್ಸೆ ನೀಡಿ ಸಾವಿರಾರು ಮಂದಿಗೆ ಬೆಳಕಾಗಿರುವ ಡಾ.ಜಪಾನಂದಜೀ ಕಾರ್ಯ ಅವಿಸ್ಮರಣೀಯ ಎಂದರು.

    ಮನುಷ್ಯನ ಮುಖ್ಯವಾದ ಅಂಗ ಕಣ್ಣು, ಕಣ್ಣುಗಳ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ನೇತ್ರದಾನ-ಮಹಾದಾನ. ಇಂತಹ ಮಹತ್ಕಾರ್ಯ ಮಾಡುತ್ತಿರುವ ಸ್ವಾಮಿ ಜಪಾನಂದಜೀ ಅವರಿಗೆ ಇನ್ನಷ್ಟು ಬೆಂಬಲ ನೀಡಬೇಕಾಗಿದೆ. ಪಾವಗಡದಲ್ಲಿ ತೆಲುಗು ಭಾಷಿಕರು ಇದ್ದಾರೆ ಎಂದು ತೆಲುಗಿನಲ್ಲಿ, ನಂತರ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಸುಮಾರು 30 ನಿಮಿಷಗಳ ಕಾಲ ಉಪರಾಷ್ಟ್ರಪತಿ ಮಾತನಾಡಿದರು.

    ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಒಂದು ಕಾಲದಲ್ಲಿ ತೋಳದ ಕಾಟದಿಂದ ಪಾವಗಡ ತಾಲೂಕು ಕುಖ್ಯಾತಿ ಹೊಂದಿತ್ತು. ಇಂದು ಜಪಾನಂದರು ಪಾವಗಡವನ್ನು ಅವರ ಸೇವೆಗಳಿಂದ ಪಾವನ ಮಾಡಿದ್ದಾರೆ. ಇತಿಹಾಸ ನಿರ್ಮಿಸಿ ತಾಲೂಕಿನ ಜನತೆಯ ಹೃದಯ ಗೆದ್ದಿದ್ದಾರೆ, ಕುಷ್ಠ ರೋಗಿಗಳ ಸೇವೆ ಆರಂಭಿಸಿ ಔಷಧಕ್ಕಿಂತ ಮೊದಲು ಮಾತೃ ಹೃದಯ ಸೇವೆ ನೀಡಿದ್ದಾರೆ ಎಂದು ಸ್ಮರಿಸಿದರು.
    ಕುಷ್ಠರೋಗಿಗಳು, ಕ್ಷಯರೋಗಿಗಳನ್ನು ಯಾರೂ ಮುಟ್ಟಲ್ಲ. ಆದರೆ, ಅಂತಹವರ ಪಾಲಿನ ದೇವರಾಗಿ ಕಾರ್ಯ ಮಾಡುತ್ತಿರುವುದು ತಾಲೂಕಿನ ಜನತೆಯ ಪಾಲಿಗೆ ಸುದೈವ. ಸುಮಾರು 30 ವರ್ಷಗಳ ಹಿಂದೆ ತಾಲೂಕಿಗೆ ಏನಾದರೂ ಸಹಾಯ ಮಾಡಲು ಬಂದವರು ಇಲ್ಲಿನ ಪರಿಸರಕ್ಕೆ ಹೊಂದಿಕೊಂಡು ಸೇವಾ ಕಾರ್ಯ ಆರಂಭಿಸಿದ್ದಾರೆ ಎಂದು ಕೊಂಡಾಡಿದರು.

    ಇನ್ಫೋಸಿಸ್ ೌಂಡೇಷನ್ ಅಧ್ಯಕ್ಷೆ ಡಾ.ಸುಧಾಮೂರ್ತಿ ವೆಬಿನಾರ್ ಮೂಲಕ ಮಾತನಾಡಿ, ಪಾವಗಡ ತಾಲೂಕಿನಲ್ಲಿ ಇನ್ಫೋಸಿಸ್ ಸಹಯೋಗದೊಂದಿಗೆ ಶ್ರೀ ಶಾರದಾ ದೇವಿ ಕಣ್ಣಿನ ಆಸ್ಪತ್ರೆ ನೂತನ ಸಂಕೀರ್ಣ ನಮ್ಮ ಹೆಮ್ಮೆ ಎನಿಸಿದೆ. ಶ್ರೀರಾಮಕೃಷ್ಣ ಸೇವಾಶ್ರಮಕ್ಕೆ ಇನ್ಫೋಸಿಸ್ ಬೆನ್ನೆಲುಬಾಗಿ ನಿಂತು ಆರ್ಥಿಕ ನೇರವು ನೀಡಿ ಗಡಿಪ್ರದೇಶದ ಜನ, ಜಾನುವಾರುಗಳಿಗೆ ನೆರವಾಗಿದೆ ಎಂದರು.

    ಡಾ.ಜಪಾನಂದಜೀ ಮಾತನಾಡಿ, ಕಳೆದ 25 ವರ್ಷಗಳಿಂದ ಶ್ರೀರಾಮಕೃಷ್ಣ ಗ್ರಾಮಾಂತರ ಆರೋಗ್ಯ ಕೇಂದ್ರ ನಿರಂತರವಾಗಿ ಜನಸೇವೆ ಸಲ್ಲಿಸುತ್ತಿದೆ. ಕಣ್ಣಿನ ಆಸ್ಪತ್ರೆ ಕೂಡ ಭವಿಷ್ಯದಲ್ಲಿ ಜನರಿಗೆ ಅನುಕೂಲವಾಗಲಿದೆ, ಬಡವರ ಪರವಾದ ಸಾಕಷ್ಟು ಕಾರ್ಯಕ್ರಮವನ್ನು ಆಶ್ರಮದ ವತಿಯಿಂದ ರೂಪಿಸಲಾಗಿದ್ದು, ಇನ್ಫೋಸಿಸ್ ೌಂಡೇಷನ್ ನೆರವು ಸ್ಮರಣೀಯ ಎಂದರು.

    ಇನ್ಫೋಸಿಸ್ ಸಂಸ್ಥೆ ಹಿರಿಯ ಉಪಾಧ್ಯಕ್ಷ ಗುರುರಾಜ್ ದೇಶಪಾಂಡೆ, ಪದ್ಮಿನಿ ಮುರುಳಿ ಆನ್‌ಲೈನ್ ಮೂಲಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಚಕ್ರವರ್ತಿ ಸೂಲಿಬೆಲೆ, ಹಿರಿಯ ವಕೀಲ ವಿವೇಕ್‌ರೆಡ್ಡಿ, ಕಿದ್ವಾಯಿ ಸಂಸ್ಥೆಯ ಮಾಜಿ ನಿರ್ದೇಶಕ ಲಿಂಗೇಗೌಡ, ಡಾ.ಜಿ.ವೆಂಕಟರಾಮಯ್ಯ, ತಹಸೀಲ್ದಾರ್ ಕೆ.ಆರ್.ನಾಗರಾಜ್, ಇಒ ಶಿವರಾಜಯ್ಯ, ಪುರಸಭಾ ಮುಖ್ಯಾಧಿಕಾರಿ ಅರ್ಚನಾ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts