More

    ಹಾಳಾದ ರಸ್ತೆ ಬಸ್ ಸಂಚಾರ ಬಂದ್!

    ಕೆ.ರಮೇಶ ಭಟ್ಟ ಶಹಾಬಾದ್: ಚಿತ್ತಾಪುರದಿಂದ ಶಹಾಬಾದ್ ಮಾರ್ಗವಾಗಿ ಜೇವರ್ಗಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದೆ. ಜನರು ಆಡಳಿತಕ್ಕೆ ಹಿಡಿಶಾಪ ಹಾಕುತ್ತಲೇ ಪಯಣಿಸುತ್ತಿರುವ ಮಧ್ಯೆಯೇ ಈ ರಸ್ತೆಯಲ್ಲಿ ಬಿದ್ದಿರುವ ಬೃಹತ್ ತಗ್ಗುಗಳಿಂದಾಗಿ ಸರ್ಕಾರಿ ಬಸ್ ಸಂಚಾರವನ್ನೇ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿಲ್ಲಿಸಿ ಗಾಯದ ಮೇಲೆ ಬರೆ ಎಳೆದಿದೆ.

    ಚಿತ್ತಾಪುರ, ಶಹಾಬಾದ್ ಹಾಗೂ ಜೇವರ್ಗಿ ಸೇರಿ ಮೂರು ತಾಲೂಕುಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಜ್ಯ ಹೆದ್ದಾರಿ-೧೨೫ ಇದಾಗಿದೆ. ನಿತ್ಯ ಅಸಂಖ್ಯ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಆದರೆ ಸಮರ್ಪಕ ನಿರ್ವಹಣೆ ಇಲ್ಲದೆ, ಸಂಬಂಧಿತರ ನಿರ್ಲಕ್ಷ್ಯದಿಂದ ರೋಡ್ ಹಾಳಾಗಿದೆ. ಸುಮಾರು ೨೦ ಕಿಮೀ ರಸ್ತೆಯಲ್ಲಿ ದೊಡ್ಡ-ದೊಡ್ಡ ತಗ್ಗುಗಳು ಬಿದ್ದಿದ್ದು, ಜೀವ ಕೈಯಲ್ಲಿ ಹಿಡಿದು ಸಂಚರಿಸುವಂಥ ಸ್ಥಿತಿ ನಿರ್ಮಾಣವಾಗಿದ್ದರಿಂದ ಬಸ್ ಓಡಾಟಕ್ಕೆ ಬ್ರೇಕ್ ಹಾಕಲಾಗಿದೆ.

    ಚಿತ್ತಾಪುರದಿಂದ ಶಹಾಬಾದ್ ಮೂಲಕ ಜೇವರ್ಗಿ ಹಾಗೂ ಶಹಾಬಾದ್ ನಿಲ್ದಾಣದಿಂದ ಜೇವರ್ಗಿಗೆ ಪ್ರತಿನಿತ್ಯ ಸುಮಾರು ೨೫ ಟ್ರಿಪ್ ಬಸ್ ಓಡಾಡುತ್ತಿದ್ದವು. ಆದರೆ ಎರಡು ದಿನಗಳಿಂದ ಸಂಚಾರ ನಿಲ್ಲಿಸಲಾಗಿದೆ. ದೊಡ್ಡ ತಗ್ಗುಗಳ ಮಧ್ಯೆ ಬಸ್ ಓಡಿಸುವುದು ಸಾವಿನ ದಾರಿಯಲ್ಲಿ ಹೋದಂತಾಗುತ್ತದೆ. ಅಲ್ಲದೆ ಬಸ್‌ನ ಯಾವುದೇ ಭಾಗಕ್ಕೆ ಹಾನಿಯಾದರೆ ಚಾಲಕನೇ ನಷ್ಟ ಭರಿಸಬೇಕು ಎಂಬ ನಿಯಮದಿಂದ ಹಾಳಾದ ರಸ್ತೆಯಲ್ಲಿ ಬಸ್ ಓಡಿಸಲು ಸಾಧ್ಯವಾಗುತ್ತಿಲ್ಲ ಎಂದು ಚಾಲಕರು ಮೇಲಧಿಕಾರಿಗಳಿಗೆ ತಿಳಿಸಿದ್ದರು. ಇದನ್ನು ಅರಿತ ಚಿತ್ತಾಪುರ ಡಿಪೋ ಅಧಿಕಾರಿಗಳು ಲೋಕೋಪಯೋಗಿ ಇಲಾಖೆ, ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಿದ್ದರಿಂದ ಜನರು ಪರದಾಡುತ್ತಿದ್ದಾರೆ. ಶಾಲಾ-ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ತಿರುಗಾಡಲು ಖಾಸಗಿ ವಾಹನಗಳನ್ನು ಅವಲಂಬಿಸುವ ಸ್ಥಿತಿ ಸೃಷ್ಟಿಯಾಗಿದೆ.
    ಈಗಲಾದರೂ ಸಂಬಂಧಿತರು ಗಮನಹರಿಸಿ ಜನರ ಸಮಸ್ಯೆಗೆ ಸ್ಪಂದಿಸಬೇಕು. ಕೂಡಲೇ ಹೊಸ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು. ಅಲ್ಲಿವರೆಗೂ ಬಸ್ ಸಂಚಾರಕ್ಕೆ ಅನುವು ಆಗುವಂತೆ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಬೇಕು ಎಂಬುದು ಸ್ಥಳೀಯರ ಒಕ್ಕೊರಲ ಒತ್ತಾಯವಾಗಿದೆ.

    ಒಂದೂವರೆ ಅಡಿ ಆಳದ ಗುಂಡಿಗಳು: ಶಹಾಬಾದ್‌ನ ವಾಡಿ ಕ್ರಾಸ್‌ನಿಂದ ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯ ಶಹಾಬಾದ್ ಕ್ರಾಸ್‌ವರೆಗಿನ ಸುಮಾರು ೨೦ ಕಿಮೀ ರಸ್ತೆ ಸಂಪೂರ್ಣ ಹಾಳಾಗಿದೆ. ಒಂದರಿಂದ ಒಂದೂವರೆ ಅಡಿ ಆಳದ ಗುಂಡಿಗಳು ಬಿದ್ದಿವೆ. ಮಳೆ ಬಂದಾಗAತೂ ಎಷ್ಟು ತಗ್ಗುಗಳಿವೆ ಎಂಬುದೇ ಗೊತ್ತಾಗುವುದಿಲ್ಲ. ಹೀಗಾಗಿ ಹೆಚ್ಚು ಅಪಘಾತ ಸಂಭವಿಸುತ್ತಿವೆ. ವಾಡಿ ಕ್ರಾಸ್‌ನಿಂದ ತೊನಸನಳ್ಳಿ (ಎಸ್) ಗ್ರಾಮದವರೆಗೆ ಸುಮಾರು ೧೦ ಕಿಮೀ ರಸ್ತೆ ಚಿತ್ತಾಪುರ ಲೋಕೋಪಯೋಗಿ ಹಾಗೂ ತೊನಸನಳ್ಳಿ (ಎಸ್)ಯಿಂದ ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿವರೆಗಿನ ಸುಮಾರು ೧೦ ಕಿಮೀ ರಸ್ತೆ ಕಲಬುರಗಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುತ್ತದೆ. ೨೦೨೧-೨೨ರಲ್ಲಿ ಲೋಕೋಪಯೋಗಿ ಇಲಾಖೆಯಿಂದ ಡಿಎಂಎಫ್ ಅನುದಾನದ ೧.೧೨ ಕೋಟಿ ರೂ. ವೆಚ್ಚದಲ್ಲಿ ೨.೨ ಕಿಮೀ (ಮರಗೋಳ ಕ್ರಾಸ್‌ನಿಂದ ತೊನಸನಳ್ಳಿ-ಎಸ್) ರಸ್ತೆ ಅಗಲೀಕರಣ ಮತ್ತು ಸುಧಾರಣೆ ಮಾಡಲಾಗಿದೆ. ಆದರೆ ಕಳಪೆ ಕಾಮಗಾರಿಯಾಗಿದ್ದರಿಂದ ಒಂದೇ ವಾರದಲ್ಲಿ ರೋಡ್ ಕಿತ್ತು ಹೋಗಿದೆ.

    ಸಮಸ್ಯೆಗೆ ಸ್ಪಂದಿಸದ ಶಾಸಕರು: ಶಹಾಬಾದ್‌ನ ವಾಡಿ ಕ್ರಾಸ್‌ನಿಂದ ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ೨೦ ಕಿಮೀ ರಸ್ತೆ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹಾಗೂ ಅಫಜಲಪುರದ ಶಾಸಕ ಎಂ.ವೈ. ಪಾಟೀಲ್ ವ್ಯಾಪ್ತಿಗೆ ಬರುತ್ತದೆ. ಆದರೆ ರಸ್ತೆ ಹಾಳಾಗಿ ಬಸ್ ಸಂಚಾರ ಬಂದ್ ಆಗಿದ್ದರೂ ಯಾರೊಬ್ಬರೂ ಗಮನಹರಿಸಿಲ್ಲ. ಸ್ಥಳಕ್ಕೆ ಭೇಟಿ ನೀಡುವ ಗೋಜಿಗೂ ಹೋಗಿಲ್ಲ. ಸ್ಥಳೀಯರು ಇಬ್ಬರು ಶಾಸಕರನ್ನು ಸಂಪರ್ಕಿಸಿದ್ದು, ರಸ್ತೆ ನಿರ್ಮಾಣಕ್ಕೆ ಕೆಕೆಆರ್‌ಡಿಬಿಯಿಂದ ೮ ಕೋಟಿ ಅನುದಾನ ಬರಬೇಕಿದೆ. ಬಂದ ಬಳಿಕ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದ್ದಾರೆ ಎಂದು ಹೇಳುತ್ತಿದ್ದಾರೆ.

    ಶಹಾಬಾದ್ ಕ್ರಾಸ್‌ನಿಂದ ತೊನಸನಳ್ಳಿ (ಎಸ್) ವ್ಯಾಪ್ತಿವರೆಗಿನ ರಸ್ತೆಗೆ ಈಗಾಗಲೇ ಮುರುಮ್ ಹಾಕಿ ಸರಿಪಡಿಸಲಾಗಿದೆ. ಅಲ್ಲಿವರೆಗೂ ಬಸ್‌ಗಳು ಹೋಗಬಹುದು. ಮುಂದಿನ ಭಾಗ ನಮ್ಮ ವ್ಯಾಪ್ತಿಗೆ ಬರುವದಿಲ್ಲ.
    | ಬನದೇಶ ಇಲಕಲ್ ಜೆಇ ಪಿಡಬ್ಲ್ಯುಡಿ ಚಿತ್ತಾಪುರ

    ನಾನು ಖುದ್ದು ಎರಡು ಬಾರಿ ಈ ರಸ್ತೆ ಪರಿಶೀಲನೆ ಮಾಡಿದ್ದು, ತಗ್ಗುಗಳಿಂದಾಗಿ ಎದುರಿನಿಂದ ಯಾವುದೇ ಭಾರಿ ವಾಹನ ಬಂದರೆ ಬಸ್ ಪಲ್ಟಿಯಾಗುವ ಆತಂಕವೇ ಹೆಚ್ಚು. ರಸ್ತೆಗೆ ಕನಿಷ್ಠ ಮರುಮ್, ಘರ್ಚು ಹಾಕಿ ತಗ್ಗುಗಳನ್ನು ತುಂಬಿದ್ದಲ್ಲಿ ಬಸ್ ಓಡಿಸಲು ಸಿದ್ಧ.
    | ಬಿ.ಬಿ.ಚತ್ವಾಡಗಿ ಡಿಪೋ ಮ್ಯಾನೇಜರ್, ಚಿತ್ತಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts