More

    ಸದನದ ರೂಟ್ ತಪ್ಪಿಸಿದ ಬಸ್ ಸಂಚಾರ: ವಿರೋಧ ಪಕ್ಷಗಳ ಧರಣಿ, ಸಚಿವರ ಕ್ಷಮೆಗೆ ಪಟ್ಟು; ಸ್ಪೀಕರ್ ಕಚೇರಿಯಲ್ಲಿ ರಾಜೀ, ಮತ್ತೆ ಸದನ

    ಬೆಂಗಳೂರು: ಕಾಂಗ್ರೆಸ್ ಶಾಸಕರೊಬ್ಬರ ಬಗ್ಗೆ ಸಚಿವರಾದ ಗೋವಿಂದ ಕಾರಜೋಳ ಆಕ್ರೋಶದಲ್ಲಿ ಬಳಸಿದ ಭಾಷೆ, ವಿಧಾನಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಸಚಿವರು ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದ ವಿರೋಧ ಪಕ್ಷ ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ನಡೆಸಿದ್ದರಿಂದ ಸದನವನ್ನು ಮುಂದೂಡಿದ ಘಟನೆಯೂ ನಡೆಯಿತು. ಮತ್ತೆ ಸದನ ಸಮಾವೇಶಗೊಂಡ ಸಂದರ್ಭದಲ್ಲಿ ಶಾಸಕಿ ಅಂಜಲಿ ನಿಂಬಾಳ್ಕರ್ ಅವರನ್ನು ಸದನದಿಂದ ಅಮಾನತು ಮಾಡಬೇಕು ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಆಗ್ರಹಿಸಿದ್ದರಿಂದ ಮತ್ತೆ ಕೋಲಾಹಲಕ್ಕೆ ಕಾರಣವಾಗಿದ್ದಲ್ಲದೆ, ಸದನವನ್ನು 2ನೇ ಬಾರಿ ಮುಂದೂಡಲಾಯಿತು.

    ಸಭಾಧ್ಯಕ್ಷರ ಕಚೇರಿಯಲ್ಲಿ ನಡೆದ ರಾಜೀ ಸಂಧಾನ ಬಳಿಕ ಸಮಾವೇಶಗೊಂಡ ಸದನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪರಸ್ಪರ ಸೌಹಾರ್ದಯುತ ನಡವಳಿಕೆ ಮಂತ್ರವನ್ನು ಪಠಿಸಿದ್ದಲ್ಲದೆ, ಕಡತದಲ್ಲಿರುವ ಆಕ್ಷೇಪಾರ್ಹ ಮಾತುಗಳನ್ನು ತೆಗೆಯಲು ನಿರ್ಣಯಿಸಿದ ಬಳಿಕ ಸದನ ಸುಗಮವಾಯಿತು.

    ನಡೆದಿದ್ದು ಏನು?: ಕೋವಿಡ್ ಬಳಿಕ ಬಸ್ ಸಂಚಾರದಲ್ಲಿ ವ್ಯತ್ಯಾಸವಾಗಿದ್ದು, ಈಗಲೂ ಗ್ರಾಮೀಣ ಭಾಗಕ್ಕೆ ಸರಿಯಾಗಿ ಬಸ್​ಗಳು ಬರುತ್ತಿಲ್ಲ ಎಂದು ಶಾಸಕ ಸಿದ್ದು ಸವದಿ ಪ್ರಸ್ತಾಪಿಸಿದ್ದಕ್ಕೆ ಇಡೀ ಸದನ ಪಕ್ಷಾತೀತವಾಗಿ ಧ್ವನಿಗೂಡಿಸಿತು. ಕೋವಿಡ್ ಸಂದರ್ಭದಲ್ಲಿ ನಿಲ್ಲಿಸಿದ್ದ ಬಸ್​ಗಳಲ್ಲಿ ಇನ್ನೂ ಶೇ.40 ಬಸ್​ಗಳು ಸಂಚಾರ ಸ್ಥಗಿತ ಮಾಡಿವೆ. ಇದರಿಂದ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗಲು ತೊಂದರೆಯಾಗಿದೆ. ಜನ ಸಾಮಾನ್ಯರೂ ಕೂಡ ಬಸ್ ಸಂಪರ್ಕವಿಲ್ಲದೆ ಕಷ್ಟದಲ್ಲಿದ್ದಾರೆ. ಆದ್ದರಿಂದ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಶಾಸಕರಾದ ಸಿ.ಎನ್.ಬಾಲಕೃಷ್ಣ, ಕೆ.ಎಂ.ಶಿವಲಿಂಗೇಗೌಡ, ರಂಗನಾಥ್, ಅಂಜಲಿ ನಿಂಬಾಳ್ಕರ್, ಕೃಷ್ಣ ಭೈರೇಗೌಡ ಮತ್ತಿತರರು ಆಗ್ರಹಿಸಿ ಸಭಾಧ್ಯಕ್ಷರ ಮುಂದೆ ಧರಣಿಗಿಳಿದರು. ಸಚಿವರ ಉತ್ತರಕ್ಕೆ ತೃಪ್ತರಾಗದ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಪೀಠದ ಮುಂದೆ ಧರಣಿ ನಡೆಸಿ ‘ಬೇಕೆ ಬೇಕು ಬಸ್ ಬೇಕು’ ಎಂದು ಘೋಷಣೆಗಳನ್ನು ಮೊಳಗಿಸಿದರು.

    ಕ್ಷಮೆಗೆ ಒತ್ತಾಯಿಸಿ ಧರಣಿ: ಚೋರ್ ಚೋರ್ ಬಿಜೆಪಿ ಚೋರ್, ರೌಡಿ ಸರ್ಕಾರ ಎಂದೆಲ್ಲ ವಿರೋಧ ಪಕ್ಷದವರು ಘೋಷಣೆ ಕೂಗಿದರೆ, ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಚೋರ್ ಎಂದು ಬಿಜೆಪಿ ಕೂಡ ಘೋಷಣೆ ಕೂಗಲಾರಂಭಿಸಿದ್ದರಿಂದ ಒಂದು ಹಂತದಲ್ಲಿ ಯಾರು ಏನು ಮಾತನಾಡುತ್ತಿದ್ದಾರೆ ಎನ್ನುವುದು ತಿಳಿಯದಷ್ಟು ಸಂಘರ್ಷದ ವಾತಾವರಣ ನಿರ್ವಣವಾಯಿತು. ಮುಖ್ಯಮಂತ್ರಿಗಳು ಸದನಕ್ಕೆ ಬಂದರೂ ಸಮಸ್ಯೆ ಮಾತ್ರ ಬಗೆಹರಿಯಲಿಲ್ಲ.

    ಸಿದ್ದು ಆಕ್ಷೇಪಕ್ಕೆ ಕಾವೇರಿದ ಸದನ: ಬಸ್​ಗಳ ಗಲಾಟೆ ನಡೆಯುತ್ತಿದ್ದ ಸಂದರ್ಭದಲ್ಲಿ ಸದನಕ್ಕೆ ಸಿದ್ದರಾಮಯ್ಯ ಎಂಟ್ರಿಕೊಟ್ಟರು. ಆಗ ಪೀಠದ ಬಳಿ ಕಾಂಗ್ರೆಸ್​ನ ರಂಗನಾಥ್ ಮಾತ್ರ ಇದ್ದರು. ಪ್ರಶ್ನೋತ್ತರ ಮುಂದುವರಿಸಲು ಪೀಠದಲ್ಲಿದ್ದ ಕುಮಾರ್ ಬಂಗಾರಪ್ಪ ಮುಂದಾದ ಸಂದರ್ಭದಲ್ಲಿ ಧರಣಿಯಲ್ಲಿದ್ದ ರಂಗನಾಥ್ ಮೇಲೆ ಸಚಿವರಾದ ಗೋವಿಂದ ಕಾರಜೋಳ ಸದನ ಮುಂದುವರಿದಿರುವ ಸಂದರ್ಭದಲ್ಲಿ ಹೀಗೆ ಧರಣಿ ನಡೆಸಿದರೆ ಹೇಗೆ? ನಡಿ ಆಚೆಗೆ ಎಂದು ಅವರತ್ತ ಕೈಬೆರಳು ತೋರಿಸಿ ಆಕ್ರೋಶ ವ್ಯಕ್ತಪಡಿಸಿದರು. ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಕೂಡ ಜೋರು ಧ್ವನಿಯಲ್ಲಿ ರೇಗಿದರು. ಇಬ್ಬರು ಸಚಿವರ ವರ್ತನೆಗೆ ಸಿದ್ದರಾಮಯ್ಯ ಆಕ್ಷೇಪಿಸಿದ್ದು ಸದನ ಇನ್ನಷ್ಟು ಕಾವೇರಲು ಕಾರಣವಾಯಿತು.

    ನಿಗಮಗಳ ಪ್ರತ್ಯೇಕ ಸಭೆ: ಸದನಕ್ಕೆ ಉತ್ತರಿಸಿದ ಸಾರಿಗೆ ಸಚಿವ ಶ್ರೀರಾಮುಲು, ಬಸ್​ಗಳ ಸಮಸ್ಯೆ ಏನೆಂದು ಸರ್ಕಾರಕ್ಕೆ ಅರ್ಥವಾಗಿದೆ. ಆದ್ದರಿಂದ ಪ್ರತಿ ನಿಗಮಗಳ ಜತೆಗೆ ಶಾಸಕರನ್ನು ಆಹ್ವಾನಿಸಿ ಸದನ ಮುಗಿಯುವುದರೊಳಗಾಗಿ ಸಭೆ ನಡೆಸಿ ನಿಮ್ಮ ಸಮ್ಮುಖದಲ್ಲಿಯೇ ಸಮಸ್ಯೆ ಬಗೆಹರಿಸುವುದಾಗಿ ಸಚಿವ ಶ್ರೀರಾಮುಲು ಭರವಸೆ ನೀಡಿದ ಬಳಿಕ ಸದಸ್ಯರು ಧರಣಿ ಹಿಂಪಡೆದು ತಮ್ಮ ಸ್ಥಾನಗಳಿಗೆ ತೆರಳಿದರು.

    ಅಂಜಲಿ ಅಮಾನತಿಗೆ ಪಟ್ಟು: ಮತ್ತೊಮ್ಮೆ ಸದನ ಸಮಾವೇಶಗೊಂಡಾಗಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಸರ್ಕಾರದ ನಿಲುವನ್ನು ಸಮರ್ಥಿಸಿಕೊಳ್ಳಲು ಮುಂದಾದರು. ನೀವು ಮಾತನಾಡುವುದಿದ್ದರೆ ನಿಮ್ಮ ಸ್ಥಾನಗಳಿಗೆ ತೆರಳಿ ಮಾತನಾಡಿ, ಧರಣಿಯಲ್ಲಿದ್ದು ಮಾತನಾಡಲು ಅವಕಾಶವಿಲ್ಲ ಎಂದು ಖಡಕ್ ಆಗಿ ಹೇಳಿದರೂ ಧರಣಿ ನಿರತರು ಕೇಳಲಿಲ್ಲ. ತಾವು ಉತ್ತರ ನೀಡುವ ಸಂದರ್ಭದಲ್ಲಿ ತಮ್ಮ ಮಾತಿಗೆ ಅಡ್ಡಿಪಡಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ ಶಾಸಕಿ ಅಂಜಲಿ ನಿಂಬಾಳ್ಕರ್ ಅಮಾನತಿಗೆ ಪಟ್ಟು ಹಿಡಿದಿದ್ದರಿಂದ ಬಿಕ್ಕಟ್ಟು ಇನ್ನಷ್ಟು ಉಲ್ಭಣಿಸಿ ಮತ್ತೆ ಸದನ ಮುಂದೂಡಲಾಯಿತು.

    ಯಡಿಯೂರಪ್ಪ ಸಲಹೆ, ಸಂಧಾನ: ಸದನದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕುಳಿತಿದ್ದಲ್ಲಿಗೆ ತೆರಳಿದ ಸಿಎಂ ಬೊಮ್ಮಾಯಿ ಮತ್ತು ಸಚಿವ ಜೆ.ಸಿ.ಮಾಧುಸ್ವಾಮಿ ಸಮಾಲೋಚನೆ ನಡೆಸಿದಾಗ ಸ್ಪೀಕರ್ ಸಮ್ಮುಖದಲ್ಲಿ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸುವಂತೆ ಸಲಹೆ ನೀಡಿದ ಬೆನ್ನಲ್ಲಿಯೇ ಸ್ಪೀಕರ್ ಕಚೇರಿಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಡುವೆ ರಾಜೀ ಸಂಧಾನ ನಡೆದು, ಸದನವನ್ನು ಒಮ್ಮತದಿಂದ ಸುಗಮವಾಗಿ ನಡೆಸಲು ನಿರ್ಧರಿಸಿದ ಬಳಿಕ ಕಗ್ಗಂಟಾಗಿದ್ದ ಸಮಸ್ಯೆ ಮಂಜಿನಂತೆ ಕರಗಿತು.

    ಎಲ್ಲರೂ ಕರೊನಾ ಲಸಿಕೆ ಮೂರನೇ ಡೋಸ್ ಪಡೆಯಬೇಕು; ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಶೀಘ್ರ ಬಿಡುಗಡೆ: ಸಚಿವ ಸುಧಾಕರ್

    ಉಂಗುರದಲ್ಲೇ ಸಿಂಹ-ಸಿಂಹಿಣಿ: ಹರಿಪ್ರಿಯಾಗೆ ವಸಿಷ್ಟ ಯಾಕಿಷ್ಟ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts