More

    ಎಳ್ಳು-ಬೆಲ್ಲಕ್ಕೆ ಹೆಚ್ಚಿದ ಬೇಡಿಕೆ

    ಚಿತ್ರದುರ್ಗ: ‘ಎಳ್ಳು-ಬೆಲ್ಲ, ಕುಂಬಳಕಾಯಿಯನ್ನು ಹಂಚಿ’ ಆಚರಿಸುವ ಸ್ನೇಹ-ಬಾಂಧವ್ಯದ ಸಂದೇಶ ಸಾರುವ ಕ್ಯಾಲೆಂಡರ್ ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿಯನ್ನ ಸಂಭ್ರಮದಿಂದ ಬರಮಾಡಿಕೊಳ್ಳಲು ನಗರ ಹಾಗೂ ಗ್ರಾಮೀಣ ಭಾಗದ ಜನ ಒಂದು ದಿನ ಮುಂಚಿತವಾಗಿ ಖರೀದಿ ಭರಾಟೆಯಲ್ಲಿ ಶನಿವಾರ ನಿರತರಾಗಿದ್ದರು. ಮಾರು ಕಟ್ಟೆಗಳಲ್ಲಿ ಜನಸಂದಣಿ ಹೆಚ್ಚಾಗಿ ಕಂಡುಬಂತು.

    ಹಬ್ಬದ ಅಂಗವಾಗಿ ಈಗಾಗಲೇ ನಗರದ ಮಾರುಕಟ್ಟೆಗಳಿಗೆ ರಾಶಿರಾಶಿ ಕಬ್ಬು, ಕುಂಬಳಕಾಯಿ, ಗೆಣಸು, ಕಡಲೆಕಾಯಿ, ಅವರೆಕಾಯಿ ಆಮದಾಗಿದೆ. ಅಂಗಡಿ ಮಳಿಗೆಗಳಲ್ಲಿ ಎಳ್ಳು-ಬೆಲ್ಲ, ಸಕ್ಕರೆ ಅಚ್ಚು ಮಾರಾಟ ಜೋರಾಗಿದೆ. ಬಿ.ಡಿ.ರಸ್ತೆ, ಸಂತೆಹೊಂಡ, ಮೆದೇಹಳ್ಳಿ ರಸ್ತೆ, ಆನೆಬಾಗಿಲು, ಎಪಿಎಂಸಿಯ ಹೂವಿನ ಮಾರುಕಟ್ಟೆಗಳಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ.

    ಕಳೆದೆರಡು ದಿನಗಳಿಂದ ಸಂತೆಹೊಂಡ ಮಾರುಕಟ್ಟೆ ಬಳಿ ಐದಾರು ಲೋಡ್ ಕಬ್ಬು ಮಂಡ್ಯ, ಹಾಸನ, ಕುರುಬರಹಳ್ಳಿ ಸೇರಿ ಇತರೆಡೆಗಳಿಂದ ಆಮದಾಗುತ್ತಿದೆ. ಗುಣಮಟ್ಟಕ್ಕೆ ತಕ್ಕಂತೆ ಪ್ರತಿ ಜಲ್ಲೆ 30ರಿಂದ 50 ರೂ.ವರೆಗೆ, ಪ್ರತಿ ಕೆ.ಜಿ.ಗೆ ಕಡಲೆಕಾಯಿ 80ರಿಂದ 100 ರೂ., ಅವರೆಕಾಯಿ 60-70 ರೂ., ಸೇಬು 120-130 ರೂ., ದಾಕ್ಷಿ 120 ರೂ., ಕಿತ್ತಳೆ 80 ರೂ., ದಾಳಿಂಬೆ 140-160, ಕುಂಬಳಕಾಯಿ 40 ರೂ., ಬಾಳೆಹಣ್ಣು 60 ರೂ.ನಂತೆ ಮಾರಾಟವಾಗುತ್ತಿದೆ.

    ಸಂಕ್ರಾಂತಿ ಹಬ್ಬದಲ್ಲಿ ನೆರೆ ಹೊರೆಯವರಿಗೆ, ಸಂಬಂಧಿಕರಿಗೆ, ಸ್ನೇಹಿತರಿಗೆ ಎಳ್ಳು-ಬೆಲ್ಲ ಹಂಚುವ ಪದ್ಧತಿ ಇದೆ. ಹೀಗಾಗಿ ಸಿದ್ಧ ಎಳ್ಳು-ಬೆಲ್ಲಕ್ಕೆ ಬೇಡಿಕೆ ಹೆಚ್ಚಿತ್ತು. ಪ್ರತಿ ಕೆ.ಜಿ.ಗೆ 220-260 ರೂ.ಗೆ ಮಾರಾಟವಾಗುತ್ತಿತ್ತು. ಮನೆಗಳಲ್ಲಿ ತಯಾರಿಸಿಕೊಳ್ಳುವವರು ಅಗತ್ಯ ವಸ್ತುಗಳನ್ನು ಪ್ರತ್ಯೇಕವಾಗಿ ಖರೀದಿಸಲು ಮುಂದಾದರು. ಇದರ ಜತೆಗೆ ವರ್ಣಮಯ ಸಕ್ಕರೆ ಅಚ್ಚು ಗ್ರಾಹಕರನ್ನು ಆಕರ್ಷಿಸಿದವು.

    ಮಡಕೆಗೆ ಬೇಡಿಕೆ
    ಗ್ರಾಮೀಣ ಸೊಗಡಿನ ಸಂಕ್ರಾಂತಿ ನಗರದಲ್ಲಿಯೂ ತನ್ನ ಹಿಂದಿನ ಸಂಪ್ರದಾಯ ಉಳಿಸಿಕೊಂಡು ಬಂದಿದೆ. ಹೀಗಾಗಿ ಹಿಂದಿನಂತೆಯೇ ಈ ಹಬ್ಬದಲ್ಲೂ ಹೊಸ ಮಡಕೆ ಖರೀದಿಸಿ ಒಲೆ ಹಚ್ಚಿ ಪೊಂಗಲ್ ತಯಾರಿಸುತ್ತಾರೆ. ಇದರಿಂದಾಗಿ ಮಡಕೆಗಳಿಗೂ ಮಾರುಕಟ್ಟೆಯಲ್ಲಿ ಕೊಂಚ ಬೇಡಿಕೆ ಕಂಡುಬಂತು. ಇದರ ಜತೆಗೆ ರಾಸುಗಳನ್ನು ಸಿಂಗರಿಸಲು ವಿವಿಧ ವಸ್ತುಗಳನ್ನು ಖರೀದಿಸಲು ರೈತರು ಮುಂದಾದರು.

    ಪುಷ್ಪಗಳ ದರ ಏರಿಕೆ
    ಪ್ರತಿ ಹಬ್ಬದಲ್ಲಿಯೂ ಸಾಮಾನ್ಯವಾಗಿ ಪುಷ್ಪಗಳ ದರ ಏರಿಕೆ ಆಗುತ್ತದೆ. ಅಲ್ಲದೆ, ಸಂಕ್ರಾಂತಿ ಹಬ್ಬದಲ್ಲಿ ಹಲವು ದೇಗುಲಗಳಲ್ಲಿ ವಿಶೇಷ ಅಲಂಕಾರ ಸೇವೆ ನೆರವೇರಿಸುವ ಕಾರಣ ಹೂವಿಗೆ ಬೇಡಿಕೆ ಜತೆ ದರ ಏರಿಕೆ ಕೂಡ ಕಂಡುಬಂದಿತು.

    ಎಪಿಎಂಸಿ ಸಗಟು ಹೂವಿನ ಮಾರುಕಟ್ಟೆಯಲ್ಲಿ ಎಲ್ಲಾ ವರ್ಣದ ಗುಣಮಟ್ಟದ ಸೇವಂತಿ 12-15 ಮಾರಿಗೆ ತಲಾ 1ಸಾವಿರ ರೂ.,ಕನಕಾಂಬರ 10 ಮಾರಿಗೆ 1ಸಾವಿರ ರೂ., ಬಟನ್ಸ್ ಕೆ.ಜಿ.ಗೆ 250-300 ರೂ., ಖಾಸಗಿ ಬಸ್ ನಿಲ್ದಾಣ ಸಮೀಪದ ಮಾರುಕಟ್ಟೆಯಲ್ಲಿ ದೊಡ್ಡ ಹಾರಗಳನ್ನು 1 ಸಾವಿರದಿಂದ 20 ಸಾವಿರ ರೂ.ವರೆಗೂ ಅಳತೆ ಮತ್ತು ಗಾತ್ರಕ್ಕೆ ತಕ್ಕಂತೆ ತಯಾರಿಸಲಾಗಿತ್ತು.

    ದೇಗುಲಗಳಲ್ಲಿ ಇಂದು ವಿಶೇಷ ಪೂಜೆ
    ಕೋಟೆನಗರಿಯ ನವದುರ್ಗಿಯರಾದ ಏಕನಾಥೇಶ್ವರಿ, ಬರಗೇರಮ್ಮ, ಉಚ್ಚಂಗಿಯಲ್ಲಮ್ಮ, ಕಣಿವೆಮಾರಮ್ಮ, ತ್ರಿಪುರಸುಂದರಿ ತಿಪ್ಪನಘಟ್ಟಮ್ಮ, ಗೌರಸಂದ್ರ ಮಾರಮ್ಮ, ಚೌಡೇಶ್ವರಿ, ಕುಕ್ಕವಾಡೇಶ್ವರಿ, ಬನ್ನಿ ಮಹಾಕಾಳಮ್ಮ ಸೇರಿ ದುರ್ಗಾಂಬಿಕಾ, ಮಲೆನಾಡು ಚೌಡೇಶ್ವರಿ, ಕೊಲ್ಲಾಪುರದ ಮಹಾಲಕ್ಷ್ಮೀ, ಅಂತರಘಟ್ಟಮ್ಮ, ಮಾಸ್ತಮ್ಮ, ಬುಡ್ಡಮ್ಮ, ಕಾಳಿಕಮಠೇಶ್ವರಿ, ಬೆಟ್ಟದ ಗಣಪತಿ, ಮೇಲುದುರ್ಗದ ಹಿಡಂಭೇಶ್ವರ ಸೇರಿ ಹಲವು ದೇಗುಲಗಳಲ್ಲಿ ವಿಶೇಷ ಅಲಂಕಾರದ ಜತೆ ಪೂಜೆ ನೆರವೇರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts