More

    ಪುತ್ತೂರಲ್ಲಿ ಪ್ರತ್ಯೇಕ ಪ್ರಯೋಗಾಲಯ

    ಪುತ್ತೂರು: ಮಂಗಳೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿರುವ ಸ್ವಾಬ್ ಟೆಸ್ಟ್ ಲ್ಯಾಬ್‌ಗೆ ಕಾರ್ಯಭಾರ ಹೆಚ್ಚಳವಾದ ಪರಿಣಾಮ ಸುಳ್ಯ ಕೆವಿಜಿ ಮಹಾವಿದ್ಯಾಲಯದಲ್ಲಿ ತಾತ್ಕಾಲಿಕ ಲ್ಯಾಬ್ ಸ್ಥಾಪಿಸಿ ಸ್ವಾಬ್ ಟೆಸ್ಟ್ ಸೇರಿದಂತೆ ಇತರೆ ಸಾಂಕ್ರಾಮಿಕ ರೋಗ ಪತ್ತೆಗೆ ವ್ಯವಸ್ಥೆ ಮಾಡಲಾಗಿತ್ತು. ಈ ಮಧ್ಯೆ ಪುತ್ತೂರು ಉಪವಿಭಾಗಕ್ಕೆ ಪ್ರತ್ಯೇಕ ಪ್ರಯೋಗಾಲಯ ಬೇಡಿಕೆ ವ್ಯಕ್ತವಾಗಿದ್ದರಿಂದ ಸಾಮರ್ಥ್ಯ ಸೌಧ ಕಟ್ಟಡಕ್ಕೆ ಸುಳ್ಯ ಕೆವಿಜಿ ಮಹಾವಿದ್ಯಾಲಯದ ತಾತ್ಕಾಲಿಕ ಲ್ಯಾಬನ್ನು ವರ್ಗಾಯಿಸಿ ಪೂರ್ಣ ಪ್ರಮಾಣದ ಪ್ರಯೋಗಾಲಯ ನಿರ್ಮಿಸಲು ಯೋಜನೆ ಅಂತಿಮಗೊಂಡಿದೆ.

    ದ.ಕ. ಜಿಲ್ಲಾಡಳಿತ ಜಿಲ್ಲೆಯ 2ನೇ ಪರೀಕ್ಷಾ ಪ್ರಯೋಗಾಲಯವನ್ನು ಪುತ್ತೂರಿನಲ್ಲಿ ಸ್ಥಾಪಿಸಲು ನಿರ್ಧರಿಸಿದ್ದರಿಂದ ಮುಂದಿನ ದಿನಗಳಲ್ಲಿ ಡೆಂೆ, ಮಲೇರಿಯಾ, ಕೋವಿಡ್ 19 ಸೇರಿದಂತೆ ಸಾಕ್ರಾಮಿಕ ರೋಗ ಪತ್ತೆ ಕಾರ್ಯಕ್ಕೆ ವೇಗ ಪಡೆಯಲಿದೆ. ಈ ಪ್ರಯೋಗಾಲಯ ನಿರ್ಮಾಣ ಕಾರ್ಯ ವ್ಯವಸ್ಥಿತವಾಗಿ ಆರಂಭಗೊಂಡಿದ್ದು, ಮುಂದಿನ 6 ತಿಂಗಳೊಳಗೆ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ.

    48 ಗಂಟೆಯಲ್ಲಿ ವರದಿ: ಜಿಲ್ಲಾ ಕೇಂದ್ರದ ಲ್ಯಾಬ್ ಮೇಲೆ ಬೀಳುವ ಒತ್ತಡ ತಪ್ಪಿಸಲು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆಯಂತೆ 3 ತಿಂಗಳ ಹಿಂದೆ ಸುಳ್ಯ ಕೆ.ವಿ.ಜಿ. ಮಹಾವಿದ್ಯಾಲಯದ ಮೂಲಸೌಕರ್ಯ ವ್ಯವಸ್ಥೆ ಬಳಸಿಕೊಂಡು ಲ್ಯಾಬ್ ಆರಂಭಿಸಲಾಗಿತ್ತು. ಪುತ್ತೂರು, ಕಡಬ, ಸುಳ್ಯ ತಾಲೂಕುಗಳ ಪರೀಕ್ಷಾ ಮಾದರಿಗಳನ್ನು ಅಲ್ಲಿಗೆ ಕೊಂಡೊಯ್ದು ಪರೀಕ್ಷಿಸಿ ವರದಿ ಪಡೆಯಲಾಗುತ್ತಿತ್ತು. ಒತ್ತಡದ ಹಿನ್ನೆಲೆಯಲ್ಲಿ ಮಾದರಿ ಪರೀಕ್ಷಾ ವರದಿ ಬರಲು 3,4 ದಿನ ತಗುಲುತ್ತಿದ್ದು, ಈ ಪರ್ಯಾಯ ವ್ಯವಸ್ಥೆಯಿಂದಾಗಿ 48 ಗಂಟೆಯಲ್ಲಿ ವರದಿ ಪಡೆಯಲು ಸಾಧ್ಯವಾಗಿತ್ತು.

    1 ಕೋಟಿ ರೂಪಾಯಿ ವೆಚ್ಚ: ಪುತ್ತೂರು ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ಸುಳ್ಯ, ಪುತ್ತೂರು, ಕಡಬ ಮತ್ತು ಬೆಳ್ತಂಗಡಿ ತಾಲೂಕುಗಳಿಗೆ ಸಂಬಂಧಪಟ್ಟು ಸುಸಜ್ಜಿತ ಲ್ಯಾಬ್ ಪುತ್ತೂರಿನಲ್ಲಿ ತೆರೆಯಲಿದೆ. ಕೆ.ವಿ.ಜಿ. ಮಹಾವಿದ್ಯಾಲಯದಲ್ಲಿ ಸ್ಥಾಪಿಸಲಾದ ಯಂತ್ರೋಪಕರಣಗಳನ್ನು ಪುತ್ತೂರಿಗೆ ಸ್ಥಳಾಂತರಿಸಲಾಗುತ್ತದೆ. ಪುತ್ತೂರು ಲ್ಯಾಬ್ ನಿರ್ಮಾಣದ ಒಟ್ಟು ವೆಚ್ಚ ಸುಮಾರು 1 ಕೋಟಿ ರೂ.ಗಳಾಗಿದ್ದು, ಇದನ್ನು ಎಸ್‌ಡಿಆರ್‌ಎಫ್‌ನಿಂದ ಭರಿಸಲಾಗುತ್ತದೆ. ನಂತರ ಜಿಲ್ಲೆಯಲ್ಲಿ 2 ಲ್ಯಾಬ್ ಇರಲಿದ್ದು, ಬಂಟ್ವಾಳ, ಮೂಡುಬಿದಿರೆ ಮತ್ತು ಮಂಗಳೂರು ಭಾಗದ ಮಾದರಿ ಪರೀಕ್ಷೆಗೆ ಜಿಲ್ಲಾ ಕೇಂದ್ರದ ಲ್ಯಾಬ್ ಬಳಸಲಾಗುತ್ತದೆ ಎಂದು ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

    ಪುತ್ತೂರು ನಗರದಲ್ಲಿ 2, 3 ಕಡೆ ಲ್ಯಾಬ್‌ಗಾಗಿ ಸ್ಥಳಾವಕಾಶ ಪರಿಶೋಧನೆ ಮಾಡಲಾಗಿತ್ತು. ಅಂತಿಮವಾಗಿ ತಾಪಂ ಕಟ್ಟಡದ ಪಕ್ಕದಲ್ಲಿರುವ ಸಾಮರ್ಥ್ಯಸೌಧ ಕಟ್ಟಡದ ಮೊದಲ ಮಹಡಿಯಲ್ಲಿ ಲ್ಯಾಬ್ ಆರಂಭಿಸಲು ನಿರ್ಧರಿಸಲಾಗಿದೆ. ಮುಂದಿನ 6 ತಿಂಗಳ ಅವಧಿಯಲ್ಲಿ ಜಿಲ್ಲಾ ಉಪವಿಭಾಗಕ್ಕೆ ಪ್ರತ್ಯೇಕ ಪ್ರಯೋಗಾಲಯ ಕಾರ್ಯಾರಂಭಗೊಳ್ಳಲಿದೆ.
    – ಸಂಜೀವ ಮಠಂದೂರು, ಪುತ್ತೂರು ಶಾಸಕ

    ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾಡಲಾದ ಕೋವಿಡ್ ಶಂಕಿತರ ಗಂಟಲುದ್ರವ ಪರೀಕ್ಷೆಯ ಮಾದರಿಯನ್ನು ಪ್ರತಿದಿನ ಸಂಗ್ರಹಿಸಿ ಆರೋಗ್ಯ ಇಲಾಖೆಯ ವಾಹನಗಳಲ್ಲಿ ಲ್ಯಾಬ್‌ಗೆ ಒಯ್ಯಲಾಗುತ್ತದೆ. ಪ್ರಸ್ತುತ ಈ ಭಾಗದ ಮಾದರಿಗಳನ್ನು ಸುಳ್ಯಕ್ಕೆ ಕಳುಹಿಸಲಾಗುತ್ತಿದೆ. ಮಲೇರಿಯಾ ಪುತ್ತೂರಲ್ಲೇ ಪರಿಕ್ಷೆ ವರದಿ ನೀಡಲಾಗುತ್ತದೆ, ಡೆಂೆ ಪರೀಕ್ಷೆ ಪುತ್ತೂರಲ್ಲಿ ನಡೆಸಿ ವರದಿಯನ್ನು ಮಂಗಳೂರಿನಿಂದ ಪಡೆಯಲಾಗುತ್ತದೆ.
    – ಡಾ. ಆಶಾ ಪುತ್ತೂರಾಯ, ಪುತ್ತೂರು ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts