More

    ಜನಪರ ಹೊಣೆಗಾರಿಕೆ ಹೊತ್ತ ಪತ್ರಿಕೋದ್ಯಮದ ಸಂಕಲ್ಪ; ಮುದ್ರಣ ಮಾಧ್ಯಮದ ಪ್ರಮುಖರ ಆಶಯ

    ಶಿರಸಿ: ಕನ್ನಡದ ಮೊದಲ ರಾಜಧಾನಿ ಬನವಾಸಿಯಲ್ಲಿ ಎರಡು ವರ್ಷಗಳ ಬಳಿಕ ಆಯೋಜಿಸಿದ್ದ ಕದಂಬೋತ್ಸವ ಭಾನುವಾರ ಸಮಾರೋಪಗೊಂಡಿತು. ಎರಡೂ ದಿನ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಸಾವಿರಾರು ಜನ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಿದರು. ಕದಂಬೋತ್ಸವದ ಅಂಗವಾಗಿ ಆಯೋಜಿಸಿದ್ದ ‘ಮುದ್ರಣ ಮಾಧ್ಯಮ: ಇಂದು- ನಾಳೆ’ ಕುರಿತ ವಿಚಾರಗೋಷ್ಠಿಯಲ್ಲಿ ಪ್ರಸ್ತುತ ಮುದ್ರಣ ಮಾಧ್ಯಮದ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕು. ಟಿವಿ ಮಾಧ್ಯಮದ ನಡುವೆಯೂ ಪತ್ರಿಕೆಗಳ ಓದುಗರ ಸಂಖ್ಯೆ ಕ್ಷೀಣಿಸಿಲ್ಲ. ರಾಜ್ಯ, ಪ್ರಾದೇಶಿಕ, ಸ್ಥಳೀಯ ಪತ್ರಿಕೆಗಳು ಸವಾಲು ಎದುರಿಸುತ್ತಿವೆ ವಿನಃ ಸಮಸ್ಯೆಯನ್ನಲ್ಲ. ಹಾಗಾಗಿ ಅದನ್ನು ಮೀರುವ ಕಾರ್ಯವಾಗಬೇಕೆಂಬ ಆಶಯ ವ್ಯಕ್ತವಾಯಿತು.

    ವಿಜಯವಾಣಿ ಸಂಪಾದಕ ಕೆ.ಎನ್.ಚನ್ನೇಗೌಡ ಮಾತನಾಡಿ, ಬೇಕಾದುದನ್ನು ಜನರಿಗೆ ಕೊಟ್ಟಾಗ ಮಾತ್ರ ಒಂದು ಪತ್ರಿಕೆ ಜನಪರ ಪತ್ರಿಕೆಯಾಗಲು ಸಾಧ್ಯ. ಜಿಲ್ಲೆಗೆ, ಕ್ಷೇತ್ರಕ್ಕೆ ಸೀಮಿತವಾಗದೇ ಎಲ್ಲ ಸುದ್ದಿಗಳನ್ನು ರಾಜ್ಯ ಮಟ್ಟದ ಪತ್ರಿಕೆಗಳು ಒಳಗೊಳ್ಳಬೇಕು. ಸಾಮಾನ್ಯ ಓದುಗನು ಹಣ ಕೊಟ್ಟು ಪತ್ರಿಕೆ ಖರೀದಿಸಿದಾಗ ಆತನಿಗೆ ಚಿಕ್ಕಪುಟ್ಟ ಮಾಹಿತಿಗಳೂ ಲಭ್ಯವಾಗಬೇಕು. ಅಂಥ ಮಾಹಿತಿ ನೀಡುವ ಪತ್ರಿಕೆ ಜನಪರ ಪತ್ರಿಕೆ ಆಗುತ್ತದೆ. ಮುದ್ರಣ ಮಾಧ್ಯಮ ಇಂದು ಸವಾಲು ಎದುರಿಸುತ್ತಿದೆ. ಸರ್ಕಾರಗಳು ಜಾಹೀರಾತು ಕೊಡುತ್ತಿಲ್ಲ. ಜನರು ಕೊಂಡು ಓದುತ್ತಿಲ್ಲ. ಆಂಧ್ರಪ್ರದೇಶ, ಕೇರಳ ರಾಜ್ಯದಲ್ಲಿ ಮುದ್ರಣ ಮಾಧ್ಯಮ ಇಂದಿಗೂ ಸಾಕಷ್ಟು ಬಲಿಷ್ಠವಾಗಿದೆ. ಅಲ್ಲಿನ ಓದುಗರಂತೆ ಕನ್ನಡಿಗರು ಕೂಡ ಕನ್ನಡ ಪತ್ರಿಕೆ ಕೊಂಡು ಓದಬೇಕು. ಹಾಗಾದಾಗ ಮುದ್ರಣ ಮಾಧ್ಯಮ ಬೆಳೆಯುತ್ತದೆ ಎಂದರು.

    ಹಿರಿಯ ಪತ್ರಕರ್ತ ರವೀಂದ್ರ ಭಟ್ ಮಾತನಾಡಿ, ಮುದ್ರಣ ಮಾಧ್ಯಮ ಇಂದಿಗೂ ವಿಶ್ವಾಸಾರ್ಹತೆ ಇಟ್ಟುಕೊಂಡಿದೆ. ಆದರೂ ಮಾಧ್ಯಮದವರು ತಪ್ಪು ಮಾಡಿದಾಗ ಒಪ್ಪಿಕೊಳ್ಳುವ ಗುಣ ಇರಬೇಕು. ಓದುಗರ ಜ್ಞಾನ ಬರೆಯುವವನಿಗಿಂತ ಹೆಚ್ಚು ಎಂದು ಅರಿಯಬೇಕು ಎಂದರು.

    ಹಿರಿಯ ಪತ್ರಕರ್ತ ರವಿ ಹೆಗಡೆ, ಟಿವಿ ಮಾಧ್ಯಮಕ್ಕೆ ಪೈಪೋಟಿ ನೀಡಲು ಡಿಜಿಟಲ್ ಮಾಧ್ಯಮಗಳು ಸಮರ್ಥವಾಗಿವೆ. ವರ್ತಮಾನದ ಡಿಜಿಟಲ್ ಮಾಧ್ಯಮದ ವೇಗಕ್ಕೆ 2043ಕ್ಕೆ ಮುದ್ರಣ ಮಾಧ್ಯಮದ ಅಂತ್ಯವಾಗಲಿದೆ ಎಂದು ಹೇಳಿದರು.

    ಹಿರಿಯ ಪತ್ರಕರ್ತ ಹುಣಸವಾಡಿ ರಾಜನ್ ಮಾತನಾಡಿ, ಪತ್ರಿಕೋದ್ಯಮದ ಪ್ರಧಾನ ಗುರಿ ವರ್ಣರಂಜಿತವಾಗಿ ಜನರಿಗೆ ತಲುಪಿಸುವುದಲ್ಲ. ಸತ್ಯ ತಲುಪಿಸುವ ಉದ್ದೇಶ ಇರಬೇಕು. ಬದುಕಿನ ನಿರಂತರ ಹುಡುಕಾಟವೇ ಸತ್ಯವಾಗಿದೆ ಎಂದು ಹೇಳಿದರು.

    ಹಿರಿಯ ಪತ್ರಕರ್ತ ವಿನಾಯಕ ಭಟ್ ಮಾತನಾಡಿ, ಸುದ್ದಿಗಳಲ್ಲೂ ಸಮಾನತೆ ಇರಬೇಕು. ಅದಿಲ್ಲದಿದ್ದರೆ ಪತ್ರಿಕೆ ಘನತೆಗೆ ಕುಂದು ಬರುತ್ತದೆ ಎಂದರು. ಸ್ಥಳೀಯ ಪತ್ರಕರ್ತ ಅಶೋಕ ಹಾಸ್ಯಗಾರ, ಸ್ಥಳೀಯ ಮಟ್ಟದ ಪತ್ರಿಕೆಗಳು ಪತ್ರಕರ್ತರನ್ನು ಸಿದ್ಧಪಡಿಸಲು ವೇದಿಕೆಯಾಗಿದೆ ಎಂದರು.

    ಪತ್ರಕರ್ತ ಪಿ.ಎಸ್.ಸದಾನಂದ ಮಾತನಾಡಿ, ಜಿಲ್ಲಾ ಮಟ್ಟದ ಪತ್ರಿಕೆಗಳ ಉಸಿರು ಗಟ್ಟಿಸುವ ವ್ಯವಸ್ಥೆ ರಾಜ್ಯಮಟ್ಟದ ಪತ್ರಿಕೆಗಳಿಂದ ಆಗ ಬಾರದು ಎಂದರು. ಸಚಿವ ಶಿವರಾಮ ಹೆಬ್ಬಾರ ಇದ್ದರು. ಹಿರಿಯ ಪತ್ರಕರ್ತ ಗಿರೀಶ ರಾವ್ (ಜೋಗಿ) ನಿರೂಪಿಸಿದರು.

    ಪತ್ರಕರ್ತ ಪತ್ರಕರ್ತನ ಗುಣ ಬಿಡಬಾರದು. ಸತ್ಯ ಸಂಶೋಧನೆಯೇ ಪ್ರಾಧಾನ್ಯವಾಗಬೇಕು. ಒಳ್ಳೆಯತನಕ್ಕೆ ಆದ್ಯತೆ, ಕೆಟ್ಟತನ ಖಂಡಿಸುವ ಗುಣ ಬೆಳೆಸಿಕೊಳ್ಳಬೇಕು.

    | ಹರಿಪ್ರಕಾಶ ಕೋಣೆಮನೆ ಹಿರಿಯ ಪತ್ರಕರ್ತ

    ಪ್ರತಿಭೆಗೂ, ಪದವಿಗೂ ಸಾಮ್ಯತೆ ಬೇಕೆಂದಿಲ್ಲ. ಪತ್ರಕರ್ತನಿಗೆ ವಿಷಯ ಗೊತ್ತಿರಬೇಕು, ಅದನ್ನು ಹೇಳಲು ಭಾಷೆ ಗೊತ್ತಿರಬೇಕು. ಪತ್ರಿಕೋದ್ಯಮ ವಿಭಾಗಗಳು ಮುಚ್ಚಿದರೆ ಪತ್ರಿಕೋದ್ಯಮಕ್ಕೆ ಭವಿಷ್ಯವಿಲ್ಲ ಎಂಬುದು ಸರಿಯಲ್ಲ.

    | ವಿಶ್ವೇಶ್ವರ ಭಟ್ ಹಿರಿಯ ಪತ್ರಕರ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts