More

    21ರವರೆಗೆ ಸೆಮಿ ಲಾಕ್​ಡೌನ್ ವಿಸ್ತರಣೆ

    ಹಾವೇರಿ: ಜಿಲ್ಲೆಯಲ್ಲಿ ಜೂ. 21ರವರೆಗೆ ಲಾಕ್​ಡೌನ್ ವಿಸ್ತರಿಸಲಾಗಿದ್ದು, ಅಗತ್ಯವಸ್ತುಗಳ ಖರೀದಿಗೆ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

    ಶುಕ್ರವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುತ್ತದೆ. ಅಗತ್ಯ ಹಾಗೂ ತುರ್ತು ಚಟುವಟಿಕೆ ಹೊರತುಪಡಿಸಿ ಇನ್ನುಳಿದ ಚಟುವಟಿಕೆಯನ್ನು ನಿರ್ಬಂಧಿಸಲಾಗಿದೆ. ಹಾಲು, ಆಸ್ಪತ್ರೆ ಸೇವೆ, ಔಷಧ ಅಂಗಡಿಗಳು ಮತ್ತು ಪಡಿತರ ಆಹಾರ ಧಾನ್ಯ ವಿತರಣೆ, ಗೃಹ ಬಳಕೆ ಎಲ್.ಪಿ.ಜಿ. ಸಿಲಿಂಡರ್ ಸಾಗಾಣಿಕೆ ಮತ್ತು ವಿತರಣೆ ಇರಲಿದೆ. ಅಗತ್ಯ ಸೇವೆಗಳಾದ ಆಂಬುಲೆನ್ಸ್, ಪೆಟ್ರೋಲ್ ಬಂಕ್, ಆಮ್ಲಜನಕ ಉತ್ಪಾದನಾ ಘಟಕ, ಎ.ಟಿ.ಎಂ, ಬ್ಯಾಂಕ್, ಪೋಸ್ಟ್ ಆಫೀಸ್, ವಿಮಾ, ಟೆಲಿಕಾಂ, ಇಂಟರ್​ನೆಟ್ ಹಾಗೂ ಖಾಸಗಿ ಭದ್ರತಾ ಸೇವೆಗಳಲ್ಲಿ ತೊಡಗಿರುವ ಅಧಿಕಾರಿ, ಸಿಬ್ಬಂದಿಗೆ ಲಾಕ್​ಡೌನ್​ನಿಂದ ವಿನಾಯಿತಿ ನೀಡಲಾಗಿದೆ.

    ಕೃಷಿ ಚಟುವಟಿಕೆಗೆ ಸಂಬಂಧಿಸಿದ ಪರಿಕರಗಳು, ಯಂತ್ರೋಪಕರಣಗಳು, ಬೀಜ ಮತ್ತು ರಸಗೊಬ್ಬರ ಮಾರಾಟಕ್ಕೆ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿನಾಯಿತಿ ಇದೆ. ರೇಷ್ಮೆ ಕೃಷಿಗೆ ಸಂಬಂಧಿಸಿದಂತೆ ಗೂಡು, ಮೊಟ್ಟೆ ಸಾಗಾಣಿಕೆಗಾಗಿ ಹಾಗೂ ಉದ್ಯಮದ ಚಟುವಟಿಕೆಗೆ ಅನುಮತಿ ನೀಡಲಾಗಿದೆ.

    ಸಾರ್ವಜನಿಕರು ಹೊರಗಡೆ ಓಡಾಡುವುದನ್ನು ನಿಯಂತ್ರಿಸುವುದಕ್ಕಾಗಿ ಕೋವಿಡ್ ನಿರ್ವಹಣೆಗಾಗಿ ಕಾರ್ಯಾಚರಣೆಗಳು ರಾಷ್ಟ್ರೀಯ ನಿರ್ದೇಶನಗಳಿಗೆ ಒಳಪಟ್ಟು ಎಲ್ಲ ಅವಶ್ಯಕ ವಸ್ತುಗಳನ್ನು ಮನೆ ಮನೆಗೆ 24*7 ಅವಧಿಯಲ್ಲಿ ಪೂರೈಸಲು ಅನುಮತಿ ನೀಡಲಾಗಿದೆ.

    ಕಟ್ಟಡ ನಿರ್ಮಾಣ ಮತ್ತು ದುರಸ್ತಿಗೆ ಸಂಬಂಧಿಸಿದ ಸಾಮಗ್ರಿಗಳೊಂದಿಗೆ ವ್ಯವಹರಿಸುವ ಅಂಗಡಿಗಳು, ಸಂಸ್ಥೆಗಳು ವಿಶೇಷವಾಗಿ ಸಿಮೆಂಟ್ ಮತ್ತು ಉಕ್ಕು ಮಾರಾಟಗಾರರಿಗೆ ಕೋವಿಡ್-19 ಸೂಕ್ಷ್ಮ ನಡವಳಿಕೆಯನ್ನು ಅನುಸರಿಸುವ ನಿರ್ದೇಶನದೊಂದಿಗೆ ಧಾರಕ ವಲಯದ ಹೊರಗೆ ಅನುಮತಿ ನೀಡಲಾಗಿದೆ.

    ವಾಕಿಂಗ್ ಉದ್ದೇಶಕ್ಕಾಗಿ ಬೆಳಗ್ಗೆ 5ರಿಂದ 10 ಗಂಟೆಯವರೆಗೆ ಉದ್ಯಾನಗಳನ್ನು ತೆರೆಯಬಹುದು. ಆದರೆ, ಯಾವುದೇ ಗುಂಪು ಚಟುವಟಿಕೆ ನಡೆಸುವಂತಿಲ್ಲ.

    ಗರಿಷ್ಠ ಇಬ್ಬರು ಪ್ರಯಾಣಿಕರೊಂದಿಗೆ ಆಟೋ ಮತ್ತು ಟ್ಯಾಕ್ಸಿ ಸಂಚರಿಸಬಹುದು. ಆರೋಗ್ಯ ವಲಯಕ್ಕೆ ಸಂಬಂಧಿಸಿದ ಕೌಶಲ ತರಬೇತಿಗಳಿಗೆ ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಉತ್ಪಾದನಾ ಘಟಕಕ್ಕಿದೆ ಅನುಮತಿ

    ಕಟ್ಟಡ ನಿರ್ಮಾಣ ಕಾಮಗಾರಿಗಳ ಸ್ಥಳದಲ್ಲಿಯೇ ವಾಸವಿದ್ದ ಕಟ್ಟಡ ಕೆಲಸಗಾರರಿಂದ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಅನುಮತಿ ಇದೆ. ಸ್ಥಳದಲ್ಲಿಯೇ ವಾಸಿಸುವ ಕಾರ್ವಿುಕರು, ಕೆಲಸಗಾರರನ್ನು ಉಪಯೋಗಿಸಿಕೊಂಡು ಜೀವನಾವಶ್ಯಕ ವಸ್ತುಗಳನ್ನು ತಯಾರಿಸುವ, ನಿರಂತರ ಕಾರ್ಯಾಚರಣೆ ನಡೆಸುವ ಉತ್ಪಾದನಾ ಘಟಕಗಳು ಮತ್ತು ಕಾರ್ಖಾನೆಗಳಿಗೆ ಅನುಮತಿ ನೀಡಲಾಗಿದೆ.

    ಎಲ್ಲ ಉತ್ಪಾದನಾ ಘಟಕಗಳು, ಕೈಗಾರಿಕೆಗಳು ತಮ್ಮ ಸಿಬ್ಬಂದಿ ಸಾಮರ್ಥ್ಯದ ಶೇ. 50ರಷ್ಟು ಸಿಬ್ಬಂದಿಯೊಂದಿಗೆ, ಗಾರ್ವೆಂಟ್ ಕೈಗಾರಿಕೆಯಲ್ಲಿ ತೊಡಗಿರುವ ಉತ್ಪಾದನಾ ಘಟಕಗಳು, ಸಂಸ್ಥೆಗಳು, ಕೈಗಾರಿಕೆಗಳು ಶೇ. 30ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯಕನಿರ್ವಹಿಸಬಹುದು. ಕೋವಿಡ್ ಸೂಕ್ಷ್ಮ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ.

    ಶೇ. 30ರಷ್ಟು ಸಿಬ್ಬಂದಿ

    ರಫ್ತುಗಳಲ್ಲಿ ನೇರವಾಗಿ ತೊಡಗಿರುವ ಕೈಗಾರಿಕಾ ಇಲಾಖೆಯಿಂದ ಹೊರಡಿಸಲಾಗುವ ಪಟ್ಟಿಯಲ್ಲಿನ ಘಟಕಗಳು, ಸಂಸ್ಥೆಗಳಿಗೆ ಕೋವಿಡ್ ಮಾರ್ಗಸೂಚಿ ಅನುಸರಿಸಿ ಶೇ. 30ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ವಿನಾಯಿತಿ ನೀಡಿದೆ. ಈ ಅವಧಿಯಲ್ಲಿ ಕೋವಿಡ್-19 ಮಾರ್ಗಸೂಚಿಯನ್ವಯ ಅಂತ್ಯ ಸಂಸ್ಕಾರಕ್ಕೆ 5 ಜನಕ್ಕೆ ಮೀರದಂತೆ ಅನುಮತಿ ನೀಡಲಾಗಿದೆ.

    ಬೀದಿ ವ್ಯಾಪಾರಕ್ಕೂ ಅವಕಾಶ

    ಆಹಾರಕ್ಕೆ ಸಂಬಂಧಿಸಿದ ದಿನಸಿ, ಹಣ್ಣುಗಳು ಮತ್ತು ತರಕಾರಿಗಳು, ಮಾಂಸ ಮತ್ತು ಮೀನು, ಡೈರಿ ಮತ್ತು ಹಾಲಿನ ಬೂತ್​ಗಳು, ಪಶು ಆಹಾರ, ಮೇವು ವ್ಯವಹರಿಸುವ ಅಂಗಡಿಗಳಿಗೆ, ಬೀದಿ ಬದಿ ವ್ಯಾಪಾರಿಗಳಿಗೆ, ಸಾರ್ವಜನಿಕ ವಿತರಣಾ ವ್ಯವಸ್ಥೆ ಅಂಗಡಿಗಳಿಗೆ, ಮದ್ಯದಂಗಡಿ, ಚಿಲ್ಲರೆ ಅಂಗಡಿಗಳು ಬೆಳಗ್ಗೆ 6 ರಿಂದ ಮಧ್ಯಾಹ್ನ 2ರವರೆಗೆ ಕಾರ್ಯನಿರ್ವಹಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts