More

    ಬೀದಿ ಬದಿ ವ್ಯಾಪಾರಿಗಳಿಗೆ ಸ್ವನಿಧಿ ವರದಾನ

    ಎನ್.ಆರ್.ಪುರ: ಕರೊನಾ ಹಾವಳಿ ಕಡಿಮೆಯಾದ ನಂತರ ಬೀದಿ ಬದಿ ವ್ಯಾಪಾರಿಗಳಿಗೆ ಹಣಕಾಸಿನ ನೆರವು ಸಿಗುತ್ತಿರಲಿಲ್ಲ. ಹಾಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆತ್ಮನಿರ್ಭರ ಭಾರತ ಯೋಜನೆಯಡಿ ಉದ್ದಿಮೆ ಪರವಾನಗಿ ಹೊಂದಿದವರಿಗೆ ಗುರುತಿನ ಚೀಟಿ ನೀಡಿ ಸ್ವನಿಧಿ ಸೇ ಸಮೃದ್ಧಿ ಯೋಜನೆ ಜಾರಿಗೊಳಿಸಿದ್ದಾರೆ ಎಂದು ಜಿಲ್ಲಾ ಕೌಶಲಾಭಿವೃದ್ಧಿ ಇಲಾಖೆಯ ಡೇನಲ್ಮ್ ತಜ್ಞ ಹರ್ಷ ಹೇಳಿದರು.

    ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಡೇನಲ್ಮ್ ಯೋಜನೆಯಡಿ ಸ್ವನಿಧಿ ಸೇ ಸಮೃದ್ಧಿ ಯೋಜನೆ ಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಆಯೋಜಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.
    ಈ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳ ಕುಟುಂಬಕ್ಕೆ 10 ಸಾವಿರ ರೂ. ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಪ್ರಸ್ತುತ 20ರಿಂದ 50 ಸಾವಿರ ರೂ.ವರೆಗೆ ಬ್ಯಾಂಕಿನಿಂದ ಸಾಲ ಸೌಲಭ್ಯವಿದೆ. ಇದನ್ನು 12 ತಿಂಗಳೊಳಗೆ ಮರುಪಾವತಿ ಮಾಡಬೇಕಾಗುತ್ತದೆ ಎಂದರು.
    ಬೀದಿ ಬದಿ ವ್ಯಾಪಾರಿಗಳಿಗೆ ಹಾಗೂ ಅವರ ಕುಟುಂಬದವರಿಗೆ ಕೇಂದ್ರ ಸರ್ಕಾರದ ಪಿಎಂ ಸುರಕ್ಷಾ ಬಿಮಾ, ಜೀವನ್ ಜ್ಯೋತಿ ಬಿಮಾ, ಒಂದು ದೇಶ ಒಂದು ರೇಷನ್ ಕಾರ್ಡ್, ಜನಧನ, ಶ್ರಮಯೋಗಿ ಮಾನಧನ ಯೋಜನೆ, ಕಟ್ಟಡ ಹಾಗೂ ಇತರೆ ನಿರ್ಮಾಣಗಳ ಕಾರ್ಮಿಕರ ನೋಂದಣಿ, ಜನನಿ ಸುರಕ್ಷಾ ಮತ್ತು ಮಾತೃವಂದನಾ ಕಲ್ಯಾಣ ಯೋಜನೆ ಸೌಲಭ್ಯಗಳಿವೆ. ನಗದು ರಹಿತ ವಹಿವಾಟನ್ನು ಉತ್ತೇಜಿಸಲು ಕ್ಯೂ ಆರ್ ಕೋಡ್‌ಗಳನ್ನು ಬ್ಯಾಂಕ್‌ಗಳ ಮೂಲಕ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ ಎಂದು ಎಂದು ತಿಳಿಸಿದರು.
    ರಸ್ತೆ ಬದಿ ತಿನಿಸುಗಳನ್ನು ಮಾರಾಟ ಮಾಡುವವರು ಆಹಾರ ಇಲಾಖೆಯಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ 10 ಸಾವಿರ ರೂ. ದಂಡ ವಿಧಿಸಬಹುದು. ಎನ್.ಆರ್.ಪುರ ಪಪಂ ವ್ಯಾಪ್ತಿಯಲ್ಲಿ 112 ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ, 48 ಜನರಿಗೆ 20 ಸಾವಿರ ಹಾಗೂ 9 ಜನರಿಗೆ 50 ಸಾವಿರ ರೂ. ಸಾಲ ಮಂಜೂರಾಗಿದೆ. ಜಿಲ್ಲೆಯಲ್ಲಿ 6 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಮಾತನಾಡಿ, ಕರೊನಾ ಸಂದರ್ಭ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ನೀಡಿರುವುದು ಅನುಕೂಲ. ಆದರೆ ಸರಿಯಾದ ಸಮಯಕ್ಕೆ ಸಾಲ ನೀಡಲು ಬ್ಯಾಂಕುಗಳು ವಿಳಂಬ ಮಾಡುತ್ತಿದ್ದು, ಈ ಬಗ್ಗೆ ಗಮನಹರಿಸಬೇಕು. ಬೀದಿ ಬದಿ ವ್ಯಾಪಾರಿಗಳಿಗೆ 6 ತಿಂಗಳಿಗೊಮ್ಮೆ ಆರೋಗ್ಯ ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.
    ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಮಾತನಾಡಿ, ಕೇಂದ್ರ ಸರ್ಕಾರದಿಂದ ಬೀದಿ ಬದಿಯ ವ್ಯಾಪಾರಿಗಳಿಗೆ ಜಾರಿಗೊಳಿಸಿರುವ 8 ಕಲ್ಯಾಣ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
    ಬೀದಿ ಬದಿ ವ್ಯಾಪಾರಿಗಳ ಸಂಘದ ತಾಲೂಕು ಅಧ್ಯಕ್ಷ ಗುರುಮೂರ್ತಿ, ಪಪಂ ಸಿಬ್ಬಂದಿ ಎಂ.ಕೆ.ಉಷಾ, ಬಿ.ಲಕ್ಷ್ಮಣ ಗೌಡ, ಎ.ಡಿ.ಶ್ರುತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts