More

    ಶ್ರೀರಂಗಪಟ್ಟಣ ಟಿಎಪಿಸಿಎಂಎಸ್‌ಗೆ ಆಯ್ಕೆ

    ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಪುರಸಭೆ ಸದಸ್ಯ, ಕಾಂಗ್ರೆಸ್ ಬೆಂಬಲಿ ಅಭ್ಯರ್ಥಿ ಎಂ.ನಂದೀಶ್ ಅವಿರೋಧವಾಗಿ ಆಯ್ಕೆಯಾದರು.

    ಪಟ್ಟಣದ ಟಿಎಪಿಸಿಎಂಎಸ್ ಸಂಘಕ್ಕೆ ಈ ಹಿಂದೆ ಅಧ್ಯಕ್ಷರಾಗಿದ್ದ ಜೆಡಿಎಸ್ ಬೆಂಬಲಿತ ಎಸ್.ಎಲ್.ದಿವಾಕರ್ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಗುರುವಾರ ಚುನಾವಣೆ ಪ್ರಕ್ರಿಯೆ ನಡೆಯಿತು.

    8 ಜನ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಹಾಗೂ 4 ಜನ ಜೆಡಿಎಸ್ ಬೆಂಬಲಿತ ನಿರ್ದೇಶಕರಿರುವ ಸಂಘದ ಚುನಾವಣೆಗೆ ಸ್ಪರ್ಧಿಯಾಗಿ ಎಂ.ನಂದೀಶ್ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. 12 ಜನ ಆಡಳಿತ ಮಂಡಳಿ ನಿರ್ದೇಶಕರ ಮತಗಳು, ಸರ್ಕಾರದ ನಾಮಿನಿಯಿಂದ 1 ಮತ, ಎಂಡಿಸಿಸಿ ಬ್ಯಾಂಕ್ ಪ್ರತಿನಿಧಿಯಿಂದ 1 ಮತ ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಂದ 1 ಮತ ಸೇರಿದಂತೆ ಒಟ್ಟು 15 ಮತಗಳಿಂದ ಎಂ.ನಂದೀಶ್ ಅವರನ್ನು ಅವಿರೋಧವಾಗಿ ಆಯ್ಕೆಗೊಳಿಸಲಾಯಿತು. ಚುನಾವಣಾಧಿಕಾರಿ ರವಿಕುಮಾರ್ ವಿಜೇತ ಎಸ್.ನಂದೀಶ್‌ಗೆ ಪ್ರಮಾಣ ಪತ್ರ ನೀಡಿದರು.

    ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಸಂಘದ ನಿರ್ದೇಶಕರ ಸಮ್ಮುಖದಲ್ಲಿ ನೂತನ ಅಧ್ಯಕ್ಷ ಎಂ.ನಂದೀಶ್‌ಗೆ ಮೈಸೂರು ಪೇಟ ತೊಡಿಸಿ ಹೂಮಾಲೆ ಹಾಕಿ ಅಭಿನಂದಿಸಿ ಶುಭಕೋರಿದರು. ನಂತರ ಮಾತನಾಡಿ, ಸಂಘದಲ್ಲಿ ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು. ಅಲ್ಲದೆ ಸಂಘಕ್ಕೆ ಕ್ರಿಯಾಶೀಲ ಅಧ್ಯಕ್ಷ ಸಿಕ್ಕಿರುವ ಕಾರಣ ಸಂಘದ ಚಟುವಟಿಕೆಗಳು ಸದ್ದು ಮಾಡಲಿ ಎಂದು ಹಾರೈಸಿದರು.

    ಸಂಘದ ಅಧ್ಯಕ್ಷ ಎಂ.ನಂದೀಶ್ ಮಾತನಾಡಿ, ಜಿಲ್ಲೆಯ ಸಹಕಾರಿ ದಿಗ್ಗಜ ಎಂದು ಹೆಸರುಗಳಿಸಿರುವ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಅವರ ಸಹಕಾರದಿಂದ ಅಧ್ಯಕ್ಷ ಸ್ಥಾನ ಗಳಿಸಿದ್ದೇನೆ. ಮೊದಲಿಗೆ ಟಿಎಪಿಸಿಎಂಎಸ್‌ನ 3500 ಜನ ಷೇರುದಾರರ ಹಿತಾಸಕ್ತಿ ಕಾಯಲು ಶ್ರಮಿಸುತ್ತೇನೆ. ಸಂಘದಲ್ಲಿ ಬ್ಯಾಂಕ್ ಶಾಖೆ ತೆರೆಯಲು ಉದ್ದೇಶಿಸಿದ್ದು, ಸದ್ಯದಲ್ಲೇ ಶಾಸಕರಿಂದ ಬ್ಯಾಂಕ್ ವಾಹಿವಾಟಿಗೆ ಚಾಲನೆ ನೀಡಲಾಗುತ್ತದೆ. ಷೇರುದಾರರು 2 ವರ್ಷಗಳ ಕಾಲ ವಾಹಿವಾಟು ನಡೆಸಿದಲ್ಲಿ ಕೋರ್ಟ್ ಆದೇಶದಂತೆ ಅವರಿಗೆ ಸಂಘದ ಮತದಾನದ ಹಕ್ಕು ಲಭಿಸುತ್ತದೆ. ಕ್ಷೇತ್ರದ ರೈತರ ಅನೂಕೂಲಕ್ಕಾಗಿ ತಾಲೂಕು ಕೇಂದ್ರದಲ್ಲಿ ರಸಗೊಬ್ಬರ ವಿತರಣಾ ಕೇಂದ್ರವನ್ನು ಆರಂಭಿಸಲು ಚಿಂತನೆ ನಡೆಸಲಾಗುತ್ತಿದೆ. ಇನ್ನು ಸಂಘದ ಕಲ್ಯಾಣ ಮಂಟಪವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಮೂಲಕ ಮೇಲ್ದರ್ಜೆಗೇರಿಸಿ ಬಡವರು ಹಾಗೂ ಮಧ್ಯಮ ವರ್ಗದ ಜನರ ಶುಭ ಕಾರ್ಯಗಳಿಗೆ ಕೈಗೆಟುಕುವ ದರಗಳಲ್ಲಿ ನೀಡಿ ಸಂಘ ಮತ್ತು ಷೇರುದಾರರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.

    ಟಿಎಪಿಸಿಎಂಎಸ್ ಉಪಾಧ್ಯಕ್ಷೆ ಲಕ್ಷ್ಮಿದೇವಿ, ನಿರ್ದೇಶಕರಾದ ಕಾಂತಮಣಿ, ಲಕ್ಷ್ಮಣ್, ಜಯರಾಜು, ನಾಗರಾಜು, ಶ್ರೀಕಂಠ, ಮೋಹನ್ ಕುಮಾರ್, ವಿಜಯ್ ಕುಮಾರ್, ಕೃಷ್ಣ, ರಾಮಲಿಂಗೇಗೌಡ ಮನ್ಮುಲ್ ಅಧ್ಯಕ್ಷ ಬೋರೇಗೌಡ, ಡಿಸಿಸಿ ಬ್ಯಾಂಕ್ ನಿದೇರ್ಶಕ ಚಂದ್ರಣ್ಣ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಪ್ರಾಣೇಶ್, ಪುರಸಭೆ ಸದಸ್ಯ ಎಂ.ಎಲ್.ದಿನೇಶ್, ಎಸ್.ದಯಾನಂದ್, ಮುಖಂಡರಾದ ಪೈ.ಮುಕುಂದ, ಬೆಳಗೊಳ ಸ್ವಾಮಿಗೌಡ, ಸೋಮಸುಂದರ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts