More

    ಮುಂಗಾರು ಹೊಸ್ತಿಲಲ್ಲಿ ಬಿತ್ತನೆ ಬೀಜ ದುಬಾರಿ; ಕೃಷಿ ಚಟುವಟಿಕೆಗೂ ಮುನ್ನ ಅನ್ನದಾತರು ಕಂಗಾಲು

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಕಳೆದ ಹಲವು ವರ್ಷಗಳಿಂದ ಅತಿವೃಷ್ಟಿ ಅಥವಾ ಅನಾವೃಷ್ಟಿಯ ನಿರಂತರ ಸಮಸ್ಯೆಗೆ ಸಿಲುಕಿ ಸುಸ್ತಾಗಿರುವ ರೈತಾಪಿ ವರ್ಗಕ್ಕೆ ಕರೊನಾ ರಣಕೇಕೆ ಶುರುವಾದ ಮೇಲೆ ಬದುಕೇ ದುಸ್ತರವಾಗಿದೆ. ಕರೊನಾ ತಂದೊಡ್ಡಿದ ಎಲ್ಲ ಕಷ್ಟನಷ್ಟಗಳ ನಡುವೆಯೂ ಬಿತ್ತನೆ ಚಟುವಟಿಕೆಯನ್ನಾದರೂ ಆರಂಭಿಸೋಣವೆಂದರೆ, ಗಗನಕ್ಕೇರುತ್ತಿರುವ ಬಿತ್ತನೆ ಬೀಜಗಳ ಬೆಲೆ ಚಿಂತೆ ತಂದೊಡ್ಡಿದೆ. ಒಟ್ಟಿನಲ್ಲಿ ಮುಂಗಾರು ಸಮೀಪಿಸುತ್ತಿರುವ ಹೊತ್ತಿನಲ್ಲಿ ಅನ್ನದಾತನಿಗೆ ನೆಮ್ಮದಿ ಇಲ್ಲದಂತಾಗಿದೆ. ಕರೊನಾ ಮಹಾಮಾರಿ ರೈತ ಸಮುದಾಯಕ್ಕೆ ತಂದಿಟ್ಟಿರುವ ಸಮಸ್ಯೆ ಒಂದೆರಡಲ್ಲ. ಕಳೆದ ನಾಲ್ಕೈದು ತಿಂಗಳಿಂದ ನಿರಂತರವಾಗಿ ಏರುತ್ತಿರುವ ಡೀಸೆಲ್ ದರ, ಕೃಷಿ ಯಂತ್ರೋಪಕರಣಗಳ ಬಾಡಿಗೆ ದರ, ಕಾರ್ವಿುಕರ ದಿನಗೂಲಿ ಹೆಚ್ಚಳ, ರಾಸಾಯನಿಕ ಗೊಬ್ಬರಗಳ ದರ ಏರಿಕೆಯಿಂದಾಗಿ ಚೇತರಿಸಿಕೊಳ್ಳಲಾಗುತ್ತಿಲ್ಲ. ಈ ನಡುವೆ ಬಿತ್ತನೆ ಬೀಜಗಳ ದರ ಏರಿಕೆಯಾಗಿದ್ದರಿಂದ ರೈತರು ಕಂಗಾಲಾಗಿದ್ದಾರೆ.

    ಬೀಜಕ್ಕೆ ಬಲು ಬೇಡಿಕೆ: ಈ ವರ್ಷ ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ 78.40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುತ್ತದೆ. ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ರಾಗಿ, ಭತ್ತ, ಅಲಸಂದೆ, ಉದ್ದು , ಹೆಸರು ಬಿತ್ತನೆಯಾಗುತ್ತದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮೆಕ್ಕೆಜೋಳ, ಸೂರ್ಯಕಾಂತಿ, ಜೋಳ, ಸಜ್ಜೆ, ಶೇಂಗಾ, ಸೋಯಾಬಿನ್, ಸಿರಿಧಾನ್ಯಗಳನ್ನು ಬಿತ್ತನೆ ಮಾಡಲಾಗುತ್ತದೆ. ಸುಮಾರು 8 ರಿಂದ 9.5 ಲಕ್ಷ ಕ್ವಿಂಟಾಲ್​ನಷ್ಟು ನಾನಾ ಬಿತ್ತನೆ ಬೀಜಗಳ ಅವಶ್ಯಕತೆ ಇದೆ. ಕಳೆದ ವರ್ಷ ಬಹುತೇಕ ಕಡೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬಂದಿರಲಿಲ್ಲ.

    ಅಲ್ಲದೆ, ಬಹುತೇಕ ರೈತರು ಬಿತ್ತನೆ ಬೀಜ ಸಂಗ್ರಹಿಸಿಕೊಳ್ಳದೆ ಆ ಸಂದರ್ಭದಲ್ಲಿ ಆರ್ಥಿಕ ಮುಗ್ಗಟ್ಟು ನಿವಾರಿಸಿಕೊಳ್ಳಲು ಸಂಗ್ರಹಿಸಿಕೊಂಡಿದ್ದ ವಿವಿಧ ಬೆಳೆಗಳ ಬೀಜಗಳನ್ನು ಮಾರಾಟ ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ ರೈತರು ಬಿತ್ತನೆ ಬೀಜ ಸಂಗ್ರಹಿಸಿಕೊಂಡಿರದ ಹಿನ್ನೆಲೆಯಲ್ಲಿ ಕಂಪನಿಗಳ ಬಿತ್ತನೆ ಬೀಜಗಳಿಗೆ ಬೇಡಿಕೆ ಹೆಚ್ಚು ಬರುತ್ತಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಸಬ್ಸಿಡಿ ಬೇಡ, ಉಚಿತವಾಗಿ ನೀಡಲಿ: ಪ್ರತಿವರ್ಷ ಸಾವಿರ-ಲಕ್ಷ ರೂ. ವೆಚ್ಚ ಮಾಡಿ ಬೆಳೆದ ಬೆಳೆಗಳಿಗೆ ಬಳಿಕ ಸೂಕ್ತ ಬೆಲೆ ಸಿಗುತ್ತಿಲ್ಲ. ರೈತರು ಬ್ಯಾಂಕ್​ಗಳಲ್ಲಿ ಮಾಡಿರುವ ಬೆಳೆಸಾಲ ಮರುಪಾವತಿಸಲೂ ಸಾಧ್ಯವಾಗದೆ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ವಿವಿಧ ಬಿತ್ತನೆ ಬೀಜಗಳ ದರ, ರಸಗೊಬ್ಬರ, ದಿನಗೂಲಿ ಸೇರಿ ಎಲ್ಲವೂ ಏರಿಕೆ ಕಂಡಿದೆ. ಹೀಗಾಗಿ ಇಂಥ ಕಠಿಣ ಸಂದರ್ಭದಲ್ಲಾದರೂ ಸರ್ಕಾರ ರೈತರಿಗೆ ಉಚಿತವಾಗಿ ಬಿತ್ತನೆ ಬೀಜ, ರಸಗೊಬ್ಬರ ನೀಡಿದರೆ ಅನುಕೂಲವಾಗುತ್ತದೆ ಎಂದು ರೈತರು ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ.

    – ಸಬ್ಸಿಡಿ ದರವೇ ಹೆಚ್ಚಳ

    ಕೃಷಿ ಇಲಾಖೆಯು 2021-22ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಸಾಮಾನ್ಯ ರೈತರಿಗೆ ಶೇ. 50 ಮತ್ತು ಎಸ್​ಸಿ, ಎಸ್​ಟಿ ರೈತರಿಗೆ ಶೇ. 75ರಷ್ಟು ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆಗೆ ನಿರ್ಧರಿಸಿದೆ. ಆದರೆ, ನಿಗದಿ ಪಡಿಸಿರುವ ದರದಲ್ಲಿ ಪ್ರತಿ ಕೆಜಿಗೆ 8ರಿಂದ 15 ರೂ. ಹೆಚ್ಚಳವಾಗಿದೆ. ಅಲ್ಲದೆ, ಸೂರ್ಯಕಾಂತಿ ಕೆಜಿಗೆ 405 ರೂ., ಹೈಬ್ರಿಡ್ ಜೋಳ ಕೆಜಿಗೆ 146 ರೂ. ಗಡಿ ದಾಟಿದೆ.

    ಮುಂಗಾರು ಹೊಸ್ತಿಲಲ್ಲಿ ಬಿತ್ತನೆ ಬೀಜ ದುಬಾರಿ; ಕೃಷಿ ಚಟುವಟಿಕೆಗೂ ಮುನ್ನ ಅನ್ನದಾತರು ಕಂಗಾಲು

    ಕೆಲ ಬಿತ್ತನೆ ಬೀಜದ ದರದಲ್ಲಿ ಏರಿಕೆ ಕಂಡಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಬೀಜ ಸಂಗ್ರಹ ಮಾಡಿಕೊಳ್ಳಲಾಗುತ್ತಿದೆ.

    | ಶಿವನಗೌಡ ಪಾಟೀಲ, ಕೃಷಿ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕ, ಬೆಳಗಾವಿ

    ((ಫೋಟೋ ಕ್ಯಾಪ್ಷನ್​))
    ಬೆಳಗಾವಿ ಕೃಷಿ ಇಲಾಖೆ ಗೋದಾಮಿನಲ್ಲಿ ಸಂಗ್ರಹಿಸಿಟ್ಟ ವಿವಿಧ ಕಂಪನಿಗಳ ಬಿತ್ತನೆ ಬೀಜಗಳ ಚೀಲಗಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts