More

    ಆಧುನಿಕತೆಗೆ ತಕ್ಕಂತೆ ಕೌಶಲ ಹೆಚ್ಚಿಸಿಕೊಳ್ಳಿ

    ಸೇಡಂ: ಇಂದಿನ ಅಧುನಿಕ ಯುಗದಲ್ಲಿ ಕ್ಷಣ-ಕ್ಷಣಕ್ಕೆ ಎಲ್ಲವೂ ಬದಲಾಗುತ್ತಿದೆ. ವಿದ್ಯಾರ್ಥಿಗಳು ಕಾಲಕ್ಕೆ ತಕ್ಕಂತೆ ತಮ್ಮಲ್ಲಿನ ಕೌಶಲ ಹೆಚ್ಚಿಸಿಕೊಂಡರೆ ಉದ್ಯೋಗ ಪಡೆಯಲು ನೆರವಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.

    ಕೌಶಲಾಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾಡಳಿತ ಸಹಯೋಗದಡಿ ಸುವರ್ಣ ಕರ್ನಾಟಕ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಉದ್ಯೋಗ ಮೇಳ ಉದ್ಘಾಟಿಸಿದ ಅವರು, ರಾಜ್ಯದ ಪ್ರತಿಯೊಬ್ಬ ನಿರುದ್ಯೋಗಿಗೂ ಉದ್ಯೋಗ ಆಧಾರಿತ ತರಬೇತಿ ನೀಡುವುದು ನಮ್ಮ ಆದ್ಯತೆ. ಜಿಟಿಟಿಸಿ, ಕೆಜಿಟಿಟಿಐಯಿಂದ ನೀಡುವ ಅಲ್ಪಾವಧಿ ಮತ್ತು ದೀರ್ಘಾವಧಿ ಕೋರ್ಸ್​ಗಳ ಮೂಲಕ ಉದ್ಯೋಗ ಪಡೆಯಬೇಕು. ನಮ್ಮಲ್ಲಿರುವ ಕಂಪನಿಗಳಲ್ಲೇ ನೌಕರಿ ಸಿಗಬೇಕು. ಸ್ಥಳೀಯವಾಗಿಯೇ ಕೆಲಸ ಮಾಡಬೇಕೆಂಬ ಮನೋಭಾವ ಬಿಟ್ಟು ರಾಜ್ಯವಲ್ಲದೆ ಹೊರ ರಾಜ್ಯಗಳಲ್ಲಿ ಕೆಲಸ ಸಿಕ್ಕರೂ ಹೋಗಿ ಬದುಕು ಕಟ್ಟಿಕೊಳ್ಳಲು ತಯಾರಿರಬೇಕು ಎಂದು ಸಲಹೆ ನೀಡಿದರು.

    ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿಟಿಟಿಸಿ ಎಂಡಿ ಶ್ರೀವಿದ್ಯಾ, ಜಿಪಂ ಸಿಇಒ ಭನ್ವರ್‌ಸಿಂಗ್ ಮೀನಾ ಮಾತನಾಡಿದರು. ಎಸ್‌ಪಿ ಅಡ್ಡೂರು ಶ್ರೀನಿವಾಸುಲು, ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಮುರಳಿಧರ ರತ್ನಗಿರಿ, ಮಳಖೇಡದ ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಯ ನಾರಾಯಣ, ಡಿವೈಎಸ್‌ಪಿ ಕೆ.ಬಸವರಾಜ, ರಾಜ್ಯ ತೋಟಗಾರಿಕೆ ಮಹಾಮಂಡಳಿ ನಿರ್ದೇಶಕ ಬಸವರಾಜ ಪಾಟೀಲ್ ಊಡಗಿ ಇತರರಿದ್ದರು.

    ನಾಡಗೀತೆಯೊಂದಿಗೆ ಮೇಳ ಶುರುವಾಯಿತು. ಕೌಶಲಾಭಿವೃದ್ಧಿ ಇಲಾಖೆ ಎಂಡಿ ಅಶ್ವಿನ್‌ಗೌಡ ಪ್ರಾಸ್ತಾವಿಕ ಮಾತನಾಡಿದರು. ಎಸಿ ಆಶಪ್ಪ ಪೂಜಾರಿ ಸ್ವಾಗತಿಸಿದರು. ಶ್ರೀಕಾಂತ ನಿರೂಪಣೆ ಮಾಡಿದರು. ತಹಸೀಲ್ದಾರ್ ಶ್ರೀಯಾಂಕ ಧನಶ್ರೀ ವಂದಿಸಿದರು.

    ಸಚಿವರ ಕಾಳಜಿಯಿಂದ ಜಾಬ್ ಫೇರ್ ಯಶಸ್ವಿ: ಸಚಿವರ ಕಾಳಜಿಯಿಂದಾಗಿ ಬೃಹತ್ ಉದ್ಯೋಗ ಮೇಳ ಯಶಸ್ವಿಯಾಗಿ ನಡೆದಿದೆ. ಐಟಿಐ, ಡಿಪ್ಲೊಮಾ, ಪದವೀಧರರಿಗೆ ಕಂಪನಿವಾರು ಸ್ಟಾಲ್ ತೆರೆಯಲಾಗಿದೆ. ಸಂದರ್ಶನದಲ್ಲಿ ಪ್ರತಿ ಅಭ್ಯರ್ಥಿಗೆ ನೇಮಕಾತಿ ಆಗಿರುವ ಅಥವಾ ಆಗದಿರುವ ಬಗ್ಗೆ ಫೀಡ್ ಬ್ಯಾಕ್‌ನಲ್ಲಿ ಕಂಪನಿ ಅಧಿಕಾರಿಗಳು ನಮೂದಿಸಲಿದ್ದಾರೆ. ನೇಮಕ ಆಗದವರಿಗೆ ಕೌಶಲ ಕೊರತೆ ನೀಗಿಸಲು ಮುಂದಿನ ಎರಡ್ಮೂರು ದಿನದಲ್ಲಿ ಸೂಕ್ತ ತರಬೇತಿ ನೀಡಿ ಉದ್ಯೋಗ ಅರ್ಹತೆ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದು ಕೌಶಲ ಅಭಿವೃದ್ಧಿ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್‌ಗೌಡ ಮಾಹಿತಿ ನೀಡಿದರು.

    ಭಾಗಿಯಾದ ಪ್ರಮುಖ ಕಂಪನಿಗಳು: ಎಲ್ ಆ್ಯಂಡ್ ಟಿ ಫೈನಾನ್ಸ್, ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್, ಜೆಎಸ್‌ಡಬ್ಲ್ಯು ಸ್ಟೀಲ್ ಲಿಮಿಟೆಡ್, ಟ್ರೇಡೆಂಟ್ ಆಟೋಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್, ಆದಿತ್ಯಾ ಬಿರ್ಲಾ ಸನ್ ಲೈಫ್ ಇನ್ಶುರೆನ್ಸ್ ಕಂಪನಿ, ಕೆಬಿಎಲ್ ಸರ್ವಿಸಸ್ ಲಿಮಿಟೆಡ್, ಎಲ್‌ಐಸಿ ಆಫ್ ಇಂಡಿಯಾ, ಮಹೀಂದ್ರಾ ಆ್ಯಂಡ್ ಮಹೀಂದ್ರಾ ಜಹೀರಾಬಾದ್, ಅಲ್ಟ್ರಾಟೆಕ್ ಸಿಮೆಂಟ್, ಕೋಡ್ಲಾದ ಶ್ರೀ ಸಿಮೆಂಟ್, ಲೇಬರ್‌ನೆಟ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಸೇರಿ ೧೦೦ಕ್ಕೂ ಅಧಿಕ ಕಂಪನಿಗಳು ಪಾಲ್ಗೊಂಡಿದ್ದವು.

    ಅಚ್ಚುಕಟ್ಟಾದ ಊಟದ ವ್ಯವಸ್ಥೆ: ಉದ್ಯೋಗ ಮೇಳಕ್ಕೆ ಆಗಮಿಸಿದ ಸಾವಿರಾರು ಜನರಿಗೆ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಮಾಡಲಾಗಿತ್ತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಬಂದಿದ್ದ ಎಲ್ಲರಿಗೂ ಭೋಜನಕ್ಕಾಗಿ ಹತ್ತಾರು ಕೌಂಟರ್ ತೆರೆಯಲಾಗಿತ್ತು. ಯಾವುದೇ ಸಮಸ್ಯೆ ಆಗದಂತೆ ಸ್ವಯಂ ಸೇವಕರು ಕೆಲಸ ಮಾಡಿದರು. ಅಲ್ಲದೆ ಸ್ವಚ್ಛತೆಗಾಗಿ ಸಾಕಷ್ಟು ಸಿಬ್ಬಂದಿ ನಿಯೋಜಿಸಿದ್ದರಿಂದ ಎಲ್ಲೂ ಅಸ್ವಚ್ಛತೆ ಕಂಡು ಬರಲಿಲ್ಲ.

    ಡಿಸೆಂಬರ್‌ನಲ್ಲಿ ಯುವನಿಧಿ ಆರಂಭ: ನಿರುದ್ಯೋಗಿಗಳಿಗೆ ನೀಡುವ ಯುವನಿಧಿ ಯೋಜನೆ ಡಿಸೆಂಬರ್‌ನಲ್ಲಿ ಶುರುವಾಗಲಿದೆ. ಬೃಹತ್ ಮೇಳದಲ್ಲಿ ನೂರಾರು ಕಂಪನಿಗಳು ಭಾಗವಹಿಸಿದ್ದು, ೭೫೦೦ಕ್ಕೂ ಹೆಚ್ಚು ಜನ ನೋಂದಣಿ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಒಂದಿಷ್ಟು ನೋಂದಣಿ ನಡೆದಿದ್ದರಿಂದ ಸಂಖ್ಯೆ ೧೦ ಸಾವಿರ ಗಡಿ ದಾಟಲಿದೆ. ಇಲ್ಲಿ ಕೆಲಸ ಸಿಗದವರು ನಿರಾಶರಾಗಬಾರದು. ಮುಂದಿನ ದಿನಗಳಲ್ಲಿ ಉದ್ಯೋಗಕ್ಕೆ ಬೇಕಾಗುವ ಕೌಶಲ ತರಬೇತಿ ನೀಡಲಾಗುವುದು. ಈ ಮೂಲ ಜಾಬ್ ದೊರಕಿಸಿಕೊಡಲು ಇಲಾಖೆ ಶ್ರಮಿಸಲಿದೆ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅಭಯ ನೀಡಿದರು.

    ೪೫೭ ಜನರಿಗೆ ಸಿಕ್ತು ಸ್ಥಳದಲ್ಲೇ ನೌಕರಿ: ಉದ್ಯೋಗ ಮೇಳದಲ್ಲಿ ಬರೋಬ್ಬರಿ ೪೫೭ ಜನರಿಗೆ ಸ್ಥಳದಲ್ಲೇ ನೌಕರಿ ಲಭಿಸಿದೆ. ಸಾವಿರಾರು ಜನರು ಹಾಗೂ ನೂರಾರು ಕಂಪನಿ ಪಾಲ್ಗೊಂಡಿದ್ದರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಂತಾಗಿದೆ. ಇದಲ್ಲದೆ ೧,೩೫೦ ಜನರನ್ನು ಮುಂದಿನ ಹಂತದ ಸಂದರ್ಶನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

    ಈ ಭಾಗದ ಜನರಲ್ಲಿ ಕೌಶಲವಿದ್ದರೂ ನೌಕರಿಗಾಗಿ ದೂರದ ಬೆಂಗಳೂರು, ಹೈದರಾಬಾದ್‌ಗೆ ಅಲೆದಾಡುವಂತಾಗಿತ್ತು. ಆದರೆ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೆಚ್ಚಿನ ಕಾಳಜಿ ವಹಿಸಿ ಜಿಲ್ಲೆಯಲ್ಲೇ ಬೃಹತ್ ಉದ್ಯೋಗ ಮೇಳ ಆಯೋಜಿಸಿ ನೂರಾರು ಕಂಪನಿಗಳನ್ನು ಉದ್ಯೋಗಾಕಾಂಕ್ಷಿಗಳ ಮನೆ ಬಾಗಿಲಿಗೆ ತಂದಿದ್ದಾರೆ.
    | ಫೌಜಿಯಾ ತರನ್ನುಮ್ ಜಿಲ್ಲಾಧಿಕಾರಿ

    ಬೆಂಗಳೂರು, ಮೈಸೂರಿನಲ್ಲಿ ರೋಗಿಗಳ ಮನೆಗೆ ಹೋಗಿ ಅಗತ್ಯ ವೈದ್ಯಕೀಯ ಉಪಚಾರ ಮಾಡಲು ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ನರ್ಸಿಂಗ್ ಅಭ್ಯರ್ಥಿಗಳು ಬೇಕಿದ್ದಾರೆ. ಈ ನಿಟ್ಟಿನಲ್ಲಿ ಉದ್ಯೋಗ ಮೇಳದಲ್ಲಿ ಉತ್ತಮ ಸ್ಪಂದನೆ ದೊರೆತಿದ್ದು, ಎಷ್ಟೇ ಜನ ಬಂದರೂ ನೇಮಕಾತಿ ಮಾಡಿಕೊಳ್ಳುತ್ತೇವೆ.
    | ರೋಶನ್ನ ರ್ಸಿಂಗ್ ಅಧಿಕಾರಿ, ಪ್ರಣಾ ಹೆಲ್ತ್ ಕೇರ್ ಬೆಂಗಳೂರು


    ಟೊಯೋಟಾ, ಕಿಯಾ ಹಾಗೂ ಹೊಂಡಾ ಕಂಪನಿಯ ವಿವಿಧ ವಿಭಾಗದಲ್ಲಿ ಪೇಂಟಿಂಗ್, ಟೆಕ್ನಿಷಿಯನ್ ಸೇರಿ ೨೨ ಹುದ್ದೆ ಭರ್ತಿಗೆ ಮಧ್ಯಾಹ್ನವರೆಗೂ ೩೦ ಜನರ ಸಂದರ್ಶನ ನಡೆಸಿದ್ದು, ೯ ಜನರ ಶಾರ್ಟ್ ಲಿಸ್ಟ್ ಮಾಡಿದ್ದೇವೆ. ಇವರಿಗೆ ಕಲಬುರಗಿಯಲ್ಲಿ ಸೋಮವಾರ ಪ್ರಯೋಗಿಕ ಪರೀಕ್ಷೆಗೆ ಒಳಪಡಿಸಿ ನೇಮಕಾತಿ ಮಾಡಿಕೊಳ್ಳಲಾಗುವುದು.
    | ಅನಿತಾ, ಮಾನವ ಸಂಪನ್ಮೂಲ ಅಧಿಕಾರಿ ಟೊಯೋಟಾ, ಕಿಯಾ, ಹೊಂಡಾ ಶೋರೂಂ ಕಲಬುರಗಿ

    ನಮ್ಮೂರಿನಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಿರುವುದು ಖುಷಿ ತಂದಿದೆ. ಸ್ಟಾಫ್ ನರ್ಸ್ ಹುದ್ದೆಗಾಗಿ ಸಂದರ್ಶನ ಎದುರಿಸಿದ್ದು, ಹೊಸ ಅನುಭವ ಸಿಕ್ಕಂತಾಗಿದೆ. ಕಂಪನಿಗಳು ಸಮರ್ಪಕವಾಗಿ ಇಂಟರ್‌ವ್ಯೂವ್ ಮಾಡಿದ್ದು, ಕೆಲಸದ ಬಗ್ಗೆ ಫೋನ್ ಮಾಡಿ ತಿಳಿಸುವುದಾಗಿ ಹೇಳಿವೆ.
    | ಸುಮಾ ಎಸ್. ಸೇಡಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts