More

    ಬಿಜೆಪಿಯದ್ದು ಯುದ್ಧಕಾಲದ ಶಸ್ತ್ರಾಭ್ಯಾಸವಲ್ಲ:ಬಿವೈಆರ್

    ಶಿವಮೊಗ್ಗ: ನಮ್ಮದು ಯುದ್ಧಕಾಲದ ಶಸ್ತ್ರಾಭ್ಯಾಸವಲ್ಲ. ಎರಡು ತಿಂಗಳ ಹಿಂದೆಯೇ ನಮ್ಮ ಕಾರ್ಯಕರ್ತರು ಚುನಾವಣೆಗೆ ಸನ್ನದ್ಧರಾಗಿದ್ದಾರೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

    ಲೋಕಸಭಾ ಚುನಾವಣಾ ಕಾರ್ಯಕ್ಕೆಂದು ಶಿವಮೊಗ್ಗ ಗ್ರಾಮಾಂತರ ಬಿಜೆಪಿ ಕಚೇರಿಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಕಾರ್ಯಕರ್ತರ ಪಡೆ ಸದೃಢವಾಗಿದೆ. ಯಶಸ್ವಿಯಾಗಿ ಚುನಾವಣೆ ನಡೆಸುತ್ತಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಗೆಲ್ಲಿಸಿ ಮೂರನೇ ಬಾರಿಗೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    10 ವರ್ಷಗಳ ಹಿಂದೆ ಕೇಂದ್ರದಲ್ಲಿ ಯುಪಿಎ ಮಾಡಿದ ತಪ್ಪುಗಳನ್ನು ಸರಿಪಡಿಸಲು ಆರಂಭದಲ್ಲಿ ನರೇಂದ್ರ ಮೋದಿ ಅವರಿಗೆ ಬಹಳಷ್ಟು ಸಮಯ ಬೇಕಾಯಿತು. ಈಗ ವಿಶ್ವವೇ ಕಣ್ಣರಳಿಸಿ ನೋಡುವಂತೆ ದೇಶವನ್ನು ಅಭಿವೃದ್ಧಿಪಥದಲ್ಲಿ ಕೊಂಡೊಯ್ದಿದ್ದಾರೆ ಎಂದರು.
    10 ವರ್ಷದ ಹಿಂದೆಯೂ ಕೇಂದ್ರ ಸರ್ಕಾರ ತೆರಿಗೆ ಸಂಗ್ರಹ ಮಾಡುತ್ತಿತ್ತು. ಆದರೆ ಅಭಿವೃದ್ಧಿ ಪ್ರಮಾಣ ಹೆಚ್ಚಿರಲಿಲ್ಲ. ಮೋದಿ ಪ್ರಧಾನಿಯಾದ ಬಳಿಕ ಅಭಿವೃದ್ಧಿ ಕಾರ್ಯಕ್ಕೆ ವೇಗ ಸಿಕ್ಕಿರುವುದನ್ನು ಜನರು ಗಮನಿಸಿದ್ದಾರೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳನ್ನೂ ಮೈತ್ರಿಕೂಟ ಗೆಲ್ಲುವುದರಲ್ಲಿ ಅನುಮಾನವಿಲ್ಲ. ದೇಶದಲ್ಲಿ ಬಿಜೆಪಿ 370ಕ್ಕೂ ಹೆಚ್ಚು, ಎನ್‌ಡಿಎ ಮೈತ್ರಿಕೂಟ 400ಕ್ಕೂ ಹೆಚ್ಚು ಸ್ಥಾನ ಗಳಿಸಿ ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ರಾಜ್ಯದ ಜನರು ಬುದ್ದಿವಂತರಿದ್ದಾರೆ. ಸ್ಥಳೀಯ ಸಂಸ್ಥೆ, ವಿಧಾನಸಭೆ ಚುನಾವಣೆಗಿಂತ ಲೋಕಸಭೆ ಚುನಾವಣೆಯನ್ನು ಭಿನ್ನವಾಗಿ ಗಮನಿಸುತ್ತಾರೆ. ಇಲ್ಲಿ ರಾಷ್ಟ್ರೀಯ ವಿಚಾರಗಳಿಗೆ ಮಹತ್ವ ನೀಡುತ್ತಾರೆ. ಮತದಾನ ಮಾಡುವ ಸಂದರ್ಭ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.
    ಮಲೆನಾಡಿನ ಯುವಶಕ್ತಿ ಇಲ್ಲಿಯೇ ಬದುಕು ಕಟ್ಟಿಕೊಳ್ಳಲು ಜಿಲ್ಲೆಯಲ್ಲೇ ಹೆಚ್ಚಿನ ಕೈಗಾರಿಕೆಗಳು ಆರಂಭವಾಗಬೇಕಿದೆ. ಇಲ್ಲಿಗೆ ಬಂಡವಾಳಶಾಹಿಗಳು ಬರಬೇಕಿದೆ. ಸಾಫ್ಟ್‌ವೇರ್ ತಂತ್ರಜ್ಞಾನವನ್ನು ಇಲ್ಲಿ ಬೆಳೆಸಬೇಕು. ಅದಕ್ಕಾಗಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕಿದೆ ಎಂದರು.
    ಶಾಸಕ ಎಸ್.ಎನ್.ಚನ್ನಬಸಪ್ಪ, ಮಾಜಿ ಶಾಸಕ ಕೆ.ಬಿ.ಅಶೋಕ ನಾಯ್ಕ, ವಿಧಾನಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್ ಇತರರಿದ್ದರು.
    ಸುರಂಗ ಮಾರ್ಗಕ್ಕೆ ಗ್ರೀನ್ ಸಿಗ್ನಲ್:ಕರಾವಳಿ ಮತ್ತು ಮಲೆನಾಡನ್ನು ಸಂಪರ್ಕಿಸುವ ಆಗುಂಬೆ ಘಾಟ್ ಮಾರ್ಗದಲ್ಲಿ 12 ಕಿ.ಮೀ. ಸುರಂಗ ಮಾರ್ಗ ನಿರ್ಮಿಸಲು ಹಸಿರು ನಿಶಾನೆ ದೊರೆತಿದೆ. ಡಿಪಿಆರ್ ಸಿದ್ಧಪಡಿಸಲು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಎರಡು ಕೋಟಿ ರೂ. ನೀಡುವುದಾಗಿ ಹೇಳಿದ್ದಾರೆ. ಮುಂಬರುವ ಬಜೆಟ್‌ನಲ್ಲಿ ಅನುದಾನ ಘೋಷಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಬಿವೈಆರ್ ಹೇಳಿದರು.
    ಈಶ್ವರಪ್ಪ ಪಕ್ಷ ಕಟ್ಟಿದವರು:ಕೆ.ಎಸ್.ಈಶ್ವರಪ್ಪ ಅವರು ನಮ್ಮ ತಂದೆ ಬಿ.ಎಸ್.ಯಡಿಯೂರಪ್ಪ ಹಾಗೂ ಅನಂತಕುಮಾರ್ ಜತೆಗೂಡಿ ಪಕ್ಷ ಕಟ್ಟಿದವರು. ಅವರು ರಾಷ್ಟ್ರವಾದಿ ಮತ್ತು ಪ್ರಧಾನಿ ಮೋದಿ ಅವರ ಅಭಿಮಾನಿ. ಯಾವ ಕಾರಣಕ್ಕೂ ಪಕ್ಷ ವಿರೋಧಿ ಚಿಂತನೆ ಮಾಡುವುದಿಲ್ಲ. ಶಿವಮೊಗ್ಗ ಕ್ಷೇತ್ರದ ಲೋಕಸಭಾ ಚುನಾವಣೆಯ ಸಾರಥ್ಯ ವಹಿಸಿ ಪ್ರಚಾರರಥ ಮುನ್ನಡೆಸಲಿದ್ದಾರೆ ಎಂದು ಬಿ.ವೈ.ರಾಘವೇಂದ್ರ ಹೇಳಿದರು.
    ಬಿ.ಎಸ್.ಯಡಿಯೂರಪ್ಪ ಯಾರಿಗೂ ದ್ರೋಹ ಮಾಡುವ ಪ್ರಶ್ನೆಯೇ ಇಲ್ಲ. ಅವರು ಲೋಕಸಭೆಗೆ ಸೋತಾಗ ಹೈಕಮಾಂಡ್ ಅವರನ್ನು ರಾಜ್ಯ ಸಭಾ ಸದಸ್ಯರನ್ನಾಗಿಸಲು ತೀರ್ಮಾನಿಸಿತ್ತು. ಆಗ ಅವರು ನಾನು ಈಗಾಗಲೇ ರಾಜಶೇಖರ ಮೂರ್ತಿ ಅವರಿಗೆ ರಾಜ್ಯಸಭೆಗೆ ಕಳಿಸುವುದಾಗಿ ಭರವಸೆ ನೀಡಿದ್ದೇನೆ. ಅವರನ್ನೇ ಆಯ್ಕೆ ಮಾಡಿ ಎಂದು ರಾಷ್ಟ್ರೀಯ ನಾಯಕರಿಗೆ ತಿಳಿಸುವ ಮೂಲಕ ತಮಗೆ ಬಂದ ಅವಕಾಶವನ್ನು ತಿರಸ್ಕರಿಸಿದ್ದರು. ಯಾವ ಕಾರಣಕ್ಕೂ ಅವರು ಯಾರಿಗೂ ಅನ್ಯಾಯ ಮಾಡುವ ಪ್ರಶ್ನೆಯೇ ಇಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts