More

    ಕಲೆ, ಸಾಹಿತ್ಯದಿಂದ ವ್ಯಕ್ತಿಯ ಹೆಸರು ಚಿರಸ್ಥಾಯಿ

    ಸೇಡಂ: ಸಮಾಜದಲ್ಲಿ ಬದುಕಿ ಬಾಳಿದಷ್ಟು ದಿನ ನಾವು ಮಾಡಿದ ಕಾರ್ಯಗಳು ನಮ್ಮನ್ನು ಗುರುತಿಸಲಿವೆ. ಅದರಲ್ಲಿಯೂ ಕಲೆ, ಸಾಹಿತ್ಯ ನಾವು ಬಿಟ್ಟು ಹೋಗುವ ಬಹುದೊಡ್ಡ ಆಸ್ತಿಯಾಗಿವೆ ಎಂದು ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.

    ನೀಲಗಂಗಮ್ಮ ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನದಿಂದ ಕೆರಳ್ಳಿ ಗುರುನಾಥರೆಡ್ಡಿ ಅವರ ೨೭ನೇ ಪುಣ್ಯಸ್ಮರಣೆ ನಿಮಿತ್ತ ಭಾನುವಾರ ಆಯೋಜಿಸಿದ್ದ ಹಿರಿಯ ಸಾಹಿತಿಗಳಾದ ಗುರುಶಾಂತಯ್ಯ ಭಂಟನೂರ ಹಾಗೂ ಪ್ರೊ.ಶೋಭಾದೇವಿ ಚೆಕ್ಕಿ ಅವರ ಬದುಕು-ಬರಹದ ವಿಚಾರ ಸಂಕಿರಣದಲ್ಲಿ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

    ಜಿಲ್ಲೆಯಲ್ಲಿಯೇ ಸೇಡಂ ಸಾಹಿತ್ಯಿಕವಾಗಿ ಶ್ರೀಮಂತವಾಗಿದೆ. ಅನೇಕ ಲೇಖಕರು ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹೀಗಾಗಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಸೇಡಂ ತಾಲೂಕಿನ ಸಾಹಿತಿಗಳಿಂದ ರಚಿತಗೊಂಡ ಪುಸ್ತಕಗಳ ಗ್ರಂಥಾಲಯ ಸ್ಥಾಪಿಸುವ ಉದ್ದೇಶ ಹೊಂದಿದ್ದು, ಎಲ್ಲರೂ ಪುಸ್ತಕ ಕೊಟ್ಟು ಸಹಕಾರ ನೀಡಬೇಕು ಎಂದರು.

    ಸಾಹಿತಿ ಸಂತೋಷ ತೊಟ್ನಳ್ಳಿ ಮಾತನಾಡಿ, ಭಂಟನೂರ ಅವರು ಸಾಹಿತ್ಯ ಮಾತ್ರವಲ್ಲದೆ ಸಂಗೀತ, ನಾಟಕ, ದೊಡ್ಡಾಟ ಸೇರಿ ವಿವಿಧ ರಂಗಗಳಲ್ಲಿ ತೊಡಗಿಸಿಕೊಂಡವರು. ನೈತಿಕತೆಯ ಜತೆಗೆ ಸರಳ ಜೀವನ ಮೈಗೂಡಿಸಿಕೊಂಡ ಸೃಜನಶೀಲ ಲೇಖಕರಾಗಿದ್ದಾರೆ ಎಂದ ಬಣ್ಣಿಸಿದರು.

    ಉಪನ್ಯಾಸಕಿ ಆರತಿ ಕಡಗಂಚಿ ಮಾತನಾಡಿ, ವೃತ್ತಿಯಲ್ಲಿ ಉಪನ್ಯಾಸಕಿಯಾಗಿದ್ದ ಚೆಕ್ಕಿ ಸದಾ ಕ್ರಿಯಾಶೀಲ ವ್ಯಕ್ತಿತ್ವದವರಾಗಿದ್ದಾರೆ. ಬಾಲ್ಯದಿಂದಲೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಬಂದ ಛಲಗಾರ್ತಿ. ಸೇಡಂ ನೆಲಕ್ಕೆ ಉದ್ಯೋಗಕ್ಕಾಗಿ ಬಂದಿರುವ ಅವರು ೬೭ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಸಮರ್ಪಣೆ ಮಾಡಿದ್ದಾರೆ ಎಂದು ತಿಳಿಸಿದರು.

    ಪ್ರತಿಷ್ಠಾನದ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ, ಗುರುಶಾಂತಯ್ಯ ಭಂಟನೂರ, ಪ್ರೊ.ಶೋಭಾದೇವಿ ಚೆಕ್ಕಿ ಮಾತನಾಡಿದರು. ಕಾರ್ಯದರ್ಶಿ ಮಹಿಪಾಲರೆಡ್ಡಿ ಮುನ್ನೂರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಲಲಿತಾ ಕೊಕಟ್ ಪ್ರಾರ್ಥಿಸಿದರು. ಜಗದೀಶ ಕಡಬಗಾಂವ್ ನಿರೂಪಣೆ ಮಾಡಿದರು. ಸುವರ್ಣ ಅಳ್ಳೊಳ್ಳಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts