More

    ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ ನಾಳೆ

    ವಿಜಯವಾಣಿ ಸುದ್ದಿಜಾಲ ಹಾವೇರಿ

    ಕರೊನಾ ಲಾಕ್​ಡೌನ್​ನಿಂದ ಮುಂದೂಡಲಾಗಿದ್ದ ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ ಜೂ. 18ರಂದು ನಿಗದಿಯಾಗಿದೆ. ಪರೀಕ್ಷೆಗೆ ಜಿಲ್ಲೆಯಲ್ಲಿ ಸಕಲ ಸಿದ್ಧತೆ ನಡೆಸಲಾಗುತ್ತಿದ್ದು, ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸರ್ ಹಾಕಿ ಶುಚಿಗೊಳಿಸುವ ಕಾರ್ಯವನ್ನು ಮಂಗಳವಾರ ನಡೆಸಲಾಯಿತು.

    ಜಿಲ್ಲೆಯ 23 ಪರೀಕ್ಷಾ ಕೇಂದ್ರಗಳ ಜತೆಗೆ 7 ಹೆಚ್ಚುವರಿ ಬ್ಲಾಕ್​ಗಳಲ್ಲಿ ಪರೀಕ್ಷೆ ನಡೆಯಲಿದೆ. ಒಟ್ಟು 13,955 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದಾರೆ. ಕರೊನಾ ಲಾಕ್​ಡೌನ್​ನಿಂದ ವಿದ್ಯಾರ್ಥಿಗಳಿರುವ ಸ್ಥಳದಲ್ಲೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ್ದರಿಂದ ಹೊರ ಜಿಲ್ಲೆಗಳಿಂದ ಬಂದ 902 ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯಲ್ಲಿ ಈ ಹಿಂದೆ ನೋಂದಾಯಿಸಿಕೊಂಡಿದ್ದ 4 ವಿದ್ಯಾರ್ಥಿಗಳು ಬೇರೆ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿದ್ದಾರೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ ಮಾಡಲಾಗಿದೆ.

    ಪರೀಕ್ಷಾ ಕೇಂದ್ರ ಸ್ಯಾನಿಟೈಜೇಶನ್: ಪರೀಕ್ಷಾ ಕೇಂದ್ರಗಳ 466 ಕೊಠಡಿಗಳನ್ನು ಸ್ಯಾನಿಟೈಜೇಶನ್ ಮಾಡಲಾಗುತ್ತಿದೆ. ಸುರಕ್ಷತಾ ಕ್ರಮವಾಗಿ ನೆಲ, ಗೋಡೆ, ಬೆಂಚ್, ಡೆಸ್ಕ್ ಎಲ್ಲವನ್ನೂ ಸ್ಯಾನಿಟೈಸರ್ ಹಾಕಿ ಶುಚಿಗೊಳಿಸಲಾಗುತ್ತಿದೆ. ಪರಸ್ಪರ ಅಂತರ ಕಾಯ್ದುಕೊಂಡು ಪರೀಕ್ಷೆ ಬರೆಯಲು ಒಂದು ಕೊಠಡಿಯಲ್ಲಿ 24 ವಿದ್ಯಾರ್ಥಿಗಳಿಗೆ ಮಾತ್ರ ಆಸನದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಎಲ್ಲ ಮಕ್ಕಳಿಗೆ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಹಾಗೂ ಮಾಸ್ಕ್ ವ್ಯವಸ್ಥೆ ಮಾಡಲಾಗುತ್ತಿದೆ. ಜ್ವರವಿರುವ ಮಕ್ಕಳಿಗೆ ವಿಶೇಷ ಕೊಠಡಿ ವ್ಯವಸ್ಥೆಗೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪರೀಕ್ಷೆಗೆ ಬರುವ ವಿದ್ಯಾರ್ಥಿಗಳು 9 ಗಂಟೆಗೆ ಪರೀಕ್ಷಾ ಕೇಂದ್ರ ತಲುಪುವಂತೆ ಆಗಮಿಸಲು ಆಯಾ ಕಾಲೇಜ್​ಗಳ ಉಪನ್ಯಾಸಕರ ಮೂಲಕ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ ಎಂದು ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಸಿ. ನಿರಂಜನ ತಿಳಿಸಿದ್ದಾರೆ.

    ಉಚಿತ ಬಸ್ ವ್ಯವಸ್ಥೆ: ವಿದ್ಯಾರ್ಥಿಗಳಿಗೆ ಹಳ್ಳಿಗಳಿಂದ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿ ಸುಗಮವಾಗಿ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ವಾಯವ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳೊಂದಿಗೆ ಸಮನ್ವಯ ಮಾಡಿಕೊಂಡು ಉಚಿತವಾಗಿ ಬಸ್ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಈಗಾಗಲೇ ಸೂಚನೆ ನೀಡಿದೆ. ವಿದ್ಯಾರ್ಥಿಗಳು ಹಳೆಯ ಸ್ಮಾರ್ಟ್ ಪಾಸ್ ಅಥವಾ ಪರೀಕ್ಷಾ ಪ್ರವೇಶ ಪತ್ರ ತೋರಿಸಿ ಉಚಿತವಾಗಿ ಪ್ರಯಾಣ ಮಾಡಬಹುದು. ಪರೀಕ್ಷಾ ಅಕ್ರಮಗಳಿಗೆ ಅವಕಾಶವಿಲ್ಲದಂತೆ ಪೊಲೀಸ್ ನಿಯೋಜಿಸಲಾಗುವುದು. ತಪಾಸಣೆಗೆ ಆರೋಗ್ಯ ಸಿಬ್ಬಂದಿ ನಿಯೋಜಿಸಲಾಗುವುದು. ಪ್ರಶ್ನೆ ಪತ್ರಿಕೆ ಸಾಗಾಣಿಕೆಗೆ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗುವುದು. ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತಲೂ ನಿಷೇಧಿತ ಪ್ರದೇಶ ಎಂದು ಗುರುತಿಸಲಾಗುವುದು ಎಂದು ಜಿ.ಸಿ. ನಿರಂಜನ ತಿಳಿಸಿದ್ದಾರೆ.

    ವಿದ್ಯಾರ್ಥಿ ಸಂರ್ಪಸಲು ಸೂಚನೆ: ದ್ವಿತೀಯ ಪಿಯು ಇಂಗ್ಲಿಷ್ ವಿಷಯದ ಪರೀಕ್ಷೆಯಿಂದ ಯಾವುದೇ ವಿದ್ಯಾರ್ಥಿ ಮಾಹಿತಿ ಕೊರತೆ, ಸಾರಿಗೆ ವ್ಯವಸ್ಥೆಯ ಅನನುಕೂಲತೆಯಿಂದ ಪರೀಕ್ಷೆ ಬರೆಯಲಾಗದೇ ಮನೆಯಲ್ಲಿ ಉಳಿಯಬಾರದು. ತಮ್ಮ ತಮ್ಮ ಕಾಲೇಜ್​ಗಳ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಸಂರ್ಪಸಿ ಪರೀಕ್ಷೆ ಬರೆಯಲು ವ್ಯವಸ್ಥೆ ಕೈಗೊಳ್ಳಬೇಕು. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಎಸ್​ಒಪಿ ಮಾನದಂಡದಂತೆ ಪರೀಕ್ಷೆ ನಡೆಸಬೇಕು. ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಕೊಠಡಿ ಪ್ರವೇಶಕ್ಕೂ ಮುನ್ನ ಪ್ರತಿಯೊಬ್ಬರಿಗೂ ಜ್ವರ ತಪಾಸಣೆ ನಡೆಸಬೇಕು. ಸ್ಯಾನಿಟೈಸರ್​ನಿಂದ ಕೈತೊಳೆಯಬೇಕು. ಪ್ರತಿ ವಿದ್ಯಾರ್ಥಿಯು ಮಾಸ್ಕ್ ಧರಿಸಿ ಪರೀಕ್ಷೆ ಬರೆಯಬೇಕು. ಜ್ವರದ ಲಕ್ಷಣವಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಬೇಕು. ಎಲ್ಲ ಕೊಠಡಿಗಳನ್ನು ಸ್ಯಾನಿಟೈಜೇಶನ್ ಮಾಡಬೇಕು. ಈ ಎಲ್ಲ ಸಿದ್ದತೆಗಳನ್ನು ಆಯಾ ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಕರು, ಪ್ರಾಚಾರ್ಯರು ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಬೇಕು ಯಾವುದೇ ಲೋಪವಾಗಬಾರದು ಎಂದು ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಕರಿಗೆ ಸೂಚಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ ತಿಳಿಸಿದ್ದಾರೆ.

    1,500 ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ: ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಬರೆಯಲು ಗ್ರಾಮೀಣ ಪ್ರದೇಶದಿಂದ 3 ಸಾವಿರ ವಿದ್ಯಾರ್ಥಿಗಳು ಆಗಮಿಸಲಿದ್ದಾರೆ. ಅವರಲ್ಲಿ 1,500 ವಿದ್ಯಾರ್ಥಿಗಳ ಪಾಲಕರು, ಶಿಕ್ಷಣ ಸಂಸ್ಥೆಯವರು ಖಾಸಗಿ ವಾಹನಗಳ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇನ್ನುಳಿದ 1,500 ನಿಗದಿತ ಸಮಯದೊಳಗೆ ಕರೆತರಲು ಹಾಗೂ ಮರಳಿ ಕಳಿಸಲು 80 ಬಸ್​ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕೆಲವು ರೂಟ್​ಗಳಿಗೆ ಈಗಾಗಲೇ ಸಂಚರಿಸುತ್ತಿರುವ ಬಸ್​ಗಳಲ್ಲಿಯೇ ವಿದ್ಯಾರ್ಥಿಗಳನ್ನು ಕರೆತರಲಾಗುವುದು. ರೂಟ್ ಬಸ್​ಗಳಿಲ್ಲದ ಕಡೆಗಳಲ್ಲಿ ಹೊಸದಾಗಿ ಬಸ್ ಬಿಡಲಾಗುವುದು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಾವೇರಿ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಎಸ್. ಜಗದೀಶ ತಿಳಿಸಿದ್ದಾರೆ.

    ಬಯಸಿದ ಕೇಂದ್ರಗಳಲ್ಲಿ ಅವಕಾಶ: ಬೇರೆಡೆ ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿರುವ ಹೊರ ಜಿಲ್ಲೆಯ ವಿದ್ಯಾರ್ಥಿಗಳು ಬಯಸಿದರೆ ಜಿಲ್ಲೆಯಲ್ಲಿರುವ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಬಹುದು ಅಥವಾ ಅವರು ವ್ಯಾಸಂಗ ಮಾಡಿದ ಜಿಲ್ಲೆಯ ಮೂಲ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಯಾವುದೇ ಗೊಂದಲ ಬೇಡ. ಹೆಚ್ಚಿನ ಮಾಹಿತಿಗಾಗಿ ಪ.ಪೂ. ಶಿಕ್ಷಣ ಇಲಾಖೆ ಕಚೇರಿಯ ಸಹಾಯವಾಣಿ ಸಂಖ್ಯೆ 08375-249298 ಹಾಗೂ ಮೊ. ಸಂಖ್ಯೆ 9900675278 ಸಂಪರ್ಕಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ ತಿಳಿಸಿದ್ದಾರೆ.

    ಪರಸ್ಪರ ಅಂತರದ ಜತೆಗೆ ಪ್ರತಿ ವಿದ್ಯಾರ್ಥಿಗೂ ಮಾಸ್ಕ್ ಹಾಗೂ ಸ್ಕ್ರೀನಿಂಗ್ ಕಡ್ಡಾಯಗೊಳಿಸಲಾಗಿದೆ. ಸ್ಕ್ರೀನಿಂಗ್, ಪರಸ್ಪರ ಅಂತರ, ಸ್ಯಾನಿಟೈಜೇಶನ್, ಮಾಸ್ಕ್ ವಿತರಣೆಗೆ ವಿವಿಧ ಉಪನ್ಯಾಸಕರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಗುರುತಿನ ಚೀಟಿ ಇದ್ದವರಿಗೆ ಮಾತ್ರ ಪರೀಕ್ಷಾ ಆವರಣದಲ್ಲಿ ಅವಕಾಶ ಕಲ್ಪಿಸಲು ಜಿಲ್ಲಾಡಳಿತ ಈಗಾಗಲೇ ಪರೀಕ್ಷಾ ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

    | ಎಂ. ಯೋಗೇಶ್ವರ, ಅಪರ ಜಿಲ್ಲಾಧಿಕಾರಿ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts