More

    ಮಲಪ್ರಭಾ ನದಿಯಲ್ಲಿ ಮೊಸಳೆಗಾಗಿ ಮುಂದುವರಿದ ಶೋಧ ಕಾರ್ಯ

    ಹೊಳೆಆಲೂರ: ಗ್ರಾಮದ ಮಲಪ್ರಭಾ ನದಿಯಲ್ಲಿ ಬುಧವಾರ ಕಾಣಿಸಿಕೊಂಡ ಮೊಸಳೆಗಾಗಿ ಹುಡುಕಾಟ ಮುಂದುವರಿದಿದೆ. ಅರಣ್ಯ ಇಲಾಖೆ, ಪೊಲೀಸರು ಹಾಗೂ ಗ್ರಾ.ಪಂ. ಸಿಬ್ಬಂದಿ ಗುರುವಾರ ನದಿ ದಂಡೆಯ ಮೇಲೆ ಶೋಧ ನಡೆಸಿದರೂ ಮೊಸಳೆಯ ಸುಳಿವು ಸಿಗಲಿಲ್ಲ. ಇದರಿಂದ ಹೊಳೆಆಲೂರ, ಗಾಡಗೋಳಿ, ಹೊಳೆಮಣ್ಣೂರ ಗ್ರಾಮದ ಜನರಲ್ಲಿ ಆತಂಕ ಮುಂದುವರಿದಿದೆ.

    ಅರಣ್ಯ ಇಲಾಖೆ ಪಿಎಸ್​ಐ ಅನ್ವರ್ ಕೊಲ್ಹಾರ ಹಾಗೂ ಪೊಲೀಸ್ ಇಲಾಖೆ ಎಎಸ್​ಐ ಮಹೇಶ ಹೆರಕಲ್ಲ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ಬೆಳಗ್ಗೆ 8 ಗಂಟೆಗೆ ಘಟನಾ ಸ್ಥಳಕ್ಕೆ ಆಗಮಿಸಿ ಸ್ಥಳೀಯರಿಂದ ಮಾಹಿತಿ ಪಡೆದರು. ಬುಧವಾರ ಮೊಸಳೆ ನೋಡಿದ ಮಕ್ಕಳು ಹಾಗೂ ಅದನ್ನು ಚಿತ್ರೀಕರಿಸಿದ ವ್ಯಕ್ತಿಗಳನ್ನು ಕರೆಸಿ ಮಾಹಿತಿ ಪಡಿದುಕೊಂಡರು. ನದಿಯ ಎರಡೂ ದಂಡೆಗಳ ಮೇಲೆ ನಾಲ್ಕೈದು ತಾಸು ಅಲೆದರೂ ಮೊಸಳೆ ಪತ್ತೆಯಾಗಲಿಲ್ಲ. ‘ಹರಿವಿನಲ್ಲಿ ಅದು ಬೇರೆಡೆ ಹೋಗಿರಬಹುದು, ಇಲ್ಲವೇ ನೀರಿನಲ್ಲಿ ಅಡಗಿರಬಹುದು. ಹೀಗಾಗಿ ಒಂದೆರಡು ದಿನ ಕಾಯಬೇಕು. ಮೊಸಳೆ ಕಂಡು ಬಂದ ಸ್ಥಳದಲ್ಲಿ ನೀರು ಆಳವಾಗಿದ್ದು, ಕೆಸರು ತುಂಬಿದೆ. ಮೊಸಳೆ ಗೋಚರಿಸಿದರೆ ಮಾತ್ರ ಧಾರವಾಡದಿಂದ ಮೊಸಳೆ ಹಿಡಿಯುವ ತಂಡ ಆಗಮಿಸಲಿದೆ. ಅಲ್ಲಿಯವರಿಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು’ ಎಂದು ಅಧಿಕಾರಿಗಳು ತಿಳಿಸಿದರು.

    ಗಂಭೀರವಾಗಿ ಪರಿಗಣಿಸಿ: ಮೊಸಳೆ ಕಂಡು ಬಂದ ಸ್ಥಳದ ಹತ್ತಿರದಲ್ಲೇ ಹೊಳೆಆಲೂರ, ಗಾಡಗೋಳಿ ಮತ್ತು ಹೊಳೆಮಣ್ಣೂರ ಗ್ರಾಮಗಳ ನೂರಾರು ರೈತರು ನಿತ್ಯ ಕೃಷಿ ಕೆಲಸಗಳಿಗಾಗಿ ನದಿ ದಾಟುತ್ತಾರೆ. ಮಹಿಳೆಯರು, ಮಕ್ಕಳು ಸ್ಥಾನ ಮಾಡಲು ಹಾಗೂ ಬಟ್ಟೆ ತೊಳೆಯಲು ಇಲ್ಲಿ ಜಮಾಯಿಸುತ್ತಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಏನಾದರೂ ಅನಾಹುತ ಸಂಭವಿಸುವ ಮೊದಲು ಅಧಿಕಾರಿಗಳು ಮೊಸಳೆಯನ್ನು ಹಿಡಿಯಬೇಕು. ಅದಕ್ಕೆ ಬೇಕಾದ ಸಕಲ ವ್ಯವಸ್ಥೆ ನಾವು ಮಾಡುತ್ತವೆ ಎಂದು ತಾ.ಪಂ. ಸದಸ್ಯ ಜಗದೀಶ ಬ್ಯಾಡಗಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts