More

    ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನ; ಕೊಳೆಗೇರಿ ನಿವಾಸಿಗಳ ಅನುದಾನ 75 ಸಾವಿರ ರೂ.ಗಳಿಂದ 1 ಲಕ್ಷಕ್ಕೆ ಹೆಚ್ಚಳ

    ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಗೆ ಒಳಪಡುವ ಸುಮಾರು 32 ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ ಎಸ್‌ಸಿಎಸ್‌ಪಿ/ ಟಿಎಸ್‌ಪಿ ಅನುದಾನ ಬಳಕೆಯ ಕುರಿತು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸುದೀರ್ಘ 8 ಗಂಟೆಗಳ ಕಾಲ ಪ್ರಗತಿ ಪರಿಶೀಲನೆ ನಡೆಸಿದರು.

    ಕೊಳೆಗೇರಿ ನಿಗಮದ ಎಸ್‌ಸಿಎಸ್‌ಪಿ/ಟಿಎಸ್‌ಪಿ ಫಲಾನುಭವಿಗಳಿಗೆ ಈವರೆಗೂ ಇದ್ದ 75,000 ರೂ. ಅನುದಾನವನ್ನು 1 ಲಕ್ಷಕ್ಕೆ ಏರಿಸಲು ನಿರ್ಧರಿಸಲಾಯಿತು.

    ನೀರಾವರಿ ಇಲಾಖೆ ಅಡಿಯಲ್ಲಿ ಶಿವಮೊಗ್ಗ ಭಾಗದಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಲಾಗಿದ್ದು ಆ ಕುರಿತು ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚಿಸಿದರು.

    ಪಶು ಸಂಗೋಪನೆ ಇಲಾಖೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಬದುಕಿಗೆ ನೆರವಾಗುವ ನಿಟ್ಟಿನಲ್ಲಿ ಎರಡು ಹಸುಗಳನ್ನು ನೀಡುವ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅದಕ್ಕೆ ಅಧಿಕಾರಿಗಳು ಪಶುಭಾಗ್ಯ ಯೋಜನೆಯ ಪ್ರಸ್ತಾವನೆಗೆ ಅನುಮೋದನೆ ಪಡೆದು ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು.

    ಗ್ಯಾರೆಂಟಿ ಯೋಜನೆಗಳಿಗೆ ಸಂಬಂಧಿಸಿದ ಇಲಾಖೆಗಳಿಗೆ ಸೂಕ್ತವಾದ ನಿರ್ದೇಶನ ನೀಡಿ, ಎಷ್ಟು ಮಂದಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಅನುಕೂಲವಾಗಿದೆ ಎಂಬುದರ ಕುರಿತಂತೆ ಅಂಕಿ ಅಂಶಗಳನ್ನು ಒದಗಿಸಲು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

    ಹಂದಿ ಸಾಕಣೆ ಊರಿಂದ ದೂರ ಏಕೆ?:
    ಹಂದಿ ಸಾಕಣೆ ಕೇಂದ್ರಕ್ಕೆ ಸಂಬಂಧಿಸಿದಂತೆ ದಾವಣಗೆರೆಯಲ್ಲಿ ಉಂಟಾಗಿರುವ ಸಮಸ್ಯೆಗೆ ಸಂಬಂಧಿಸಿದಂತೆ ಚರ್ಚೆ ನಡೆಯುವಾಗ, ಹಂದಿ ಸಾಕಣೆ ಕೇಂದ್ರಗಳನ್ನು ಏಕೆ ಊರಿಂದ ಆಚೆಗೆ ಇಡಲಾಗುತ್ತದೆ ಗೊತ್ತೆ ಎಂದು ಕೇಳಿದಾಗ, ಎಲ್ಲ ಅಧಿಕಾರಿಗಳು ಒಮ್ಮೆ ಯೋಚಿಸುತ್ತಿದ್ದರು.
    ಆಗ ಸಚಿವರು, ಹಂದಿಗಳ ಮೇಲೆ ಕೀಟಗಳು ಕೂತು ಅವು ಸುಮಾರು ಎರಡು ಕಿಲೋಮೀಟರ್ ಗಳಷ್ಟು ದೂರ ಹಾರುವುದರಿಂದ ವೈರಸ್ ಆಧಾರಿತ ಖಾಯಿಲೆಗಳು ಬರುವ ಸಂಭವ ಇರುತ್ತದೆ. ಆದ್ದರಿಂದ ಹಂದಿ ಸಾಕಣೆ ಕೇಂದ್ರಗಳನ್ನು ಊರಿಂದ ಎರಡು ಕಿಲೋಮೀಟರ್ ಆಚೆ ಇರಬೇಕೆಂದು ಹೇಳಲಾಗುತ್ತದೆ. ಹಾಗಾಗಿ ಈ ವಿಷಯ ವೈಜ್ಞಾನಿಕವಾಗಿದೆ ಎಂದು ತಿಳಿಸಿದರು.

    ಸಭೆಯಲ್ಲಿ ಬಸವಣ್ಣನವರ ಸ್ಮರಣೆ:
    ಇಲಾಖೆಯ ಅಧಿಕಾರಿಯೊಬ್ಬರು ಅನುದಾನ ಬಳಕೆಯ ವಿಷಯದಲ್ಲಿ ಅಗತ್ಯಕ್ಕೆ ಮೀರಿ ಹೆಚ್ಚಿನ ಅನುದಾನದ ಪ್ರಸ್ತಾಪ ಮಾಡಿದಾಗ ಸಚಿವರು, ಬಿಜ್ಜಳನು ಬಹುಮಾನ ರೂಪದಲ್ಲಿ ಬಸವಣ್ಣನವರಿಗೆ ಉಡುಗೊರೆ ನೀಡಿದಾಗ ಸಾರ್ವಜನಿಕರ ಹಣವನ್ನು ಹೀಗೆ ಖರ್ಚು ಮಾಡಬಾರದು. ಅದು ಅವರ ಕಲ್ಯಾಣಕ್ಕೇ ಸೇರಬೇಕು ಎಂದು ಹೇಳಿದ್ದನ್ನು ನೆನಪಿಸಿದರು.
    ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts