ಬೆಳಗಾವಿ: ಜಿಲ್ಲೆಯ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಯಲ್ಲಿ ಗೆದ್ದ ಹಾಗೂ ಪರಾಜಿತ ಅಭ್ಯರ್ಥಿ ಗಳ ಕುಟುಂಬಸ್ಥರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಮಾರಾಮಾರಿ ನಡೆದ ಘಟನೆ ಜ.2 ರಂದು ನಡೆದಿದ್ದು, ಸೋಮವಾರ ಸಾಮಾಜಿಕ ಜಾಲತಾಣ ಗಳಲ್ಲಿ ಬಡಿದಾಟದ ವಿಡಿಯೋ ವೈರಲ್ ಆಗಿದೆ.
ಗ್ರಾಮದ 4ನೇ ವಾರ್ಡ್‌ನಲ್ಲಿ ಸ್ಪರ್ಧಿಸಿದ್ದ ಸುನಂದಾ ಯಮನಪ್ಪ ಭಜಂತ್ರಿ ಗೆಲುವು ಸಾಧಿಸಿದ್ದರು. ಸುರೇಖಾ ಭೀಮಶಿ ಕಂಕಣವಾಡಿ ಎಂಬುವರು ಸೋತಿದ್ದರು. ಉಭಯ ಕುಟುಂಬಸ್ಥರು ಒಂದೇ ಬೀದಿಯಲ್ಲಿ ಇರುವುದಿಂದ ಸೋತ ಅಭ್ಯರ್ಥಿಯ ಕುಟುಂಬಸ್ಥರು ಬೀದಿಯಲ್ಲಿ ಕುಡಿಯುವ ನೀರು ಬಾರದಂತೆ ನಲ್ಲಿ ಬಂದ್ ಮಾಡಿದ್ದಾರೆ ಎಂದು ಸುನಂದಾ ಕುಟುಂಬಸ್ಥರು ಆರೋಪಿಸಿದ್ದಾರೆ.
ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿ ಬಡಿದಾಡಿಕೊಂಡಿದ್ದಾರೆ. ಹೆಂಗಸರು, ಗಂಡಸರು ದೊಣ್ಣೆಗಳಿಂದ ಬಡಿದಾಡಿಕೊಂಡು ಪರಸ್ಪರ ಕಲ್ಲು ತೂರಾಡಿದ್ದಾರೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.
ತುಕ್ಕಾನಟ್ಟಿಯಲ್ಲಿ ನಡೆದ ಗಲಾಟೆಯಲ್ಲಿ 40 ಜನ ಭಾಗಿಯಾಗಿದ್ದಾರೆ. ದೂರು, ಪ್ರತಿದೂರು ದಾಖಲಾಗಿದ್ದು, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು.
| ಲಕ್ಷ್ಮಣ ನಿಂಬರಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ