More

    ಪ್ರಾಥಮಿಕ ಶಾಲೆಗಳು ರೆಡಿ: ನಾಳೆ 1ರಿಂದ 5ರ ಚಿಣ್ಣರೂ ಶಾಲೆಯತ್ತ

    ವೇಣುವಿನೋದ್ ಕೆ.ಎಸ್.ಮಂಗಳೂರು
    ಒಂದೂವರೆ ವರ್ಷ ಬಳಿಕ ದ.ಕ.ಜಿಲ್ಲೆಯಲ್ಲೂ 1ರಿಂದ 5ರ ಇಯತ್ತೆಯ ಪುಟಾಣಿಗಳು ಶಾಲೆಯತ್ತ ಮರಳಲಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌ಪಾಸಿಟಿವಿಟಿ ದರ ಕನಿಷ್ಠ ಪ್ರಮಾಣದಲ್ಲಿ ಇರುವುದರಿಂದ ಅ.25ರಂದೇ ತರಗತಿ ಮರು ಆರಂಭಗೊಳ್ಳುತ್ತಿದ್ದು ಪ್ರಾಥಮಿಕ ತರಗತಿ ಮಕ್ಕಳ ಸ್ವಾಗತಕ್ಕೆ ಶಾಲೆಗಳು ಸಜ್ಜಾಗಿವೆ.

    ಪ್ರೌಢಶಾಲೆ, ಹಿರಿಯ ಪ್ರಾಥಮಿಕ ತರಗತಿಗಳು ಆರಂಭವಾದಾಗ ಪ್ರಾರಂಭದ ಕೆಲವು ದಿನ ವಿದ್ಯಾರ್ಥಿಗಳ ಸ್ಪಂದನೆ ಅಷ್ಟಾಗಿ ಇರಲಿಲ್ಲ. ಅದನ್ನು ಗಮನಿಸಿಕೊಂಡು ಈ ಬಾರಿ ಪ್ರಾರಂಭದ ಒಂದು ವಾರ ಬೋಧನೆ ಮಾಡುವ ಬದಲು ವಿದ್ಯಾರ್ಥಿಗಳನ್ನು ಮತ್ತೆ ಶಾಲಾ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಮಾಡಲು ಅಧಿಕಾರಿಗಳು ಈಗಾಗಲೇ ಶಾಲೆಗಳಿಗೆ ಸೂಚನೆ ನೀಡಿದ್ದಾರೆ.

    ಎಂದಿನಂತೆ ವಿದ್ಯಾರ್ಥಿಗಳ ಥರ್ಮಲ್ ಸ್ಕ್ರೀನಿಂಗ್, ಅವರನ್ನು ಒಂದು ಮೀಟರ್ ಅಂತರದಲ್ಲಿ ಕುಳಿತುಕೊಳ್ಳುವಂತೆ ಮಾಡುವುದು, ಪ್ರತಿ ದಿನ ಶಾಲಾ ಕೊಠಡಿಗಳನ್ನು ಸೋಡಿಯಂ ಹೈಪೊಕ್ಲೋರೈಟ್ ಸಿಂಪಡಿಸಿ ಸೋಂಕು ರಹಿತಗೊಳಿಸುವುದು ಇತ್ಯಾದಿ ಹೆಚ್ಚುವರಿ ಕೆಲಸಗಳನ್ನು ಶಾಲಾ ಸಿಬ್ಬಂದಿ ಕೈಗೊಳ್ಳಬೇಕಾಗುತ್ತದೆ.

    ಶಾಲೆಗೆ ಬರುವ ಮಕ್ಕಳ ಪಾಲಕರ ಅನುಮತಿ ಪತ್ರ ಪಡೆದುಕೊಳ್ಳುವುದು ಕಡ್ಡಾಯ. ಹಾಗಾಗಿ ಮಕ್ಕಳನ್ನು ತರಗತಿಗೆ ಬರಲೇಬೇಕು ಎಂದು ಒತ್ತಡ ಹೇರುವಂತಿಲ್ಲ. ಒಂದು ವೇಳೆ ಮಗುವಿನ ಪಾಲಕರು ಆನ್‌ಲೈನ್ ಶಿಕ್ಷಣವನ್ನೇ ಬಯಸಿದರೆ ಆ ವ್ಯವಸ್ಥೆ ಒದಗಿಸಬೇಕಾಗುತ್ತದೆ. ಆದರೆ ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿಗಳ ಪ್ರಕಾರ ಈಗಿನ ಪರಿಸ್ಥಿತಿಯಲ್ಲಿ ಆನ್‌ಲೈನ್ ಬೇಡ ಆಫ್‌ಲೈನ್ ಬೇಕು ಎನ್ನುವವರೇ ಹೆಚ್ಚು. ಈಗಾಗಲೇ ಪ್ರಾರಂಭಗೊಂಡ ತರಗತಿಗಳಲ್ಲೂ ಶಾಲೆ ಆರಂಭಗೊಂಡ ಒಂದೆರಡು ದಿನಗಳಲ್ಲಿ ವಿದ್ಯಾರ್ಥಿಗಳೆಲ್ಲರೂ ಶಾಲೆಗಳಿಗೆ ಮರಳಿದ್ದಾರೆ.

    ದ.ಕ ಜಿಲ್ಲೆಯಲ್ಲಿ 1,57,562 ಮಕ್ಕಳು ಶಾಲೆಗೆ: ದ.ಕ.ಜಿಲ್ಲೆಯಲ್ಲಿ ಖಾಸಗಿ, ಅನುದಾನಿತ, ಸರ್ಕಾರಿ ಸೇರಿದಂತೆ 1ರಿಂದ 5ನೇ ತರಗತಿವರೆಗಿನ 1,57,562 ಮಕ್ಕಳು ಮತ್ತೆ ಕ್ಲಾಸ್‌ಗಳತ್ತ ಬರಲಿದ್ದಾರೆ. 1ರಿಂದ 10ರವರೆಗೆ ಜಿಲ್ಲೆಯಲ್ಲಿ 3.20 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಹೆಚ್ಚಿನ ಎಲ್ಲ ಶಾಲೆಗಳಲ್ಲಿ 1ರಿಂದ 5ರವರೆಗಿನ ತರಗತಿಗಳನ್ನು ದಿನ ಬಿಟ್ಟು ದಿನ ಮಾಡಲು ನಿರ್ಧರಿಸಲಾಗಿದೆ. ಅಂದರೆ ವಾರದಲ್ಲಿ ಮೂರು ದಿನ ತರಗತಿ ಮಧ್ಯಾಹ್ನವರೆಗೆ ಇರಲಿದೆ. ನವೆಂಬರ್ 2ರಿಂದ ಇಡೀ ದಿನ ತರಗತಿ ಇರಲಿದೆ.

    ಶಿಕ್ಷಕರ ಮುಂದೆ ದೊಡ್ಡ ಸವಾಲು!: ಪ್ರಾರಂಭದ ದಿನಗಳಲ್ಲಿ ವಿದ್ಯಾರ್ಥಿಗಳ ಪಾಲಕರು ಶಾಲೆಗೆ ಕಳುಹಿಸಬಹುದೇ ಇಲ್ಲವೇ ಎಂಬ ಆತಂಕದಲ್ಲಿ ಶಿಕ್ಷಕ ವೃಂದ ಇದೆ. ಈಗಾಗಲೇ ಪ್ರಾರಂಭಗೊಂಡ ಶಾಲೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯ ಕೊರತೆ, ಸುದೀರ್ಘ ಕಾಲ ಮನೆಯಲ್ಲೇ ಕುಳಿತು ಆಸಕ್ತಿ ಕಳೆದುಕೊಳ್ಳುವಿಕೆ, ಅಕ್ಷರ, ಭಾಷಾಜ್ಞಾನದ ಕಳೆದುಕೊಳ್ಳುವಿಕೆಯಂತಹ ಸಮಸ್ಯೆಗಳು ಕಂಡುಬಂದಿವೆ. ಪುಟ್ಟ ಮಕ್ಕಳೂ ಇದಕ್ಕೆ ಮಿಗಿಲಾಗಿಲ್ಲ. ಕೆಲ ತಿಂಗಳ ಕಾಲ ಅವರನ್ನು ಮತ್ತೆ ಸಾಮಾನ್ಯ ಸ್ಥಿತಿಗೆ ತರುವ ಸವಾಲು ಇದೆ.

    ಉಡುಪಿ ಜಿಲ್ಲೆಯ ಶಾಲೆಗಳಲ್ಲಿಯೂ ಸಿದ್ಧತೆ: ಉಡುಪಿ ಜಿಲ್ಲೆಯಲ್ಲಿ ಒಂದರಿಂದ ಐದನೇ ತರಗತಿ ಆರಂಭಕ್ಕೆ ಸರ್ವಸಿದ್ಧತೆ ಮಾಡಿಕೊಳ್ಳಲಾಗಿದೆ. ಸ್ವಚ್ಛತೆ ಜತೆಗೆ ಅಗತ್ಯ ತಯಾರಿ ನಡೆದಿದೆ. ಶಾಲೆಗಳಲ್ಲಿ ಕೋವಿಡ್ ಮಾರ್ಗಸೂಚಿ ವ್ಯವಸ್ಥಿತ ಪಾಲನೆಯೊಂದಿಗೆ ಶುಚಿತ್ವ ಮತ್ತು ಮೂಲಸೌಕರ್ಯಕ್ಕೆ ವಿಶೇಷ ಒತ್ತು ನೀಡಲಾಗಿದೆ. ಶಾಲೆಗಳಲ್ಲಿ ಪಾಲಕರ ಸಭೆ ನಡೆಯುತ್ತಿದೆ. ಬಿಇಒ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡಿದ್ದಾರೆ. ಪಾಲಕರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಎಲ್ಲ ಪಾಲಕರು ಮಕ್ಕಳನ್ನು ತರಗತಿಗೆ ಕಳುಹಿಸಲು ಒಪ್ಪಿಗೆ ನೀಡಿದ್ದಾರೆ. ಮಕ್ಕಳ ಆರೋಗ್ಯ ಸುರಕ್ಷತೆ ಬಗ್ಗೆ ಶಿಕ್ಷಕರು, ಪಾಲಕರ ಜವಾಬ್ದಾರಿಯನ್ನು ತಿಳಿಸಲಾಗಿದೆ.

    ಉಡುಪಿ ಜಿಲ್ಲೆಯಲ್ಲಿ ಭೌತಿಕ ತರಗತಿ ಕಡ್ಡಾಯವಿಲ್ಲ, ಆನ್‌ಲೈನ್ ತರಗತಿಯೂ ನಡೆಯುತ್ತಿರುತ್ತದೆ. ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ 220 ಶಾಲೆಗಳಲ್ಲಿಯೂ ತರಗತಿ ಆರಂಭಗೊಳ್ಳಲಿದೆ.
    – ಎಚ್.ಎಸ್ ನಾಗೂರ
    ಶಿಕ್ಷಣ ಇಲಾಖೆ ಉಪ ನಿರ್ದೇಶಕ, ಉಡುಪಿ

    ಶಾಲಾರಂಭಕ್ಕೆ ಎಲ್ಲಾ ಸಿದ್ಧತೆ ಪೂರ್ಣವಾಗಿದೆ, ಹೆತ್ತವರೆಲ್ಲರೂ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವ ನಿರೀಕ್ಷೆಯಿದೆ, ಆನ್‌ಲೈನ್ ಶಿಕ್ಷಣವೇ ಬೇಕೆಂಬವರಿಗೆ ಅದನ್ನೂ ಒದಗಿಸಲಾಗುತ್ತದೆ.
    -ಮಲ್ಲೇಸ್ವಾಮಿ, ಡಿಡಿಪಿಐ, ದ.ಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts