More

    ಕನ್ನಡ ಉಳಿಸಲು ಮನೆಯೇ ಆಯ್ತು ಗ್ರಂಥಾಲಯ

    ಉಡುಪಿ ಕಸಾಪ ವಿನೂತನ ಕಾರ್ಯಕ್ರಮ | ಓದಲು ಸಿಗಲಿದೆ ಪುಸ್ತಕಗಳ ಸಂಗಮ

    ಪ್ರಶಾಂತ ಭಾಗ್ವತ, ಉಡುಪಿ
    ಅದೊಂದು ಕಾಲವಿತ್ತು… ಕಥೆ-ಕಾದಂಬರಿಗಳ ಪುಸ್ತಕ ಓದಲು ನಗರಗಳಲ್ಲಿ ಬೃಹತ್​ ಲೈಬ್ರರಿಯೇ ಇರುತ್ತಿತ್ತು. ಒಂದಿಷ್ಟು ಪ್ರಾಜ್ಞರು, ಲೇಖಕರು, ಸಾಹಿತಿಗಳು ಹಾಗೂ ಶಿಕ್ಷಕರು ಇಲ್ಲಿ ಸದಸ್ಯತ್ವದ ಕಾರ್ಡ್​ ಪಡೆದು, ಬಾಡಿಗೆಗೆ ಪುಸ್ತಕ ಕೊಂಡು ಓದುತ್ತಿದ್ದರು. ಆ ಚಿತ್ರಣವೀಗ ಇತಿಹಾಸ.

    ಮೂರ್ನಾಲ್ಕು ದಶಕದಿಂದ ಪುಸ್ತಕ ಓದುವವರ ಸಂಖ್ಯೆ ಕ್ಷೀಣಿಸತೊಡಗಿದ್ದು, 2020ರ ಬಳಿಕವಂತೂ ಕನ್ನಡದ ಸಾಹಿತ್ಯ, ಕಥೆ-ಕವನ, ಕಾದಂಬರಿ ಅಂದರೆ ಏನು ಎಂದು ಪ್ರಶ್ನಿಸುವ ಸಂದಿಗ್ಧ ಸ್ಥಿತಿ ಸೃಷ್ಟಿಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್​, ಮನೆಯೇ ಗ್ರಂಥಾಲಯ ಎಂಬ ವಿನೂತನ ಕಾರ್ಯಕ್ರಮ ಆರಂಭಿಸಿದೆ.

    ಹೊಸ ಅಭಿಯಾನ

    ಸಮಯ ಸಿಕ್ಕಾಗಲೆಲ್ಲ ಮೊಬೈಲ್​ ಹಿಡಿಯುವ ಅಥವಾ ಮೊಬೈಲ್​ ನೋಡಲೆಂದೇ ದಿನದ ಹೆಚ್ಚಿನ ಸಮಯ ಮೀಸಲಿಡುವ ಜನರಿಗೆ ಪುಸ್ತಕ ಓದಲು ಎಲ್ಲಿ ಸಮಯವಿದೆ? ಹೀಗಾದರೆ ಕನ್ನಡದ ಗತಿಯೇನು ಎಂಬ ಚಿಂತೆ ಉಡುಪಿ ತಾಲೂಕು ಕಸಾಪ ಅಧ್ಯಕ್ಷ ರವಿರಾಜ್​ ಎಚ್​.ಪಿ. ಅವರನ್ನು ಕಾಡತೊಡಗಿತು. ಮತ್ತೆ ಜನರು ಕನ್ನಡದ ಪುಸ್ತಕ ಓದುವಂತಾಗಬೇಕು ಎಂಬ ಉತ್ಕಟ ಇಚ್ಛೆಯಿಂದ ಎಲ್ಲ ಪದಾಧಿಕಾರಿಗಳ ಸಹಕಾರದಲ್ಲಿ ಹೊಸ ಅಭಿಯಾನ ಆರಂಭಿಸಿದರು. ಅದುವೇ ಮನೆಯೇ ಗ್ರಂಥಾಲಯ.

    ಡಾ. ಕೆ.ಪಿ. ರಾವ್​ ಚಾಲನೆ

    ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​, ಉಡುಪಿ ತಾಲೂಕು ಘಟಕ ಆರಂಭಿಸಿದ ಮನೆಯೇ ಗ್ರಂಥಾಲಯ ಕಾರ್ಯಕ್ರಮಕ್ಕೆ ಪ್ರಸಿದ್ಧ ಸಾಹಿತಿ, ನಾಡೋಜ ಡಾ. ಕೆ.ಪಿ. ರಾವ್​ ಇತ್ತೀಚೆಗೆ ಚಾಲನೆ ನೀಡಿದ್ದಾರೆ. ಉಡುಪಿಯ ಬೈಲೂರಿನ ರಂಗ ಕಲಾವಿದರಾದ ಶಶಿಪ್ರಭಾ ಹಾಗೂ ವಿವೇಕಾನಂದ ದಂಪತಿಯ ಮನೆಯಲ್ಲಿ ಕಸಾಪ ನೀಡಿದ 10 ಪುಸ್ತಕಳನ್ನು ಇಟ್ಟು, ಅಭಿಯಾನದ ಮೊದಲ ಪುಟ್ಟ ಗ್ರಂಥಾಲಯ ಉದ್ಘಾಟಿಸಿ, ಶುಭ ಹಾರೈಸಿದ್ದಾರೆ.

    KASAPA-2
    ವಿವೇಕಾನಂದ ಅವರ ಮನೆಯ ಕಪಾಟಿನಲ್ಲಿ ಕನ್ನಡದ ಪುಸ್ತಕ ಇಡುತ್ತಿರುವುದು. ಉಡುಪಿ ಕಸಾಪ ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ಇದ್ದಾರೆ.

    ಸಾಹಿತ್ಯಾಸಕ್ತಿ ಬೆಳೆಸುವ ಉದ್ದೇಶ

    ಇಂಗ್ಲಿಷ್​ ವ್ಯಾಮೋಹದಿಂದ ಮಾತೃಭಾಷೆ ಕನ್ನಡಕ್ಕೆ ಹಿನ್ನಡೆ ಆಗುತ್ತಿದೆ. ಅದನ್ನು ತಪ್ಪಿಸುವ ಪ್ರಮುಖ ಉದ್ದೇಶದಿಂದ ಉಡುಪಿ ತಾಲೂಕು ಕಸಾಪ ಟಕ ಮನೆಯೇ ಗ್ರಂಥಾಲಯ ಆರಂಭಿಸಿದೆ. ಮನೆಯಲ್ಲಿ ಪುಟ್ಟ ಗ್ರಂಥಾಲಯ ತೆರೆದರೆ, ಕಸಾಪದಿಂದ ಉಚಿತವಾಗಿ ಕನ್ನಡದ 10 ಪುಸ್ತಕ ಕೊಡಲಾಗುವುದು. ಇದರಿಂದ ಸಾಹಿತ್ಯದ ಓದು ಆರಂಭವಾಗಿ, ಸಾಹಿತಿಗಳಿಗೂ ಪ್ರೋತ್ಸಾಹ ನೀಡಿದಂತಾಗುತ್ತದೆ. ಹೀಗಾಗಿ ಮನೆ-ಮಂದಿರ, ಬ್ಯಾಂಕ್​, ಜುವೆಲ್ಲರಿ ಹಾಗೂ ಅಂಗಡಿಗಳಲ್ಲಿ ಪುಟ್ಟ ಗ್ರಂಥಾಲಯ ಸ್ಥಾಪಿಸಲಾಗುವುದು. ತನ್ಮೂಲಕ ಜ್ಞಾನ ಬೆಳವಣಿಗೆಯೊಂದಿಗೆ ಸಾಹಿತ್ಯಾಸಕ್ತಿ ಬೆಳೆಸುವುದು, ಕನ್ನಡದ ಸಂಸ್ಕೃತಿ ಉಳಿಸುವುದು, ಮಕ್ಕಳಲ್ಲಿ ಕನ್ನಡ ಪುಸ್ತಕ ಓದುವ ಹವ್ಯಾಸ ಬೆಳೆಸುವುದು, ಮನೆಗೆ ಬರುವ ಅತಿಥಿಗಳ ಸಮಯ ವ್ಯರ್ಥವಾಗದಂತೆ ಮಾಡುವುದು, ನಮ್ಮೂರ ಸಾಹಿತಿ, ಬರಹಗಾರರ ಪುಸ್ತಕವನ್ನು ಮನೆ-ಮನಗಳಿಗೆ ತಲುಪಿಸುವುದು ಪ್ರಮುಖ ಉದ್ದೇಶ. ಇದರಿಂದ ಕನ್ನಡ ಭಾಷೆ ಬಳಸಿ, ಬೆಳೆಸಲು ಸುಲಭವಾಗುತ್ತದೆ. ಯಾರಿಗಾದರೂ ಮನೆಯಲ್ಲಿ ಗ್ರಂಥಾಲಯ ಆರಂಭಿಸಬೇಕಿದ್ದರೆ ಉಡುಪಿ ತಾಲೂಕು ಕಸಾಪ ಘಟಕ (ಮೊ. 9845240309) ಸಂಪರ್ಕಿಸಬಹುದು ಎನ್ನುತ್ತಾರೆ ಅಧ್ಯಕ್ಷ ರವಿರಾಜ್​ ಎಚ್​.ಪಿ.

    KASAPA-3

    ಉಡುಪಿ ತಾಲೂಕು ಕಸಾಪಕ್ಕೆ 2 ಸಾವಿರಕ್ಕೂ ಅಧಿಕ ಪುಸ್ತಕಗಳನ್ನು ಉಡುಪಿಯ ಬರಹಗಾರರು ನೀಡಿದ್ದಾರೆ. ಅವುಗಳನ್ನೇ ‘ಮನೆಯೇ ಗ್ರಂಥಾಲಯ’ಕ್ಕೆ ನೀಡುತ್ತೇವೆ. ಈ ಅಭಿಯಾನ ನಿರಂತರ. ಏಕೆಂದರೆ, ಇದರಿಂದ ಕನ್ನಡ ಭಾಷೆಯ ಉಳಿವು ಸಾಧ್ಯ ಎನ್ನುವುದು ನಮ್ಮ ಬಲವಾದ ನಂಬಿಕೆ. ಈ ಅಭಿಯಾನ ರಾಜ್ಯವ್ಯಾಪಿ ವಿಸ್ತರಣೆ ಆಗಬೇಕೆನ್ನುವುದು ನನ್ನ ಕನಸು.

    ರವಿರಾಜ್​ ಎಚ್​.ಪಿ.
    ಅಧ್ಯಕ್ಷ. ಕಸಾಪ ಉಡುಪಿ ತಾಲೂಕು ಘಟಕ

    ಶತಮಾನಗಳ ಹಿಂದೆ ಮುದ್ರಣ ಮಾಧ್ಯಮದ ಆವಿಷ್ಕಾರದಿಂದಾಗಿ ಕೋಟ್ಯಂತರ ಗ್ರಂಥಗಳ ಅಧ್ಯಯನ ಸಾಧ್ಯವಾಗಿವೆ. ಒಂದು ಗ್ರಂಥ ಅಥವಾ ಸಾಹಿತ್ಯದ ಒಂದು ಪುಟದ ಸುವಾಸನೆ ಗಮನಿಸಿದಾಗ ಅಲ್ಲಿ ಸಿಗುವ ಆನಂದವೇ ಬೇರೆ. ಅದನ್ನು ಪದಗಳಲ್ಲಿ ಕಟ್ಟಿಕೊಡಲು ಸಾಧ್ಯವಿಲ್ಲ. ಜನರು ಮತ್ತೆ ಓದಲು ಆರಂಭಿಸಬೇಕು ಎಂದು ಕಸಾಪ ಆರಂಭಿಸಿರುವ ಈ ಅಭಿಯಾನ ದೇಶಕ್ಕೇ ಮಾದರಿ.

    ಡಾ. ಕೆ.ಪಿ. ರಾವ್​.

    ಪ್ರಸಿದ್ಧ ಸಾಹಿತಿ, ನಾಡೋಜ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts