More

    ಅಂಬ್ಲಮೊಗರು ಶಾಲೆಗೆ ಹೊಸ ಕಟ್ಟಡ

    ಉಳ್ಳಾಲ: ಅಂಬ್ಲಮೊಗರು ಪ್ರೌಢಶಾಲೆ ಹೊಸ ಕಟ್ಟಡಕ್ಕೆ ಸರ್ಕಾರ ಅನುದಾನ ಬಿಡುಗಡೆಗೊಳಿಸಿದೆ. ಇದೇ ವೇಳೆ ಮೀಸಲು ಸರ್ಕಾರಿ ಜಮೀನಿಗೆ ಕಾಡಿದ್ದ ಶನಿಕಾಟ ದೂರವಾಗಿದ್ದು, ಶೀಘ್ರದಲ್ಲೇ ಸುಸಜ್ಜಿತ ಕಟ್ಟಡ ನಿರ್ಮಾಣ ನಿರೀಕ್ಷೆಯಿದೆ.

    ಅಂಬ್ಲಮೊಗರುವಿನಲ್ಲಿ 1ರಿಂದ 8ನೇ ತರಗತಿಶಾಲೆಯಿತ್ತು. ಪ್ರೌಢಶಾಲೆ ಬೇಕೆನ್ನುವ ಬೇಡಿಕೆಯಂತೆ 2011ರಲ್ಲಿ ಶಿಕ್ಷಣ ಇಲಾಖೆ ಅನುಮತಿ ನೀಡಿತ್ತು. ಆದರೆ ಕಟ್ಟಡ ನಿರ್ಮಾಣಕ್ಕೆ ಖಾಲಿ ಜಾಗ ಇಲ್ಲ ಎನ್ನುವ ಸಬೂಬು ಪಂಚಾಯಿತಿ ನೀಡಿದ್ದರಿಂದ ಅದು ಅಲ್ಲಿಗೇ ಸ್ಥಗಿತಗೊಂಡಿತ್ತು. 2013-14ರಲ್ಲಿ ಎರಡನೇ ಬಾರಿ ಪ್ರೌಢಶಾಲೆಗೆ ಅನುಮತಿ ದೊರಕಿದ್ದು, ಈ ಅವಕಾಶ ಕಳೆದುಕೊಳ್ಳಬಾರದೆನ್ನುವ ನೆಲೆಯಲ್ಲಿ ಡಿವೈಎಫ್‌ಐ ಸಂಘಟನೆ ಮಾಹಿತಿ ಹಕ್ಕಿನ ಆಧಾರದಲ್ಲಿ ಗ್ರಾಮದಲ್ಲಿರುವ ಸರ್ಕಾರಿ ಜಾಗ ಪತ್ತೆ ಮಾಡಿದ್ದು, ಇಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಶಾಲಾಭಿವೃದ್ಧಿ ಸಮಿತಿ ಪಂಚಾಯಿತಿಗೆ ಮನವಿ ಮಾಡಿತು. ಅಂದೇ ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ 2.29 ಎಕರೆ ಜಾಗ ಶಾಲಾ ಕಟ್ಟಡಕ್ಕಾಗಿ ಅಂತಿಮಗೊಳಿಸಿತ್ತು. 1.90 ಕೋಟಿ ರೂ. ವೆಚ್ಚದಲ್ಲಿ ಶಾಲಾ ಕಟ್ಟಡಕ್ಕೆ ನೀಲಿ ನಕ್ಷೆ ಸಿದ್ಧಪಡಿಸಿ ಯೋಜನೆ ರೂಪಿಸಲಾಗಿತ್ತು. ಆದರೆ ಕೆಲವೊಂದು ಕಾರಣದಿಂದ ಮತ್ತೆ ಯೋಜನೆ ನನೆಗುದಿಗೆ ಬಿತ್ತು.

    ಏಳು ವರ್ಷಗಳ ಬಳಿಕ ಮತ್ತೊಮ್ಮೆ ಶಾಲಾ ಕಟ್ಟಡ ನಿರ್ಮಾಣ ಭಾಗ್ಯ ಬಂದಿದೆ. ಈ ಬಾರಿ ಅನುದಾನವೂ ಮಂಜೂರಾಗಿದೆ. ಹಿಂದೆ ಗುರುತಿಸಿದ ಜಮೀನಿನಲ್ಲೇ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಕಾಮಗಾರಿಯ ಮುಹೂರ್ತಕ್ಕೆ ದಿನಗಣನೆ ಆರಂಭಗೊಂಡಿದೆ.

    ಪ್ರಾಥಮಿಕ ಶಿಕ್ಷಣಕ್ಕೂ ಸಮಸ್ಯೆ!: ಕಳೆದ ಏಳು ವರ್ಷಗಳಿಂದ ಪ್ರಾಥಮಿಕ ಶಾಲಾ ಕಟ್ಟಡದಲ್ಲೇ ಪ್ರೌಢಶಾಲೆಯ ಎರಡು ತರಗತಿಗಳನ್ನು ನಡೆಸಲಾಗುತ್ತಿದೆ. ಈ ವರ್ಷ 9 ಮತ್ತು 10ನೇ ತರಗತಿಯಲ್ಲಿ 51 ವಿದ್ಯಾರ್ಥಿಗಳಿದ್ದು, ಮುಖ್ಯ ಶಿಕ್ಷಕರ ಸಹಿತ ಏಳು ಶಿಕ್ಷಕರಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಮಾತ್ರ ಇದೆ. ಸದ್ಯಕ್ಕೆ ಪ್ರೌಢ ಶಿಕ್ಷಣಕ್ಕೆ ಸಮಸ್ಯೆ ಇಲ್ಲದಿದ್ದರೂ ಪ್ರಾಥಮಿಕ ಶಿಕ್ಷಣಕ್ಕೆ ಸಮಸ್ಯೆ ಶುರುವಾಗಿದೆ. ಇಲ್ಲಿ ಈಗಿರುವ ಪ್ರಾಥಮಿಕ ಶಾಲೆಯ ಒಂದು ಹೆಂಚಿನ ಕಟ್ಟಡ 50 ವರ್ಷ ಹಳೆಯದ್ದಾಗಿದೆ. ಇದರಲ್ಲಿ ನಾಲ್ಕು ಕೋಣೆಗಳಿದ್ದು, ಕಟ್ಟಡ ದುರಸ್ತಿಗೆ ಸರ್ಕಾರ ಅನುದಾನ ಕೊಡುವುದಿಲ್ಲ. ಹೀಗಿರುವಾಗ ಕೆಡಹುವುದು ಅನಿವಾರ್ಯ. ಆದರೆ ಹೊಸ ಕಟ್ಟಡಕ್ಕೆ ಅನುಮತಿಯೂ ಸಿಕ್ಕಿಲ್ಲ, ನೆಲಸಮಗೊಳಿಸಿದರೆ ಪಾಠಕ್ಕೆ ವ್ಯವಸ್ಥೆ ಇರುವುದಿಲ್ಲ. ಇನ್ನೊಂದು ಕಟ್ಟಡ 20 ವರ್ಷಗಳ ಹಿಂದಿನದ್ದಾಗಿ ಐದು ಕೋಣೆ ಪೈಕಿ ಮೂರು ಕೋಣೆಗಳು ಸೋರುತ್ತಿದ್ದು, ಕಂಪ್ಯೂಟರ್‌ಗಳಿಗೂ ತೊಂದರೆ ನೀಡುತ್ತಿದೆ. ಇನ್ನೊಂದು ಕಟ್ಟಡವನ್ನು ಪ್ರೌಢಶಾಲೆಗೆ ನೀಡಲಾಗಿದ್ದು, ಇದು 35 ವರ್ಷದ ಹಿಂದಿನ ಕಟ್ಟಡವಾಗಿದೆ.

    ಪ್ರೌಢಶಾಲೆಗೆ ನೂತನ ಕಟ್ಟಡಕ್ಕಾಗಿ ಸರ್ಕಾರ ಈಗಾಗಲೇ ಅನುದಾನ ಬಿಡುಗಡೆಗೊಳಿಸಿದ್ದು, ಮೀಸಲು ಜಾಗದಲ್ಲೇ ಸುಸಜ್ಜಿತ ಕಟ್ಟಡ ನಿರ್ಮಾಣದ ಗುರಿ ಹೊಂದಲಾಗಿದೆ.
    ರಾಜಲಕ್ಷ್ಮೀ ಕೆ. ಕ್ಷೇತ್ರ ಶಿಕ್ಷಣಾಧಿಕಾರಿ

    ಸರ್ಕಾರ 1.28 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಮಾದರಿ ಕಟ್ಟಡವನ್ನಾಗಿಸುವ ನಿಟ್ಟಿನಲ್ಲಿ 2.50 ಕೋಟಿ ರೂ. ಅಂದಾಜಿನ ಯೋಜನೆ ರೂಪಿಸಲು ಶಾಸಕರು ಸೂಚಿಸಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಮೊದಲು ಆವರಣ ಗೋಡೆ ಮತ್ತು ಮೈದಾನ ನಿರ್ಮಾಣವಾಗಲಿದೆ.
    ಮೊಹಮ್ಮದ್ ರಫೀಕ್,  ಅಂಬ್ಲಮೊಗರು ಗ್ರಾಪಂ ಮಾಜಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts