More

    ಸಂಬಂಧಗಳೆಂಬ ನಂಟಿನ ಅಂಟಿನ ಬ್ರಹ್ಮಗಂಟು

    ಸಂಬಂಧಗಳೆಂಬ ನಂಟಿನ ಅಂಟಿನ ಬ್ರಹ್ಮಗಂಟು

    ನಮ್ಮ ಗ್ರಹಿಕೆಗೆ ಅರ್ಥವಾಗಿದ್ದಷ್ಟೇ ವಾಸ್ತವ ಅಥವಾ ಯಥಾರ್ಥ ಆಗಿರಲಾರದು. ಅದರಾಚೆಗೂ ಮೀರಿದ ಅರ್ಥ ಇದ್ದೀತು. ಅದನ್ನು ಅರಿಯುವ ಪ್ರಯತ್ನ ಮಾಡಿದರೆ, ಪರಸ್ಪರರಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡಿದರೆ, ಅಪಾರ್ಥಗಳು ಕಡಿಮೆಯಾಗಬಹುದು. ಆಗ ಮಾತ್ರ ಬದುಕು ಸಾರ್ಥಕವೆನಿಸಬಹುದು.

    ಮನುಷ್ಯ ಸಂಬಂಧಗಳೆಂದರೆ ಜೇಡರಬಲೆಯಂತೆ.

    ತಾನೆಷ್ಟೇ ಇಂಡಿಪೆಂಡೆಂಟ್… ಸ್ವತಂತ್ರ ಪ್ರವೃತ್ತಿ ಎಂದು ಹೇಳಿಕೊಂಡರೂ ವಾಸ್ತವದಲ್ಲಿ ಕಮಲದೆಲೆಯ ಮೇಲಿನ ನೀರ ಗುಳ್ಳೆಯಂತಿರುವುದು, ಜಗತ್ತಿನ ಜಂಜಡ ಅಂಟಿಸಿಕೊಳ್ಳದೇ ಬದುಕುವುದು ಬಹಳ ಕಷ್ಟ.

    ಸಮಾಜ ಜೀವನದಲ್ಲಿ ಸ್ವತಂತ್ರ ಪ್ರವೃತ್ತಿಯನ್ನು ಸ್ವೇಚ್ಛಾಚಾರ ಎಂದು ತಪ್ಪಾಗಿ ಗ್ರಹಿಸುವವರೇ ಹೆಚ್ಚು. ಆಲೋಚನೆಗಳಲ್ಲಿ, ಜೀವನಶೈಲಿಯಲ್ಲಿ, ನಡೆ-ನುಡಿಯಲ್ಲಿ ಆಧುನಿಕತೆಯನ್ನು ಯುಗಧರ್ಮ ಎಂದು ಸಹಜವಾಗಿ ಸ್ವೀಕರಿಸದೆ ಲೈಂಗಿಕತೆಯೊಂದಿಗೆ ತಳುಕು ಹಾಕಿ ತಪ್ಪಾಗಿ ಅರ್ಥೈಸುವುದು ಸಮಾಜದ ಗುಣವೇ ಆಗಿಹೋಗಿದೆ. ಎಷ್ಟೋ ಜನರ ಪಾಲಿಗೆ ಲಿಬರ್ಟಿ ಎನ್ನುವುದು ಮನಸ್ಸಿಗೆ ಸಂಬಂಧಪಟ್ಟಿದ್ದೇ ಹೊರತು ದೇಹಕ್ಕಲ್ಲ ಎಂಬ ವಿಚಾರ ಸಂಕುಚಿತ ಮನಸ್ಸುಗಳಿಗೆ ಅರ್ಥವಾಗುವುದು ಕಷ್ಟ. ಗಂಡು-ಹೆಣ್ಣಿನ ಸ್ನೇಹವೆನ್ನುವುದು ಪ್ರತೀ ಬಾರಿ ಮಂಚದ ಮೇಲೆಯೇ ಹೊಸ ಅರ್ಥ ಪಡೆಯಬೇಕಿಲ್ಲ. ಎಲ್ಲ ಒಡನಾಟಗಳು, ಆಪ್ತತೆಯ ಅಪ್ಪುಗೆಗಳು, ಸಲುಗೆಯ ಕೆನ್ನೆಮುತ್ತುಗಳು ಲೈಂಗಿಕ ಸಂಬಂಧಗಳ ಸೂಚಿ-ದಿಕ್ಸೂಚಿಗಳೇನೂ ಆಗಿರುವುದಿಲ್ಲ. ಹಾಗೆ ನೋಡಿದರೆ, ಆಧುನಿಕವಾಗಿರುವುದು ಅಪರಾಧವಲ್ಲ. ಇವತ್ತಿನ ಡಿಜಿಟಲ್ ಯುಗದಲ್ಲಿ, ಸಾಫ್ಟ್ ವೇರ್​ಗಳನ್ನು ಕಾಲಕಾಲಕ್ಕೆ ಅಪ್​ಡೇಟ್ ಮಾಡಿಕೊಂಡು ಜಗತ್ತಿನ ಓಘಕ್ಕೆ, ವೇಗಕ್ಕೆ ಹೊಂದಿಕೊಳ್ಳುವ ಸಮಾಜ, ಮಾನಸಿಕತೆಯನ್ನು, ಜಗತ್ತನ್ನು ನೋಡುವ ದೃಷ್ಟಿಕೋನವನ್ನು ಅಪ್​ಡೇಟ್ ಮಾಡಿಕೊಳ್ಳುವ ಅಗತ್ಯವಿಲ್ಲವೇ? ಕಾಮದ ಸೋಂಕಿಲ್ಲದ ಶುದ್ಧ ಸ್ನೇಹವೆಂಬುದೂ ಒಂದಿದೆ ಎಂದು ಅರ್ಥ ಮಾಡಿಕೊಳ್ಳದೆ ಎಲ್ಲವನ್ನೂ ಹಳದಿ ಕನ್ನಡಕದಿಂದ ನೋಡುವುದು ಅನರ್ಥವಲ್ಲವೇ?

    ಆಕೆ ಸುಂದರಿ, ಬುದ್ಧಿವಂತೆ, ಸ್ವತಂತ್ರ ಪ್ರವೃತ್ತಿಯೆಂಬ ಪುಷ್ಪಕವಿಮಾನದಲ್ಲಿ ಬದುಕಿನ ಕನಸು ಕಟ್ಟಿಕೊಂಡವಳು. ಬಾಯ್ಫ್ರೆಂಡ್​ಗಳ ಒಡನಾಟ. ಸ್ನೇಹಬಳಗದೊಂದಿಗೆ ಸುತ್ತಾಟ, ಪಬ್, ಸಿನಿಮಾ, ಇಟಾಲಿಯನ್ ರೆಸ್ಟಾರೆಂಟ್​ಗಳಲ್ಲಿ ಊಟ-ಓಡಾಟಗಳ ನಡುವೆಯೂ ತನ್ನ ಬದುಕಿನ ಅಗತ್ಯಗಳ ಬಗ್ಗೆ ಸ್ಪಷ್ಟತೆ ಹೊಂದಿರುವ ಬುದ್ಧಿವಂತೆ ಅವಳು. ಆದರೆ, ಬದುಕಿನ ಬಗ್ಗೆ, ಜೀವನಶೈಲಿಯ ಬಗ್ಗೆ, ಆಸೆ-ಆಸಕ್ತಿಗಳ ಬಗ್ಗೆ ಈಕೆಗಿರುವ ಸ್ಪಷ್ಟತೆ ಜೊತೆಯಲ್ಲಿರುವವರಿಗೂ ಇರಲೇಬೇಕೆಂದಿಲ್ಲ. ಮುಕ್ತ ಮಾನಸಿಕತೆ ಎಂದರೆ ಮುಕ್ತ ಲೈಂಗಿಕತೆ ಎಂದು ತಪ್ಪಾಗಿ ಭಾವಿಸುವವರ ನಡುವೆ ತಾನು ಹಾಗಲ್ಲ ಎಂದು ಅರ್ಥ ಮಾಡಿಸುವುದು ಬಹಳ ಕಷ್ಟ. ವಿವಾಹಪೂರ್ವ ಲೈಂಗಿಕತೆ ಆಧುನಿಕ ಜೀವನಶೈಲಿಯ ಒಂದು ಭಾಗ ಎಂದು ಭಾವಿಸಿರುವ ಯುವಸಮಾಜದ ನಡುವೆ ಈಕೆ ವಿಭಿನ್ನ. ವಿವಾಹಪೂರ್ವ ಸೆಕ್ಸ್​ಗೆ ಆಕೆಯ ವಿರೋಧವೇನೂ ಇಲ್ಲವಾದರೂ, ಕಾಮವೆನ್ನುವುದು ದೇಹದ ಅಗತ್ಯವಲ್ಲ, ಆತ್ಮಾನುಸಂಧಾನ ಎನ್ನುವುದು ಆಕೆಯ ವಿಚಾರ. ಒಬ್ಬ ವ್ಯಕ್ತಿಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳದೆ, ಮನಃಸ್ಪೂರ್ತಿಯಾಗಿ ಪ್ರೀತಿಸದೆ, ಅವನಿಲ್ಲದೆ ನನಗೆ ಅಸ್ತಿತ್ವವೇ ಇಲ್ಲ ಎಂಬ ಏಕೀಭಾವ ಸಾಧ್ಯವಾಗದೆ ದೇಹ ಒಪ್ಪಿಸಲಾರೆ ಎಂಬ ಭಾವನೆಯ ದೋಣಿಯಲ್ಲಿ ಸಾಗುತ್ತಿರುವವಳು ಅವಳು. ಇದೇ ಕಾರಣಕ್ಕೆ ಬಾಯ್ಫ್ರೆಂಡ್​ಗಳಾಗಿ ಬಂದ ಹಲವರು ದೂರ ಸರಿಯುತ್ತಾರೆ. ಅಂದಗಾತಿಯ ಮನಸ್ಸನ್ನು ಅರ್ಥಮಾಡಿಕೊಳ್ಳದೆ ಸುಖವನ್ನಷ್ಟೇ ಬಯಸಿದವರು ಹುಚ್ಚಿ ಎಂದು ಜರಿದಾಗ, ದೂರ ಸರಿದಾಗ ಮನಸ್ಸಿಗೆ ಖಿನ್ನತೆ, ಎಲ್ಲದರಿಂದ ವಿಮುಖತೆ, ಕಾಡುವ ದುಃಖ, ಹಿಂಡುವ ನೋವು, ಅರ್ಥ ಮಾಡಿಕೊಳ್ಳುವವರು ಯಾರೂ ಇಲ್ಲವೆಂಬ ಅಸಹಾಯಕತೆ.

    ಆತ ವಿದ್ಯಾವಂತ, ಐಟಿ ಕಂಪನಿಯಲ್ಲಿ ಉದ್ಯೋಗಿ. ಶಿಸ್ತಿನ ಕುಟುಂಬದಲ್ಲಿ ಬೆಳೆದ ಒಬ್ಬನೇ ಮಗ, ನೋಡಲು ಅಂದಗಾರನಲ್ಲ. ಜೊತೆಗೆ ಅಂತಮುಖಿ. ಅಂತರಂಗದಲ್ಲಿ ಬೆಟ್ಟದಷ್ಟು ಆಸೆ-ಕನಸುಗಳನ್ನು ತುಂಬಿಕೊಂಡಿದ್ದರೂ, ಬದುಕಿನಲ್ಲಿ ತನಗೇನು ಬೇಕೆಂದು ಮುಕ್ತವಾಗಿ ಹೇಳಲಾರ. ಅಪ್ಪ ಶಿಸ್ತಿನ ಸಿಪಾಯಿ. ಆದರ್ಶಗಳನ್ನು ತಲೆಯಲ್ಲಿ ತುಂಬಿಕೊಂಡು ಮಗನನ್ನು ಹೀಗೆಯೇ ಬೆಳೆಸಬೇಕೆಂದು ಪಂಜರದ ಗಿಳಿಯಂತೆ ಬೆಳೆಸಿದವರು. ವಿದ್ಯಾವಂತರೆಲ್ಲರೂ ಲೋಕಜ್ಞಾನಿಗಳೆಂಬ ಗ್ರಹಿಕೆ ಸರಿಯಲ್ಲ. ಲೋಕಾನುಭವಕ್ಕೂ ವಿದ್ಯಾಭ್ಯಾಸಕ್ಕೂ ಯಾವತ್ತೂ ಸಂಬಂಧವಿಲ್ಲ. ನಗರ ಪ್ರದೇಶಗಳಲ್ಲಿ ವಾಸ ಮಾಡುವವರೆಲ್ಲರೂ ಹೈಸೊಸೈಟಿ ಸಂಸ್ಕೃತಿ ಬಲ್ಲವರು ಎನ್ನುವುದೂ ತಪ್ಪುಕಲ್ಪನೆ. ಹಳ್ಳಿಗಾಡಿನಲ್ಲಿ ಬೆಳೆದವರು ನಗರಜೀವನ ಶೈಲಿಗೆ ಹೊಂದಿಕೊಳ್ಳುವುದಿಲ್ಲ ಎನ್ನುವುದೂ ಕೂಡ ಮಿಥ್ಯೆ. ಐಟಿ ಕಂಪನಿಯಲ್ಲಿ ಕೆಲಸ ಮಾಡುವವರು ಬಾರು-ಪಬ್ಬುಗಳಿಗೆ ಹೋಗಲೇಬೇಕು, ವೀಕೆಂಡ್​ಗಳಲ್ಲಿ ಮಜಾ ಪ್ರವಾಸ ಮಾಡಲೇಬೇಕು, ಸ್ವೇಚ್ಛಾಚಾರದ ಜೀವನಶೈಲಿಗೆ ದಾಸರಾಗಿರಬೇಕು, ಚಟಗಳನ್ನು ಅಂಟಿಸಿಕೊಂಡಿರಬೇಕು ಎಂಬ ಭಾವನೆ ತಪ್ಪುಕಲ್ಪನೆ.ಈ ನಮ್ಮ ಕಥಾನಾಯಕನೂ ಅಷ್ಟೇ. ವೃತ್ತಿಯಿಂದ ಟೆಕ್ಕಿಯಾದರೂ, ನಯ ನಾಜೂಕು ಗೊತ್ತಿಲ್ಲದ, ಪಬ್ಬು- ಡ್ರಿಂಕ್ಸುಗಳ ರುಚಿ ನೋಡದ, ಹೆಣ್ಣು-ಲೈಂಗಿಕತೆಯ ಹುಚ್ಚು ಹಚ್ಚಿಕೊಳ್ಳದ, ತೈಲ ಹಚ್ಚಿಕೊಂಡು ತಲೆಬಾಚುವ, ನಿತ್ಯ ಗಡ್ಡ ತೆಗೆಯದ, ತಂದೆ-ತಾಯಿ, ಕುಟುಂಬದ ಚೌಕಟ್ಟಿನಿಂದ ಆಚೆಗೆ ತಲೆಕೆಡಿಸಿಕೊಳ್ಳದ ಸರ್ವೆಸಾಮಾನ್ಯ ವ್ಯಕ್ತಿ. ಈತನ ಬಗ್ಗೆ ವಿಶೇಷ, ವಿಶಿಷ್ಟ, ಅಪರೂಪ ಎಂದು ಹೊಗಳುವಂಥ ಗುಣಗಳಾವುದೂ ಇಲ್ಲ.

    ಇಂಥ ಶ್ರೀಸಾಮಾನ್ಯ ವ್ಯಕ್ತಿಯ ಜೊತೆ ಸ್ವತಂತ್ರ ಪ್ರವೃತ್ತಿಯ ಅಂದಗಾತಿಯ ಮದುವೆ ಹೆತ್ತವರ ಒತ್ತಾಸೆಯಂತೆ ನಡೆದುಹೋಗುತ್ತದೆ. ಆತನಿಗಿದು ಅಪ್ಪ-ಅಮ್ಮ ಒಪ್ಪಿ ಮಾಡಿಸಿದ ಮದುವೆ. ಬೆಚ್ಚನೆ ಮನೆಯಿರಲು, ವೆಚ್ಚಕ್ಕೆ ಹೊನ್ನಿರಲು, ಇಚ್ಛೆಯನರಿವ ಸತಿಯಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚುವಂಥ ಸಂತೃಪ್ತಿ. ಆದರೆ, ಆಕೆಗೆ ಒಲ್ಲದ ಮದುವೆ. ಸ್ನೇಹ ವಲಯದಲ್ಲಿ ಭ್ರಮನಿರಸನಗೊಂಡು ಒಂಟಿಯಾಗಿರುವ ಹೊತ್ತಿನಲ್ಲಿ ಕ್ಯಾನ್ಸರ್​ಪೀಡಿತ ಅಮ್ಮನ ಒತ್ತಾಯಕ್ಕೆ ಮಣಿದು ತಾಳಿಗೆ ಕೊರಳೊಡ್ಡಿದ್ದವಳು ಅವಳು. ‘ಯಾವ ಬಂಡೆಯನ್ನು ತೋರಿಸಿದರೂ ಮದುವೆಯಾಗುತ್ತೇನೆ, ಅದು ನನ್ನ ಖುಷಿಗಲ್ಲ, ನಿನ್ನ ಸಮಾಧಾನಕ್ಕೆ’ ಎಂದು ಅಮ್ಮನ ಎದುರು ಬಿರುಮಾತು ಆಡುವ ಆಕೆ, ಮದುವೆ ಎನ್ನುವುದು ಲೈಂಗಿಕ ಜೀವನಕ್ಕೆ ಲೈಸೆನ್ಸ್ ಅಲ್ಲ ಎಂದೇ ನಂಬಿಕೊಂಡು ಗಂಡನ ಮನೆಯೊಳಕ್ಕೆ ಹೆಜ್ಜೆಯಿಡುತ್ತಾಳೆ. ಗಂಡನೆಂದು ತನ್ನ ಜೀವನದ ಅರಮನೆಗೆ ಗೃಹಪ್ರವೇಶ ಮಾಡಿರುವ ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳಬೇಕು, ಹೊಂದಾಣಿಕೆ ಮಾಡಿಕೊಳ್ಳಬೇಕು, ಆತ ವಿಶ್ವಾಸಕ್ಕೆ ಪೂರ್ಣ ಅರ್ಹ ಎಂದು ಖಾತರಿ ಮಾಡಿಕೊಳ್ಳಬೇಕು, ಸಂಪೂರ್ಣವಾಗಿ ಆತನನ್ನು ಪ್ರೀತಿಸುವ ಮುನ್ನವೇ ಮೈ ಒಪ್ಪಿಸಬಾರದು ಎಂಬ ತನ್ನದೇ ನಿಯಮಗಳನ್ನು ರೂಪಿಸಿಕೊಂಡು ಮುಖದಲ್ಲಿ ಸಿಡುಕು, ಮಾತಿನಲ್ಲಿ ನಿಷ್ಠುರತೆಯ ಮುಸುಕು ಹೊದ್ದು ತಮ್ಮಿಬ್ಬರ ನಡುವೆ ಅಂತರದ ಗೋಡೆ ಎಬ್ಬಿಸಿಕೊಳ್ಳುತ್ತಾಳೆ. ಆದರೆ, ತನ್ನನ್ನು ಮದುವೆಯಾದ ಆ ಸಾಮಾನ್ಯ ವ್ಯಕ್ತಿಗೂ ಒಂದು ಮನಸ್ಸಿದೆ, ಆತನಿಗೂ ಕನಸುಗಳಿವೆ, ಆಸೆ-ಆಕಾಂಕ್ಷೆಗಳಿವೆ, ಆತ ಬದುಕು ಬಂದಂತೆ ಸ್ವೀಕರಿಸುವ ಸರಳ ಜೀವಿ, ಜೊತೆಗೆ ನಯ-ನಾಜೂಕುಗಳು ಆತನಿಗೆ ಅರ್ಥವಾಗುವುದಿಲ್ಲ ಎಂಬ ಸಂಗತಿಗಳನ್ನು ಆಕೆ ಗ್ರಹಿಸುವುದಿಲ್ಲ. ಪೆದ್ದನಾದರೂ ಆತ ಮುಗ್ಧ, ಕೊಳಕನಂತಿದ್ದರೂ ಹೃದಯ ಪರಿಶುದ್ಧ ಎಂಬುದನ್ನು ತಿಳಿಯದೆ, ನಿರಾಕರಣೆಯ ಹಾದಿ ತುಳಿಯುತ್ತಾಳೆ.

    ಎಲ್ಲ ಗಂಡಸರೂ ಕೆಟ್ಟವರಲ್ಲ, ಆತುರಗಾರರೂ ಅಲ್ಲ, ಹುಟ್ಟಿದ ಮನೆಯನ್ನು ಬಿಟ್ಟು ಗಂಡನ ಮನೆಗೆ ಬರುವ ಹೆಣ್ಣುಮಕ್ಕಳು ತಮ್ಮ ಮನಸ್ಸಿನಲ್ಲೇನಿದೆ ಎಂದು ಬಿಡಿಸಿ ಹೇಳಿದರೆ, ಅರ್ಥ ಮಾಡಿಕೊಳ್ಳುವ ಗಂಡಸರೂ ಇರುತ್ತಾರೆ. ದಾಂಪತ್ಯ ಯಾವಾಗಲೂ ಕೂಡಿ, ಕಳೆದು, ಗುಣಿಸಿ, ಭಾಗಿಸುವ ಸರಳ ಲೆಕ್ಕಾಚಾರವಾಗಿರಬೇಕೇ ಹೊರತು ಜಟಿಲ ಸಮಸ್ಯೆಗಳಾಗಬಾರದು; ಒಗಟಾಗಬಾರದು. ಬಹುಶಃ ದೇಹಗಳು ಒಂದಾಗುವುದಕ್ಕೆ ತೋರುವ ಆತುರದ ನಡುವೆ ಮನಸ್ಸುಗಳು ಒಂದಾಗುವುದಕ್ಕೆ ಕಾಲಾವಕಾಶ ನೀಡಿದರೆ, ಮದುವೆಗೆ ವರ್ಷ ತುಂಬುವ ಮುನ್ನವೇ ಮುರಿದುಬೀಳುವ ಪ್ರಕರಣಗಳ ಸಂಖ್ಯೆ ಕಡಿಮೆಯಾಗಬಹುದು. ಮೇಲಿನ ಕಥೆಯಲ್ಲೂ ಆಕೆ ತನ್ನ ಮನಸ್ಸಿನಲ್ಲಿರುವುದನ್ನು ತಿಳಿಹೇಳದೆ, ಆತನಿಗೂ ಪತ್ನಿಯನ್ನು ಅರ್ಥ ಮಾಡಿಕೊಳ್ಳುವ ಜಾಣತನವಿಲ್ಲದೆ ಅನರ್ಥಗಳೇ ನಡೆದು ಮದುವೆ ಮುರಿದುಬೀಳುತ್ತದೆ. ಕಥೆ ಸುಖಾಂತ್ಯವಾಗುವ ಮುನ್ನ ಅನೇಕ ಅನಾಹುತಗಳೇ ನಡೆದುಹೋಗುತ್ತವೆ.

    ಇದು ಕೆಲವು ವರ್ಷ ಹಿಂದೆ ತೆರೆಕಂಡ ಮಾಲೈ ನೆರತ್ತು ಮಯಕ್ಕಂ (ಉಲ್ಲಾಸದ ಸಂಜೆ) ಎಂಬ ತಮಿಳು ಚಿತ್ರದ ಕಥೆ. ಖ್ಯಾತ ನಿರ್ದೇಶಕ ಸೆಲ್ವರಾಘವನ್ ಕಥೆ, ಚಿತ್ರಕಥೆ ಬರೆದು, ಅವರ ಪತ್ನಿ ಗೀತಾಂಜಲಿ ನಿರ್ದೇಶಿಸಿರುವ ಈ ಚಿತ್ರ ಸಂಬಂಧಗಳ ಸೂಕ್ಷ್ಮಗಳನ್ನು ಆಧುನಿಕ ಸಮಾಜದ ಪರಿಧಿಯಲ್ಲಿ ಅರ್ಥ ಮಾಡಿಸುವ ಪ್ರಯತ್ನ ಮಾಡುತ್ತದೆ. ಸ್ವಲ್ಪ ಬಿಗಿಯಾದ ಚಿತ್ರಕಥೆ, ನಿರ್ದೇಶನದಲ್ಲಿ ಪಕ್ವತೆ ಬೆರೆತಿದ್ದರೆ ಅದ್ಭುತವೆನಿಸಿಕೊಳ್ಳುವ ಅವಕಾಶ ಈ ಚಿತ್ರಕ್ಕಿತ್ತಾದರೂ, ಮನಸ್ಸುಗಳನ್ನು ಕಾಡುವ ಶಕ್ತಿಯನ್ನಂತೂ ಉಳಿಸಿಕೊಂಡಿದೆ.

    ಚಲನಚಿತ್ರಗಳ ಡಬ್ಬಿಂಗ್ ಬಗ್ಗೆ ಪರ-ವಿರುದ್ಧ ವಿಚಾರಗಳೇನೇ ಇದ್ದರೂ, ಡಬ್ಬಿಂಗ್ ಕಡ್ಡಾಯಗೊಂಡ ಮೇಲೆ ಜಗತ್ತಿನ ಬೇರೆ ಬೇರೆ ಭಾಷೆಗಳ ಅತ್ಯುತ್ತಮ ಚಿತ್ರಗಳನ್ನು ನಮಗೆ ಅರ್ಥವಾಗುವ ಭಾಷೆಯಲ್ಲಿ ನೋಡುವ ಅವಕಾಶ ಲಭ್ಯವಾಗಿದೆ. ಅಷ್ಟೇ ಅಲ್ಲ, ಕನ್ನಡದ ಅತ್ಯುತ್ತಮ ಚಿತ್ರಗಳೂ ದೇಶ ಹಾಗೂ ಜಗತ್ತಿನ ಹಲವು ಭಾಷೆಗಳಿಗೆ ಡಬ್ಬಿಂಗ್ ಆಗುವ ಅವಕಾಶ ದೊರೆತಿರುವುದರಿಂದ ನಮ್ಮ ನಟರು, ಕಲಾವಿದರ ಪ್ರಚಾರ, ಪ್ರಭಾವ, ಜನಪ್ರಿಯತೆಯ ವ್ಯಾಪ್ತಿ ವಿಸ್ತಾರಗೊಂಡಿದೆ. ಕನ್ನಡದ ಎಲ್ಲ ಪ್ರಮುಖ ನಟರ ಚಿತ್ರಗಳು ಈಗ ಏಕಕಾಲದಲ್ಲಿ ಹಲವು ಭಾಷೆಗಳಲ್ಲಿ ನಿರ್ವಣಗೊಂಡು ಅಖಿಲ ಭಾರತ ಮಟ್ಟದಲ್ಲಿ ನಿರೀಕ್ಷೆಗಳನ್ನು ಹುಟ್ಟುಹಾಕುತ್ತಿವೆ. ಅದೇ ರೀತಿ ತಮಿಳು, ತೆಲುಗು, ಬಾಲಿವುಡ್​ನ ಪ್ರಮುಖರ ಚಿತ್ರಗಳು ಏಕಕಾಲದಲ್ಲಿ ಕನ್ನಡದಲ್ಲೂ ಬಿಡುಗಡೆಯಾಗುತ್ತಿವೆ. ಇಂಥ ಚಿತ್ರಗಳ ಸಂಭಾಷಣೆ, ಸಾಹಿತ್ಯ ಮತ್ತು ಕಂಠದಾನದ ಗುಣಮಟ್ಟ ಸುಧಾರಣೆಗೊಂಡಲ್ಲಿ ಭಾಷೆಯ ಗೋಡೆಯಿಲ್ಲದೆ ಉತ್ತಮ ಚಿತ್ರಗಳ ರಸಾನುಭವ ಸವಿಯಲು ಸಾಧ್ಯ. ಸೂರ್ಯ ನಿರ್ಮಾಣ ನಟನೆಯ ‘ಸೂರರೈ ಪೊಟ್ರು’, ಮಾಧವನ್, ಶ್ರದ್ಧಾ ಶ್ರೀನಾಥ್ ನಟನೆಯ ‘ಮಾರ’ದಂಥ ಚಿತ್ರಗಳು ಮೂಲತಃ ಕನ್ನಡದ್ದಲ್ಲ ಎಂಬ ಭಾವನೆಯೇ ಮೂಡದಂತೆ ಡಬ್ಬಿಂಗ್ ಆಗಿ ಬಿಡುಗಡೆಗೊಂಡ ಉದಾಹರಣೆ ಇರುವಾಗ, ಎಲ್ಲರೂ ಈ ಪ್ರಯತ್ನ ಮಾಡಲು ಅವಕಾಶವಿದೆ. ಮನುಷ್ಯ ಸಂಬಂಧಗಳ ನಂಟು, ಅಂಟು, ಬ್ರಹ್ಮಗಂಟಿನ ಸೂಕ್ಷ್ಮಅನಾವರಣ ಮಾಡುವ ‘ಮಾಲೈ ನೆರತ್ತು ಮಯಕ್ಕಂ’ನಂಥ ಚಿತ್ರಗಳನ್ನು ಕನ್ನಡದಲ್ಲಿ ನೋಡುವಾಗ ಮನಸ್ಸಿಗೆ ನಾಟುವ ರೀತಿಯೇ ಬೇರೆ.

    ಒಟ್ಟಾರೆ ಹೇಳುವುದಾದರೆ, ಕಣ್ಣಿಗೆ ಕಾಣುವುದಷ್ಟೇ ಸತ್ಯವಲ್ಲ ಅಥವಾ ಕಣ್ಣಾರೆ ಕಂಡಿದ್ದಷ್ಟೇ ಸತ್ಯವಲ್ಲ. ಸಂಬಂಧಗಳೂ ಅಷ್ಟೇ. ಜೀವನ ಸಂಬಂಧಗಳೆಂದರೆ ಜೇಡರ ಬಲೆಯಂತೆ. ಯಾವ ತಂತುವಿನಿಂದ ಶುರುವಾಗಿದೆಯೋ, ಎಲ್ಲಿಂದ ಎಲ್ಲಿಗೆ ಬೆಸುಗೆಯಾಗಿದೆಯೋ ನಡುವೆ ಸಿಲುಕಿಕೊಳ್ಳುವ ಜೇಡರ ಹುಳುವಿಗೂ ವ್ಯಾಖ್ಯಾನ ಕಷ್ಟ. ನಮ್ಮ ಗ್ರಹಿಕೆಗೆ ಅರ್ಥವಾಗಿದ್ದಷ್ಟೇ ವಾಸ್ತವ ಅಥವಾ ಯಥಾರ್ಥ ಆಗಿರಲಾರದು. ಅದರಾಚೆಗೂ ಮೀರಿದ ಅರ್ಥ ಇದ್ದೀತು. ಅದನ್ನು ಅರಿಯುವ ಪ್ರಯತ್ನ ಮಾಡಿದರೆ, ಪರಸ್ಪರರಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡಿದರೆ, ಅಪಾರ್ಥಗಳು ಕಡಿಮೆಯಾಗಬಹುದು. ಆಗ ಮಾತ್ರ ಬದುಕು ಸಾರ್ಥಕವೆನಿಸಬಹುದು. ಯಾವಾಗಲೂ ಮಾತಿಗೆ ಒಂದೇ ಅರ್ಥ, ಮೌನಕ್ಕೆ ಸಾವಿರ ಅರ್ಥ. ಮನಬಿಚ್ಚಿ ಹೇಳುವುದು ಸ್ವಲ್ಪ ಮಾತ್ರ, ಹೇಳಲಾಗದ ಸಂಗತಿಗಳು ಸಾವಿರ ಇರಬಹುದು. ಇಂಥ ಒಳಮನಸ್ಸಿನ ಮೂಕಮಾತುಗಳನ್ನು ತಲುಪಲು ಸಂಬಂಧಗಳು ಸ್ನೇಹದ ಸೇತುವೆಗಳಾಗಬೇಕು. ಆಗ ಬದುಕಿಗೊಂದು ಅರ್ಥ ಬರಲು ಸಾಧ್ಯ.

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts