ಬಂಗಿ ದೊಡ್ಡಮಂಜುನಾಥ ಕಂಪ್ಲಿ
ಮೆಣಸಿನಕಾಯಿ ಬೆಳೆ ಈ ಬಾರಿ ಬಂಪರ್ ಬಂದಿದ್ದರೂ ಮೋಡದ ವಾತಾವರಣ, ತುಂತುರು ಮಳೆ ಕೊಯ್ಲು ಮಾಡಿದ ರೈತರನ್ನು ಚಿಂತೆಗೀಡು ಮಾಡಿದೆ.
ತಾಲೂಕಿನಲ್ಲಿ ಈ ಬಾರಿ 4200 ದಿಂದ 4500 ಹೆಕ್ಟೇರ್‌ನಲ್ಲಿ ಸಿಜೆಂಟಾ 5531, ಬ್ಯಾಡಗಿ 2043, ಬ್ಯಾಡಗಿ ನಾಟಿತಳಿ, ಲಕ್ಷ್ಮೀ 1835, ಲಕ್ಷ್ಮೀ ಬ್ಯಾಡಗಿ ತಳಿಯ ಮೆಣಸಿನಕಾಯಿ ಬೆಳೆದಿದ್ದಾರೆ. ಕಳೆದ ವರ್ಷ ವಾಡಿಕೆಗಿಂತ ಹೆಚ್ಚಿನ ಪ್ರಮಾಣದ ಮಳೆ ಬಿದ್ದಿದ್ದರಿಂದ, ಕೆಂಪು ನುಸಿ, ಎಲೆಮುದುಡು ರೋಗಬಾಧೆಯಿಂದ ಮೆಣಸಿನಕಾಯಿ ಇಳುವರಿ ಕುಸಿದಿತ್ತು. ಗಾಯದ ಮೇಲೆ ಬರೆ ಎಂಬಂತೆ ದರವೂ ಕಡಿಮೆ ಸಿಕ್ಕಿತ್ತು. ಇದರಿಂದಾಗಿ ಈ ಬಾರಿ ಕಡಿಮೆ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗಿದೆ.
ಸದ್ಯ ಮೆಣಸಿನಕಾಯಿ ಕೊಯ್ಲಗುತ್ತಿದ್ದು ಪ್ಯಾಕಿಂಗ್(ಚಾಕ್)ಮಾಡಲು ರೈತರು ಮುಂದಾಗಿದ್ದಾರೆ. 5531ತಳಿಯ ಮೆಣಸಿನಕಾಯಿ ಎಕರೆಗೆ 15 ರಿಂದ 20 ಕ್ವಿಂಟಾಲ್‌ತನಕ ಇಳುವರಿ ಪಡೆದುಕೊಂಡಿದ್ದಾರೆ. ಕ್ವಿಂಟಾಲ್‌ಗೆ 23 ರಿಂದ 24 ಸಾವಿರ ರೂ. ದರವಿದೆ. 2043ತಳಿಯ ಬ್ಯಾಡಗಿ ಮೆಣಸಿನಕಾಯಿ ಎಕರೆಗೆ 10 ರಿಂದ 15 ಕ್ವಿಂಟಾಲ್ ಇಳುವರಿಯಾಗಿದೆ. ಕ್ವಿಂಟಾಲ್‌ಗೆ 40 ರಿಂದ 50 ಸಾವಿರ ರೂ. ದರವಿದೆ. ಬ್ಯಾಡಗಿ, ಗುಂಟೂರಿನ ಮೆಣಸಿನಕಾಯಿ ವರ್ತಕರು, ನಾನಾ ಕಂಪನಿಗಳ ಮಧ್ಯವರ್ತಿಗಳು ಮೆಣಸಿನಕಾಯಿ ಬೆಳೆದ ಸ್ಥಳಕ್ಕೆ ಬಂದು ಖರೀದಿಸುತ್ತಿದ್ದಾರೆ. ಇನ್ನಷ್ಟು ಉತ್ತಮ ದರ ನಿರೀಕ್ಷೆಯಲ್ಲಿರುವ ಕೆಲ ಮೆಣಸಿನಕಾಯಿ ಬೆಳೆಗಾರರು ಬಳ್ಳಾರಿಯ ಕೋಲ್ಡ್ ಸ್ಟೋರೇಜ್‌ನಲ್ಲಿ ಸಂಗ್ರಹಿಸಲು ಮುಂದಾಗಿದ್ದಾರೆ.
2022ರ ಸೆಪ್ಟಂಬರ್, ನವ್ಹಂಬರ್‌ನಲ್ಲಿ ಬಿದ್ದ ಮಳೆ, ಆರ್ದ್ರತೆಯಿಂದ ಮೆಣಸಿನಕಾಯಿಗೆ ಬ್ಲಾಕ್ ಥ್ರೈಪ್ಸ್, ಎಲೆಮುದುಡು ರೋಗ ಕಾಣಿಸಿಕೊಂಡಿದ್ದರಿಂದ ಬೆಳೆಗಾರರು ಉತ್ತಮ ಇಳುವರಿಯ ಆಸೆ ಬಿಟ್ಟಿದ್ದರು. ಈ ಬಾರಿ ಮೆಣಸಿನಕಾಯಿ ಬೆಳೆಗಾರರು ಸಂಘಟಿತರಾಗಿ ಏಕಕಾಲದಲ್ಲಿ ಔಷಧಿ ಸಿಂಪರಣೆ ಮಾಡಿದ್ದರಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗಿದೆ. ಆದರೆ, ಈ ಖರ್ಚು ಸೇರಿ ಎಕರೆ ಮೆಣಸಿನಕಾಯಿ ಬೆಳೆಯಲು 2ಲಕ್ಷ ರೂ. ವ್ಯಯಿಸಿದ್ದಾರೆ. ಕಂಪ್ಲಿ ಭಾಗದಲ್ಲಿ ಮೆಣಸಿನಕಾಯಿ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಕಲ್ಪಿಸುವಲ್ಲಿ ಜಿಲ್ಲಾಡಳಿತ ಮುಂದಾಗಬೇಕು ಎಂದು ಮೆಣಸಿನಕಾಯಿ ಬೆಳೆಗಾರರಾದ ಪಿ.ನರಸಿಂಹಲು, ಪಿ.ನಾಗೇಶ್ವರರಾವ್, ಸಿ.ಪ್ರತಾಪ್, ಎಂ.ಸುಬ್ಬಾರಾವ್ ಇತರರು ಒತ್ತಾಯಿಸಿದ್ದಾರೆ.
ಮೆಣಸಿನಕಾಯಿಯನ್ನು ತರಕಾರಿಯಾಗಿ, ಸಂಬಾರು ಪದಾರ್ಥವಾಗಿ ಬಳಸಬಹುದು. ಹನಿ ನೀರಾವರಿ ಯೋಜನೆ ಅಳವಡಿಸಿಕೊಂಡು ಮೆಣಸಿನಕಾಯಿ ಬೆಳೆ ಬೆಳೆದಲ್ಲಿ ಶೇ.25 ಹೆಚ್ಚಿನ ಇಳುವರಿ ಪಡೆಯಬಹುದು. ಹನಿನೀರಾವರಿ ಯೋಜನೆಗಾಗಿ ಪರಿಶಿಷ್ಟ ರೈತರಿಗೆ ಶೇ.90, ಸಾಮಾನ್ಯ ರೈತರಿಗೆ ಶೇ.75 ಸಬ್ಸಿಡಿ ಇದೆ. ಈ ಸೌಲಭ್ಯವನ್ನು ಕೃಷಿಕರು ಅಳವಡಿಸಿಕೊಳ್ಳಬೇಕು.
ಜೆ.ಶಂಕರ್
ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ, ಹೊಸಪೇಟೆ.
ಮೋಡ ಮುಸುಕಿದ ವಾತಾವರಣ ಆಗುತ್ತಿರುವುದು ಮೆಣಸಿನಕಾಯಿ ಬೆಳೆಗಾರರಿಗೆ ಆತಂಕವಾಗಿದೆ. ಗಾಳಿಯಲ್ಲಿ ತೇವಾಂಶ ಹೆಚ್ಚಾದಲ್ಲಿ ಮೆಣಸಿನಕಾಯಿ ತುಂಡಾಗುವುದು, ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ದರವು ಕುಗ್ಗಿ ವ್ಯಾಪಾರಸ್ಥರು ಖರೀದಿಗೆ ಬಾರದೆ ರೈತರಿಗೆ ತೊಂದರೆಯಾಗುತ್ತದೆ. 20 ದಿನವಾದರೂ ಮಳೆ ವಾತಾವರಣ ಇರಬಾರದು. ಬಳ್ಳಾರಿಯಲ್ಲಿ ಮೆಣಸಿನಕಾಯಿ ಮಾರುಕಟ್ಟೆ ಆರಂಭಗೊಳ್ಳಬೇಕು.
ಗುಂಡಾಲ್ ಕಿಶೋರ್
ಮೆಣಸಿನಕಾಯಿ ಬೆಳೆಗಾರ, ಶ್ರೀರಾಮರಂಗಾಪುರ