More

    ಸಾವಿತ್ರಿಬಾಯಿ ಫುಲೆ ಆದರ್ಶ ಎಲ್ಲರಿಗೂ ಮಾದರಿ: ಸಚಿವ ಸುರೇಶ್ ಕುಮಾರ್ ಅಭಿಮತ

    ಬೆಂಗಳೂರು: ಕೆಳವರ್ಗದ ಸಮುದಾಯದವರು, ಮಹಿಳೆಯರು ಮುಕ್ತವಾಗಿ ವಿದ್ಯಾಭ್ಯಾಸ ಪಡೆಯುವಂಥ ವಾತಾವರಣ ಈಗ ನಿರ್ವಣವಾಗಿದೆ. ಇದಕ್ಕೆ ಸಾವಿತ್ರಿಬಾಯಿ ಫುಲೆ ಅವರ ಕೊಡುಗೆ ಸ್ಮರಣೀಯ ಎಂದು ಶಿಕ್ಷಣ ಸಚಿವ ಎಸ್. ಸುರೇಶ್​ಕುಮಾರ್ ಹೇಳಿದ್ದಾರೆ.

    ದಲಿತ ಸಂಘರ್ಷ ಸಮಿತಿ (ಸಮತಾವಾದ) ರಾಜ್ಯ ಸಮಿತಿ ವತಿಯಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾವಿತ್ರಿಬಾಯಿ ಫುಲೆ 186ನೇ ಜನ್ಮದಿನೋತ್ಸವದಲ್ಲಿ ಮಾತನಾಡಿದರು.

    ಆಧುನಿಕ ಭಾರತದ ಮೊದಲ ಶಿಕ್ಷಕಿ, ಜಾತಿ, ಧರ್ಮ, ವರ್ಗ, ಭೇದಭಾವ ಮಾಡದೆ ಸಮಾನ ಅಕ್ಷರದೂಟ ಉಣಬಡಿಸಿದ ಸಾವಿತ್ರಿಬಾಯಿಯವರ ಆದರ್ಶ ಎಲ್ಲರಿಗೂ ಮಾದರಿ ಎಂದರು. ಶಿಕ್ಷಕಿಯಾಗಿ ಸಾಕಷ್ಟು ಅವಮಾನಗಳನ್ನು ಮೆಟ್ಟಿ ನಿಂತವರು ಸಾವಿತ್ರಿಬಾಯಿ. ಅವರ ಜೀವನಗಾಥೆ ವಿದ್ಯಾರ್ಥಿಗಳಿಗೂ ಸ್ಪೂರ್ತಿ. ಹೀಗಾಗಿ ಸಾವಿತ್ರಿಬಾಯಿ ಜಯಂತಿ ಆಚರಣೆಗೆ ನಿರ್ದೇಶನ ನೀಡಿ ಸರ್ಕಾರದಿಂದ ಸುತ್ತೋಲೆ ಹೊರಡಿಸಿದ್ದೇವೆ ಎಂದು ಹೇಳಿದರು.

    ಧಾರವಾಡದ ರೇವಣಸಿದ್ದೇಶ್ವರ ಮಹಾಪೀಠದ ಶ್ರೀ ಬಸವರಾಜ ದೇವರು ಆಶೀರ್ವಚನ ನೀಡಿ, ಶಾಲಾ ವಿದ್ಯಾರ್ಥಿಗಳು ಸಾವಿತ್ರಿಬಾಯಿ ಫುಲೆ ಜೀವನಚರಿತ್ರೆ ಅರಿಯುವುದು ಅಗತ್ಯ. ಇಂತಹ ಮಹಾನ್ ಸಾಧಕಿಯ ಜನ್ಮದಿನಾಚರಣೆಗೆ ಸರ್ಕಾರವೇ ಸಮ್ಮತಿಸಿರುವುದು ಅರ್ಥಪೂರ್ಣ ಸಂಗತಿ ಎಂದರು.

    ರೈತ ಸಂಘದ ವೀರಸಂಗಯ್ಯ, ದಸಂಸ ರಾಜ್ಯ ಗೌರವಾಧ್ಯಕ್ಷ ಕೆ. ತಮ್ಮಯ್ಯ, ಪ್ರಧಾನ ಸಂಚಾಲಕ ಬೇಗೂರು ಟಿ. ಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

    ಸರ್ಕಾರಿ ಶಾಲೆಗಳಲ್ಲಿ ಸಾವಿತ್ರಿಬಾಯಿ ಫುಲೆಯವರ ಜನ್ಮದಿನೋತ್ಸವ ಆಚರಣೆಗೆ ಸರ್ಕಾರದಿಂದಲೇ ಸಮ್ಮತಿ ಸಿಕ್ಕಿರುವುದು ಸಂತೋಷ ತಂದಿದೆ. ಶಿಕ್ಷಕರ ದಿನಾಚರಣೆ ಮಾದರಿಯಲ್ಲಿ ಸಾವಿತ್ರಿ ಬಾಯಿ ಪುಲೆ ಜನ್ಮದಿನವನ್ನು ‘ಶಿಕ್ಷಕಿಯರ ದಿನಾಚರಣೆ’ ಎಂದು ಸರ್ಕಾರ ಘೋಷಣೆ ಮಾಡಲಿ.
    | ಎಚ್. ಮಾರಪ್ಪ ದಲಿತ ಸಂಘರ್ಷ ಸಮಿತಿ (ಸಮತಾವಾದ) ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts