More

    ರಾಯಚೂರು ನಗರಸಭೆ: 3.83 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ

    ರಾಯಚೂರು: ಸ್ಥಳೀಯ ಸಾರ್ವಜನಿಕ ಉದ್ಯಾನದಲ್ಲಿ ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ 3.83 ಲಕ್ಷ ರೂ. ಉಳಿತಾಯ ಬಜೆಟ್ ಅನ್ನು ಮಂಡನೆ ಮಾಡಿದರು. ನಗರಸಭೆ ಮಳಿಗೆಗಳ ಬಾಡಿಗೆ ವಸೂಲಿ ವೈಫಲ್ಯ ಸೇರಿ ವಿಪಕ್ಷಗಳ ಹಲವು ಆಕ್ಷೇಪಗಳ ಮಧ್ಯೆ 58.10 ಕೋಟಿ ರೂ. ಆದಾಯ ಸಂಗ್ರಹ ಗುರಿ ಹಾಗೂ 57.45 ಕೋಟಿ ರೂ.ಗಳ ವೆಚ್ಚದ ಅಂದಾಜಿನೊಂದಿಗೆ ಒಟ್ಟು 61.12 ಕೋಟಿ ರೂ. ಬಜೆಟ್ ಮಂಡನೆ ಮಾಡಲಾಯಿತು.

    ನಗರಸಭೆಯ 292 ವಾಣಿಜ್ಯ ಮಳಿಗೆಗಳಲ್ಲಿ 203 ಮಳಿಗೆಗಳನ್ನು ಬಾಡಿಗೆಗೆ ನೀಡಲಾಗಿದೆ. ವ್ಯಕ್ತಿಯೊಬ್ಬರು ಮಳಿಗೆ ಬಾಡಿಗೆ ಪಡೆದು ಮತ್ತೊಬ್ಬರಿಗೆ ಬಾಡಿಗೆ ನೀಡಿ ಆದಾಯ ಮಾಡಿಕೊಳ್ಳುತ್ತಿದ್ದಾರೆ ಎಂದು ವಿಪಕ್ಷದ ಜಯಣ್ಣ ಮತ್ತಿತರರು ದೂರಿದರು. ಬಾಡಿಗೆ ವಸೂಲಿಗೆ ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷೃದಿಂದ ನಗರಸಭೆಗೆ ಬರಬೇಕಾದ ಆದಾಯ ಖಾಸಗಿಯವರ ಪಾಲಾಗುತ್ತಿದೆ. ಇದರಿಂದ ಅಭಿವೃದ್ಧಿಗೆ ಹಣದ ಕೊರತೆಯಾಗುತ್ತಿದೆ. ಕೂಡಲೇ ಹರಾಜು ಪ್ರಕ್ರಿಯೆ ನಡೆಸಬೇಕು. ಹರಾಜಿನಲ್ಲಿ ಪಾಲ್ಗೊಂಡವರನ್ನು ಬಿಟ್ಟು ಅನ್ಯರಿಗೆ ಮಳಿಗೆ ಬಾಡಿಗೆ ನೀಡದಂತೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು. ಕಾನೂನು ಸಲಹೆಗಾರ ಎನ್.ಶಿವಶಂಕರ ಮಾತನಾಡಿ, ವಾಣಿಜ್ಯ ಮಳಿಗೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿದ್ದ ಪ್ರಕರಣ ತೆರವುಗೊಂಡಿದ್ದು, ಮಳಿಗೆ ಹರಾಜು ಮಾಡಲು ಈಗ ವರದಿ ಸಲ್ಲಿಸಲಾಗಿದೆ. ಅಧಿಕಾರಿಗಳು ಮುಂದಿನ ಕ್ರಮಕೈಗೊಳ್ಳಬಹುದು ಎಂದು ತಿಳಿಸಿದರು.

    ಕೋವಿಡ್ ಸಂದರ್ಭದಲ್ಲಿ ನಗರದ ನಾಲ್ಕು ಕಡೆ ತರಕಾರಿ ಮಾರುಕಟ್ಟೆ ಆರಂಭಿಸಲಾಗಿದೆ. ಇದರಿಂದಾಗಿ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಿಂದ ಬರುತ್ತಿದ್ದ ಆದಾಯಕ್ಕೂ ಹೊಡೆತ ಬಿದ್ದಿದೆ. ಆದರೆ, ಬಜೆಟ್‌ನಲ್ಲಿ 60 ಲಕ್ಷ ರೂ. ಆದಾಯ ಸಂಗ್ರಹಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಈ ಬಗ್ಗೆ ವಿವರ ನೀಡುವಂತೆ ಪಟ್ಟು ಹಿಡಿದರು. ನಗರೋತ್ಥಾನ ಯೋಜನೆಯಡಿ ನಗರಸಭೆಯಿಂದ 32 ಕೋಟಿ ರೂ. ವಂತಿಗೆ ಪಾವತಿಸದೆ ಸರ್ಕಾರಕ್ಕೆ ಕಡತ ಕಳಿಸಲಾಗಿದೆ. ಈ ಹಣ ಹೇಗೆ ಹೊಂದಿಸುತ್ತೀರಿ ಎಂದು ಜಯಣ್ಣ ಪ್ರಶ್ನಿಸಿದರು. ಆದಾಯ ಸಂಗ್ರಹಣೆಗಿಂತ ವೆಚ್ಚದ ವಿವರಗಳೇ ಬಜೆಟ್‌ನಲ್ಲಿ ತುಂಬಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೌರಾಯುಕ್ತ ಡಾ.ಕೆ.ಗುರುಲಿಂಗಪ್ಪ ಮಾತನಾಡಿ, ನಗರೋತ್ಥಾನ ಯೋಜನೆಯ ವಂತಿಗೆ ಹಣವನ್ನು ಒದಗಿಸುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲಾಗುವುದು ಎಂದು ಸಮಜಾಯಿಷಿ ನೀಡಲು ಮುಂದಾಗಾಗ ಅಸಮಾಧಾನ ವ್ಯಕ್ತವಾಯಿತು. ಉಪಾಧ್ಯಕ್ಷೆ ನರಸಮ್ಮ ಮಾಡಗಿರಿ ಇದ್ದರು.

    • ಶಾಸಕರ ಸನ್ಮಾನಕ್ಕೆ ಆಕ್ಷೇಪ
    • ರಾಜ್ಯ ಬಜೆಟ್‌ನಲ್ಲಿ ರಾಯಚೂರು ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಿರುವ ಬಗ್ಗೆ ಹೇಳಿಲ್ಲ. ಆದರೆ ಬಿಜೆಪಿ ಸದಸ್ಯರು ಸಂಭ್ರಮಾಚರಣೆ ನಡೆಸಿದರೆ, ಪೌರಾಯುಕ್ತ ಶಾಸಕ ಡಾ.ಶಿವರಾಜ ಪಾಟೀಲ್ ಅವರನ್ನು ಸನ್ಮಾನಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ನಗರಸಭೆ ಮಹಾನಗರ ಪಾಲಿಕೆಯಾಗಬೇಕು ಎನ್ನುವುದು ನಮ್ಮೆಲ್ಲರ ಇಚ್ಛೆ. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಂಡಿಸಿ ಸರ್ಕಾರಕ್ಕೆ ಕಳಿಸಲಾಗಿದೆ. ರಾಯಚೂರು ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿಸಲು ಮಾನದಂಡ ಪರಿಶೀಲಿಸಲಾಗುತ್ತದೆ ಎಂದು ರಾಜ್ಯ ಬಜೆಟ್‌ನಲ್ಲಿ ತಿಳಿಸಲಾಗಿದೆ. ಸನ್ಮಾನ, ಸಂಭ್ರಮಾಚರಣೆ ಮೂಲಕ ಜನರಿಗೆ ಸುಳ್ಳು ಮಾಹಿತಿ ಕೊಡಲಾಗುತ್ತಿದೆ ಎಂದು ದೂರಿದರು. ಪೌರಾಯುಕ್ತ ಡಾ.ಕೆ.ಗುರುಲಿಂಗಪ್ಪ ಮಾತನಾಡಿ, ಮಹಾನಗರ ಪಾಲಿಕೆಗೆ ಬೇಕಾದ ಎಲ್ಲ ಅರ್ಹತೆಗಳು ನಗರಕ್ಕೆ ಇದೆ. ಈ ಬಗ್ಗೆ ಸರ್ಕಾರಕ್ಕೆ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ವರದಿ ಕಳಿಸಲಾಗಿದೆ. ಕೆಲವೊಂದು ಮಾಹಿತಿಯನ್ನು ಸರ್ಕಾರ ಕೇಳಿದ್ದು, ಮುಂದಿನ ದಿನಗಳಲ್ಲಿ ರಾಯಚೂರು ಮಹಾನಗರ ಪಾಲಿಕೆಯಾಗುವುದರಲ್ಲಿ ಸಂಶಯವಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts