More

    ಸಸಿಹಿತ್ಲು-ಕದಿಕೆ ರಸ್ತೆ ಅವ್ಯವಸ್ಥೆ, ಹೊಂಡ ಗುಂಡಿ ನಿರ್ಮಾಣ

    ಭಾಗ್ಯವಾನ್ ಸನಿಲ್ ಮೂಲ್ಕಿ

    ಹಳೆಯಂಗಡಿಯಿಂದ ಕದಿಕೆ ಮೂಲಕ ಸಸಿಹಿತ್ಲು ಪ್ರದೇಶ ಸಂಪರ್ಕಿಸುವ ಮತ್ತು ಹೆಚ್ಚಿನ ಜನ ಉಪಯೋಗಿಸುವ ಕದಿಕೆ-ಸಸಿಹಿತ್ಲು ರಸ್ತೆ ಹದಗೆಟ್ಟಿದ್ದು, ರಸ್ತೆಯ ಡಾಂಬರು ಕಿತ್ತು ಹೋಗಿ ಅಲ್ಲಲ್ಲಿ ಹೊಂಡಗುಂಡಿಗಳು ಎದ್ದಿವೆ.

    ಮೀನುಗಾರಿಕಾ ಇಲಾಖೆ ಮೂಲಕ ಅಭಿವೃದ್ಧಿಗೊಂಡಿರುವ ಈ ರಸ್ತೆ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನ, ಮುಂಡಾ ಬೀಚ್ ಪ್ರದೇಶ ಹಾಗೂ ಬಹಳಷ್ಟು ಜನರು ಭೇಟಿ ನೀಡುವ ನಾಗ ಮೂಲಸ್ಥಾನ ಹಾಗೂ ದೈವಸ್ಥಾನಗಳಿಗೆ ಹಳೆಯಂಗಡಿ ಮೂಲಕ ಸಂಪರ್ಕಿಸುವ ರಸ್ತೆ. ಪ್ರಮುಖವಾಗಿ ಸುಮಾರು 2 ಕಿ.ಮೀ.ನ ಕದಿಕೆ ಸೇತುವೆಯವರೆಗೆ ಡಾಂಬರು ಕಿತ್ತು ಹೋಗಿ ಹೊಂಡಗುಂಡಿಗಳು ನಿರ್ಮಾಣವಾಗಿವೆ.

    ತಿರುವಿನಲ್ಲೇ ಹೊಂಡ: ಕದಿಕೆಯಲ್ಲಿ ಸೇತುವೆ ನಿರ್ಮಾಣ ಬಳಿಕ ಈ ರಸ್ತೆಯಲ್ಲಿ ಮುಂಡಾ ಬೀಚ್‌ಗೆ ಹೋಗುವ ವಾಹನಗಳ ಸಂಚಾರವೂ ಹೆಚ್ಚಿದೆ. ಬೀಚ್‌ಗೆ ಬರುವ ಪ್ರವಾಸಿಗರು ಹಾಗೂ ಹಳೆಯಂಗಡಿಯಿಂದ ಶ್ರೀ ಭಗವತಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರು, ಹಳೆಯಂಗಡಿಯಿಂದ ಸಸಿಹಿತ್ಲು ಪ್ರದೇಶಕ್ಕೆ ನಿತ್ಯ ಸಂಚರಿಸುವವರಿಗೆ ಇದೇ ರಸ್ತೆ ಬಳಕೆಯಾಗುತ್ತಿದೆ. ರಸ್ತೆಯ ತಿರುವಿನಲ್ಲೇ ಹೆಚ್ಚು ಹೊಂಡ ಉಂಟಾಗಿದ್ದು, ರಾತ್ರಿ ದ್ವಿಚಕ್ರ ವಾಹನಗಳು ಹಾಗೂ ಪಾದಚಾರಿಗಳಿಗೆ ಬಹಳ ಸಮಸ್ಯೆಯಾಗುತ್ತಿದೆ.

    ಟಿಪ್ಪರ್ ಕಾಟ: ಕದಿಕೆ ಸೇತುವೆಯಿಂದ ರಸ್ತೆ ನಿರ್ಮಾಣ ಬಳಿಕ ಈ ಪ್ರದೇಶದಲ್ಲಿ ಭೂ ವ್ಯವಹಾರಗಳು ಹೆಚ್ಚಾಗಿರುವ ಕಾರಣ ಮನೆಗಳು ನಿರ್ಮಾಣವಾಗುತ್ತಿವೆ. ಸೈಟುಗಳ ಅಭಿವೃದ್ಧಿಗಾಗಿ ಹೊರಪ್ರದೇಶದಿಂದ ಮಣ್ಣು ತರುವ ಟಿಪ್ಪರ್ ಧೂಳೆಬ್ಬಿಸುತ್ತ ಮಣ್ಣು ಸುರಿಸಿಕೊಂಡು ನಾಗಾಲೋಟದಲ್ಲಿ ಪ್ರಯಾಣಿಸುವ ಕಾರಣ ಸ್ಥಳೀಯರಿಗೆ ಸಮಸ್ಯೆಯಾಗಿದೆ. ಈ ಲಾರಿಗಳ ಕಾಟದಿಂದ ರಸ್ತೆ ಹದಗೆಟ್ಟಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.

    ಸಸಿಹಿತ್ಲು ಸಂಪರ್ಕಿಸುವ ವಾಹನಗಳು ಹಾಗೂ ಜನರು ಹೆಚ್ಚಾಗಿ ಇದೇ ರಸ್ತೆ ಬಳಸುತ್ತಿರುವುದರಿಂದ ಈ ರಸ್ತೆಗೆ ಮುಂದಿನ ದಿನದಲ್ಲಿ ಸಂಪೂರ್ಣ ಕಾಂಕ್ರೀಟ್ ಅಳವಡಿಸುವ ಬಗ್ಗೆ ಯೋಜನೆ ರೂಪಿಸಲಾಗುವುದು. ಮೀನುಗಾರಿಕೆ, ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿ ಪಡಿಸುವ ಚಿಂತನೆ ಇದೆ.

    ಉಮಾನಾಥ ಕೋಟ್ಯಾನ್
    ಮೂಲ್ಕಿ -ಮೂಡುಬಿದಿರೆ ಶಾಸಕ

    ಕದಿಕೆ ಸೇತುವೆ ಬದಿ ಶಾಸಕರ ನಿಧಿಯಿಂದ ನಿರ್ಮಾಣಗೊಂಡ ಹೊಸ ರಸ್ತೆಗಾಗಿ ಸಹಸ್ರಾರು ಲೋಡು ಮಣ್ಣು ತುಂಬಿಸಲಾಗಿದೆ. ಈ ಸಂದರ್ಭ ಬೃಹತ್ ಲಾರಿಗಳ ಒತ್ತಡದಿಂದ ರಸ್ತೆ ಕುಸಿದಿದೆ. ಇಂದಿಗೂ ಮಣ್ಣು ತುಂಬಿದ ವಾಹನಗಳು ಈ ರಸ್ತೆಯಲ್ಲಿ ಚಲಿಸುತ್ತಿದ್ದು, ಸ್ಥಳಿಯರಿಗೆ ಸಮಸ್ಯೆಯಾಗಿದೆ.

    ಧನರಾಜ್ ಸಸಿಹಿತ್ಲು
    ಹಳೆಯಂಗಡಿ ಪಂಚಾಯಿತಿ ಸದಸ್ಯ

    ಮೀನುಗಾರಿಕಾ ಅಥವಾ ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ ಲಭಿಸಿದಲ್ಲಿ ಸುಮಾರು 2 ಕಿ.ಮೀ.ನ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಲು ನೀಲಿನಕ್ಷೆ ಸಿದ್ಧಪಡಿಸಲಾಗುವುದು. ಈ ರಸ್ತೆಯಿಂದಾಗಿ ಮುಂದಿನ ದಿನಗಳಲ್ಲಿ ಈ ಪ್ರದೇಶದ ವಾಹನ ನಿಭಿಡತೆಯೂ ಕಡಿಮೆಯಾಗಲು ಸಾಧ್ಯವಿದೆ.

    ಪ್ರವೀಣ್‌ಕುಮಾರ್
    ಬಂದರು ಮತ್ತು ಮೀನುಗಾರಿಕಾ ಇಲಾಖೆ ಮಂಗಳೂರು ಸಹಾಯಕ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts