More

    ಸಪ್ತಪದಿ ವಿಚಾರ ಸಂಕಿರಣ

    ಉಡುಪಿ: ರಾಜ್ಯದ ಆಯ್ದ 100 ದೇವಾಲಯಗಳಲ್ಲಿ ಪ್ರಥಮ ಹಂತದಲ್ಲಿ ಏ.26ರಂದು ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ರಾಜ್ಯದ 30 ಜಿಲ್ಲೆಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

    ಉಡುಪಿ ಪುರ ಭವನದಲ್ಲಿ ಭಾನುವಾರ ಜಿಲ್ಲಾಡಳಿತ ಮತ್ತು ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ಸಹಯೋಗದಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
    ಎ ದರ್ಜೆ ದೇವಾಲಯಗಳು ಇಲ್ಲದ ಸ್ಥಳದಲ್ಲಿ ಬಿ ಮತ್ತು ಸಿ ದರ್ಜೆಯ ದೇವಾಲಯಗಳಲ್ಲಿ ವಿವಾಹ ಏರ್ಪಡಿಸಲು ಅನುದಾನ ಬಿಡುಗಡೆ ಮಾಡಲಾಗುವುದು. ಸಪ್ತಪದಿ ರಥದ ಮೂಲಕ ಎಲ್ಲೆಡೆ ಸಾಮೂಹಿಕ ವಿವಾಹ ಕಾರ್ಯಕ್ರಮದ ಬಗ್ಗೆ ವ್ಯಾಪಕ ಅರಿವು ಮೂಡಿಸಲಾಗುತ್ತಿದೆ ಎಂದರು.

    ಉಪನ್ಯಾಸ ನೀಡಿದ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಮಹರ್ಷಿ ಆನಂದ ಗುರೂಜಿ, ವಿವಾಹ ಎನ್ನುವುದು ಎರಡು ಸಂಬಂಧಗಳನ್ನು ಬೆಸೆಯುವ ಪವಿತ್ರ ಕಾರ್ಯ. ಆರ್ಥಿಕ ಅಡಚಣೆಯಿಂದ ತಮ್ಮ ಮಕ್ಕಳ ವಿವಾಹ ಮಾಡಲು ಸಾಲದ ಸುಳಿಯಲ್ಲಿ ಸಿಲುಕಬೇಕಾದ ಹಾಗೂ ಇದುವರೆಗೆ ಮದುವೆ ಮಾಡಲು ಸಾಧ್ಯವಾಗದೆ ವಿವಾಹ ಮುಂದೂಡುವ ಹಲವು ಪಾಲಕರಿಗೆ, ಆಡಂಬರದ ವಿವಾಹಕ್ಕಾಗಿ ಸಾಲ ಮಾಡಿ, ಸಾಲದ ಹೊರೆಯಿಂದ ಸಂತೋಷವಾಗಿ ನವ ಜೀವನ ನಡೆಸಲು ಕಷ್ಟಪಡುವುದನ್ನು ತಪ್ಪಿಸಲು ಸರ್ಕಾರದ ಈ ವಿವಾಹ ಯೋಜನೆ ನೆರವು ನೀಡಲಿದೆ ಎಂದರು. ಉಡುಪಿ ಶಾಸಕ ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಶೆಟ್ಟಿ, ತಾ.ಪಂ. ಅಧ್ಯಕ್ಷೆ ನೀತಾ ಗುರುರಾಜ ಪೂಜಾರಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಸಿದ್ದಲಿಂಗ ಪ್ರಭು, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಎಂ. ರವಿಕುಮಾರ್ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸ್ವಾಗತಿಸಿದರು, ಪ್ರಶಾಂತ್ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.

    ನಾಸ್ತಿಕರಿಂದ ದೇಶವಿರೋಧಿ ಹೇಳಿಕೆ: ರಾಜ್ಯದ ಪ್ರಮುಖ 25 ಧಾರ್ಮಿಕ ಕೇಂದ್ರಗಳಲ್ಲಿ ಗೋಶಾಲೆ ತೆರೆಯಲು ನಿರ್ಧರಿಸಲಾಗಿದ್ದು, ಯುವ ಜನತೆಯಲ್ಲಿ ಉತ್ತಮ ಸಂಸ್ಕಾರ ಕಲಿಸುವ ಮತ್ತು ಸಂಸ್ಕೃತಿಯನ್ನು ಬೆಳೆಸುವ ಗುರುತರ ಜವಾಬ್ದಾರಿ ದೇವಾಲಯಗಳ ಮೇಲಿದೆ. ದೇವರೇ ಇಲ್ಲ ಎಂದು ಹೇಳುತ್ತಾ ತಿರುಗುವವರಿಂದ ದೇಶ ವಿರೋಧಿ ಹೇಳಿಕೆಗಳು ಬರುತ್ತಿವೆ ಎಂದು ಸಚಿವ ಶ್ರೀನಿವಾಸ ಪೂಜಾರಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts