More

    ಸ್ಯಾನಿಟೈಸರ್ ಕೊರತೆ ನೀಗಿಸಿದ ಅಬಕಾರಿ ಇಲಾಖೆ

    ಅವಿನ್ ಶೆಟ್ಟಿ ಉಡುಪಿ
    ಕರೊನಾ ಮುನ್ನೆಚ್ಚರಿಕೆ ಭಾಗವಾಗಿ ಜಿಲ್ಲಾಡಳಿತಗಳಿಗೆ ಅಗತ್ಯವಾದ ಸ್ಯಾನಿಟೈಸರ್‌ಗಳನ್ನು ಉಡುಪಿ ಅಬಕಾರಿ ಇಲಾಖೆಯು ಖಾಸಗಿ ಸಹಭಾಗಿತ್ವದಲ್ಲಿ ತಯಾರಿಸಿ ಪೂರೈಸುವ ಮಾದರಿ ಉಪಕ್ರಮಕ್ಕೆ ಮುಂದಾಗಿದೆ.
    ದೇಶದಲ್ಲಿ ಕರೊನಾ ಲಗ್ಗೆ ಇಟ್ಟಾಗ ಎಲ್ಲೆಡೆ ಶುಚಿತ್ವಕ್ಕೆ ಸಂಬಂಧಿಸಿ ಹೆಚ್ಚಿನ ಆದ್ಯತೆ ಕಂಡು ಬಂತು. ಸ್ಯಾನಿಟೈಸರ್‌ನಿಂದ ಕೈ ಒರೆಸಿಕೊಳ್ಳುವ ಜಾಗೃತಿ ಆರಂಭವಾಗುತ್ತಿದ್ದಂತೆ ಬೇಡಿಕೆ ಅಧಿಕಗೊಂಡಾಗ ಮೆಡಿಕಲ್ ಶಾಪ್ ಮತ್ತು ಅಂಗಡಿಗಳಲ್ಲಿ ಸ್ಟಾಕ್ ಖಾಲಿಯಾಯಿತು. ಸ್ಯಾನಿಟೈಸರ್ ದರ ದುಪ್ಪಟ್ಟಾಯಿತು. ಜಿಲ್ಲಾಡಳಿತಗಳಿಗೂ ಸ್ಯಾನಿಟೈಸರ್ ಕೊರತೆ ಬಿಸಿ ತಟ್ಟಲಾರಂಭಿತು. ಕರೊನಾ ವಿರುದ್ಧ ಹೋರಾಡುವ ಸರ್ಕಾರಿ ವೈದ್ಯರು, ನರ್ಸ್, ಆರೋಗ್ಯ ಸಹಾಯಕರು, ಇಲಾಖೆ ಸಿಬ್ಬಂದಿ, ಅಧಿಕಾರಿ, ಕಂದಾಯ ಇಲಾಖೆ ಅಧಿಕಾರಿ ಸಿಬ್ಬಂದಿ, ಪೊಲೀಸ್ ಸಿಬ್ಬಂದಿಗೆ ಸ್ಯಾನಿಟೈಸರ್ ಅತ್ಯವಶ್ಯಕವಾಗಿತ್ತು. ಆಗ ಈ ಕಾರ್ಯದಲ್ಲಿ ನೆರವಾಗಿರುವುದು ಉಡುಪಿ ಅಬಕಾರಿ ಇಲಾಖೆ.

    5 ವರ್ಷಕ್ಕೆ ಲೈಸೆನ್ಸ್: ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಔಷಧ ನಿಯಂತ್ರಣ ಇಲಾಖೆಯಿಂದ ಸ್ಯಾನಿಟೈಸರ್ ತಯಾರಿಸಲು, ಮಾರಾಟ ಮಾಡಲು ಅಬಕಾರಿ ಇಲಾಖೆ 2025ರ ವರೆಗೆ 5 ವರ್ಷದ ಲೈಸನ್ಸ್‌ನ್ನು ಪಡೆದುಕೊಂಡಿದೆ. ಪಡುಬಿದ್ರಿ ಸರ್ವದ ಡಿಸ್ಟಿಲರ್ಸ್ ಘಟಕದಲ್ಲಿ ಗುಣಮಟ್ಟದ ಸ್ಯಾನಿಟೈಸರ್‌ಗಳನ್ನು ತಯಾರಿಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ 1800 ಲೀಟರ್, ಉಡುಪಿ ಜಿಲ್ಲಾಡಳಿತಕ್ಕೆ 1643 ಲೀಟರ್ ಸ್ಯಾನಿಟೈಸರ್‌ನ್ನು ಈಗಾಗಲೇ ಪೂರೈಸಲಾಗಿದೆ. ಸದ್ಯಕ್ಕೆ 375 ಎಂಎಲ್‌ನ ಬಾಟಲಿಗಳಲ್ಲಿ ಸ್ಯಾನಿಟೈಸರ್ ಪೂರೈಕೆ ಮಾಡಲಾಗುತ್ತಿದೆ, ಈ ಬಾಟಲಿಗಳ ಕೊರತೆ ಇರುವುದರಿಂದ ದೊಡ್ಡ ಕ್ಯಾನ್‌ಗಳಲ್ಲಿ ವಿತರಿಸುವ ಬಗ್ಗೆ ಚಿಂತನೆ ನಡೆದಿದೆ.

    ಸ್ಯಾನಿಟೈಸರ್ ಅಂಶಗಳು
    ಎಥನಾಲ್, ಗ್ಲೀಜರಾಲ್ ಐಪಿ, ಪ್ಯೂರಿಫೈಡ್ ವಾಟರ್ ಐಪಿ, ಹೈಡ್ರೋಜನ್ ಪ್ಯಾರಾಕ್ಸೈಡ್ ರಾಸಾಯನಿಕ ಅಂಶಗಳ ಸಂಯೋಜನೆಯೊಂದಿಗೆ ಈ ಗುಣಮಟ್ಟದ ಕ್ಲಿನಿಕಲ್ ಸ್ಪಿರಿಟ್ ಹ್ಯಾಂಡ್ ಸ್ಯಾನಿಟೈಸರ್‌ನ್ನು ತಯಾರಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಮಾನದಂಡದ ಪ್ರಕಾರ ಸ್ಯಾನಿಟೈಸರ್‌ನಲ್ಲಿ ಶೇ.70 ಅಲ್ಕೋಹಾಲ್ ಪ್ರಮಾಣ ಇರಬೇಕು, ಇದರಲ್ಲಿ ಶೇ.80ರಷ್ಟು ಅಲ್ಕೋಹಾಲ್ ಪ್ರಮಾಣವಿದೆ.

    ಇನ್ನೂ 2 ಸಾವಿರ ಲೀಟರ್‌ಗೆ ಬೇಡಿಕೆ
    ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಇನ್ನೂ ಎರಡು ಸಾವಿರ ಲೀಟರ್ ಸ್ಯಾನಿಟೈಸರ್‌ಗೆ ಬೇಡಿಕೆ ಇದೆ. ಮುಂದಿನ ವಾರದಲ್ಲಿ ಮತ್ತೆಉತ್ಪಾದಿಸಿ ಪೂರೈಸಲಾಗುವುದು. ಮೊದಲ ಹಂತ ವಿತರಣೆ ಬಳಿಕ ಸದ್ಯಕ್ಕೆ 1350 ಲೀಟರ್ ಸ್ಯಾನಿಟೈಸರ್ ಉಳಿದಿದೆ. ಇದರಲ್ಲಿ 900 ಲೀಟರ್ ದ.ಕ ಜಿಲ್ಲಾಡಳಿತಕ್ಕೆ, 450 ಲೀಟರ್ ಉಡುಪಿ ಜಿಲ್ಲಾಡಳಿತಕ್ಕೆ ನೀಡಲು ಅಬಕಾರಿ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಕಮರ್ಶಿಯಲ್ ಆಗಿ ಸಾರ್ವಜನಿಕರಿಗೆ ಮಾರಾಟ ಮಾಡಲು ಮೆಡಿಕಲ್ ಶಾಪ್‌ಗೆ ಪೂರೈಸಲು ನಮಗೆ ಅವಕಾಶ ಇದ್ದು, ಸದ್ಯಕ್ಕೆ ಜಿಲ್ಲಾಡಳಿತ, ಆರೋಗ್ಯ, ಪೊಲೀಸ್, ಕಂದಾಯ ಇಲಾಖೆ ಸೇರಿದಂತೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ಇಲಾಖೆ, ಕಚೇರಿಗಳಿಗೆ ಮಾತ್ರ ಪೂರೈಸಲಾಗುತ್ತಿದೆ ಎಂದು ಅಬಕಾರಿ ಡಿಸಿ ನಾಗೇಶ್ ಕುಮಾರ್ ತಿಳಿಸಿದ್ದಾರೆ.

    ಬಾಟಲಿಗೆ 187.50 ರೂ.
    ಔಷಧ ನಿಯಂತ್ರಣ ನಿಯಮ ಪ್ರಕಾರ ಒಂದು ಎಂಎಲ್ ಸ್ಯಾನಿಟೈಸರ್‌ಗೆ 50 ಪೈಸೆ ನಿಗದಿ ಮಾಡಲಾಗಿದೆ. ಅದರಂತೆ 187.50 ಪೈಸೆ ಮಾರಾಟ ಬೆಲೆಯಾಗುತ್ತದೆ ಆದರೆ ಇಲಾಖೆ ಬಾಟಲಿಗೆ 96 ರೂ. ನಿಗದಿ ಮಾಡಿದೆ. ಇದರ ಖರ್ಚನ್ನು ಜಿಲ್ಲಾಡಳಿತವು ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಭರಿಸುತ್ತದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಪಡುಬಿದ್ರಿಯ ಸರ್ವದ ಡಿಸ್ಟಿಲರ್ಸ್ ಘಟಕದಲ್ಲಿ ಅಬಕಾರಿ ಅಧೀಕ್ಷಕರ ಸಮಕ್ಷಮ ಸ್ಯಾನಿಟೈಸರ್ ತಯಾರಿಸಲಾಗುತ್ತಿದೆ. ಬೇಡಿಕೆಗನುಗುಣವಾಗಿ ನಗರಸಭೆ, ಆರೋಗ್ಯ ಇಲಾಖೆ, ಪೊಲೀಸ್, ಕಂದಾಯ ಇಲಾಖೆ ಜಿಲ್ಲಾಧಿಕಾರಿಗಳ ಕಚೇರಿಗೆ ಸ್ಯಾನಿಟೈಸರ್ ಬಾಟಲಿಗಳನ್ನು ಪೂರೈಸಿದ್ದೇವೆ. ಸ್ವಲ್ಪ ಪ್ರಮಾಣದಲ್ಲಿ ಉಳಿಕೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಿಂದ ಹೆಚ್ಚುವರಿ ಸ್ಯಾನಿಟೈಸರ್‌ಗೆ ಬೇಡಿಕೆ ಬಂದಿದೆ.
    – ನಾಗೇಶ್ ಕುಮಾರ್, ಉಪ ಆಯುಕ್ತ, ಅಬಕಾರಿ ಇಲಾಖೆ.
    ಯುಡಿಪಿ-5- ಎಪ್ರಿಲ್- ಸಾನಿಟೈಸರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts