More

    ಜೀವ ಉಳಿಸುವ ರಕ್ತದಾನ ಶ್ರೇಷ್ಠ, ಮಹತ್ವದ ಕಾರ್ಯ

    ಡಿಸಿ ವಿದ್ಯಾಕುಮಾರಿ ಅಭಿಪ್ರಾಯ — ಗಾಂಧಿ ಆಸ್ಪತ್ರೆಯಲ್ಲಿ ಶಿಬಿರ ಉದ್ಘಾಟನೆ

    ವಿಜಯವಾಣಿ ಸುದ್ದಿಜಾಲ ಉಡುಪಿ
    ರಕ್ತದ ಮಹತ್ವ ಎಷ್ಟಿರುತ್ತದೆಂದು ಯಾರಿಗೂ ಕಲ್ಪನೆಯೇ ಇರುವುದಿಲ್ಲ. ಅಪಘಾತಕ್ಕೊಳಗಾದಾಗ ಅಥವಾ ಇನ್ನಿತರ ಜೀವನ್ಮರಣದ ಹೋರಾಟದ ಸಂದರ್ಭದಲ್ಲಿ ರಕ್ತದ ಮಹತ್ವ ಅರಿವಿಗೆ ಬುರತ್ತದೆ. ಹೀಗಾಗಿ ವಿದ್ಯಾದಾನ, ಅನ್ನದಾನಕ್ಕಿಂತಲೂ ರಕ್ತದಾನ ಶ್ರೇಷ್ಠ ಕಾರ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅಭಿಪ್ರಾಯಪಟ್ಟರು.

    ಉಡುಪಿಯ ಪ್ರತಿಷ್ಠಿತ ಗಾಂಧಿ ಆಸ್ಪತ್ರೆಯ 30ನೇ ವರ್ಷಕ್ಕೆ ಪಾದಾರ್ಪಣೆ ನಿಮಿತ್ತ ಪಂಚಮಿ ಟ್ರಸ್ಟ್​ ಮತ್ತು ಪಂಚಲಹರಿ ಫೌಂಡೇಷನ್​ ಆಶ್ರಯದಲ್ಲಿ ರಕ್ತನಿಧಿ ಜಿಲ್ಲಾಸ್ಪತ್ರೆ ಉಡುಪಿ ಸಹಯೋಗದೊಂದಿಗೆ ಭಾನುವಾರ ಆಯೋಜಿಸಿದ್ದ ಬೃಹತ್​ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

    ಗಾಂಧಿ ಆಸ್ಪತ್ರೆಯ ಅಮೂಲ್ಯ ಸೇವೆ

    ರಾಜ್ಯಾದ್ಯಂತ ರಕ್ತದ ಕೊರತೆ ಇರುವ ಕುರಿತು ಇತ್ತೀಚೆಗೆ ಪತ್ರಿಕೆಗಳಲ್ಲಿಯೂ ಬಂದಿದೆ. ಬಹುತೇಕ ಆಸ್ಪತ್ರೆಗಳು ಆರ್ಥಿಕ ಗಳಿಕೆಯ ಉದ್ದೇಶ ಹೊಂದಿರುವ ಇಂದಿನ ದಿನಗಳಲ್ಲಿ ಗಾಂಧಿ ಆಸ್ಪತ್ರೆಯು ಸೇವಾ ಮನೋಭಾವದೊಂದಿಗೆ ರಕ್ತದಾನ ಶಿಬಿರ ಆಯೋಜಿಸುತ್ತಿುರವುದು ಮಾದರಿಯಾಗಿದೆ. ರಾಜ್ಯದ ಏಳೆಂಟು ಜಿಲ್ಲೆಗಳ ಜನರು ವೈದ್ಯಕಿಯ ಚಿಕಿತ್ಸೆಗಾಗಿ ಉಡುಪಿಗೆ ಬುರುವುದರಿಂದ ಅವರಿಗೂ ಸಹ ರಕ್ತ ಪೂರೈಕೆ ಮಾಡಬೇಕಾಗುತ್ತದೆ. ಹೀಗಾಗಿ ರಕ್ತದಾನ ಶಿಬಿರ ಇನ್ನಷ್ಟು ಹೆಚ್ಚಾಗಬೇಕು ಎಂದು ಆಶಿಸಿದರು.

    ನಗುಮುಖದ ಸೇವೆಗೆ ಬದ್ಧ

    ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ, 1995ರ ಮೇ 5ರಂದು ಆರಂಭಗೊಂಡ ಗಾಂಧಿ ಆಸ್ಪತ್ರೆಯು ಆರಂಭದ 7 ವರ್ಷ ಕೆಎಂ ಮಾರ್ಗದಲ್ಲಿ ಬಾಡಿಗೆ ಕಟ್ಟಡದಲ್ಲಿತ್ತು. 2002ರಲ್ಲಿ ಸ್ವಂತ ಕಟ್ಟದಲ್ಲಿ ರೋಗಿಗಳಿಗೆ ಉತ್ತಮ ವೈದ್ಯಕೀಯ ಸೇವೆ ನೀಡುತ್ತಿದೆ. ಡಾ. ಹರಿಶ್ಚಂದ್ರ ಹಾಗೂ ಲಕ್ಷ್ಮೀ ದಂಪತಿಯ ಕನಸಿನ ಕೂಸಾಗಿರುವ ಗಾಂಧಿ ಆಸ್ಪತ್ರೆಯು 20 ವರ್ಷದಿಂದ ರಕ್ತದಾನ ಶಿಬಿರ ಆಯೋಜಿಸುತ್ತಿದೆ. 2017ರ ಜನವರಿಯಿಂದ ಪ್ರತಿ ಭಾನುವಾರ ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ನಿಂರತರ ಸ್ವಚ್ಛತಾ ಕಾರ್ಯ ಮಾಡುತ್ತಿದ್ದೇವೆ. ಆಸ್ಪತ್ರೆಯು ನಗುಮುಖದ ಸೇವೆ, ಕಾರ್ಯತತ್ಪರತೆಗೆ ಎಂದಿಗೂ ಬದ್ಧವಾಗಿರುತ್ತದೆ ಎಂದರು.

    ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ.ಹರಿಶ್ಚಂದ್ರ, ಉಡುಪಿ ಜಿಲ್ಲಾ ಸರ್ಜನ್​ ಡಾ. ಎಚ್​.ಅಶೋಕ್​, ಐಎಂಎ ಉಡುಪಿ- ಕಾರವಳಿ ಶಾಖೆಯ ಅಧ್ಯಕ್ಷೆ ಡಾ.ರಾಜಲಕ್ಷೀ, ಉಡುಪಿ ಜಿಲ್ಲಾಸ್ಪತ್ರೆ ರಕ್ತನಿಧಿಯ ವೈದ್ಯಾಧಿಕಾರಿ ಡಾ. ವೀಣಾಕುಮಾರಿ, ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ಡಾ. ವಿದ್ಯಾ ತಂತ್ರಿ, ಲಕ್ಷ್ಮೀ ಎಚ್​. ಉಪಸ್ಥಿತರಿದ್ದರು.

    ಮನ್ಯು ವಿ. ತಂತ್ರಿ ಹಾಗೂ ಮಧ್ವ ವಿ. ತಂತ್ರಿ ಪ್ರಾರ್ಥಿಸಿದರು. ಡಾ. ಪಂಚಮಿ ಸ್ವಾಗತಿಸಿದರು. ಆಸ್ಪತ್ರೆಯ ಸಿಬ್ಬಂದಿ ಶ್ವೇತಾ ಕಾಂಚನ್ ವಂದಿಸಿದರು. ಪೂರ್ಣಿಮಾ ಜನಾರ್ದನ್​ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ 100ಕ್ಕೂ ಅಧಿಕ ಯೂನಿಟ್​ ರಕ್ತ ಸಂಗ್ರಹಿಸಲಾಯಿತು.

    ಐವರು ಸಾಧಕರಿಗೆ ಸನ್ಮಾನ

    ಯುವ ವಿಜ್ಞಾನಿ ಡಾ. ಎನ್​.ರಮೇಶ್​ ಹೊಳ್ಳ, ನಿವೃತ್ತ ಸಂಸ್ಕೃತ ಪ್ರಾಧ್ಯಾಪಕ ಡಾ. ಗಣಪತಿ ಭಟ್​, ರಾಷ್ಟ್ರ ಮಟ್ಟದ ಮಹಿಳಾ ಅಂಗವಿಕಲ ಕ್ರಿಕೆಟ್​ನಲ್ಲಿ ಜಯಭೇರಿ ಬಾರಿಸಿದ ಕರ್ನಾಟಕ ತಂಡದ ಸವ್ಯಸಾಚಿ ಆಟಗಾರ್ತಿ ಹಾಗೂ ಆಸ್ಪತ್ರೆಯ ಸಿಬ್ಬಂದಿ ಶ್ರೀಲತಾ, ಬಾಲ ಪ್ರತಿಭೆಗಳಾದ ಮನ್ಯು ವಿ. ತಂತ್ರಿ ಹಾಗೂ ಮಧ್ವ ವಿ. ತಂತ್ರಿ ಅವರನ್ನು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸನ್ಮಾನಿಸಿ, ಗೌರವಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts