ಸಂಡೂರು: ಆಹಾರ ಔಷಧಿ ಇದ್ದ ಹಾಗೆ. ಆದ್ದರಿಂದ ಶುದ್ಧ ಆಹಾರ ಸೇವಿಸುವುದು ಮುಖ್ಯ ಎಂದು ಡಬ್ಲ್ಯುಎಚ್‌ಒ ಸಂಸ್ಥೆಯ ಎಸ್‌ಎಮ್‌ಒ ಡಾ.ಎಸ್.ಆರ್.ಶ್ರೀಧರ್ ಹೇಳಿದರು. ತಾಲೂಕಿನ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ವಿಶ್ವ ಆಹಾರ ಸುರಕ್ಷತಾ ದಿನ-2022ರ ಆಚರಣೆಯ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
2023ರೊಳಗೆ ಮಿಜಲ್ಸ್ ಮತ್ತು ರುಬೆಲ್ಲಾ ಕಾಯಿಲೆಗಳ ನಿರ್ಮೂಲನೆಯ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸೋಣ. ಇಂದು ಇಡೀ ವಿಶ್ವವೇ ಆರೋಗ್ಯ ಸುರಕ್ಷತಾ ದಿನವನ್ನಾಗಿ ಆಚರಿಸುತ್ತಿದೆ. ಸಾರ್ವಜನಿಕರಿಗೆ ಆಹಾರ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ನಮ್ಮ ಪೂರ್ವಜರು ಊಟ ಬಲ್ಲವನಿಗೆ ರೋಗವಿಲ್ಲ ಎಂದು ಹೇಳುತ್ತಿದ್ದರು. ಇದರರ್ಥ ಆರೋಗ್ಯ ಯುಕ್ತ ಆಹಾರ ಸೇವಿಸಬೇಕು ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ, ಶುದ್ಧವಾದ ಆಹಾರ ಸೇವಿಸುವವನಿಗೆ ರೋಗಗಳು ಬರುವುದಿಲ್ಲ. ಆಹಾರದ ಸುರಕ್ಷತೆಗೆ ಪಂಚ ಸೂತ್ರಗಳನ್ನು ಪಾಲನೆ ಮಾಡಬೇಕು. ಆಹಾರ ಪದಾರ್ಥಗಳನ್ನು ತಯಾರಿಸಲು ಕಚ್ಚಾ ಪದಾರ್ಥಗಳನ್ನು ಬಳಸುವಾಗ ಸ್ವಚ್ಛವಾಗಿ ತೊಳೆದು ತಯಾರಿಸಬೇಕು. ಎಲ್ಲ ಪದಾರ್ಥಗಳನ್ನು ಒಟ್ಟಿಗೆ ಬೇಯಿಸಬಾರದು. ಆಹಾರ ತಯಾರಿಕೆಗೆ ಶುದ್ಧ ನೀರನ್ನು ಬಳಸಬೇಕು. ಸುರಕ್ಷಿತ ಸಮಯದೊಳಗೆ ಆಹಾರ ಸೇವಿಸಬೇಕು. ಈ ಏಳು ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು. ತಿನ್ನುವ ಪದಾರ್ಥಗಳಲ್ಲಿ ಬಣ್ಣಗಳನ್ನು ಬಳಸುವುದು, ಪ್ಲಾಸ್ಟಿಕ್ ಕವರ್‌ನಲ್ಲಿ ಆಹಾರ ಕಟ್ಟಿಡುವುದು, ದಿನಗಟ್ಟಲೇ ಫ್ರಿಡ್ಜ್‌ನಲ್ಲಿ ಅಹಾರ ಶೇಕರಿಸಿಡುವುದು ಮೊದಲಾದ ತಪ್ಪುಗಳು ಮಾಡಬಾರದು ಎಂದರು.
ಆಶಾ ಕಾರ್ಯಕರ್ತೆಯರಾದ ನೀಲಮ್ಮ, ವಿಜಯಲಕ್ಷ್ಮಿ, ಮಾಂತಮ್ಮ, ಶ್ರೀದೇವಿ, ಎರ‌್ರೆಮ್ಮ, ಸುಮಂಗಳಾ, ಶಾಂತಮ್ಮ, ಲಕ್ಷ್ಮಿ, ಮಂಗಳಾ, ಮಂಜುಳಾ, ಭಾರತಿ, ಹನುಮ ಂತಮ್ಮ, ಹಂಪಮ್ಮ, ದೇವಮ್ಮ ಇತರರಿದ್ದರು.