More

    ಮಳಿಗೆಗಳ ಬಾಡಿಗೆ 46 ಲಕ್ಷ ರೂ. ಬಾಕಿ

    ಸಂಡೂರು: ಪುರಸಭೆ ಮಳಿಗೆಗಳ ಬಾಡಿಗೆ 46 ಲಕ್ಷ ರೂ.ಗಿಂತ ಹೆಚ್ಚು ಬಾಕಿಯಿದ್ದು, ಪಾವತಿಸದ ಮಳಿಗೆಗಳ ವಿರುದ್ಧ ಕ್ರಮ ಜರುಗಿಸಿ ಎಂದು ಪುರಸಭೆ ವಿರೋಧ ಪಕ್ಷದ ನಾಯಕ ಅಬ್ದುಲ್ ಮುನಾಫ್ ಒತ್ತಾಯಿಸಿದರು.

    ಕೆ.ಎಸ್.ವೀರಭದ್ರಪ್ಪ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಬಾಕಿ ನೀಡದವರ ಮಳಿಗೆಗಳಿಗೆ ಬೀಗ ಹಾಕಿ. ಜನಸಾಮಾನ್ಯರು ವಿದ್ಯುತ್ ಬಿಲ್ ಕಟ್ಟದಿದ್ದರೆ ಕನೆಕ್ಷನ್ ಕಟ್ ಮಾಡಲಾಗುತ್ತದೆ. ಅದೇರೀತಿ ಪುರಸಭೆಯವರು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಇದಕ್ಕೆ ಸದಸ್ಯರಾದ ಎಲ್.ಎಚ್.ಶಿವಕುಮಾರ್, ನಂದಿಹಳ್ಳಿ ಹನುಮೇಶ್ ದನಿಗೂಡಿಸಿದರು.

    ಮುಖ್ಯಾಧಿಕಾರಿ ಖಾಜಾ ಮೊಯಿನುದ್ದೀನ್ ಪ್ರತಿಕ್ರಿಯಿಸಿ, ಶೇ.35 ವಸೂಲಿಯಾಗಿದೆ. ಈ ಬಾರಿ ಹಾಗಾಗದಂತೆ ತಡೆಯಲು ಮುಂಚೆಯೇ ಒಂದಷ್ಟು ಬಾಡಿಗೆ ಪಡೆಯಲಾಗಿದೆ. ಬಹಳ ದಿನಗಳಿಂದ ವಸೂಲಾಗದ ಮಳಿಗೆಗಳವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

    ಸದಸ್ಯ ವಣಿಕೇರಿ ಸುರೇಶ್ ಮಾತನಾಡಿ, ಈ ಬಾರಿಯ ಸಭೆ ಅಸ್ತವ್ಯಸ್ತವಾಗಿದ್ದು, ಬೇಸರ ತರಿಸಿದೆ. ಬೆಳಗಿನ 9 ಗಂಟೆಗೆ ನಿಗದಿಪಡಿಸಿದ ಸಭೆಗೆ ಅಧಿಕಾರಿಗಳು ವಿಳಂಬವಾಗಿ ಬಂದಿದ್ದಾರೆ. ಸಭೆಯ ಕುರಿತು ನೀಡಲಾಗಿರುವ ಟೆಂಡರ್ ಪ್ರಕ್ರಿಯೆ ಹಾಗೂ ಇತರ ಮಾಹಿತಿ ಹೊತ್ತ ಕೈಪಿಡಿಗಳಿಗೆ ಸರಿಯಾಗಿ ಸೀಲ್ ಅಥವಾ ಸಹಿಯೂ ಇಲ್ಲ. ಅಧಿಕಾರಿಗಳಲ್ಲಿಯೇ ತಾಳಮೇಳ ಕಾಣುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    4ನೇ ವಾರ್ಡ್‌ನಲ್ಲಿರುವ ಪೌರ ಕಾರ್ಮಿಕರ ಭವನವು ಶಿಥಿಲಾವಸ್ಥೆಯಲ್ಲಿದ್ದು ಭವನ ತೆರವುಗೊಳಿಸಿ ಹೊಸ ಭವನ ನಿರ್ಮಾಣಕ್ಕೆ ಅಂದಾಜು ಪಟ್ಟಿ ತಯಾರಿಸಿ ಪುರಸಭೆ ಯೋಜನೆಯಡಿ ನಿರ್ಮಿಸುವಂತೆ ಒತ್ತಾಯಿಸಿದರು.

    ಬೇಸಿಗೆ ಆರಂಭವಾಗಿದ್ದು ಈಗಲಾದರೂ ಫಾಗಿಂಗ್ ಮಾಡಿಸಿ. ಸೊಳ್ಳೆಗಳ ಕಾಟ ಹೆಚ್ಚಾಗಿದೆ ಎಂದು ಸದಸ್ಯ ಎಲ್.ಎಚ್.ಶಿವಕುಮಾರ್ ಸಭೆಯ ಗಮನಸೆಳೆದರು.
    ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಕುಡಿಯುವ ನೀರು ಸರಬರಾಜಿನ ರಿಪೇರಿ ಖರ್ಚಿಗೆ 3,46,046 ಹಣ ಬಳಕೆಯಾಗಿದೆ ಎಂದು ಲೆಕ್ಕ ತೋರಿಸಲಾಗಿದೆ. ವಿವಿಧ ವಾರ್ಡ್‌ಗಳು ಎಂದರೆ ಎಲ್ಲಿ? ಯಾವಾಗ? ಎಂದು ಮಾಹಿತಿ ಒದಗಿಸಿ ಎಂದು ಪಟ್ಟು ಹಿಡಿದ ಶಿವಕುಮಾರ್, ಖರ್ಚು ಕೇವಲ 80 ಸಾವಿರ ರೂ. ಕೂಡ ಆಗಿರಬಹುದಲ್ಲವೇ? ಎಂದು ಪ್ರಶ್ನಿಸಿದರು.

    ಮರಾಠ ಸಮಾಜದ ಜಾಗವನ್ನು ಒದಗಿಸುವಂತೆ ಸದಸ್ಯ ಸಂತೋಷ್ ಮುಖ್ಯಾಧಿಕಾರಿಯನ್ನು ಒತ್ತಾಯಿಸಿದರು. ಇದಕ್ಕೆ ದನಿಗೂಡಿಸಿದ ಉಪಾಧ್ಯಕ್ಷ ಈರೇಶ್ ಸಿಂಧೆ, ಸಂಡೂರು ಸಂಸ್ಥಾನಿಕರು ಮರಾಠ ಸಮಾಜದ ಜಾಗವನ್ನು ಆರೋಗ್ಯ ಇಲಾಖೆ ಕೆಲಸಕ್ಕೆ ಬಳಸಿಕೊಳ್ಳಲು ಮೀಸಲಿಟ್ಟಿದ್ದರು. ಅದನ್ನು ನಮ್ಮ ಸಮಾಜಕ್ಕೆ ಮಾಡಿಕೊಡಲು ಪುರಸಭೆ ಅಧಿಕಾರಿಗಳು ನಿರ್ಲಕ್ಷಿಸುವುದರಲ್ಲಿ ಅರ್ಥವಿಲ್ಲ ಎಂದರು.

    ಅಧ್ಯಕ್ಷೆ ಅನಿತಾ ವಸಂತ್ ಕುಮಾರ್, ಅಧಿಕಾರಿಗಳಾದ ಪ್ರಭುರಾಜ್ ಹಗರಿ, ಜೆಇ ಅರುಣ್ ಪಾಟೀಲ್ ಹಾಗೂ ಸದಸ್ಯರಿದ್ದರು.

    ನಮ್ಮ ಸಮಾಜದಿಂದ ಪುರಸಭೆಗೆ ಇಬ್ಬರು ಸದಸ್ಯರು, ಒಬ್ಬ ನಾಮ ನಿರ್ದೇಶಿತರಿದ್ದು ಸ್ವತಃ ನಾನು ಒಬ್ಬ ಉಪಾಧ್ಯಕ್ಷನಿದ್ದು ನಮ್ಮ ಸಮಾಜದ ಜಾಗವನ್ನು ಉಳಿಸಿಕೊಳ್ಳಲು ಪರದಾಡಬೇಕಿದೆ. ಈ ಬಗ್ಗೆ ಸಮುದಾಯದ ಜನರ ಮುಂದೆ ನಾವು ಅಸಹಾಯಕರಾದಂತಾಗಿದೆ.
    ಈರೇಶ್ ಸಿಂಧೆ
    ಉಪಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts