More

    ಮೂರು ಡ್ಯಾಂಗಳಿಂದ ಮರಳು ತೆರವು

    ವೇಣುವಿನೋದ್ ಕೆ.ಎಸ್. ಮಂಗಳೂರು
    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರಾವಳಿ ನಿಯಂತ್ರಣ ವಲಯೇತರ (ನಾನ್ ಸಿಆರ್‌ಜಡ್) ಪ್ರದೇಶದಿಂದ ಪೂರೈಕೆಯಾಗುತ್ತಿರುವ ಮರಳು ದುಬಾರಿಯಾಗಿರುವ ಹೊತ್ತಿನಲ್ಲಿ ಜಿಲ್ಲಾಡಳಿತ ತ್ವರಿತವಾಗಿ ಮೂರು ಡ್ಯಾಂಗಳಲ್ಲಿ ಸಂಗ್ರಹವಾಗಿರುವ ಮರಳನ್ನು ತೆರವುಗೊಳಿಸುವ ಪ್ರಕ್ರಿಯೆಗೆ ಚುರುಕು ಮುಟ್ಟಿಸಿದ್ದು, ದರ ಇಳಿಕೆಯಾಗುವ ನಿರೀಕ್ಷೆಗಳಿವೆ.

    ಮೂರು ಕಡೆಯ ಡ್ಯಾಂಗಳಲ್ಲಿ ಸಂಗ್ರಹವಾಗಿರುವ ಮರಳು ತೆರವಿಗೆ ಕರ್ನಾಟಕ ಖನಿಜ ನಿಗಮ(ಕೆಎಸ್‌ಎಂಸಿಎಲ್)ಕ್ಕೆ ಸೂಚನೆ ಕೊಡಲಾಗಿದೆ. ನಿಗಮದ ಅಧಿಕಾರಿಗಳು ಈಗಾಗಲೇ ಪ್ರಾಥಮಿಕ ಸಮೀಕ್ಷೆ ನಡೆಸಿದ್ದಾರೆ. ತುಂಬೆ ವೆಂಟೆಡ್ ಡ್ಯಾಂ, ಮಳವೂರು ಡ್ಯಾಂ ಹಾಗೂ ಶಂಭೂರು ಡ್ಯಾಂ ಮೂರೂ ಕಡೆಗಳಿಂದ ಮರಳು ತೆರವು ಮಾಡಿದರೆ ಕಡಿಮೆ ದರಕ್ಕೆ ಸಾಕಷ್ಟು ಮರಳು ಸಿಗಬಹುದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಹೇಳುತ್ತಾರೆ. ಸದ್ಯ ನಾನ್ ಸಿಆರ್‌ಜಡ್ ಪ್ರದೇಶದ 15 ಬ್ಲಾಕ್‌ಗಳಿಂದ ಮರಳು ಪೂರೈಕೆಯಾಗುತ್ತಿದ್ದು, ಮಂಗಳೂರು ಸಮೀಪದಲ್ಲಿ ಬ್ಲಾಕ್ ಕಡಿಮೆ ಇದೆ. ಹಾಗಾಗಿ ಸಹಜವಾಗಿಯೇ ಇಲ್ಲಿಗೆ ತಲುಪುವಾಗ ಲೋಡ್‌ಗೆ 20ರಿಂದ 25 ಸಾವಿರ ರೂ.ವರೆಗೆ ಮರಳಿನ ದರ ಏರುತ್ತದೆ ಎಂಬ ದೂರು ಕೇಳಿಬಂದಿದೆ.

    ಸಿಆರ್‌ಜಡ್ ಮರಳು ಶೀಘ್ರ ಅನುಮತಿ: ಕರಾವಳಿ ನಿಯಂತ್ರಣ ವಲಯ (ಸಿಆರ್‌ಜಡ್)ದಲ್ಲಿ 13 ಮರಳು ದಿಬ್ಬಗಳಿಂದ ಮರಳು ತೆರವಿಗೆ ಶೀಘ್ರ ಅನುಮತಿ ಕೊಡುವ ಸಾಧ್ಯತೆ ಇದ್ದು, ಇದೂ ದರ ಇಳಿಕೆಯಲ್ಲಿ ಪಾತ್ರ ವಹಿಸುವ ಸಾಧ್ಯತೆಗಳು ಗೋಚರಿಸಿವೆ.
    ಹಿಂದಿನಿಂದಲೂ ಮಂಗಳೂರು ಆಸುಪಾಸಿನಲ್ಲಿ ಸಿಆರ್‌ಜಡ್ ಮರಳಿಗೆ ಬೇಡಿಕೆ ಇದ್ದು, ಈ ಬಾರಿ ಕರೊನಾದಿಂದಾಗಿ ಅದರ ತೆರವುಪೂರ್ವ ಪ್ರಕ್ರಿಯೆ ತಡವಾಗಿವೆ. ಅ.7(ಬುಧವಾರ) ಮರಳುಗಾರಿಕೆಗೆ ಅರ್ಜಿ ಹಾಕುವುದಕ್ಕೆ ಅಂತಿಮ ದಿನವಾಗಿತ್ತು. 500ಕ್ಕೂ ಹೆಚ್ಚು ಅರ್ಜಿಗಳು ಬಂದಿರುವುದಾಗಿ ತಿಳಿದುಬಂದಿದೆ. ಅರ್ಜಿ ಸ್ವೀಕೃತಿ ಬಳಿಕ ಅವುಗಳ ಪರಿಶೀಲನಾ ಪ್ರಕ್ರಿಯೆ ಅ.8ರಿಂದ ಐದು ದಿನ ನಡೆಯಲಿದ್ದು, ಬಳಿಕ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಅರ್ಹರಿಗೆ ಮರಳು ತೆರವಿಗೆ ಅನುಮೋದನೆ ನೀಡಲಿದೆ.

    ಜಿಲ್ಲಾ ಮಟ್ಟದ 7 ಸದಸ್ಯರ ಸಮಿತಿಯಲ್ಲಿ ಗುರುತಿಸಲಾಗಿರುವ ಮತ್ತು ಜಿಲ್ಲಾಧಿಕಾರಿ ಕಚೇರಿಯಲ್ಲಿ ನೋಂದಾಯಿಸಿರುವ ಸಾಂಪ್ರದಾಯಿಕ ಮರಳು ದಿಬ್ಬ ತೆರವುಗೊಳಿಸುವವರನ್ನು ಪರಿಗಣಿಸಬೇಕು. ಮರಳು ದಿಬ್ಬ ಹಾಗೂ ಅವುಗಳಲ್ಲಿ ಲಭ್ಯವಿರುವ ಮರಳಿನ ಪ್ರಮಾಣದ ಆಧಾರದ ಮೇಲೆ ಪರವಾನಗಿ ಹಂಚಿಕೆಗೊಳಿಸಬೇಕು. ಮರಳು ದಿಬ್ಬ ಕಡಿಮೆ ಸಂಖ್ಯೆಯಲ್ಲಿರುವ ಕಡೆಗಳಲ್ಲಿ ಲಾಟರಿ ಮೂಲಕ ಪರವಾನಗಿ ಹಂಚಿಕೆ ಮಾಡಬೇಕು ಎಂಬ ಮಾನದಂಡಗಳನ್ನು ಅನುಸರಿಸಲಾಗುತ್ತದೆ.
    ನೇತ್ರಾವತಿ ನದಿಯ 8 ಬ್ಲಾಕ್, ಫಲ್ಗುಣಿ ನದಿಯ 4 ಬ್ಲಾಕ್ ಹಾಗೂ ಶಾಂಭವಿ ನದಿಯ ಒಂದು ಬ್ಲಾಕ್ ಸೇರಿದಂತೆ 13 ಬ್ಲಾಕ್‌ಗಳನ್ನು ಈಗಾಗಲೇ ಗುರುತಿಸಲಾಗಿದೆ.

    ಉಡುಪಿಯಲ್ಲಿ ಮರಳುಗಾರಿಕೆ ಸರಾಗ
    ಉಡುಪಿ: ಜಿಲ್ಲೆಯ ಸಿಆರ್‌ಜಡ್ (ಸ್ವರ್ಣಾ, ಸೀತಾ ಮತ್ತು ಪಾಪನಾಶಿನಿ ನದಿ) ವ್ಯಾಪ್ತಿಯಲ್ಲಿ ಬೆಥಮೆಟ್ರಿಕ್ ಸರ್ವೇಯಲ್ಲಿ 6 ಲಕ್ಷ ಮೆಟ್ರಿಕ್ ಟನ್ ಮರಳು ಗುರುತಿಸಲಾಗಿದ್ದು, ಕೆಸಿಜಡ್‌ಎಂನಿಂದ ಅನುಮತಿ ಪಡೆದು 11 ದಿಬ್ಬಗಳ ತೆರವಿಗೆ 70 ಮಂದಿ ಸಾಂಪ್ರದಾಯಿಕ ಮರಳುಗಾರರಿಗೆ ಅವಕಾಶ ನೀಡಲಾಗಿದೆ. ಪ್ರಸ್ತುತ 40 ಸಾವಿರ ಮೆಟ್ರಿಕ್ ಟನ್ ಮರಳು ಮಾತ್ರ ತೆರವು ಮಾಡಲಾಗಿದೆ.
    ನಾನ್-ಸಿಆರ್‌ಜಡ್ ವ್ಯಾಪ್ತಿಯಲ್ಲಿ 22 ಬ್ಲಾಕ್‌ಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಇಲ್ಲಿನ ಮರಳು ತೆರವು ಮಾಡುವ ಜವಾಬ್ದಾರಿಯನ್ನು ಕರ್ನಾಟಕ ಖನಿಜ ನಿಗಮಕ್ಕೆ ವಹಿಸಲಾಗಿದೆ. ಕುಂದಾಪುರ ಮತ್ತು ಬೈಂದೂರಿನಲ್ಲಿ ಪರಿಸರ ಸೂಕ್ಷ್ಮ ವಲಯಗಳಲ್ಲಿಯೂ ಈ ಬಾರಿ ಮರಳು ತೆರವಿಗೆ ಅವಕಾಶವಿದೆ. ಹೀಗಾಗಿ ಬೆಥಮೆಟ್ರಿಕ್ ಸರ್ವೇ ನಡೆಸಲಾಗುತ್ತಿದೆ. ಈ ವರದಿಯನ್ನು ಶೀಘ್ರದಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

    ಮರಳು ದರ ಏರಿಕೆಯಾಗಿರುವುದು ಗೊತ್ತಾಗಿದೆ. ಅದಕ್ಕಾಗಿ ಮೂರು ಡ್ಯಾಂಗಳಲ್ಲಿ ಸಂಗ್ರಹಗೊಂಡ ಮರಳು ತೆರವು ಮಾಡುವುದಕ್ಕೆ ಕ್ರಮ ಕೈಗೊಳ್ಳುತ್ತಿದ್ದೇವೆ. ಆ ಮರಳು ಲಭ್ಯವಾದರೆ ಮರಳು ದರ ಇಳಿಯುವ ನಿರೀಕ್ಷೆ ಇದೆ. ಜತೆಗೆ ಸಿಆರ್‌ಜಡ್ ಪ್ರದೇಶದ ಮರಳು ತೆರವಿಗೆ ಅನುಮೋದನೆ ಆದಷ್ಟು ಬೇಗ ನೀಡಲಾಗುವುದು.
    – ಡಾ.ರಾಜೇಂದ್ರ ಕೆ.ವಿ, ದ.ಕ. ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts