More

  ಕೆಜಿಎಫ್ ಗೆ ಸಂಪಂಗಿಯೇ ಹೀರೋ: ಮಾಜಿ ಶಾಸಕ ಸಂಪಂಗಿ ವಿರೋಧಿಗಳಿಗೆ ಸಚಿವ ಮುನಿರತ್ನ ಎಚ್ಚರಿಕೆ

  ಬೇತಮಂಗಲ: ಮಾಜಿ ಶಾಸಕ ವೈ.ಸಂಪಂಗಿ ಅವರನ್ನು 2023ರ ಚುನಾವಣೆಯಲ್ಲಿ ಗೆಲ್ಲಿಸಿ ವಿಧಾನಸಭೆ ಮೆಟ್ಟಿಲು ಹತ್ತಿಸುವುದು ಶತಸಿದ್ಧ, ಅದನ್ನು ತಪ್ಪಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಸಂಪಂಗಿ ವಿರೋಧಿಗಳಿಗೆ ಟಾಂಗ್ ಕೊಟ್ಟರು.

  ಬೇತಮಂಗಲದ ಅಶ್ವಿನಿ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಬಿಜೆಪಿ ಸಾಧನಾ ಸಮಾವೇಶ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕೆಜಿಎಫ್ ಕ್ಷೇತ್ರದಿಂದ ಅತಿ ಹೆಚ್ಚು ಕಾರ್ಯಕರ್ತರು ಜು. 28ರಂದು ದೊಡ್ಡಬಳ್ಳಾಪುರದಲ್ಲಿ ಹಮ್ಮಿಕೊಂಡಿರುವ ಬಿಜೆಪಿ ಸಾಧನಾ ಸಮಾವೇಶಕ್ಕೆ ಬರಬೇಕು. ಜಿಲ್ಲೆಯ 6 ತಾಲೂಕುಗಳಿಗೂ ಪ್ರತ್ಯೇಕ ಸ್ಥಳಾವಕಾಶ ಮಾಡಲಾಗುತ್ತದೆ. ನಿಮ್ಮ ಕ್ಷೇತ್ರದಿಂದ ಎಷ್ಟು ಜನ ಬರುತ್ತಾರೆ ಎನ್ನುವುದನ್ನು ನಾವು ಗಮನಿಸುತ್ತೇವೆ. ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಮಾವೇಶ ಯಶಸ್ವಿಗೊಳಿಸಿ. ಮಿಕ್ಕಿದ ಕೆಲಸ ನಾನು ಮಾಡುತ್ತೇನೆ. ಈ ಕ್ಷೇತ್ರಕ್ಕೆ ಬಿಜೆಪಿ ಶಾಸಕನನ್ನಾಗಿ ಮಾಡುವುದು ನನಗೆ ಗೊತ್ತಿದೆ ಎಂದು ನೇರವಾಗಿ ಸಂಪಂಗಿ ಕಡೆ ಬೆರಳು ತೋರಿಸುತ್ತಿದ್ದಂತೆ ಸಂಪಂಗಿ ಎದ್ದು ನಿಂತು ಕೈ ಮುಗಿದರು. ಇತ್ತ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದ ಸಂಪಂಗಿ ಬೆಂಬಲಿಗರು ಚಪ್ಪಾಳೆ, ಶಿಳ್ಳೆ ಮೂಲಕ ಸಂಪಂಗಿ, ಮುನಿರತ್ನಗೆ ಜೈಕಾರ ಕೂಗಿದರು.

  ಸಂಪಂಗಿ ರಿಯಲ್ ಹೀರೋ: ಕೆಜಿಎಫ್ ಚಲನಚಿತ್ರ ಸೂಪರ್ ಹಿಟ್ ಆಗಿದೆ. ಅದರ ಹೀರೋ ರೀಲ್, ಆದರೆ ಸಂಪಂಗಿ ಕೆಜಿಎಫ್ ರಿಯಲ್ ಹೀರೋ ಅಂದಾಗ ಬೆಂಬಲಿಗರ ಸಂಭ್ರಮ ಮುಗಿಲು ಮುಟ್ಟಿತು. ನನಗೆ ಗೊತ್ತಿಲ್ಲದೆ ಸಂಪಂಗಿಯನ್ನು ಸೊಳ್ಳೆ ಕಚ್ಚಬಹುದು. ಆದರೆ ಕಾಂಗ್ರೆಸ್‌ನವರೂ ಸೇರಿ ಯಾರೂ ತೊಂದರೆ ಕೊಡಲು ಸಾಧ್ಯವಿಲ್ಲ. ನನ್ನ ಜತೆ ಸಚಿವ ಡಾ.ಸುಧಾಕರ್ ಇರ್ತಾರೆ. ನಾವಿಬ್ಬರು ಸಂಪಂಗಿಗೆ ಎಡ-ಬಲ ಭುಜಗಳಿದ್ದಂತೆ ಎಂದು ಸಂಪಂಗಿಗೆ ಬಲ ತುಂಬಿದರು.

  ನಗರ ಅಧ್ಯಕನನ್ನು ತರಾಟೆಗೆ ತೆಗೆದುಕೊಂಡ ಮುನಿರತ್ನ: ವೇದಿಕೆಯಲ್ಲಿ ಸಂಪಂಗಿ ಪರ ಮುನಿರತ್ನ ಬ್ಯಾಟ್ ಬೀಸಿದಾಗ ನಗರಘಟಕ ಅಧ್ಯಕ್ಷ ಕಮಲನಾಥನ್ ಮೈಕ್ ಮುಂದೆ ಬಂದು, ಸಚಿವ ಮುನಿರತ್ನ ಕುರಿತು ‘ಇಲ್ಲಿ ಗುಂಪುಗಾರಿಕೆ ಏಕೆ ಆಗಿದೆ ಎಂದು ತಿಳಿದುಕೊಳ್ಳಿ. ಎರಡೂ ಕಡೆಯವರನ್ನು ಕೂರಿಸಿ ಮಾತನಾಡಬಹುದಿತ್ತಲ್ಲ’ ಎಂದಾಗ ವೇದಿಕೆಯಲ್ಲಿದ್ದ ಜಿಲ್ಲಾಧ್ಯಕ್ಷ ವೇಣುಗೋಪಾಲ್, ಸಚಿವ ಸುಧಾಕರ್ ಅದೆಲ್ಲಾ ಮಾತಾಡಬಾರದು ಎಂದು ಅಡ್ಡಿಪಡಿಸಲು ಮುಂದಾದರು. ಆಗ ಕಮಲನಾಥ್ ಮತ್ತೆ ಮಾತು ಮುಂದುವರಿಸಿದ್ದನ್ನು ಕಂಡ ಮುನಿರತ್ನ ಕೋಪಗೊಂಡು ಏಕ ವಚನದಲ್ಲಿ ತಾವಿದ್ದ ಸ್ಥಳಕ್ಕೆ ಕರೆಸಿಕೊಂಡು ತರಾಟೆಗೆ ತೆಗೆದುಕೊಂಡರು. ‘ನಾನು ಹೇಳಿದ್ದು ಕಾಂಗ್ರೆಸ್‌ನವರಿಗೆ. ಏನಿದ್ರು ನನ್ನತ್ರ ಮಾತಾಡು. ಮೈಕ್ ಹಿಡಿದುಕೊಂಡು ಜನರನ್ನ ದಿಕ್ಕು ತಪ್ಪಿಸುವ ಹೇಳಿಕೆ ಕೊಡ್ತಾ ಇದ್ದೀಯಾ’ ಎಂದು ಬೈಯ್ದರು.
  ಡಾ.ಕೆ.ಸುಧಾಕರ್ ಮಾತನಾಡಿ, ಕೆಜಿಎಫ್ ಕ್ಷೇತ್ರದಲ್ಲಿ ಈಗಾಗಲೇ ಸಂಪಂಗಿ ಅರ್ಧ ಪ್ರಚಾರ ಮುಗಿಸಿದ್ದಾರೆ. ಎಲ್ಲರೂ ಒಟ್ಟಾಗಿ ದುಡಿದರೆ ಕೆಜಿಎಫ್‌ನಲ್ಲಿ ಕಮಲ ಅರಳುವುದು ಮತ್ತಷ್ಟು ಸುಲಭವಾಗುತ್ತದೆ. ಜಿಎಸ್‌ಟಿ ಬಗ್ಗೆ ವಿರೋಧ ಪಕ್ಷದವರು ಬೊಬ್ಬೆ ಹೊಡೆಯುತ್ತಿದ್ದಾರೆ. ಜಿಎಸ್‌ಟಿಯಿಂದಾಗಿ ಸಾಕಷ್ಟು ವಸ್ತುಗಳ ಬೆಲೆ ಕಡಿಮೆಯೂ ಆಗಿದೆ. ಇಷ್ಟಕ್ಕೂ ಜಿಎಸ್‌ಟಿ ಯೋಜನೆ ನಮ್ಮದಲ್ಲ, ಕಾಂಗ್ರೆಸ್ ಸರ್ಕಾರದ್ದು. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಮಾಡಲಾಗಿತ್ತು ಎಂದರು.

  ವೈ ಸಂಪಂಗಿ ಮಾತನಾಡಿ, ದೊಡ್ಡಬಳ್ಳಾಪುರದಲ್ಲಿ ಹಮ್ಮಿಕೊಂಡಿರುವ ಸಾಧನಾ ಸಮಾವೇಶಕ್ಕೆ ಕೆಜಿಎ್ನಿಂದ 10 ಸಾವಿರ ಜನರನ್ನು ಕರೆತರುತ್ತೇನೆ ಎಂದರು.

  ವಿಧಾನ ಪರಿಷತ್ ಸದಸ್ಯ ವೈ,ಎ. ನಾರಾಯಣಸ್ವಾಮಿ, ಮಾಲೂರು ಮಂಜುನಾಥಗೌಡ, ಗ್ರಾಮಾಂತರ ಅಧ್ಯಕ್ಷ ಜಯಪ್ರಕಾಶ್ ನಾಯ್ಡು, ಕೆಡಿಎ ಅಧ್ಯಕ್ಷೆ ಅಶ್ವಿನಿ, ಬಿಜೆಪಿ ಹಿರಿಯ ಮುಖಂಡರಾದ ಸುರೆಶ್ ನಾರಾಯಣ ಕುಟ್ಟಿ, ಜಿಲ್ಲಾ ಕಾರ್ಯದರ್ಶಿ ಕೃಷ್ಣಮೂರ್ತಿ, ಕೆಜಿಎ್ ಶ್ರೀನಿವಾಸ್, ಪ್ರವೀಣ್ ಕುಮಾರ್, ಗ್ರಾಪಂ ಅಧ್ಯಕ್ಷ ಸುನೀಲ್ ಕುಮಾರ್, ಮಹಿಳಾ ಅಧ್ಯಕ್ಷೆ ಮಮತಾ ಗಣೇಶ್, ತಾಪಂ ಸದಸ್ಯ ಡಾ.ಕೃಷ್ಣಮೂರ್ತಿ, ಕಾರ್ಯದರ್ಶಿಗಳಾದ ಹೇಮಾರೆಡ್ಡಿ, ಎಂ.ವಿಜಯಕುಮಾರ್ ಇದ್ದರು.

  ಮುನಿಯಪ್ಪ ಅವರನ್ನು ಹೊಗಳಿದ ಸಚಿವ ಸುಧಾಕರ್: ಕಾಂಗ್ರೆಸ್‌ನ ಕೆ.ಎಚ್.ಮುನಿಯಪ್ಪ ಅವರನ್ನು ಹೊಗಳುವುದನ್ನು ಇಲ್ಲಿಯೂ ಮುಂದುವರಿಸಿದ ಡಾ. ಕೆ. ಸುಧಾಕರ್, 7 ಬಾರಿ ಸತತವಾಗಿ ಗೆದ್ದು ಕೇವಲ ಒಮ್ಮೆ ಸೋತ ತಕ್ಷಣ ಮುನಿಯಪ್ಪ ಅವರನ್ನು ಕಾಂಗ್ರೆಸ್ ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ. ರಮೇಶ್ ಕುಮಾರ್ ನೇತೃತ್ವದಿಂದಾಗಿ ಕೋಲಾರದಲ್ಲಿ ಕಾಂಗ್ರೆಸ್ ಒಂದೂ ಕ್ಷೇತ್ರ ಗೆಲ್ಲಲು ಸಾಧ್ಯವಿಲ್ಲ ಎಂದರು. ಕೆ.ಎಚ್.ಮುನಿಯಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ್ದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇರಲಿಲ್ಲ. ಅವರು ಕಾಂಗ್ರೆಸ್ ಬಿಡುವರೋ, ಯಾವ ಪಾರ್ಟಿ ಸೇರುವರೋ ಗೊತ್ತಿಲ್ಲ. ಆದರೆ ಅವರು ಎಲ್ಲೇ ಇದ್ದರೂ ಅದೊಂದು ದೊಡ್ಡ ಶಕ್ತಿ ಎನ್ನುವುದು ನನಗೆ ಗೊತ್ತು ಎಂದರು.

  ಕಾಂಗ್ರೆಸ್‌ಗೆ ಟಾಂಗ್: ಚುನಾವಣೆ ಇನ್ನೂ ಒಂದು ವರ್ಷ ಇರುವಾಗಲೇ ಕಾಂಗ್ರೆಸ್‌ನ ಇಬ್ಬರು ನಾಯಕರು ನಾನೇ ಮುಂದಿನ ಸಿಎಂ ಎಂದು ತಿರುಗುತ್ತಿದ್ದಾರೆ. ರಾಜ್ಯದಲ್ಲಿ 60 ರಿಂದ 70 ಸೀಟ್ ಅಷ್ಟೇ ಕಾಂಗ್ರೆಸ್ ಗೆಲ್ಲುತ್ತೆ. ಒಂದು ವೇಳೆ 90 ಸೀಟ್ ಪಡೆದರೆ ಅಲ್ಲಿಗೆ ಮುಕ್ತಾಯ. ಇನ್ನು ಕೋಲಾರಕ್ಕೆ ಸಂಬಂಧಪಟ್ಟಂತೆ ಘಟಬಂಧನ್ ಎಂದು ಕರೆಯುವ ಬಂಧನ್ ಲೀಡರ್ ರಮೆಶ್‌ಕುಮಾರ್ ಸೇರಿ ಜಿಲ್ಲೆಯ ಎಲ್ಲ ಕ್ಷೇತ್ರದಲ್ಲೂ ಕೈ ನಿರ್ನಾಮವಾಗಲಿದೆ ಎಂದು ಡಾ.ಸುಧಾಕರ್ ಕುಟುಕಿದರು.

  ಕಣ್ಣೀರು ಹಾಕಿದ ಕಮಲನಾಥನ್: ಪೂರ್ವಭಾವಿ ಸಭೆ ನಂತರ ನಗರದ ಸುರಭಿ ಹೋಟೆಲ್ಗೆ ತೆರಳಿದ ಸಚಿವ ಮುನಿರತ್ನ ಮತ್ತು ಡಾ.ಸುಧಾಕರ್ ಅವರೊಂದಿಗೆ ಮಾಜಿ ಶಾಸಕ ವೈ.ಸಂಪಂಗಿ ಮತ್ತು ವಿರೋಧಿ ಗುಂಪಿನ ಕೆಲವು ಮುಖಂಡರೊಂದಿಗೆ ಸಂಧಾನ ಮಾತುಕತೆ ನಡೆಯಿತು. ಆಗ ವಿರೋಧಿ ಮುಖಂಡರು ನಮ್ಮ ಜತೆ ಸಾಕಷ್ಟು ಮುಖಂಡರಿದ್ದಾರೆ. ಅವರ ಜತೆ ಚರ್ಚಿಸಿ ಹೇಳುತ್ತೇವೆ ಎಂದರು. ಆಗ ಮುನಿರತ್ನ, ಸಂಪಂಗಿಗೆ ಟಿಕೆಟ್ ನೀಡ್ತಿವಿ, ಎಲ್ರೂ ಒಗ್ಗಟ್ಟಾಗಿ ಕೆಲಸಮಾಡಬೇಕು ಎಂದು ಖಡಕ್ ವಾರ್ನಿಂಗ್ ನೀಡಿದರು. ಈ ಬಗ್ಗೆ ಸಂಪಂಗಿ ವಿರೋಧಿ ಗುಂಪಿನವರು ಸಚಿವರ ನಡೆಗೆ ಬೇಸತ್ತು ಅಸಮಾಧಾನದಿಂದ ಹೊರಬಂದರು ಎನ್ನಲಾಗಿದೆ. ಇದಕ್ಕೂ ಮುಂಚೆ ಜಿಲ್ಲಾಧ್ಯಕ್ಷ ವೇಣುಗೋಪಾಲ್ ಬಳಿ ಕೆಜಿಎಫ್ ನಗರ ಘಟಕದ ಅಧ್ಯಕ್ಷ ಕಮಲನಾಥನ್ ಮಾತನಾಡಿ ಸಭೆಯಲ್ಲಿ ನನ್ನನ್ನು ಸಚಿವರು ಏಕವಚನದಲ್ಲಿ ಕರೆದು ಅವಮಾನ ಮಾಡಿದ್ದಾರೆ. ನಾವು ಪಕ್ಷಕ್ಕಾಗಿ ದುಡಿಯುತ್ತಿದ್ದೇವೆ. ಸಾರ್ವಜನಿಕರ ಎದುರಲ್ಲೇ ಈ ರೀತಿ ನಡೆದುಕೊಂಡರೆ ಹೇಗೆ ಎಂದು ಕಣ್ಣೀರು ಹಾಕಿದರು. ಅವರನ್ನು ವೇಣುಗೋಪಾಲ್ ಸಮಾಧಾನ ಪಡಿಸಲು ಯತ್ನಿಸಿದರೂ ಸಾಕಷ್ಟು ಅಸಮಾಧಾನ ವ್ಯಕ್ತಪಡಿಸಿದ ಕಮಲ್ ಬೇಸರದಿಂದ ವಾಪಸ್ಸಾದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts