More

    ಸಲೂನ್‌ಗಳಿಗೆ ಲಾಕ್, ಗ್ರಾಹಕರಿಗಿಲ್ಲ ಗುಡ್‌ಲುಕ್

    ಮಂಗಳೂರು: ಕರೊನಾ ಸೋಂಕು ಹರಡದಂತೆ ಸಲೂನ್‌ಗಳಲ್ಲಿಯೂ ಸರ್ಕಾರ, ಆರೋಗ್ಯ ಇಲಾಖೆ ಸೂಚಿಸಿರುವ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅಳವಡಿಸಲು ಸವಿತಾ ಸಮಾಜ ಮುಂದಾಗಿದೆ.
    ಲೌಕ್‌ಡೌನ್ ಮುಗಿದ ನಂತರ ಸುರಕ್ಷತಾ ಕ್ರಮವಿಲ್ಲದೆ ಗ್ರಾಹಕರನ್ನು ಸಲೂನ್ ಒಳಗೆ ಸೇರಿಸಿಕೊಳ್ಳಬಾರದು ಎಂದು ಸಮಾಜ ತನ್ನ ಸದಸ್ಯರಿಗೆ ಸೂಚನೆ ನೀಡಿದೆ. ಮುಖ್ಯವಾಗಿ ಕೈಗೆ ಗ್ಲೌಸ್ ಧರಿಸುವುದು, ಮುಖಕ್ಕೆ ಮಾಸ್ಕ್, ಗ್ರಾಹಕರು-ಸಿಬ್ಬಂದಿ ಕಡ್ಡಾಯವಾಗಿ ಸ್ಯಾನಿಟೈಸರ್ ಮೂಲಕ ಕೈಗಳನ್ನು ಸ್ವಚ್ಛ ಮಾಡಿಕೊಳ್ಳುವುದು. ಸುರಕ್ಷತಾ ಕ್ರಮ ಅನುಸರಿಸದ ಸಲೂನ್‌ಗಳಿಂದ ಗ್ರಾಹಕರೂ ದೂರವಿರುವುದು ಉತ್ತಮ ಎಂದು ದ.ಕ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಆನಂದ ಭಂಡಾರಿ ತಿಳಿಸಿದ್ದಾರೆ.

    ದ.ಕ ಜಿಲ್ಲೆಯಲ್ಲಿ 5 ಸಾವಿರಕ್ಕೂ ಅಧಿಕ ಸಲೂನ್‌ಗಳಿದ್ದು, ಮಂಗಳೂರು ನಗರದಲ್ಲೇ 300ಕ್ಕೂ ಹೆಚ್ಚಿವೆ. ಉಡುಪಿ ಜಿಲ್ಲೆಯಲ್ಲಿ 2 ಸಾವಿರಕ್ಕೂ ಅಧಿಕ ಸಲೂನ್‌ಗಳಿವೆ. ನಗರ ಪ್ರದೇಶದಲ್ಲಿರುವ ಹೆಚ್ಚಿನ ಸಲೂನ್‌ಗಳಲ್ಲಿ ಮಾಲೀಕರು ಸ್ಥಳೀಯರಾಗಿದ್ದು, ನೌಕರರು ಉತ್ತರ ಭಾರತ, ಉತ್ತರ ಕರ್ನಾಟಕ, ಮಲೆನಾಡು ಭಾಗದವರು. ಸಲೂನ್ ಬಂದ್ ಮಾಡಲು ಹಠಾತ್ ನಿರ್ದೇಶನ ನೀಡಿರುವುದರಿಂದ ಹೆಚ್ಚಿನ ನೌಕರರು ಊರಿಗೂ ಹೋಗಲು ಸಾಧ್ಯವಾಗದೆ, ಕೆಲಸ, ಸಂಬಳವೂ ಇಲ್ಲದೆ ಬಾಕಿಯಾಗಿದ್ದಾರೆ.

    ಮನೆಗಳಲ್ಲೇ ಕಟ್ಟಿಂಗ್, ಶೇವಿಂಗ್: ಸಲೂನ್‌ಗಳು ಮುಚ್ಚಿರುವ ಕಾರಣ ನೌಕರರು ಆರ್ಥಿಕ ಸಮಸ್ಯೆಗೆ ಸಿಲುಕಿದ್ದರೆ, ಜನರು ಕಟ್ಟಿಂಗ್- ಶೇವಿಂಗ್ ಮಾಡಲಾಗದೆ ಅಸಹಾಯಕರಾಗಿದ್ದಾರೆ. ಪರಿಹಾರವಾಗಿ ಕೆಲವರು ಮನೆಗಳಲ್ಲೇ ಟ್ರಿಮ್ಮರ್, ಕತ್ತರಿ ಬಳಸಿ ಅನುಕೂಲ ಶಾಸ್ತ್ರವೆಂಬಂತೆ ಕಟ್ಟಿಂಗ್ ಮಾಡಿಕೊಂಡಿದ್ದಾರೆ.ಗ್ರಾಮೀಣ ಭಾಗಗಳಲ್ಲಿ ಸಲೂನ್ ನೌಕರರು ಮನೆ ಮನೆಗಳಿಗೆ ಭೇಟಿ ನೀಡಿ ಕಟ್ಟಿಂಗ್, ಶೇವಿಂಗ್ ಮಾಡುತ್ತಿದ್ದಾರೆ.

    ಸವಿತಾ ಸಮಾಜ ಕೆಲವು ನಿಯಮಾವಳಿಗಳ ಕಡ್ಡಾಯ ಜಾರಿಗೆ ಮುಂದಾಗಿದೆ. ಸಂಘ ಎಲ್ಲ ಸದಸ್ಯರು ಮತ್ತು ವಲಯ ಸಂಘಗಳಿಗೆ ಸೂಚನೆ ನೀಡಿದೆ.
    – ವಸಂತ್ ಎಂ.ಬೆಳ್ಳೂರು, ಪ್ರಧಾನ ಕಾರ್ಯದರ್ಶಿ, ದ.ಕ ಜಿಲ್ಲಾ ಸವಿತಾ ಸಮಾಜ

    ಲಾಕ್‌ಡೌನ್‌ನಿಂದ ಹಲವರು ಸಂಕಷ್ಟದಲ್ಲಿದ್ದು, ಜಿಲ್ಲಾಡಳಿತ, ಶಾಸಕರಿಗೆ ಮನವಿ ನೀಡಿದ್ದೇವೆ. ಜಿಲ್ಲಾಡಳಿತ ದಿನಕ್ಕೆ ನಾಲ್ಕು ಗಂಟೆ ಸಲೂನ್ ತೆರೆಯಲು ಅವಕಾಶ ಕೊಟ್ಟರೆ, ಸಾಮಾಜಿಕ ಅಂತರ ಕಾಯ್ದುಕೊಂಡು, ಸುರಕ್ಷತಾ ವಿಧಾನಗಳೊಂದಿಗೆ ಕೆಲಸ ಮಾಡುತ್ತೇವೆ.
    – ಭಾಸ್ಕರ ಭಂಡಾರಿ ಗುಡ್ಡೆಯಂಗಡಿ, ಅಧ್ಯಕ್ಷ, ಉಡುಪಿ ಜಿಲ್ಲಾ ಸವಿತಾ ಸಮಾಜ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts