More

    ಮನ ಪರಿವರ್ತನೆಯ ಮಂದಿರವಾಗಲಿ

    ಗದಗ: ಗ್ರಾಮಗಳ ಅಭಿವೃದ್ಧಿ ಹಾಗೂ ಗಾಂಧಿ ಕನಸು ನನಸಾಗಿಸುವ ಮುಖ್ಯ ಉದ್ದೇಶದೊಂದಿಗೆ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಕಾರ್ಯ ನಿರ್ವಹಿಸಬೇಕು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

    ಗಾಂಧಿ ಅವರು ಗದಗ ಜಿಲ್ಲೆಗೆ ಭೇಟಿ ನೀಡಿದ ಶತಮಾನೋತ್ಸವ ನಿಮಿತ್ತ ನಗರದ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಸಬರಮತಿ ಆಶ್ರಮದ ತದ್ರೂಪಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ವಿಶ್ವವಿದ್ಯಾಲಯದ ಆವರಣದಲ್ಲಿ ನಿರ್ವಿುಸಿರುವ ಆಶ್ರಮದಲ್ಲಿ ಉನ್ನತ ಮಟ್ಟದ ಸಭೆಗಳು, ವಿದ್ಯಾರ್ಥಿಗಳ ಮನ ಪರಿವರ್ತನೆಗಾಗಿ ಪ್ರಾರ್ಥನಾ ಮಂದಿರವಾಗಿ ಹಾಗೂ ವಿವಿಧ ಉತ್ತಮ ಕಾರ್ಯಚಟುವಟಿಕೆಗಳಿಗೆ ಇದು ಬಳಕೆಯಾಗಲಿ ಎಂದರು.

    ವಿಶ್ವವಿದ್ಯಾಲಯದಲ್ಲಿ ತರಬೇತಿ ಪಡೆದ ಪ್ರತಿಯೊಬ್ಬರ ಜೀವನ ನಿರ್ವಹಣೆಗೆ ಸರ್ಕಾರದಿಂದ ಅಗತ್ಯ ಸಹಕಾರ ದೊರಕಿಸಲು ಪ್ರಯತ್ನಿಸಲಾಗುವುದು. ಅಂತಾರಾಷ್ಟ್ರೀಯ ಮಟ್ಟದಲ್ಲೂ ವಿಶ್ವವಿದ್ಯಾಲಯ ಗುರುತಿಸುವಂತೆ ಯೋಜನೆಗಳ ರೂಪುರೇಷೆ ಸಿದ್ಧಪಡಿಸಿ ಗಾಂಧಿ ಕನಸು ನನಸಾಗಿಸಲು ಪ್ರಯತ್ನಿಸೋಣ ಎಂದು ಹೇಳಿದರು.

    ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು ‘ಗದಗ ಜಿಲ್ಲೆಯಲ್ಲಿ ಗಾಂಧೀಜಿ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ವಿಶ್ವವಿದ್ಯಾಲಯದ ಉದ್ದೇಶ ಸಾಕಾರಗೊಳಿಸಲು ಹಾಗೂ ಇದರ ಅಭಿವೃದ್ಧಿಗಾಗಿ ಸರ್ಕಾರದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದರು.

    ಸಂಸದ ಶಿವಕುಮಾರ ಉದಾಸಿ ಅವರು ‘ಭಾರತದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯ ಆಯಾಮಗಳು ಸಂಪುಟ- 2’ ಕೃತಿ ಬಿಡುಗಡೆಗೊಳಿಸಿದರು. ಶಾಸಕ ಎಚ್.ಕೆ. ಪಾಟೀಲ ಅವರು ವಿವಿ ಆವರಣದಲ್ಲಿ ನಿರ್ವಿುಸಲಾದ ಭೋಜನ ಶಾಲೆ ಉದ್ಘಾಟಿಸಿದರು.

    ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ವಿಷ್ಣುಕಾಂತ್ ಚಟಪಲ್ಲಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ, ಉಪಾಧ್ಯಕ್ಷೆ ಶೋಭಾ ಮೇಟಿ, ವಿಪ ಸದಸ್ಯ ಎಸ್.ವಿ. ಸಂಕನೂರ, ಗದಗ ತಾಪಂ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ಉಪಾಧ್ಯಕ್ಷೆ ಮಮ್ತಾಜ್ ನದಾಫ್, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಶಾಸಕ ಡಿ.ಆರ್.ಪಾಟೀಲ, ಆರ್​ಡಿಪಿಆರ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ವೋಡೇ ಕೃಷ್ಣ, ವಿವಿಯ ಕುಲಸಚಿವ ಬಸವರಾಜ ಲಕ್ಕಣ್ಣವರ ಮತ್ತಿತರರು ಇದ್ದರು.

    ಗಾಂಧಿ ಅವರ ಸಂದೇಶದಂತೆ ಶಕ್ತಿಯು ಭೌದ್ಧಿಕ ಸಾಮರ್ಥ್ಯದಿಂದ ಬರುವುದಿಲ್ಲ. ಅದು ಅದಮ್ಯ ಇಚ್ಛಾ ಶಕ್ತಿಯಿಂದ ಬರುತ್ತದೆ ಎಂಬಂತೆ ಇಂದಿನ ಕಟ್ಟಡ ಲೋಕಾರ್ಪಣೆಯೇ ಪ್ರೇರಕ ಶಕ್ತಿಯಾಗಿ ಗಾಂಧಿ ಕನಸುಗಳನ್ನು ನನಸಾಗಿಸುವಂತಹ ಶಿಕ್ಷಣ ಒದಗಿಸಬೇಕು.
    | ಶಿವಕುಮಾರ ಉದಾಸಿ, ಸಂಸದ

    ವಿಶ್ವವಿದ್ಯಾಲಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ರೇಷ್ಠ ಸಂಸ್ಥೆಯಾಗಿಸಲು ಎಲ್ಲರ ಇಚ್ಛಾಶಕ್ತಿ ಅಗತ್ಯ. ವಿಶ್ವವಿದ್ಯಾಲಯವು ಸಂಶೋಧನೆಗಳ ಮೂಲಕ ಗ್ರಾಮಗಳ ಪುನರ್ ರಚನೆ ಮಾಡುವಂತಹ ಕಾರ್ಯಕ್ಕೆ ಮುಂದಾಗಬೇಕು.
    | ಎಚ್.ಕೆ. ಪಾಟೀಲ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts