More

    ಬಂಜೆ ಎಂಬ ಚುಚ್ಚುಮಾತು ಕೇಳಿಕೇಳಿ ನೊಂದು ತವರು ಮನೆ ಸೇರಿ ಮಾಡಿದಳೊಂದು ಖತರ್ನಾಕ್‌ ಐಡಿಯಾ!

    ಕೊಂಡನಪಲ್ಲಿ (ಆಂಧ್ರಪ್ರದೇಶ): ಪ್ರತಿ ಮಹಿಳೆಗೂ ಅಮ್ಮನಾಗುವ ಆಸೆ ಇರುತ್ತದೆ. ಅಮ್ಮನಾಗುವುದು ಎಂದರೆ ಆಕೆಯ ಜೀವನದಲ್ಲಿ ಮತ್ತೊಂದು ಹೊಸ ಯುಗದ ಆರಂಭದಂತೆ. ಆದರೆ ನಾನಾ ಕಾರಣಗಳಿಂದಾಗಿ ಕೆಲವು ಮಹಿಳೆಯರಿಗೆ ಮಗುವಾಗುವುದು ಕಷ್ಟವಾಗಬಹುದು. ಅದು ಹೆಣ್ಣಿನದ್ದೇ ತಪ್ಪಿರಬಹುದು ಅಥವಾ ಮಗು ಮಾಡುವ ಸಾಮರ್ಥ್ಯ ಗಂಡಿಗೆ ಇಲ್ಲದೇ ಹೋಗಬಹುದು. ಆದರೆ ಏನೇ ಆದರೂ ಚುಚ್ಚುಮಾತನ್ನು ಕೇಳಬೇಕಾದವಳು ಹೆಣ್ಣು ಎನ್ನುವುದು ಮಾತ್ರ ಕಹಿಸತ್ಯ. ಮಕ್ಕಳಾಗಿಲ್ಲ ಎಂಬ ಕೊರಗು ಮಹಿಳೆಯರಲ್ಲಿ ಒಂದೆಡೆ ಕೊರೆಯುತ್ತಿದ್ದರೆ ಸಮಾಜದ ಕೊನೆಗೆ ಅತ್ತೆ-ಮಾವಂದಿರ ಚುಚ್ಚು ಮಾತುಗಳನ್ನು ಕೇಳಲಾಗದೇ ಆತ್ಮಹತ್ಯೆಯಂಥ ಹಾದಿಯನ್ನೂ ಹಿಡಿಯುತ್ತಿರುವುದು ಅತಿದೊಡ್ಡ ದುರಂತ.

    ಆದರೆ ಇಲ್ಲೊಬ್ಬ ಮಹಿಳೆ, ಸಾವಿನ ಹಾದಿ ಹಿಡಿಯಲಿಲ್ಲ. ಬದಲಿಗೆ ಈ ಚುಚ್ಚು ಮಾತುಗಳಿಂದ ತಪ್ಪಿಸಿಕೊಳ್ಳಲು ಬೇರೊಂದು ಪ್ಲ್ಯಾನ್ ಮಾಡಿ ಸಿಕ್ಕಿಬಿದ್ದಿದ್ದಾಳೆ. ತೆಲಂಗಾಣದ ಖಮ್ಮಂ ಜಿಲ್ಲೆಯ ವೈರಾ ಗ್ರಾಮದ ಮಹಿಳೆ ತಾನು ಗರ್ಭಿಣಿ ಎಂದು ಎಲ್ಲರನ್ನೂ ಮೂರ್ಖಳನ್ನಾಗಿಸಿರುವ ಕುತೂಹಲಹ ಘಟನೆ ಇದು.

    ಈ ದಂಪತಿಗೆ ಮದುವೆಯಾಗಿ 9 ವರ್ಷವಾದರೂ ಮಕ್ಕಳಾಗಿರಲಿಲ್ಲ. ಎಲ್ಲರೂ ಮಹಿಳೆಯನ್ನೇ ಬೊಟ್ಟು ಮಾಡಲು ಶುರು ಮಾಡಿದರು. ಅತ್ತೆ-ಮಾವ, ನೆರೆಹೊರೆಯವರ ಕಿರಿಕಿರಿ, ಅಸಭ್ಯ ಮಾತುಗಳನ್ನು ಕೇಳಿಸಿಕೊಂಡು ತಾಳ್ಮೆ ಕಳೆದುಕೊಂಡ ಈಕೆ ಕೊನೆಗೊಂದು ಉಪಾಯ ಮಾಡಿದಳು.

    ಅದೇನೆಂದರೆ, ತಾನು ಗರ್ಭಧರಿಸಿದ್ದೇನೆ ಎಂದು ಅತ್ತೆಗೆ ಸುಳ್ಳು ಹೇಳಿದಳು. ನಂತರ ವೈದ್ಯರು ಬೆಡ್‌ರೆಸ್ಟ್‌ ಹೇಳಿದ್ದಾರೆ, ತವರು ಮನೆಗೆ ಹೋಗುವುದಾಗಿ ಹೇಳಿದಳು. ಇಷ್ಟು ವರ್ಷಗಳ ನಂತರ ಸೊಸೆ ಗರ್ಭಿಣಿ ಆಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅತ್ತೆ, ತವರಿಗೆ ಹೋಗಿ ಅಲ್ಲಿಯೇ ಹೆರಿಗೆ ಮಾಡಿಸಿಕೊಂಡು ಬರಲು ಅನುಮತಿ ನೀಡಿದರು.

    ತವರು ಮನೆಗೆ ಹೋದ ಈಕೆ, ಅಲ್ಲಿಯೂ ತಾನು ಗರ್ಭಿಣಿ ಎಂದಿದ್ದಾಳೆ. ಆಸ್ಪತ್ರೆಗೆ ಹೋಗುವಾಗ ಹೊಟ್ಟೆಗೆ ಬಟ್ಟೆ ಸುತ್ತಿಕೊಂಡು ಹೋಗುತ್ತಿದ್ದಳು. ಪ್ರತಿ ತಿಂಗಳು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಹೋಗುವಂತೆ 9 ತಿಂಗಳು ಕಳೆದ ಆಕೆ ಕೊನೆಗೆ ವೈದ್ಯರು ತನ್ನ ಹೆರಿಗೆಯ ದಿನಾಂಕವನ್ನು ಜನವರಿ 5 ನೀಡಿದ್ದಾರೆ ಎಂದಳು. ಒಂಬತ್ತು ತಿಂಗಳಾದ ಮೇಲೆ ಮಗು ಯಾವಾಗ ಆಗುವುದು ಎಂದು ಎಲ್ಲರೂ ಕೇಳಲು ಶುರು ಮಾಡಿದಾಗ ಒಂದು ದಿನಾಂಕ ಹೇಳಿದ್ದಾಳೆ.

    ಕೊನೆಗೆ ಸರ್ಕಾರಿ ಆಸ್ಪತ್ರೆಗೆ ಖುದ್ದು ಹೋಗಿ ಹೆರಿಗೆ ಮಾಡಿಸಿಕೊಂಡಂತೆ ನಟಿಸಿದ್ದಾಳೆ. ತನಗೆ ಹೆರಿಗೆ ಆಗಿದೆ ಎಂದಿದ್ದಾಳೆ. ಕೊನೆಗೆ ಎಲ್ಲರೂ ಮಗುವನ್ನು ನೋಡಲು ಬಂದಾಗ, ಹೆರಿಗೆಗೆ ಸಹಾಯ ಮಾಡಲು ಬಂದ ಇಬ್ಬರು ವ್ಯಕ್ತಿಗಳು ಮಗುವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾಳೆ. ನಂತರ ಪಾಲಕರು ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾರೆ. ಮಹಿಳೆಯನ್ನು ವಿಚಾರಿಸಿದಾಗ ಅಸಲಿಯತ್ತು ಗೊತ್ತಾಗಿದೆ. ಆಕೆ ಹೋಗಿದ್ದಾಳೆ ಎಂದಿದ್ದ ಆಸ್ಪತ್ರೆಯಲ್ಲಿ ಚೆಕ್‌ ಮಾಡಿದಾಗ ಅಲ್ಲಿ ಇವಳ ಹೆರಿಗೆ ಆಗಿಯೇ ಇಲ್ಲ ಎಂದು ತಿಳಿದಾಗ ಅಸಲಿ ವಿಷಯ ಬಯಲಿಗೆ ಬಂದಿದೆ.

    ಸದ್ಯ ಈಕೆಯ ಬಗ್ಗೆ ಕುಟುಂಬಸ್ಥರು ಯಾವ ನಿಲುವು ತೆಗೆದುಕೊಂಡಿದ್ದಾರೋ ಗೊತ್ತಿಲ್ಲ. ಆಸಲಿಗೆ ನೋಡುವುದಾದರೆ ಈಕೆ ಮಾಡಿದ ಉಪಾಯ ತಪ್ಪು ನಿಜ. ಆದರೆ ಮಕ್ಕಳು ಆಗದಿದ್ದರೆ ಮಹಿಳೆಯನ್ನು ದೂಷಿಸುವ, ಏನೋ ಅಪರಾಧ ಮಾಡಿದಂತೆ ಬಿಂಬಿಸುವ ಮನಸ್ಥಿತಿಗೆ ಮಹಿಳೆಯರನ್ನು ತರುವವರ ಬಗ್ಗೆಯೂ ಯೋಚಿಸಬೇಕಿದೆ ಅಲ್ಲವೆ?

    VIDEO: ಮಂಡ್ಯದಲ್ಲೊಂದು ಅಮಾನವೀಯ ಘಟನೆ- ಎಲ್ಲರೆದುರು ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿ ಕೂಡಿಹಾಕಿ ಥಳಿಸಿದ ಶಿಕ್ಷಕಿ!

    VIDEO: ಹೆಣ್ಣು ಗೊಂಬೆಗಳನ್ನೂ ಬಿಡದ ತಾಲಿಬಾನಿಗಳು! ಛೇ… ಛೇ… ಎನ್ನುವಂಥ ವಿಡಿಯೋ ವೈರಲ್

    ಅಮ್ಮನ ತ್ಯಾಗಕ್ಕಾಗಿ ಪ್ರೀತಿ ಬಲಿಕೊಟ್ಟೆ, ಆಕೆಗಾಗಿ ಮಾವನ ಮಗನ ಮದುವೆಯಾಗಿ ಮೋಸ ಹೋದೆ… ಹೇಗೆ ಬದುಕಲಿ ನಾನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts