More

    ಈ ಸರ್ಪಗಳು ಕಚ್ಚಲ್ಲ… ಕಣ್ಣಿಗೆ ಗುರಿಯಿಟ್ಟು ಉಗುಳಿದ್ರೆ ಅಷ್ಟೇ ಕಥೆ…

    | ಸುರೇಶ್ ಮರಕಾಲ ಸಾಯ್ಬರಕಟ್ಟೆ

    ಕೆಲವರನ್ನು ಮಾತಾಡಿಸುವುದು ಕಷ್ಟ. ಅವರೇನೂ ನಂಜು ಕಾರುವುದಿಲ್ಲ, ಆದರೆ ಎಂಜಲು ಕಾರುತ್ತಾರೆ! ಎದುರಿಗೆ ನಿಂತವರಿಗೆ ಖರ್ಚಿಲ್ಲದೆ, ಉಚಿತವಾಗಿ ಎಂಜಲ ಸ್ನಾನ ಮಾಡಿಸುತ್ತಾರೆ! ಆದರೆ ಅವರೇನೂ ಉದ್ದೇಶಪೂರ್ವಕವಾಗಿ ಈ ಅಭಿಷೇಕ ಮಾಡುವುದಿಲ್ಲ ಎನ್ನುವುದೂ‌ ಅಷ್ಟೇ ಸತ್ಯ. ಇನ್ನು ಎರಡನೆ ಬಗೆಯ ಜನರಿದ್ದಾರೆ, ಅವರು ತದ್ವಿರುದ್ಧ! ಅವರು ಎಂಜಲು ಕಾರುವುದಿಲ್ಲ, ಬದಲಿಗೆ ಮೈ-ಮಾತುಗಳಲ್ಲಿ ನಂಜನ್ನು ತುಂಬಿಕೊಂಡು, ನಾವು ಸ್ವೀಕರಿಸದಿದ್ದರೂ, ಬೇಡವೆಂದರೂ ನಮ್ಮ ಮೇಲೆ ಎರಚಿ ಧನ್ಯರಾಗುತ್ತಾರೆ! ಬೇರೆಯವರ ಬಗ್ಗೆ ನಂಜು ಕಾರುತ್ತಾ, ದೂರುತ್ತಾ, ನಮ್ಮ ಮನಸ್ಸನ್ನೂ ವಿಷಮಯ ಮಾಡಿಬಿಡುತ್ತಾರೆ! ಈ ಎರಡನೆ ವಿಧದವರು ಮನುಷ್ಯ ಸಂಕುಲವನ್ನು ಹೊರತುಪಡಿಸಿದರೆ, ದುರ್ಬೀನು ಹಾಕಿ ಹುಡುಕಿದರೂ ಬೇರೆ ಯಾವ ಜೀವಿಗಳಲ್ಲೂ ಕಾಣ ಸಿಗುವುದಿಲ್ಲ. ಹಾಗೆಂದು ಮನುಷ್ಯನನ್ನು ಬಿಟ್ಟರೆ ’ಉಗುಳುವ’, ’ಎರಚುವ’ ರೂಢಿ ಹೊಂದಿರುವ ಜೀವಿಗಳು ಜೀವಜಗತ್ತಿನಲ್ಲಿ ಬೇರೆ ಇಲ್ಲವೆಂದಲ್ಲ. ಈ ರೀತಿ ವರ್ತಿಸುವ ಕೆಲವು ವಿಶಿಷ್ಟ ಪ್ರಾಣಿ ಪಕ್ಷಿಗಳು ಈ ಭೂಮಿಯ ಮೇಲಿವೆ.

    ಇನ್ನು ವೈರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವಾಗ, ವೈರಿಯು ಹತ್ತಿರವೂ ಸುಳಿಯದಂತೆ ತಡೆಯಲು ತನ್ನ ರೋಮರಾಶಿಗಳನ್ನು ನಿಮಿರಿಸಿಕೊಂಡು ವೈರಿಗೆ ತಾನು ಇಮ್ಮಡಿ ಗಾತ್ರದಲ್ಲಿ ಕಾಣಿಸುವಂತೆ ಮಾಡಿಕೊಂಡು, ಅದಕ್ಕೂ ಶತ್ರು ಬಗ್ಗದಿದ್ದಾಗ ಮೀಟರಗಲದ ತನ್ನ ಸುತ್ತಲೂ ಶತ್ರು ಹತ್ತಿರವೂ ಬಾರದಂತೆ ತಡೆಯುವ ಕೆಟ್ಟ ವಾಸನೆಯ ‘ಗಾಳಿ’ಬಿಡುವ ಬೆಟ್ಟದಳಿಲುಗಳಿವೆ. ಇನ್ನೂ ರೆಕ್ಕೆ ಬಲಿಯದ ತನ್ನನ್ನು ತಿನ್ನಲು ಬರುವ ಶತ್ರುಗಳಿಗೆ ಸರಿಯಾಗಿ ಪಾಠ ಕಲಿಸಲು ಅಂಟು ಅಂಟಾದ- ಇದರ ಸಹವಾಸವೇ ಬೇಡ ಎನಿಸುವಷ್ಟು ದುರ್ವಾಸನೆ ಬೀರುವ- ಆಹಾರ ಮಿಶ್ರಣವನ್ನು ಶತ್ರುವಿನ ಮುಖಕ್ಕೇ ಉಗುಳುವ ಕಡಲ ಹಕ್ಕಿಗಳಿವೆ, ತನ್ನನ್ನು ತಿನ್ನಲು ಬಂದಾಗ- ಸಿಂಹದಂತಹಾ ಪ್ರಾಣಿಗಳನ್ನೂ ಕೂಡಾ- ಎದೆಕೊಟ್ಟು; ಕ್ಷಮಿಸಿ, ‘ಬೆನ್ನು’ ಕೊಟ್ಟು, ವೈರಿಯ ಕಣ್ಣು ಮತ್ತು ಮೂತಿಗೆ ಸರಿಯಾಗಿ ಪಿಚಕಾರಿಯಂತೆ ಅಸಾಧ್ಯ ತುರಿಕೆಯ ಹಾಗೂ ಜೀವಿ ಮಾತ್ರಗಳು ಸಹಿಸಲಸಾಧ್ಯ ದುರ್ನಾತದ ದ್ರವವನ್ನು ‘ಸ್ಪ್ರೇ’ ಮಾಡುವ ಸ್ಕಂಕ್‌ಗಳಿವೆ. ‘ಪರಿಸರದ ಕತೆಗಳು’ ಕೃತಿಯಲ್ಲಿ ತೇಜಸ್ವಿಯವರೇ ಬರೆದಿರುವಂತೆ, ಅಸಹಾಯಕ ಪ್ರಾಣಿಯಂತೆ ಕಾಣುವ ಓಟುರಕ (ಆಮೆಯ ಜಾತಿ) ತಪ್ಪಿಸಿಕೊಳ್ಳಲು ಬೇಕಾಗಿ ಮೂಗು ಕೊಳೆತು ಹೋಗುವಂತಹಾ ‘ಕೆಟ್ಟ ಗಾಳಿ’ ಬಿಡುತ್ತದೆ! ಹುಡುಕಿದರೆ ಇನ್ನೂ ಅನೇಕ ಜೀವಿಗಳಿವೆ. ಆದರೆ ಅವುಗಳೆಲ್ಲವೂ ‘ಕಾರುವುದೇನಿದ್ದರೂ’ ಆತ್ಮರಕ್ಷಣೆ ಕಾರಣಕ್ಕೆ ಮಾತ್ರ. ಈ ಸಾಲಿಗೆ ಇನ್ನೊಂದು ಉತ್ತಮ ಸೇರ್ಪಡೆ- ‘ಉಗುಳುವ ಸರ್ಪ’ (Spitiing Cobra)!

    ಈ ಸರ್ಪಗಳು ಕಚ್ಚಲ್ಲ... ಕಣ್ಣಿಗೆ ಗುರಿಯಿಟ್ಟು ಉಗುಳಿದ್ರೆ ಅಷ್ಟೇ ಕಥೆ...

    ಸಾಮಾನ್ಯವಾಗಿ ಈ ಸರ್ಪಗಳು ಸುಮಾರು ಎರಡು ಮೀಟರ್‌ಗಳವರೆಗೆ ಬೆಳೆಯುವ, ಬಹು ವಿಶಿಷ್ಟವಾದ ಈ ಸರ್ಪಗಳು ಕಚ್ಚುವುದಿಕ್ಕಿಂತ ಹೆಚ್ಚಾಗಿ ವಿಷವನ್ನು ಉಗುಳುತ್ತವೆ. ಶತ್ರುಗಳು ಎದುರಾದಾಗ, ಎಲ್ಲ ಹಾವುಗಳು ಕಚ್ಚಿದರೆ, ಉಗುಳುವ ಸರ್ಪಗಳು ಹಲ್ಲುಗಳ ಮೂಲಕ ಬಂದೂಕಿನಲ್ಲಿ ಗುಂಡು ಹೊಡೆದಂತೆ, ಬಾಯಿಯಿಂದ ವಿಷವನ್ನು ಉಗುಳುತ್ತವೆ! ಹಾಗೆಂದು ಅವುಗಳೇನೂ ಶತ್ರುವಿನ ಮುಖದ ಹತ್ತಿರ ಮುತ್ತಿಡುವಂತೆ ಹೋಗಿ ವಿಷ ಉಗುಳುವುದಿಲ್ಲ! ಎದುರಾಳಿ ಇನ್ನೂ ಸುಮಾರು ಎರಡು ಮೀಟರ್ ದೂರದಲ್ಲಿದ್ದಾಗಲೇ ಶತ್ರುವಿನ ಕಣ್ಣಿಗೇ ಬೀಳಬೇಕು- ಅಷ್ಟೊಂದು ನಿಖರವಾಗಿ- ಗುರಿಯಿಟ್ಟು ವಿಷ ಉಗುಳುತ್ತವೆ!! ಮೇಲ್ನೋಟಕ್ಕೆ ಇದೇನೂ ವಿಶೇಷ ಎನಿಸಲಾರದು. ಆದರೆ ಯೋಚಿಸಿ, ಎರಡು ಮೀಟರ್ ದೂರದಿಂದ ಶತ್ರು ನಿಂತಿದೆ, ಆ ಶತ್ರುವೇನೂ “ಉಗುಳೋದಾದ್ರೆ ಉಗುಳು…” ಎಂದು ಕಲ್ಲು ಗೊಂಬೆಯಂತೆ ನಿಂತಿರುವುದಿಲ್ಲ. ಪ್ರಾಣಿಗಳ ಜಾಗೃತ ಸ್ಥಿತಿ ಮನುಷ್ಯನಿಗಿಂತ ಹಲವು ಪಟ್ಟು ಮಿಗಿಲಾದುದು. ಎದುರಿಗೆ ಹೆಡೆಬಿಚ್ಚಿ ನಿಂತ ಘಟ ಕಚ್ಚುವುದಿಲ್ಲ; ಬದಲಿಗೆ ವಿಷ ಉಗುಳುತ್ತದೆ ಎಂಬುದನ್ನು ದೂರದಿಂದ ಬರುವಾಗಲೇ ಮನಸಿನಲ್ಲಿ ಲೆಕ್ಕ ಹಾಕಿರುತ್ತದೆ! ಹೀಗಾಗಿ ಶತ್ರುವು ಸರ್ಪಕ್ಕಿಂತ ಹತ್ತು ಪಟ್ಟು ಜಾಗ್ರತೆ ವಹಿಸುತ್ತದೆ! ಜೊತೆಗೆ ಅಷ್ಟು ದೂರದಲ್ಲಿ ಅತ್ತ ಇತ್ತ- ಬಿರುಗಾಳಿಗೆ ಸಿಕ್ಕಿ ತೊಯ್ದಾಡುತ್ತಿರುವ ತರಗೆಲೆಯಂತೆ- ಚಲಿಸುತ್ತಿರುವ ಪ್ರಾಣಿಯ ಮುಖದ ಅತ್ಯಂತ ಚಿಕ್ಕ ಅಂಗವಾದ ಕಣ್ಣಿಗೇ ಗುರಿಯಿಟ್ಟು ವಿಷ ಉಗುಳಬೇಕು ಅಂದರೆ ಅದೇನು ತಮಾಷೆಯ ಮಾತೇ? ಉಗುಳುವ ಸರ್ಪಗಳ ವಿಷ ಚರ್ಮಕ್ಕೆ ತಾಗಿದರೆ ಅಷ್ಟೇನೂ ಅಪಾಯಕಾರಿಯಲ್ಲ. ವಿಷ ಸರಿಯಾದ ಮಾರಕ ಪರಿಣಾಮ ಬೀರಬೇಕಾದರೆ, ಅದು ನೇರವಾಗಿ ಅತ್ಯಂತ ಸೂಕ್ಷ್ಮ ಅಂಗವಾದ ಕಣ್ಣಿಗೇ ಬೀಳಬೇಕು! ಈ ಗುಟ್ಟು ಎದುರಾಳಿಗೂ ತಿಳಿದಿರುವುದರಿಂದ ಸರ್ಪದ ವಿಷವನ್ನು ತನ್ನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಎಲ್ಲಾ ತಂತ್ರಗಳನ್ನು ಹೂಡುತ್ತದೆ. ಆದರೆ ಶತ್ರುವಿನ ಈ ಎಚ್ಚರ, ಜಾಗರೂಕತೆಗಳ ನಡುವೆಯೂ ಉಗುಳುವ ಸರ್ಪಗಳು ಶೇಕಡಾ ತೊಂಬತ್ತರಷ್ಟು ಪಾಲು ಪ್ರಾಣಿಯ ಕಣ್ಣಿಗೇ ಗುರಿಯಿಟ್ಟು ಹೊಡೆದು ಓಡಿಸುತ್ತದೆ. ಇದು ಹೇಗಿರುತ್ತದೆ ಎಂದರೆ, ಎದುರಿಗೊಬ್ಬನ ಕೈಗೆ ಸೂಜಿಕೊಟ್ಟು, ಅದನ್ನು ಅವನು ಗಲಗಲನೆ ಅಲುಗಾಡಿಸುತ್ತಿರುವಾಗ ಆ ಸೂಜಿಯ ರಂದ್ರಕ್ಕೆ ನಾವು ನೂಲು ಪೋಣಿಸಿದಷ್ಟು ಕಷ್ಟ!! ಆದರೆ ಇಂತಹ ಕಠಿಣವಾದ ಪರೀಕ್ಷೆಯಲ್ಲೂ ಉಗುಳುವ ಸರ್ಪಗಳು ಸುಲಭವಾಗಿ ಪಾಸಾಗುತ್ತವೆ!

    ಉಗುಳುವ ಸರ್ಪಕ್ಕೆ ವಿಷ ಉಗುಳಲು ಇರುವ ಕನಿಷ್ಟ ಸೌಲಭ್ಯಗಳನ್ನು ತಿಳಿದರೆ ನೀವು ಅಚ್ಚರಿಪಡುತ್ತಿರಿ! ವೈರಿ ವಿಷವನ್ನು ತಪ್ಪಿಸಿಕೊಳ್ಳಲು ಯಾವ ಕಡೆಗೆ ಬೇಕಾದರೂ ತಿರುಗಬಹುದು. ಆದರೆ ಅದು ತಿರುಗಿದ ಕಡೆಗೆ ಗುರಿಹಿಡಿದು ವಿಷ ಉಗುಳಲು ಹಾವಿನ ಹಲ್ಲಿನಲ್ಲೇನೂ ತಿರುಗಣೆ ಇಲ್ಲ!! ಎದುರಿಗೆ ತೆರೆದುಕೊಂಡಿರುವ ಹಲ್ಲುಗಳನ್ನು ತಾನೇ ಎದುರಾಳಿಯ ಕಣ್ಣಿಗೆ ಹೊಂದಿಸಿಕೊಂಡು ಗುರಿ ಹಿಡಿಯಬೇಕಾಗುತ್ತದೆ. ಆದಾಗ್ಯೂ ಸರ್ಪ ತನ್ನ ಗುರಿ ತಪ್ಪುವುದಿಲ್ಲ! ವಿಷ ಉಗುಳುವ ಸಂದರ್ಭ ಎದುರಾದ ಕೂಡಲೇ ಹಾವು ತನ್ನ ಎರಡೂ ಹಲ್ಲುಗಳ ಮೇಲೆ ಮುಚ್ಚಿಕೊಂಡಿರುವ ಮಾಂಸದ ಪೊರೆಯನ್ನು ಮೇಲಕ್ಕೆ ಸರಿಸುತ್ತದೆ, ಅನಿಶ್ಚಿತವಾಗಿ ಅತ್ತಿಂದಿತ್ತ ಓಡಾಡುವ ಪ್ರಾಣಿಯ ಮುಖದ ಚಲನವಲನಗಳನ್ನು ಮನಸ್ಸಿನಲ್ಲೇ ಲೆಕ್ಕ ಹಾಕುತ್ತದೆ, ಕಣ್ಣಿಗೇ ಗುರಿ ಸಿದ್ಧಗೊಂಡ ತಕ್ಷಣ ಹಲ್ಲಿನ ಮೇಲೆ ತಲೆಭಾಗದಲ್ಲಿರುವ ವಿಷದ ಚೀಲದ ಸುತ್ತಲಿನ ಮಾಂಸ ಖಂಡಗಳು ವಿಷದ ಚೀಲವನ್ನು- ಪಿಚಕಾರಿಯನ್ನು ಒತ್ತಿದಂತೆ- ಒಮ್ಮಲೇ ಒತ್ತುತ್ತವೆ. ಅಷ್ಟೊತ್ತಿಗಾಗಲೇ ವಿಷದ ಚೀಲದಿಂದ ಆಸ್ಪೋಟನೆಗೊಂಡು ರಭಸದಿಂದ ಹೊರ ಧುಮುಕುವ ವಿಷ ಹಲ್ಲುಗಳ ಎದುರಿನ ಅತೀ ಸೂಕ್ಷ್ಮ ರಂದ್ರಗಳ ಮೂಲಕ ತನ್ನ ಗುರಿ ತಲುಪಿಯಾಗಿರುತ್ತದೆ! ಇದೆಲ್ಲಾ ಕೇವಲ ಐವತ್ತು ಮಿಲಿ ಸೆಕೆಂಡುಗಳಲ್ಲಿ ಮುಗಿದುಹೋಗಿರುತ್ತದೆ; ಎಂದರೆ ಹಾವು ಇಷ್ಟೆಲ್ಲ ಕೆಲಸ ಮಾಡಲು ತೆಗೆದುಕೊಳ್ಳುವ ಸಮಯ, ನಾವು ಕಣ್ಣು ರೆಪ್ಪೆ ಹೊಡೆದುಕೊಳ್ಳುವ ಅರ್ಧದಷ್ಟು ಕಾಲಕ್ಕಿಂತಲೂ ಕಡಿಮೆ!! ಇಷ್ಟೊಂದು ಕಡಿಮೆ ಅವಧಿಯಲ್ಲಿ ತಿದ್ದುಪಡಿಗೆ ಅವಕಾಶದ ಮಾತೇ ಇಲ್ಲ! ಮೈಗೆ ತಾಗಿದರೆ ವ್ಯರ್ಥವಾಗುವ, ಕೇವಲ ಕಣ್ಣಿಗೆ ಬಿದ್ದರೆ ಮಾತ್ರ ಪರಿಣಾಮಕಾರಿಯಾಗಿರುವುದರಿಂದ, ವಿಷ ಉಗುಳುವಾಗ ಸರ್ಪ ಅದೆಷ್ಟು ನಿಖರವಾಗಿ ಗುರಿಯಿಟ್ಟು ಹೊಡೆಯಬೇಕಾಗುತ್ತದೆ- ನೀವೇ ಯೋಚಿಸಿ!

    ಈ ಸರ್ಪಗಳು ಕಚ್ಚಲ್ಲ... ಕಣ್ಣಿಗೆ ಗುರಿಯಿಟ್ಟು ಉಗುಳಿದ್ರೆ ಅಷ್ಟೇ ಕಥೆ...

    ಉಗುಳುವ ಸರ್ಪಗಳಲ್ಲಿ ಮುಖ್ಯವಾಗಿ ಮೂರು ವಿಧಗಳಿವೆ; ಕೆಂಪು ಸರ್ಪ, ಕಪ್ಪು ಕುತ್ತಿಗೆಯ ಸರ್ಪ ಹಾಗೂ ಕಪ್ಪು-ಬಿಳಿ ಸರ್ಪ. ಸರ್ಪದ ಜಾತಿಯಲ್ಲದೆ, ಮಾಂಗ್ಶನ್ ಪಿಟ್‌ವೈಪರ್ ಎಂಬ ಕನ್ನಡಿ ಹಾವಿನ ಜಾತಿಯ ಹಾವು ಕೂಡಾ ಈ ರೀತಿ ವಿಷ ಉಗುಳುತ್ತದೆ. ಕೆಲವೊಂದು ಏಷ್ಯಾದ ಹಾವುಗಳೂ ಈ ಸೌಲಭ್ಯ ಪಡೆದಿವೆ. ರಿಂಕಲ್ಸ್ (Rinkhalss) ಎಂಬ ಒಂದು ಜಾತಿಯಂತೂ ವಿಷ ಉಗುಳುವ ಜೊತೆಗೆ ಇನ್ನೊಂದು ತಮಾಷೆಯ ತಂತ್ರವನ್ನು ಅನುಸರಿಸುತ್ತದೆ. ವಿಷ ಉಗುಳಿದರೂ ಕೂಡಾ ಶತ್ರು ಹಿಮ್ಮೆಟ್ಟದೇ, ಇನ್ನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವಾಗ ತಟ್ಟನೆ ರಿಂಕಲ್ಸ್ ನೆಲದಲ್ಲಿ ವಿಲವಿಲನೆ ಒದ್ದಾಡಿ ಕೊರಡಿನಂತೆ ಬಿದ್ದು ಸತ್ತಂತೆ ನಟಿಸುತ್ತದೆ! ”ಇಷ್ಟು ಹೊತ್ತಿನವರೆಗೂ ಹೋರಾಡುತ್ತಾ ಸರಿಯಿದ್ದ ಹಾವಿಗೆ ಇದೇನಾಯ್ತಪ್ಪ” ಎಂದು ಎದುರಾಳಿ ವಿಸ್ಮಿತನಾಗಿ ನೋಡಿದರೆ ಹಾವಿನಲ್ಲಿ ಚಲನೆಯೇ ಇಲ್ಲ! ಈ ಸತ್ತ ಪ್ರಾಣಿ ನನಗೇಕೆಂದು ತನ್ನ ದಾರಿ ಹಿಡಿದು ಹೊರಟುಹೋಗುತ್ತದೆ. ಶತ್ರು ಕಣ್ಮರೆಯಾಗುತ್ತಲೇ, ‘ಸತ್ತ’ಹಾವು ಜೀವವಾಗಿ ಪಲಾಯನಗೈಯ್ಯುತ್ತದೆ!! ರಿಂಕಲ್ಸ್ ಅಲ್ಲದೆ ಪ್ರಾಣಿ ಪಕ್ಷಿಗಳಲ್ಲಿ ಈ ರೀತಿ ‘ಸಾಯೋ ಆಟ’ ಆಡುವ ಇನ್ನೂ ಅನೇಕ ಜೀವಿಗಳಿವೆ.

    ಕಣ್ಣಿಗೆ ಉಗುಳಲ್ಪಟ್ಟ ವಿಷದ ಹನಿಗಳು ಶಾಶ್ವತ ಅಂಧತ್ವವನ್ನು ಉಂಟುಮಾಡಬಲ್ಲದು! ಹೀಗಾಗಿ ಉಗುಳುವ ಸರ್ಪಗಳನ್ನು ಹಿಡಿಯುವ ಉರಗ ತಜ್ಞರು ಅಗಲವಾದ ಕನ್ನಡಕವನ್ನು ಧರಿಸಲೇಬೇಕು, ಇಲ್ಲವೇ ತಮ್ಮ ಎದುರಿಗೆ ದೊಡ್ಡ ಗಾಜನ್ನು ಅಡ್ಡವಾಗಿ ಹಿಡಿದುಕೊಂಡಿರಬೇಕು. ಸ್ಟೀವ್ ಇರ್ವಿನ್, ಆಸ್ಟಿನ್ ಸ್ಟೀವ್ಸ್ ಮೊದಲಾದ ವಿಶ್ವ ಪ್ರಸಿದ್ಧ ಪ್ರಾಣಿ ಪ್ರಿಯರು ಉಗುಳುವ ಸರ್ಪವನ್ನು ಹಿಡಿಯುವ ರೋಮಾಂಚನಕಾರಿ ದೃಶ್ಯಗಳನ್ನು ಆನಿಮಲ್ ಪ್ಲಾನೆಟ್, ನ್ಯಾಶನಲ್ ಜಿಯೋಗ್ರಫಿ, ಡಿಸ್ಕವರಿ, ನ್ಯಾಟ್ ಜಿಯೋ ವೈಲ್ಡ್ ಚಾನೆಲ್ಗಳಲ್ಲಿ ನೋಡಿ ಮೈಮರೆಯಬಹುದು. ‘ಬ್ಲಾಕ್ ಕೋಬ್ರಾ’ಎಂಬ ವಿಷ ಉಗುಳುವ ಕರಿನಾಗರ ಸುಮಾರು ಒಂದೂವರೆ ಮೀಟರ್ ಬೆಳೆಯುತ್ತದೆ. ಉಗುಳುವ ಸರ್ಪಗಳು ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಹತ್ತರಿಂದ ಹನ್ನೆರಡು ಮೊಟ್ಟೆಗಳನ್ನು ಇಟ್ಟು, ಸುಮಾರು ಎಂಭತೆಂಟು ದಿನಗಳ ಕಾಲ ಕಾವು ಕೊಡುತ್ತದೆ. ಇವುಗಳ ಸಾಲಿಗೆ ಸೇರಿದ ಇನ್ನೊಂದು ಜಾತಿಯ ಮೊಜಾ಼ಂಬಿಕ್ ಉಗುಳುವ ಸರ್ಪ (Mozambique Spitting Cobra) ಶತ್ರುವನ್ನು ಹೆದರಿಸಲು- ಕಾಳಿಂಗ, ಬ್ಲ್ಯಾಕ್ ಮಾಂಬಾ ಹಾವುಗಳಂತೆ ತನ್ನ ದೇಹದ ಮೂರನೇ ಎರಡು ಭಾಗವನ್ನು – ಲೀಲಾಜಾಲವಾಗಿ ಗಾಳಿಯಲ್ಲಿ ನಿಲ್ಲಿಸುತ್ತದೆ!!

    ಈ ಸರ್ಪಗಳು ಕಚ್ಚಲ್ಲ... ಕಣ್ಣಿಗೆ ಗುರಿಯಿಟ್ಟು ಉಗುಳಿದ್ರೆ ಅಷ್ಟೇ ಕಥೆ...ಉಗುಳುವ ಸರ್ಪಗಳು ಹೆಚ್ಚಾಗಿ ಶತ್ರು ಮೈಮೇಲೆ ಎರಗಿ ಬಂದಾಗ ಮಾತ್ರ ಎದುರಾಳಿಯನ್ನು ಹಿಮ್ಮೆಟ್ಟಿಸಲು ವಿಷವನ್ನು ಉಗುಳುತ್ತದೆ. ಉಳಿದಂತೆ ತನ್ನ ವಿಷವನ್ನು ಕಚ್ಚುವ ಮೂಲಕ ಬಳಸಿ ಉಭಯವಾಸಿಗಳು, ಸಣ್ಣ ಪ್ರಾಣಿಗಳು, ಸರೀಸೃಪಗಳು ಹಾಗೂ ಹಕ್ಕಿಗಳನ್ನು ಆಹಾರವಾಗಿ ಬಳಸುತ್ತದೆ. ಎಲ್ಲಾ ಹಾವುಗಳಂತೆ ಉಗುಳುವ ಸರ್ಪಗಳಿಗೂ ಕಚ್ಚಿ ಯಾ ಉಗುಳಿದ ಮರುಕ್ಷಣದಲ್ಲೇ ಅವುಗಳ ವಿಷದ ಚೀಲ ತುಂಬುವುದಿಲ್ಲವಾದ್ದರಿಂದ ಅವುಗಳ ವಿಷ ಅವುಗಳ ಪಾಲಿಗೆ ಅತ್ಯಂತ ಅಮೂಲ್ಯವಾದದ್ದು. ಆದುದರಿಂದ ಹಾವುಗಳು ಸುಮ್ಮಸುಮ್ಮನೆ ಯಾವತ್ತೂ ಕಚ್ಚುವುದಿಲ್ಲ, ವಿಷ ಉಗುಳುವುದಿಲ್ಲ. ಕಾರಣವಿಲ್ಲದೇ ಸುಮ್ಮಸುಮ್ಮನೆ ಬೇರೆಯವರ ಮೇಲೆ ವಿಷಕಾರಲು ಅವುಗಳೇನು ಮನುಷ್ಯರೇ?!! ಶಾಲೆ, ಮನೆ, ಸಮಾಜದಲ್ಲಿ ಸಿಗಬಹುದಾದ ಸರಿಯಾದ ನೈತಿಕ ಶಿಕ್ಷಣವೊಂದೇ ಮನುಷ್ಯನ ಆಂತರ್ಯದಲ್ಲಿ ಜನ್ಮಜಾತವಾಗಿ ಬಂದಿರಬಹುದಾದ ವಿಷವನ್ನು ದೂರ ಮಾಡಲು ಇರುವ ಮಾರ್ಗ ಎನಿಸುತ್ತದೆ! ಅದು ಆದಷ್ಟು ದೊಡ್ಡ ಪ್ರಮಾಣದಲ್ಲಿ, ಮಾನವ ಸಮಾಜದಲ್ಲಿ ‘ವಿಷದ’ ಬದಲು ಎಲ್ಲೆಡೆಯೂ ದಯೆಯ ವಾತಾವರಣ ತುಂಬುವಂತೆ ಸದಾ ಮಾಡುತ್ತಿರಲಿ ಎಂಬುದೇ ಹಾರೈಕೆ.

    ಇದು ಒದ್ದರೆ ಕತ್ತೆಯೂ ನಾಚಬೇಕು… ತೂಕ ಮಾಡಿದರೆ ಆನೆಯೇ ತಲೆತಗ್ಗಿಸಬೇಕು..!

    ಅಂದು ಅವನೆಲ್ಲಿ ತಪ್ಪಿದ..? ಇಂದು ನಾವೆಲ್ಲಿ ತಪ್ಪುತ್ತಿದ್ದೇವೆ..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts