

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಾರ್ಯಕ್ರಮವೊಂದಕ್ಕೆ ಹೋಗುವ ಸಂದರ್ಭದಲ್ಲಿ ಅವರ ಬೆಂಗಾವಲು ವಾಹನ ಸಿಬ್ಬಂದಿ ಬೇರೆ ಮಾರ್ಗದಲ್ಲಿ ಹೋದ ಹಿನ್ನೆಲೆಯಲ್ಲಿ ಬೆಂಗಳೂರಿನ ಪೊಲೀಸರು ಹೈರಾಣಾಗಿರುವ ಘಟನೆ ನಡೆದಿದೆ.
ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕೋವಿಡ್ ಮೃತರಿಗೆ ಪರಿಹಾರ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದಕ್ಕಾಗಿ ಮುಖ್ಯಮಂತ್ರಿ ಬೊಮ್ಮಾಯಿ ಹೋಗಬೇಕಿತ್ತು. ಇವರು ಬರುವ ದಾರಿಯನ್ನು ಪೊಲೀಸರು ತೆರವುಗೊಳಿಸಿ ಇಟ್ಟಿದ್ದರು.
ಆದರೆ ಬೆಂಗಾವಲು ವಾಹನದ ಚಾಲಕನಿಗೆ ದಾರಿತಪ್ಪಿ ಹೋಯಿತೋ ಏನೊ. ಯಾವ ದಾರಿಯಿಂದ ಹೋಗಬೇಕಿತ್ತೋ ಆ ದಾರಿಯಿದ ಹೋಗದೇ ಸುತ್ತಿಬಳಸಿ ಬೆಂಗಾವಲು ವಾಹನ ಹೋಗಿದೆ. ಆ ವಾಹನದ ಹಿಂದೆ ಮುಖ್ಯಮಂತ್ರಿ ಇರುವ ಕಾರು ಕೂಡ ಫಾಲೋ ಮಾಡಿದೆ. ಮುಖ್ಯಮಂತ್ರಿ ಬೇರೆ ಮಾರ್ಗದಿಂದ ಬರುತ್ತಿದ್ದಂತೆಯೇ ಅದರ ಅರಿವಿಲ್ಲದ ಟ್ರಾಫಿಕ್ ಪೊಲೀಸರು ಗರ ಬಡಿದಂತಾದರು. ಏಕಾಏಕಿ ಕಕ್ಕಾಬಿಕ್ಕಿಯಾದ ಪೊಲೀಸರು ಸಿಎಂ ವಾಹನಕ್ಕೆ ದಾರಿ ಮಾಡಿಕೊಡಲು ಬರುತ್ತಿರುವ ಸಾರ್ವಜನಿಕರ ವಾಹನಗಳನ್ನು ನಿಲ್ಲಿಸುವಂತೆ ಸೀಟಿ ಊದಿ ಊದಿ ಸುಸ್ತು ಹೊಡೆದರು.
ಕಾರ್ಪೊರೇಷನ್ ಸರ್ಕಲ್‌ನಿಂದ ಬಸವನಗುಡಿಗೆ ಬರಬೇಕಿದ್ದ ಮುಖ್ಯಮಂತ್ರಿಗಳ ಬೆಂಗಾವಲು ವಾಹನ, ಕಾರ್ಪೊರೇಷನ್ ವೃತ್ತ, ಮೈಸೂರು ಬ್ಯಾಂಕ್ ವೃತ್ತ, ಚಾಲುಕ್ಯ ಸರ್ಕಲ್, ರೇಸ್ ಕೋರ್ಸ್ ಸರ್ಕಲ್‌ನಿಂದ ಬಂದು ಪುನಃ ಚಾಲುಕ್ಯ ವೃತ್ತ, ಕೆ.ಆರ್. ಸರ್ಕಲ್, ಕಾರ್ಪೊರೇಷನ್ ಸರ್ಕಲ್, ಲಾಲ್ ಬಾಗ್ ಸರ್ಕಲ್ ಮೂಲಕ ನ್ಯಾಷನಲ್ ಕಾಲೇಜ್ ಮೈದಾನಕ್ಕೆ ಹೋಗಿದ್ದರಿಂದ ಇಲ್ಲಿಯ ಪೊಲೀಸರು ಸುಸ್ತಾಗಿ ಹೋದರು.
ಸುತ್ತಾಡಿ ಹೋಗಿದ್ದರಿಂದ ಕಾರ್ಯಕ್ರಮಕ್ಕೆ ಮುಕ್ಕಾಲು ಗಂಟೆ ಲೇಟಾಗಿ ಮುಖ್ಯಮಂತ್ರಿಗಳು ಹೋದರು. ಇವರ ಬರುವಿಕೆಯನ್ನು ನಿರೀಕ್ಷಿಸುತ್ತಿದ್ದ ಜನರಿಗೆ ಕೊನೆಗೂ ಸಿಎಂ ದರ್ಶನವಾಯಿತು.
ಆದರೆ ಈ ಎಡವಟ್ಟಿನಿಂದಾಗಿ ನೃಪತುಂಗ ರಸ್ತೆಯಲ್ಲಿ ಸಂಚಾರ ದಟ್ಟಣೆ ಮಾತ್ರವಲ್ಲದೇ ಆ್ಯಂಬುಲೆನ್ಸ್ ಕೂಡ ಪರದಾಡುವಂತಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.