ಆರು ಮಂದಿಯ ಬಾಳಿಗೆ ಬೆಳಕಾಗಿ ಕಣ್ಮುಚ್ಚಿದ ಮಂಡ್ಯದ ಯುವಕ- ಅಂಗಾಂಗ ದಾನದಿಂದ ಸಾರ್ಥಕತೆ

mandya
Published on

ಮಂಡ್ಯ: ಅಪಘಾತದಲ್ಲಿ ಮೃತಪಟ್ಟ ಮಂಡ್ಯ ಜಿಲ್ಲೆ ಮಳವಳ್ಳಿಯ 19 ವರ್ಷದ ಯುವಕ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾನೆ. ಈತ ಸತ್ತ ಮೇಲೂ ಆರು ಮಂದಿಗೆ ಬೆಳಕಾಗಿ ಹೋಗಿದ್ದಾನೆ.

ಇಂಥದ್ದೊಂದು ಅಮೂಲ್ಯ ಕಾರ್ಯ ಮಾಡಿದವನು ಶರತ್. ಅಪಘಾತದಲ್ಲಿ ಈತ ಗಂಭೀರವಾಗಿ ಗಾಯಗೊಂಡಿದ್ದು ತಲೆಗೆ‌ ಪೆಟ್ಟು ಬಿದ್ದಿತ್ತು. ಮಳವಳ್ಳಿ ಸರ್ಕಾರಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸಗಾಗಿ ಮೈಸೂರಿನ ಆಸ್ಪತ್ರೆಗೆ ಸೇರಿಸಲಾಗಿತ್ತು. ಅದರೆ 24ರ ಮಧ್ಯರಾತ್ರಿ 1.10 ಸುಮಾರಿಗೆ ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಮೈಸೂರಿನ ಅಪೋಲೊ ಬಿ.ಜಿ. ಎಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಯುವಕ ಬದುಕುವ ಸಾಧ್ಯತೆ ತೀರಾ ಕಡಿಮೆ ಇರುವ ಬಗ್ಗೆ ವೈದ್ಯರು ತಿಳಿಸಿದರು. ವಂಶದ ಕುಡಿ ಇನ್ನೇನು ಆರುವ ಸ್ಥಿತಿಯಲ್ಲಿ ಇರುವಾಗಲೇ ಆತನ ಹೆತ್ತವರು ಮಹತ್ತರ ನಿರ್ಧಾರ ತೆಗೆದುಕೊಂಡರು. ಆತನ ಅಂಗಾಂಗ ದಾನಕ್ಕೆ ಮುಂದಾದರು.

ಅವರ ಆಸೆಯಂತೆಯೇ ಶರತ್‌ನ ಅಂಗಾಂಗ ದಾನ ಮಾಡಲಾಗಿದೆ. ಮೆದುಳು ಹೊರತಪಡಿಸಿ ಉಳಿದ ಅಂಗಾಂಗಗಳು ಚೆನ್ನಾಗಿದ್ದ ಹಿನ್ನೆಲೆಯಲ್ಲಿ ಎರಡೂ ಕಿಡ್ನಿ, ಯಕೃತ್ತು, ಹೃದಯ, ಮೇದೋಜೀರಕ ಗ್ರಂಥಿ ಮತ್ತು ಕಾರ್ನಿಯಾ ದಾನ ಮಾಡಿದ್ದಾರೆ ಪಾಲಕರು.

ಮೈಸೂರು, ಬೆಂಗಳೂರಿನ ಅನೇಕ ಆಸ್ಪತ್ರೆಗಳಿಗೆ ಈ ಅಂಗಾಂಗಗಳನ್ನು ರವಾನಿಸಲಾಗಿದ್ದು, ಆರು ಮಂದಿಗೆ ಇದನ್ನು ಅಳವಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net