More

    ಬ್ಯಾಂಕ್‌ ಮುಳುಗಿದರೂ ಠೇವಣಿದಾರಿಗಿಲ್ಲ ಚಿಂತೆ- ಬ್ಯಾಂಕಿಂಗ್‌ ಕ್ಷೇತ್ರದ ಐತಿಹಾಸಿಕ ಸಾಧನೆ ವಿವರಿಸಿದ ಮೋದಿ

    ನವದೆಹಲಿ: ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಹಿಂದೆಂದೂ ಆಗಿರದಂಥ ಭಾರಿ ಬದಲಾವಣೆಯ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ನಡೆದ ಸಭೆಯಲ್ಲಿ ಮಾತನಾಡಿದರು.

    ದೆಹಲಿಯ ವಿಜ್ಞಾನ ಭವನದಲ್ಲಿ ‘ಠೇವಣಿದಾರರು ಮೊದಲು: 5 ಲಕ್ಷ ರೂ.ವರೆಗೆ ಗ್ಯಾರಂಟಿ ಕಾಲಮಿತಿ ಠೇವಣಿ ವಿಮೆ ಪಾವತಿ’ ಎಂಬ ವಿಷಯದ ಕುರಿತು ಅವರು ವರ್ಚುವಲ್‌ ಸಭೆಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ತಮ್ಮ ಸರ್ಕಾರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇಲ್ಲಿಯವರೆಗೆ ತೆಗೆದುಕೊಂಡಿರುವ ಹಲವಾರು ಮಹತ್ವದ ನಿರ್ಧಾರ, ಠೇವಣಿದಾರರ ಸುರಕ್ಷತೆಗೆ ಬಂದಿರುವ ಕಾನೂನುಗಳ ಬಗ್ಗೆ ಮಾತನಾಡಿದರು.

    ‘ಈ ಮೊದಲು ಪರಿಸ್ಥಿತಿ ಹೇಗಿತ್ತು ಎಂದರೆ ಒಂದು ವೇಳೆ ಬ್ಯಾಂಕ್‌ ಏನಾದರೂ ಮುಳುಗಿಬಿಟ್ಟರೆ ಠೇವಣಿದಾರರು ಅಕ್ಷರಶಃ ಬೀದಿಗೆ ಬರಬೇಕಿತ್ತು. ಅವರಿಗೆ ಕನಿಷ್ಠ ಹಣವನ್ನು ಕೊಡಲು ಆಗಿನ ಸರ್ಕಾರಗಳು ಘೋಷಣೆ ಮಾಡಿದ್ದರೂ ಆ ಹಣವನ್ನು ಪಡೆಯಲು ಠೇವಣಿದಾರರು 5-10 ವರ್ಷ ಸುದೀರ್ಘ ಹೋರಾಟವನ್ನೇ ನಡೆಸಬೇಕಿತ್ತು. ಆದರೆ ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ಬಹುದೊಡ್ಡ, ದಿಟ್ಟ ಕ್ರಮ ತೆಗೆದುಕೊಂಡಿದ್ದು, ಠೇವಣಿದಾರರನ್ನು ಸುರಕ್ಷಿತರನ್ನಾಗಿಸಿದೆ’ ಎಂದ ಪ್ರಧಾನಿ ಮೋದಿ, ಈಗ ಬ್ಯಾಂಕ್‌ಗಳು ಮುಳುಗುವ ಪ್ರಶ್ನೆಯೇ ಬರುವುದಿಲ್ಲ. ಅಂಥ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಒಂದು ವೇಳೆ ಹಾಗೇನಾದರೂ ಆದರೂ ಪ್ರತಿಯೊಬ್ಬ ಠೇವಣಿದಾರನಿಗೆ ಐದು ಲಕ್ಷ ರೂಪಾಯಿಗಳು ಸಿಗಲಿವೆ. ಅದೂ ಕೇವಲ 90 ದಿನಗಳಲ್ಲಿ ಮಾತ್ರ’ ಎಂದು ವಿವರಿಸಿದರು.

    ಇದರ ಬಗ್ಗೆ ಇನ್ನಷ್ಟು ವಿವರಣೆ ನೀಡಿದ ಪ್ರಧಾನಿ, ನಮ್ಮ ದೇಶದಲ್ಲಿ ಬ್ಯಾಂಕ್ ಠೇವಣಿದಾರರಿಗೆ ವಿಮೆ ವ್ಯವಸ್ಥೆ 60 ರ ದಶಕದಲ್ಲಿ ಮಾಡಲಾಗಿತ್ತು. ಮೊದಲು ಬ್ಯಾಂಕಿನಲ್ಲಿ ಠೇವಣಿ ಇಡುವ ಮೊತ್ತ 50,000 ರೂ.ವರೆಗೆ ಮಾತ್ರ ಖಾತರಿ ನೀಡಲಾಗಿತ್ತು. ಈ ಮೊತ್ತವನ್ನು 1 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಿದ್ದೇವೆ. ಕಾನೂನಿಗೆ ತಿದ್ದುಪಡಿ ತರುವ ಮೂಲಕ 3 ತಿಂಗಳೊಳಗೆ ಠೇವಣಿ ಹಣ ನೀಡುವುದನ್ನು ಕಡ್ಡಾಯ ಮಾಡಿದ್ದೇವೆ ಎಂದರು.

    ಬ್ಯಾಂಕ್‌ಗಳನ್ನೇ ನಂಬಿ ಬಡವರು, ಮಧ್ಯಮ ಕುಟುಂಬಗಳು ಜೀವನ ಸಾಗಿಸುತ್ತಿವೆ. ಇಂಥ ಸಮಯದಲ್ಲಿ ಬ್ಯಾಂಕ್‌ ಮುಳುಗಡೆಯಾದರೆ ಜನರ ಉಸಿರೇ ನಿಂತು ಹೋಗುತ್ತಿದೆ. ಅದರಲ್ಲಿಯೂ ಈ ಹಿಂದೆ ಸಹಕಾರಿ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟು ಮೋಸ ಹೋದವರು ಎಷ್ಟೋ ಮಂದಿ. ಅಲ್ಲಿ ಸುರಕ್ಷತೆಯೂ ಇಲ್ಲದೇ ಜನರು ಕಂಗೆಟ್ಟು ಹೋಗಿದ್ದರು. ಅದನ್ನು ಕಂಡ ನಮ್ಮ ಸರ್ಕಾರ, ಇದೀಗ ಸಹಕಾರಿ ಬ್ಯಾಂಕ್‌ಗಳ ಕ್ಷೇತ್ರದಲ್ಲಿಯೂ ಭಾರಿ ಬದಲಾವಣೆ ತಂದಿದೆ. ಕಾನೂನು ಜಾರಿಗೆ ತಂದಿದ್ದು, ಸಹಕಾರಿ ಬ್ಯಾಂಕ್‌ಗಳನ್ನೂ ಆರ್‌ಬಿಐ ವ್ಯಾಪ್ತಿಗೆ ಒಳಪಡಿಸಲಾಗಿದೆ. ಇದೇ ಕಾರಣಕ್ಕೆ ಜನರು ನಿಶ್ಚಿಂತೆಯಿಂದ ಇರುವಂತೆ ಮಾಡಲಾಗಿದೆ ಎಂದು ಹೇಳಿದರು.

    ‘ನಾನು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ನಮ್ಮ ರಾಜ್ಯದ ಜನರ ನೋವುಗಳನ್ನು ಕಂಡಿದ್ದೇನೆ. ಬ್ಯಾಂಕ್‌ಗಳು ಮುಳುಗಡೆಯಾದಾಗ ಜನರು ಬೀದಿಗೆ ಬಂದಿದ್ದನ್ನು ನೋಡಿದ್ದೇನೆ. ಆಗ ಠೇವಣಿದಾರರ ಸುರಕ್ಷತೆಗೆ ಕ್ರಮ ತೆಗೆದುಕೊಳ್ಳುವಂತೆ ಆಗಿನ ಕೇಂದ್ರ ಸರ್ಕಾರಕ್ಕೆ ಸಾಕಷ್ಟು ಸಲ ನಾನೇ ಖುದ್ದು ಗಮನಕ್ಕೆ ತಂದಿದ್ದೆ. ಆದರೆ ಎಲ್ಲವೂ ವಿಫಲವಾಯಿತು. ಆಗಿನ ಸರ್ಕಾರ ನಾನು ಹೇಳಿದಂತೆ ಕೇಳಲಿಲ್ಲ, ಆದ್ದರಿಂದ ಜನರೇ ನನ್ನನ್ನು ಆ ಸರ್ಕಾರಕ್ಕೆ (ಕೇಂದ್ರ) ಹೋಗಿ ಕುಳ್ಳರಿಸಿದರು’ ಎಂದು ಪ್ರಧಾನಿ ಮೋದಿ ಹೇಳಿದರು.

    ಬ್ಯಾಂಕ್‌ ಠೇವಣಿದಾರರಿಗೆ ಇನ್ಶುರೆನ್ಸ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಮೂಲಕ 77 ಲಕ್ಷ ಕೋಟಿ ರೂಪಾಯಿ ಸುರಕ್ಷತೆಯನ್ನು ಮಾಡಲಾಗಿದೆ. ಬೇರೆ ಯಾವ ದೇಶಗಳಲ್ಲಿಯೂ ಮಾಡದ ಬಹುದೊಡ್ಡ ಮೊತ್ತ ಇದಾಗಿದೆ ಎಂದು ಪ್ರಧಾನಿ ವಿವರಿಸದರು. ಇದರ ಜತೆಗೆ ಶ್ರೀಮಂತರಿಗೆ ಮಾತ್ರ ಬ್ಯಾಂಕ್‌, ಅವರಿಗೆ ಮಾತ್ರ ಸಾಲ ಎಂಬ ಪರಿಕಲ್ಪನೆಯಿಂದ ಜನರನ್ನು ಹೇಗೆ ಹೊರಕ್ಕೆ ತಮ್ಮಸರ್ಕಾರ ತಂದಿದೆ ಎಂಬ ಬಗ್ಗೆ ವಿವರಿಸಿದ ಪ್ರಧಾನಿ, ತಮ್ಮ ಸರ್ಕಾರ ರೂಪಿಸಿರುವ ಹಲವಾರು ಯೋಜನೆಗಳ ಬಗ್ಗೆ ವಿವರಣೆ ನೀಡಿದರು. 1 ವರ್ಷದಲ್ಲಿ 1 ಲಕ್ಷ ಠೇವಣಿದಾರರಿಗೆ 1300 ಕೋಟಿ ರೂ.ಗಳನ್ನು ಪಾವತಿಸಲಾಗಿದೆ ಎಂದು ಮಾಹಿತಿ ನೀಡಿದರು.

    VIDEO: ಸಾಯುವ ಕೆಲವೇ ಗಂಟೆಗಳ ಮೊದಲು ರಾವತ್‌ ಆಡಿದ್ದ ಮಾತುಗಳ ವಿಡಿಯೋ ಬಿಡುಗಡೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts